ಬಾಂಗ್ಲಾ  ಪರಿಣಾಮ| ಕೋಲಾರದಲ್ಲಿ ಟೊಮೆಟೋ ಬೆಳೆಗಾರರಿಗೆ ಸಂಕಷ್ಟ
x
ಟೊಮೆಟೋ

ಬಾಂಗ್ಲಾ ಪರಿಣಾಮ| ಕೋಲಾರದಲ್ಲಿ ಟೊಮೆಟೋ ಬೆಳೆಗಾರರಿಗೆ ಸಂಕಷ್ಟ

ಕೋಲಾರ ಎಪಿಎಂಸಿಯಲ್ಲಿ ಹದಿನೈದು ದಿನಗಳ ಹಿಂದೆ ಕೆಜಿಗೆ 40 ರೂಪಾಯಿ ಇದ್ದ ಟೊಮೆಟೊ ಬೆಲೆ 12 ರೂಪಾಯಿಗೆ ಕುಸಿದಿದೆ.


Click the Play button to hear this message in audio format

ನೆರೆಯ ಬಾಂಗ್ಲಾದೇಶದ ರಾಜಕೀಯ ಪ್ರಕ್ಷುಬ್ಧತೆ ಕೋಲಾರದ ರೈತರ ಮೇಲೆ ಪರಿಣಾಮ ಬೀರಿದೆ. ಪಶ್ಚಿಮ ಬಂಗಾಳದ ವ್ಯಾಪಾರಿಗಳು ಬಾಂಗ್ಲಾದೇಶಕ್ಕೆ ಟೊಮೆಟೊ ರಫ್ತು ಮಾಡಲು ಸಾಧ್ಯವಾಗದ ಕಾರಣ ಬೆಲೆ ಕುಸಿದಿದೆ. ಕೋಲಾರದ ರೈತರು ಟೊಮೆಟೊ ಬೆಲೆ ಕುಸಿತದ ಹೊಡೆತ ಎದುರಿಸುವಂತಾಗಿದೆ.

ಬಾಂಗ್ಲಾದೇಶದಲ್ಲಿ ರಾಜಕೀಯ ಪ್ರಕ್ಷುಬದ್ಧತೆಗೂ ಮುನ್ನ 1,100 ರಿಂದ 1,200 ರೂ.ಗೆ ಮಾರಾಟವಾಗುತ್ತಿದ್ದ ಮೊದಲ ದರ್ಜೆಯ ಟೊಮೆಟೊ ಬಾಕ್ಸ್ (ಅಂದಾಜು 15 ಕೆಜಿ) ಈಗ 350 ರಿಂದ 480 ರೂ.ಗೆ ಮಾರಾಟವಾಗುತ್ತಿದೆ. ಕೋಲಾರ ಎಪಿಎಂಸಿಯಲ್ಲಿ ಹದಿನೈದು ದಿನಗಳ ಹಿಂದೆ ಕೆಜಿಗೆ 40 ರೂಪಾಯಿ ಇದ್ದ ಟೊಮೆಟೊ ಬೆಲೆ 12 ರೂಪಾಯಿಗೆ ಕುಸಿದಿದೆ.

ಪಶ್ಚಿಮ ಬಂಗಾಳದ ವ್ಯಾಪಾರಿಗಳು ಟೊಮೆಟೊ ಖರೀದಿಯನ್ನು ಸುಮಾರು 50% ರಷ್ಟು ಕಡಿತಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ ಮೊದಲ ವಾರದ ಮೊದಲು ಕೋಲಾರದಿಂದ ಪಶ್ಚಿಮ ಬಂಗಾಳಕ್ಕೆ ಪ್ರತಿದಿನ ಸುಮಾರು 40 ರಿಂದ 50 ಟ್ರಕ್‌ಗಳಷ್ಟು ಟೊಮೆಟೊ ಸಾಗಣೆಯಾಗುತ್ತಿತ್ತು. ಈಗ, ಪ್ರಮಾಣವು ದಿನಕ್ಕೆ 20 ಟ್ರಕ್‌ಗಳಿಗೆ ಇಳಿದಿದೆ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ಕಿರಣ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ವ್ಯಾಪಾರಿಗಳು ಸ್ಥಳೀಯ ಬಳಕೆಗಾಗಿ ಮತ್ತು ಬಾಂಗ್ಲಾದೇಶಕ್ಕೆ ರಫ್ತು ಮಾಡಲು ಕೋಲಾರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ (ಎಪಿಎಂಸಿ) ಮೊದಲ ದರ್ಜೆಯ ಟೊಮೆಟೊಗಳನ್ನು ಖರೀದಿಸುತ್ತಿದ್ದರು. ಕೋಲಾರ ಎಪಿಎಂಸಿಯು ದೇಶದ ಟೊಮೇಟೊದ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ.

ಇದು ಕರ್ನಾಟಕದ ಮಾರುಕಟ್ಟೆಯಲ್ಲಿ ಟೊಮೆಟೊ ಚಿಲ್ಲರೆ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಿದೆ. ರಾಜ್ಯಾದ್ಯಂತ ಒಂದು ಕೆಜಿ ಟೊಮೆಟೊ ಕೆಜಿಗೆ 16 ರಿಂದ 20 ರೂ.ವರೆಗೆ ಮಾರಾಟವಾಗುತ್ತಿದೆ. ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ, ಕೋಲಾರದ ಟೊಮೆಟೊಗಳಿಗೆ ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಜಿಲ್ಲೆಯಲ್ಲಿ ಸುಮಾರು 4,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುವ ಟೊಮೇಟೊವನ್ನು ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವಾರು ಮಾರುಕಟ್ಟೆಗಳಿಗೆ ಸರಬರಾಜು ಮಾಡಲಾಗುತ್ತದೆ.

ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತವು ಕೇರಳಕ್ಕೆ ಟೊಮೆಟೊ ಮಾರಾಟದ ಮೇಲೆ ಪರಿಣಾಮ ಬೀರಿದೆ, ಇದರ ಪರಿಣಾಮವಾಗಿ ಬೆಲೆ ಕುಸಿತವಾಗಿದೆ.

Read More
Next Story