
ಸಾಂದರ್ಭಿಕ ಚಿತ್ರ
ಮೂರು ಎಪಿಎಂಸಿಗಳಲ್ಲಿ ತ್ಯಾಜ್ಯಾಧಾರಿತ ಸಿಎನ್‌ಜಿ ಪ್ಲಾಂಟ್ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ
ಮೂರು ಎಪಿಎಂಸಿಗಳಲ್ಲಿ ತಲಾ 24.96 ಕೋಟಿ ರೂ. ವೆಚ್ಚದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಬಯೋ ಸಿಎನ್‌ಜಿ ಪ್ಲಾಂಟ್ ನಿರ್ಮಾಣಕ್ಕೆ ರೂಪಿಸಿರುವ ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಬೆಂಗಳೂರಿನ ದಾಸನಪುರ, ಕೋಲಾರ ಮತ್ತು ಮೈಸೂರು ಎಪಿಎಂಸಿಗಳಲ್ಲಿ ತಲಾ 50 ಟಿಪಿಡಿ ಬಯೋ ಸಿಎನ್‌ಜಿ ಪ್ಲಾಂಟ್ ನಿರ್ಮಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಪಿಎಂಸಿಗಳಲ್ಲಿ ಪ್ರತಿ ದಿನ ಸಂಗ್ರಹವಾಗುವ ತ್ಯಾಜ್ಯದಿಂದ ಪ್ರಕೃತಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದ್ದು, ಶೂನ್ಯ ತ್ಯಾಜ್ಯ ಮಾರುಕಟ್ಟೆಗಳನ್ನಾಗಿ ಪರಿವರ್ತಿಸಲು ಈ ತ್ಯಾಜ್ಯ ಬಳಸಿಕೊಂಡು ಬಯೋ ಸಿಎನ್‌ಜಿ ಉತ್ಪಾದನೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ಈ ಮೂರು ಎಪಿಎಂಸಿಗಳಲ್ಲಿ ಪ್ರತಿದಿನ 20 ರಿಂದ 30 ಟನ್ ಘನ ತ್ಯಾಜ್ಯ ಸಂಗ್ರಹವಾಗುತ್ತಿದೆ. ಈ ತ್ಯಾಜ್ಯ ಬಳಸಿಕೊಂಡು ಬಯೋ ಸಿಎನ್‌ಜಿ ಪ್ಲಾಂಟ್ ಸ್ಥಾಪನೆ ಮಾಡುವುದರಿಂದ ಎಪಿಎಂಸಿಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವುದಷ್ಟೇ ಅಲ್ಲದೆ, ತ್ಯಾಜ್ಯವನ್ನು ಸದ್ಭಳಕೆ ಮಾಡಿಕೊಳ್ಳಬಹುದು ಎಂದು ಹೇಳಿದರು.
ಮೂರು ಎಪಿಎಂಸಿಗಳಲ್ಲಿ ತಲಾ 24.96 ಕೋಟಿ ರೂ. ವೆಚ್ಚದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಬಯೋ ಸಿಎನ್‌ಜಿ ಪ್ಲಾಂಟ್ ನಿರ್ಮಾಣಕ್ಕೆ ರೂಪಿಸಿರುವ ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಇತರ ಕೆಲವು ಎಪಿಎಂಸಿಗಳಲ್ಲೂ ಬಯೋ ಸಿಎನ್‌ಜಿ ಪ್ಲಾಂಟ್ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದರೂ ತ್ಯಾಜ್ಯ ಪ್ರಮಾಣ ಕಡಿಮೆ ಇದೆ. ನಗರಸಭೆ, ನಗರಪಾಲಿಕೆ ವ್ಯಾಪ್ತಿಯ ತ್ಯಾಜ್ಯ ಮಿಶ್ರಿತವಾಗುತ್ತಿದ್ದು, ಗುಣಮಟ್ಟ ಖಾತರಿ ಇರುವುದಿಲ್ಲ. ಹೀಗಾಗಿ ಸದ್ಯಕ್ಕೆ ಕನಿಷ್ಟ 20 ರಿಂದ 30 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿರುವ ಈ ಮೂರು ಎಪಿಎಂಸಿಗಳಲ್ಲಿ ಮಾತ್ರ ಯೋಜನೆ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ತ್ಯಾಜ್ಯ ಆಧಾರಿತ ಸಿಎನ್‌ಜಿ ಪ್ಲಾಂಟ್ ಎಲ್ಲಿವೆ ?
ಪುತ್ತೂರು ನಗರಸಭೆ ಹಸಿ ತ್ಯಾಜ್ಯದಿಂದ ಸಿಎನ್‌ಜಿ ಉತ್ಪಾದಿಸುವ ಮೂಲಕ ಸುಸ್ಥಿರ ತ್ಯಾಜ್ಯ ನಿರ್ವಹಣೆಯತ್ತ ಮಹತ್ತರ ಹೆಜ್ಜೆಯಿಟ್ಟಿದೆ. ಇಂತಹ ಯೋಜನೆಯನ್ನು ರೂಪಿಸಿರುವ ದೇಶದ ಮೊದಲ ನಗರಸಭೆ ಎನ್ನುವ ಖ್ಯಾತಿಗೂ ಪುತ್ತೂರು ನಗರಸಭೆ ಭಾಜನವಾಗಿದೆ. ನಗರಸಭೆಗೆ ಸಿಎನ್‌ಜಿ ಆಧಾರಿತ ವಾಹನಗಳನ್ನು ಕೊಂಡು ಅವುಗಳಿಗೆ ಇಂಧನ ಬಳಸುತ್ತಿದೆ. ಉಳಿದ ಇಂಧನವನ್ನು ನಗರಸಭೆ ಖಾಸಗಿಯವರಿಗೆ ಮಾರುತ್ತಿದ್ದು ನಗರಸಭೆಗೆ ಮತ್ತೊಂದು ಆದಾಯದ ಮೂಲವಾಗಿದೆ.
ಬಂಟ್ವಾಳದ ಒಡ್ಡೂರಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ತಮ್ಮ ಕೃಷಿ ಚಟುವಟಿಕೆಗಳಿಂದ ಉತ್ಪತಿಯಾಗುವ ಹಸಿ ತ್ಯಾಜ್ಯ ಬಳಸಿಕೊಂಡು ಸಿಎನ್‌ಜಿ ಘಟಕ ಸ್ಥಾಪಿಸಿದ್ದಾರೆ. ದಿನವೊಂದಕ್ಕೆ 500 ರಿಂದ 600 ಕೆ.ಜಿ ಅನಿಲ ಉತ್ಪತಿಯಾಗುತ್ತಿದ್ದು, 10 ಟನ್ ಕಸದಿಂದ ಅಷ್ಟೇ ಪ್ರಮಾಣದ ಗೊಬ್ಬರವೂ ಲಭ್ಯವಾಗುತ್ತಿದೆ. ಸರ್ಕಾರವೂ ಇದೇ ರೀತಿ ಸಣ್ಣ ಸಣ್ಣ ಘಟಕಗಳನ್ನ ಸ್ಥಾಪಿಸುವುದರಿಂದ ತ್ಯಾಜ್ಯದ ಸಮಸ್ಯೆಯೂ ಬಗೆಹರಿಯುತ್ತದೆ ಎಂದು ಹೇಳಿದ್ದಾರೆ.