
ವಿಜಯಲಕ್ಷ್ಮೀ ದರ್ಶನ್
ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಅಶ್ಲೀಲ ಕಾಮೆಂಟ್: ಸಿಸಿಬಿ ಪೊಲೀಸರಿಂದ 3 ವಿಶೇಷ ತಂಡ ರಚನೆ
ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಮತ್ತು ಅಶ್ಲೀಲ ಕಾಮೆಂಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸಿಸಿಬಿಗೆ ದೂರು ನೀಡಿದ್ದಾರೆ.
ಸ್ಯಾಂಡಲ್‌ವುಡ್ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಮತ್ತು ಅಶ್ಲೀಲ ಕಾಮೆಂಟ್ ಮಾಡಿದ ಕಿಡಿಗೇಡಿಗಳ ವಿರುದ್ಧ ಸಿಸಿಬಿ ಸೈಬರ್ ಕ್ರೈಮ್ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಕಿಡಿಗೇಡಿಗಳ ಪತ್ತೆಗಾಗಿ ಸಿಸಿಬಿ ಈಗಾಗಲೇ ಮೂರು ವಿಶೇಷ ತಂಡಗಳನ್ನು ರಚಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದೆ.
ವಿಜಯಲಕ್ಷ್ಮಿ ಅವರು ನೀಡಿದ ದೂರಿನ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು, ಸಾಮಾಜಿಕ ಜಾಲತಾಣಗಳ ಸುಮಾರು 18 ಸಂಶಯಾಸ್ಪದ ಖಾತೆಗಳನ್ನು ಗುರುತಿಸಿದ್ದಾರೆ. ಈ ಖಾತೆಗಳ ಸಂಪೂರ್ಣ ವಿವರ ಮತ್ತು ಬಳಕೆದಾರರ ಮಾಹಿತಿ ಕೋರಿ ಪೊಲೀಸರು ಮೆಟಾ (ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್) ಸಂಸ್ಥೆಗೆ ಪತ್ರ ಬರೆದಿದ್ದಾರೆ. ಈಗಾಗಲೇ ಐಪಿ ಅಡ್ರೆಸ್ ಮತ್ತು ಸರ್ವರ್ ಮೂಲಕ ಕೆಲವರ ವಿಳಾಸಗಳನ್ನು ಪತ್ತೆ ಹಚ್ಚಲಾಗಿದೆ. ಪೊಲೀಸರು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆಯೇ ಇತ್ತ ಹಲವು ಕಿಡಿಗೇಡಿಗಳು ತಮ್ಮ ಅಕೌಂಟ್ ಹಾಗೂ ಪೋಸ್ಟ್‌ಗಳನ್ನು ಡಿಲೀಟ್ ಮಾಡಿ ತಲೆಮರೆಸಿಕೊಂಡಿದ್ದಾರೆ. ಸದ್ಯ ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ (U/s-67, 66(C)) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಘಟನೆಯ ಹಿನ್ನೆಲೆ
ಇತ್ತೀಚೆಗೆ ದಾವಣೆಗೆರೆಯಲ್ಲಿ ನಡೆದ 'ಡೆವಿಲ್' ಚಿತ್ರದ ಸಕ್ಸಸ್ ಮೀಟ್‌ನಲ್ಲಿ ವಿಜಯಲಕ್ಷ್ಮಿ ಅವರು ಪಾಲ್ಗೊಂಡಿದ್ದರು. ಆ ವೇದಿಕೆಯಲ್ಲಿ ತಮ್ಮ ಪತಿಯ ನಟನೆ ಮತ್ತು ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಅವರು, "ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳಬೇಡಿ" ಎಂದು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದರು. ಆದರೆ ಈ ಭಾಷಣದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ 'ಫ್ಯಾನ್ಸ್ ವಾರ್' ಅತಿರೇಕಕ್ಕೆ ಹೋಗಿದ್ದು, ವಿಜಯಲಕ್ಷ್ಮಿ ಅವರನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಲಾಗಿತ್ತು. ಇದು ಅವರ ಕಾನೂನು ಹೋರಾಟಕ್ಕೆ ಕಾರಣವಾಯಿತು.
ಈ ಎಲ್ಲಾ ಬೆಳವಣಿಗೆಗಳ ನಡುವೆ, ವಿಜಯಲಕ್ಷ್ಮಿ ಅವರು ಮೈದುನ ದಿನಕರ್ ತೂಗುದೀಪ್ ಅವರೊಂದಿಗೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ. ರೇಣುಕಸ್ವಾಮಿ ಕೊಲೆ ಪ್ರಕರಣದ ಬಳಿಕ ಪತಿ ದರ್ಶನ್ ಅವರನ್ನು ಭೇಟಿ ಮಾಡಿ ಸಾಕಷ್ಟು ಹೊತ್ತು ಮಾತುಕತೆ ನಡೆಸಿದ್ದಾರೆ. ಒಂದು ಕಡೆ ಪತಿಯ ಕಾನೂನು ಹೋರಾಟ, ಮತ್ತೊಂದು ಕಡೆ ತಮ್ಮ ವಿರುದ್ಧದ ಸೈಬರ್ ದಾಳಿಯ ವಿರುದ್ಧ ಸಮರ ಸಾರಿರುವ ವಿಜಯಲಕ್ಷ್ಮಿ ಅವರ ನಡೆ ಸದ್ಯ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

