ಭಾರತದ ನಂಟು ಬಿಚ್ಚಿಟ್ಟ ಎಲಾನ್ ಮಸ್ಕ್: ಸಂಗಾತಿಯೂ ಭಾರತೀಯ ಮೂಲದವರು, ಮಗನಿಗೂ ಭಾರತೀಯ ಹೆಸರು!
x

ಭಾರತದ ನಂಟು ಬಿಚ್ಚಿಟ್ಟ ಎಲಾನ್ ಮಸ್ಕ್: ಸಂಗಾತಿಯೂ ಭಾರತೀಯ ಮೂಲದವರು, ಮಗನಿಗೂ ಭಾರತೀಯ ಹೆಸರು!

ಶಿವೋನ್ ಜಿಲಿಸ್ ಕೆನಡಾದ ಒಂಟಾರಿಯೊದಲ್ಲಿ ಬೆಳೆದವರು. ಅವರು ಯೇಲ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರ ಅಧ್ಯಯನ ಮಾಡಿದ್ದಾರೆ.


Click the Play button to hear this message in audio format

ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರು ಭಾರತದ ಬಗ್ಗೆ ಮತ್ತೊಮ್ಮೆ ವಿಶೇಷ ಒಲವು ತೋರಿದ್ದಾರೆ. ಝಿರೋದಾ ಸಹ-ಸ್ಥಾಪಕ ನಿಖಿಲ್ ಕಾಮತ್ ನಡೆಸಿಕೊಡುವ ಜನಪ್ರಿಯ ಪಾಡ್‌ಕ್ಯಾಸ್ಟ್ 'ಪೀಪಲ್ ಬೈ ಡಬ್ಲ್ಯೂಟಿಎಫ್' ನಲ್ಲಿ ಮಾತನಾಡಿದ ಅವರು, ತಮ್ಮ ಜೀವನದಲ್ಲಿ ಮತ್ತು ಅಮೆರಿಕದ ಪ್ರಗತಿಯಲ್ಲಿ ಭಾರತದ ನಂಟನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮಸ್ಕ್, ತಮ್ಮ ಪಾಲುದಾರ ಹಾಗೂ ನ್ಯೂರಾಲಿಂಕ್ ಉನ್ನತ ಅಧಿಕಾರಿ ಶಿವೋನ್ ಜಿಲಿಸ್ ಅವರಿಗೆ ಭಾರತೀಯ ಮೂಲವಿದೆ ಎಂಬ ಅಚ್ಚರಿಯ ವಿಷಯವನ್ನು ಬಹಿರಂಗಪಡಿಸಿದರು. "ನಿಮಗೆ ಗೊತ್ತಿದೆಯೋ ಇಲ್ಲವೋ, ನನ್ನ ಪಾಲುದಾರೆ ಶಿವೋನ್ ಅರ್ಧ ಭಾರತೀಯರು," ಎಂದು ಅವರು ಹೇಳಿದರು.

ಅಷ್ಟೇ ಅಲ್ಲ, ಶಿವೋನ್ ಅವರೊಂದಿಗೆ ಜನಿಸಿದ ತಮ್ಮ ಪುತ್ರನಿಗೆ ಭಾರತೀಯ ವಿಜ್ಞಾನಿಯೊಬ್ಬರ ಗೌರವಾರ್ಥವಾಗಿ ಹೆಸರಿಟ್ಟಿರುವುದಾಗಿಯೂ ತಿಳಿಸಿದರು. "ನನ್ನ ಮತ್ತು ಶಿವೋನ್ ಮಗನ ಮಧ್ಯದ ಹೆಸರು 'ಶೇಖರ್'. ಇದು ಭಾರತೀಯ ಮೂಲದ ನೊಬೆಲ್ ಪ್ರಶಸ್ತಿ ಪುರಸ್ಕೃತ ಭೌತಶಾಸ್ತ್ರಜ್ಞ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಹೆಸರಾಗಿದೆ," ಎಂದು ಮಸ್ಕ್ ಹೆಮ್ಮೆಯಿಂದ ಹೇಳಿಕೊಂಡರು. ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರು 1983 ರಲ್ಲಿ ನಕ್ಷತ್ರಗಳ ರಚನೆ ಮತ್ತು ವಿಕಾಸದ ಕುರಿತಾದ ಸಂಶೋಧನೆಗಾಗಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದರು.

ಶಿವೋನ್ ಜಿಲಿಸ್ ಯಾರು? ಅವರ ಹಿನ್ನೆಲೆ ಏನು?

ಶಿವೋನ್ ಜಿಲಿಸ್ ಕೆನಡಾದ ಒಂಟಾರಿಯೊದಲ್ಲಿ ಬೆಳೆದವರು. ಅವರು ಯೇಲ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರ ಅಧ್ಯಯನ ಮಾಡಿದ್ದಾರೆ. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಅವರು, 2017ರಲ್ಲಿ ನ್ಯೂರಾಲಿಂಕ್ ಕಂಪನಿಗೆ ಸೇರಿದರು ಮತ್ತು ಪ್ರಸ್ತುತ ಆಪರೇಷನ್ಸ್ ಮತ್ತು ಸ್ಪೆಷಲ್ ಪ್ರಾಜೆಕ್ಟ್ಸ್ ವಿಭಾಗದ ನಿರ್ದೇಶಕರಾಗಿದ್ದಾರೆ.

ಅವರ ಭಾರತೀಯ ನಂಟಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಸ್ಕ್, "ಶಿವೋನ್ ಕೆನಡಾದಲ್ಲಿ ಬೆಳೆದರು. ಅವರು ಮಗುವಾಗಿದ್ದಾಗಲೇ ದತ್ತು ನೀಡಲಾಗಿತ್ತು. ಅವರ ತಂದೆ ವಿಶ್ವವಿದ್ಯಾಲಯದಲ್ಲಿ ಎಕ್ಸ್‌ಚೇಂಜ್ ವಿದ್ಯಾರ್ಥಿಯಾಗಿದ್ದಿರಬಹುದು ಎಂದು ಭಾವಿಸುತ್ತೇನೆ. ನನಗೆ ಪೂರ್ತಿ ವಿವರಗಳು ತಿಳಿದಿಲ್ಲ," ಎಂದು ಸ್ಪಷ್ಟಪಡಿಸಿದರು. ಶಿವೋನ್ ಮತ್ತು ಮಸ್ಕ್ ಅವರಿಗೆ 2021ರಲ್ಲಿ ಅವಳಿ ಮಕ್ಕಳು (ಸ್ಟ್ರೈಡರ್ ಮತ್ತು ಅಜುರೆ) ಜನಿಸಿದ್ದು, ಇತ್ತೀಚೆಗೆ ಸೆಲ್ಡನ್ ಲೈಕರ್ಗಸ್ ಎಂಬ ಮತ್ತೊಂದು ಮಗು ಜನಿಸಿರುವುದು ವರದಿಯಾಗಿದೆ.

ಭಾರತೀಯ ಪ್ರತಿಭೆಗಳಿಗೆ ಮಸ್ಕ್ ಮೆಚ್ಚುಗೆ

ಇದೇ ಸಂದರ್ಭದಲ್ಲಿ, ಅಮೆರಿಕದ ಅಭಿವೃದ್ಧಿಯಲ್ಲಿ ಭಾರತೀಯ ವೃತ್ತಿಪರರ ಕೊಡುಗೆಯನ್ನು ಮಸ್ಕ್ ಮುಕ್ತ ಕಂಠದಿಂದ ಶ್ಲಾಘಿಸಿದರು. "ಪ್ರತಿಭಾವಂತ ಭಾರತೀಯರು ಅಮೆರಿಕಕ್ಕೆ ವಲಸೆ ಬಂದಿರುವುದರಿಂದ ಅಮೆರಿಕಕ್ಕೆ ಅಪಾರ ಲಾಭವಾಗಿದೆ," ಎಂದು ಅವರು ಅಭಿಪ್ರಾಯಪಟ್ಟರು. ವೀಸಾ ನಿಯಮಗಳ ಬಿಗಿ ಮತ್ತು ನೀತಿ ಬದಲಾವಣೆಗಳ ನಡುವೆಯೂ ಭಾರತೀಯರು ಅಮೆರಿಕದ ಆರ್ಥಿಕತೆ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಯನ್ನು ಅವರು ಸ್ಮರಿಸಿದರು.

Read More
Next Story