
ʼಎಕ್ಸ್ʼ ಮಾಲೀಕ ಎಲಾನ್ ಮಸ್ಕ್
ಗ್ರಾಕ್ ಎಐ ದುರುಪಯೋಗಕ್ಕೆ ಬ್ರೇಕ್; ಅಕ್ರಮ ಕಂಟೆಂಟ್ ಸೃಷ್ಟಿಸಿದರೆ ಖಾತೆ ಅಮಾನತು
ಅಕ್ರಮ ಕಂಟೆಂಟ್‌ಗಳನ್ನು ಅಪ್‌ಲೋಡ್ ಮಾಡುವುದು ಎಷ್ಟು ಅಪರಾಧವೋ, ಗ್ರಾಕ್ ಎಐ ಮೂಲಕ ಅಂತಹ ಕಂಟೆಂಟ್‌ಗಳನ್ನು ಸೃಷ್ಟಿಸುವುದು ಕೂಡ ಅಷ್ಟೇ ದೊಡ್ಡ ಅಪರಾಧ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ದೈತ್ಯ 'ಎಕ್ಸ್' (ಹಿಂದಿನ ಟ್ವಿಟರ್), ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅಕ್ರಮ ಕಂಟೆಂಟ್‌ಗಳನ್ನು ಹಂಚಿಕೊಳ್ಳುವ ಅಥವಾ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ. ವಿಶೇಷವಾಗಿ ಎಕ್ಸ್ ಸಂಸ್ಥೆಯದೇ ಆದ 'ಗ್ರಾಕ್' (Grok) ಎಐ ಸೇವೆಯನ್ನು ಬಳಸಿಕೊಂಡು ಕಾನೂನುಬಾಹಿರ ಚಿತ್ರ ಅಥವಾ ಮಾಹಿತಿಗಳನ್ನು ಸೃಷ್ಟಿಸುವ ಬಳಕೆದಾರರ ಖಾತೆಗಳನ್ನು ಕಾಯಂ ಬ್ಯಾನ್ ಮಾಡಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಈ ಕುರಿತು ಸ್ವತಃ ಎಲಾನ್ ಮಸ್ಕ್ ಅವರೇ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದು, ಅಕ್ರಮ ಕಂಟೆಂಟ್‌ಗಳನ್ನು ಅಪ್‌ಲೋಡ್ ಮಾಡುವುದು ಎಷ್ಟು ಅಪರಾಧವೋ, ಗ್ರಾಕ್ ಎಐ ಮೂಲಕ ಅಂತಹ ಕಂಟೆಂಟ್‌ಗಳನ್ನು ಸೃಷ್ಟಿಸುವುದು ಕೂಡ ಅಷ್ಟೇ ದೊಡ್ಡ ಅಪರಾಧ ಎಂದು ಹೇಳಿದ್ದಾರೆ. ಅಸಹಜ ಅಥವಾ ಅಶ್ಲೀಲ ಚಿತ್ರಗಳನ್ನು ಸೃಷ್ಟಿಸಲು ಎಐ ಬಳಸುವವರು ಕಠಿಣ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಎಕ್ಸ್‌ನ 'ಗ್ಲೋಬಲ್ ಗೌರ್ನಮೆಂಟ್ ಅಫೇರ್ಸ್' ವಿಭಾಗವು ಈ ನಿಯಮವನ್ನು ಪುನರುಚ್ಚರಿಸಿದ್ದು, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂತಹ (CSAM) ಗಂಭೀರ ಕಂಟೆಂಟ್‌ಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುವುದಾಗಿ ತಿಳಿಸಿದೆ.
ಭಾರತ ಸರ್ಕಾರದ ಕಟ್ಟುನಿಟ್ಟಿನ ಆದೇಶ
ಭಾರತದಲ್ಲಿ ಎಕ್ಸ್ ಮತ್ತು ಗ್ರಾಕ್ ಎಐ ಮೂಲಕ ಅಶ್ಲೀಲ ಹಾಗೂ ಕಾನೂನುಬಾಹಿರ ಕಂಟೆಂಟ್‌ಗಳು ಹರಿದಾಡುತ್ತಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿತ್ತು. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (Meity) ಜನವರಿ 2 ರಂದು ಎಕ್ಸ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿತ್ತು. ಅಕ್ರಮ ಕಂಟೆಂಟ್‌ಗಳನ್ನು ತಕ್ಷಣವೇ ತೆಗೆದುಹಾಕಬೇಕು ಮತ್ತು ಈ ಬಗ್ಗೆ ಕೈಗೊಂಡ ಕ್ರಮಗಳ ಕುರಿತು 72 ಗಂಟೆಗಳ ಒಳಗೆ ವಿವರವಾದ ವರದಿ (ATR) ಸಲ್ಲಿಸಬೇಕು ಎಂದು ಸೂಚಿಸಿತ್ತು. ಭಾರತೀಯ ಕಾನೂನುಗಳ ಉಲ್ಲಂಘನೆಯಾದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸರ್ಕಾರ ನೀಡಿತ್ತು.
ಮಹಿಳೆಯರ ಸುರಕ್ಷತೆ ಮತ್ತು ಎಐ ದುರುಪಯೋಗ
ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಅವರು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು, ಗ್ರಾಕ್ ಎಐ ಬಳಸಿ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ದೂರು ನೀಡಿದ್ದರು. ನಕಲಿ ಖಾತೆಗಳ ಮೂಲಕ ಮಹಿಳೆಯರನ್ನು ಅವಹೇಳನ ಮಾಡುವ ಮತ್ತು ಅವರ ಗೌರವಕ್ಕೆ ಧಕ್ಕೆ ತರುವಂತಹ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದ್ದರು. ಈ ದೂರಿನ ಬೆನ್ನಲ್ಲೇ ಎಕ್ಸ್ ಸಂಸ್ಥೆಯು ತನ್ನ ನಿಯಮಗಳನ್ನು ಬಿಗಿಗೊಳಿಸಿದೆ. ಸಮ್ಮತಿಯೊಂದಿಗೆ ಸೃಷ್ಟಿಸಲಾದ ವಯಸ್ಕರ ಕಂಟೆಂಟ್‌ಗಳಿಗೆ ಸರಿಯಾದ ಲೇಬಲ್ ನೀಡಲು ಅವಕಾಶವಿದ್ದರೂ, ಅಕ್ರಮ ಹಾಗೂ ಅನೈತಿಕ ಕೃತ್ಯಗಳಿಗೆ ಯಾವುದೇ ರಕ್ಷಣೆ ಇರುವುದಿಲ್ಲ ಎಂದು ಸಂಸ್ಥೆ ಹೇಳಿದೆ.
ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಕಾರ
ಕೇವಲ ಖಾತೆಗಳನ್ನು ಅಮಾನತುಗೊಳಿಸುವುದು ಮಾತ್ರವಲ್ಲದೆ, ಅಗತ್ಯ ಬಿದ್ದಲ್ಲಿ ಸ್ಥಳೀಯ ಸರ್ಕಾರಗಳು ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಕರಿಸುವುದಾಗಿ ಎಕ್ಸ್ ತಿಳಿಸಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತು ಆಯಾ ದೇಶಗಳ ಸ್ಥಳೀಯ ಕಾನೂನುಗಳಿಗೆ ಅನುಗುಣವಾಗಿ ಅಕ್ರಮ ಕಂಟೆಂಟ್ ಸೃಷ್ಟಿಕರ್ತರ ವಿವರಗಳನ್ನು ಹಂಚಿಕೊಳ್ಳಲು ಸಂಸ್ಥೆ ಸಿದ್ಧವಾಗಿದೆ. ಇದರಿಂದಾಗಿ ಎಐ ತಂತ್ರಜ್ಞಾನವನ್ನು ದುರುದ್ದೇಶಪೂರಿತ ಕೃತ್ಯಗಳಿಗೆ ಬಳಸುವವರಿಗೆ ಸಂಕಷ್ಟ ಎದುರಾಗಲಿದೆ.

