ದರ್ಶನ್ ಇಲ್ಲದಿದ್ದರೂ ಅಭಿಮಾನಿಗಳು ಅವರನ್ನು ತಲೆ ಮೇಲೆ ಹೊತ್ತುಕೊಂಡು ಮೆರೆಸುತ್ತಾರೆ;  ವಿಜಯಲಕ್ಷ್ಮಿ ಸಂತಸ
x

ವಿಜಯಲಕ್ಷ್ಮೀ ದರ್ಶನ್‌ 

ದರ್ಶನ್ ಇಲ್ಲದಿದ್ದರೂ ಅಭಿಮಾನಿಗಳು ಅವರನ್ನು ತಲೆ ಮೇಲೆ ಹೊತ್ತುಕೊಂಡು ಮೆರೆಸುತ್ತಾರೆ; ವಿಜಯಲಕ್ಷ್ಮಿ ಸಂತಸ

ದರ್ಶನ್ ಜೈಲಿನಲ್ಲಿ ಇರುವಾಗಲೇ ಬಿಡುಗಡೆಯಾದ ‘ದಿ ಡೆವಿಲ್’ ಸಿನಿಮಾಕ್ಕೆ ಅಭಿಮಾನಿಗಳು ನೀಡಿದ ಪ್ರಚಾರ ಮತ್ತು ಯಶಸ್ಸಿನ ಬಗ್ಗೆ ವಿಜಯಲಕ್ಷ್ಮಿ ಸಂತಸ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಇದೇ ಮೊದಲ ಬಾರಿಗೆ ಸುದೀರ್ಘ ಸಂದರ್ಶನ ನೀಡುವ ಮೂಲಕ ಮೌನ ಮುರಿದಿದ್ದಾರೆ. ದರ್ಶನ್ ಅಭಿಮಾನಿಗಳ ‘ಡಿ ಕಂಪನಿ’ ಯೂಟ್ಯೂಬ್ ಚಾನೆಲ್​​ಗೆ ನಟಿ ರಚನಾ ರೈ ಅವರು ಈ ಸಂದರ್ಶನವನ್ನು ಮಾಡಿದ್ದಾರೆ. ದರ್ಶನ್ ಅವರ ಬದುಕಿನಲ್ಲಿ ಆದ ಕಹಿ ಘಟನೆಗಳು ಮತ್ತು ಅಭಿಮಾನಿಗಳ ಕುರಿತು ವಿಜಯಲಕ್ಷ್ಮಿ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ದರ್ಶನ್ ಜೈಲಿನಲ್ಲಿ ಇರುವಾಗಲೇ ಬಿಡುಗಡೆಯಾದ ‘ದಿ ಡೆವಿಲ್’ ಸಿನಿಮಾಕ್ಕೆ ಅಭಿಮಾನಿಗಳು ನೀಡಿದ ಪ್ರಚಾರ ಮತ್ತು ಯಶಸ್ಸಿನ ಬಗ್ಗೆ ವಿಜಯಲಕ್ಷ್ಮಿ ಸಂತಸ ವ್ಯಕ್ತಪಡಿಸಿದ್ದಾರೆ. "ದಿ ಡೆವಿಲ್ ಸಿನಿಮಾದ ಯಶಸ್ಸಿನಿಂದ ಬಹಳ ಖುಷಿ ಆಗುತ್ತಿದೆ. ದರ್ಶನ್ ಇಲ್ಲದೇ ಇದ್ದರೂ ಕೂಡ ಅಭಿಮಾನಿಗಳು ಅವರ ಸಿನಿಮಾವನ್ನು ಮತ್ತು ಅವರನ್ನು ತಲೆ ಮೇಲೆ ಹೊತ್ತುಕೊಂಡು ಮೆರೆಸುತ್ತಾರೆ ಎಂಬುದಕ್ಕೆ ಇದು ಒಂದು ಉದಾಹರಣೆ. ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದಾಗ ಈ ರೀತಿ ಆಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. ನಾವು ಅದನ್ನು ನಿರೀಕ್ಷಿಸಿರಲಿಲ್ಲ" ಎಂದಿದ್ದಾರೆ.

ಸಂದರ್ಶನದಲ್ಲಿ ವಿಜಯಲಕ್ಷ್ಮಿ ಅವರು, ನೆಗೆಟಿವ್ ಮಾತುಗಳ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. "ಜನರು ನೆಗೆಟಿವ್ ಆಗಿ ಮಾತನಾಡಿದರೆ ನನಗೆ ಪರಿಣಾಮ ಬೀರಲ್ಲ. ಯಾಕೆಂದರೆ ಶೇಕಡ 90ರಷ್ಟು ಜನರು ಪ್ರೀತಿ ತೋರಿಸಿದ್ದಾರೆ. ಅದು ಸಾಕು. ನೆಗೆಟಿವ್ ಕಮೆಂಟ್​​ಗಳನ್ನು ನಾನು ಓದುವುದೇ ಇಲ್ಲ" ಎಂದು ತಿಳಿಸಿದ್ದಾರೆ.

ಅಲ್ಲದೇ, ದರ್ಶನ್ ಅಭಿಮಾನಿಗಳ ಪರವಾಗಿ ಮಾತನಾಡಿದ ವಿಜಯಲಕ್ಷ್ಮಿ, "ಮಹಿಳೆಯರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬುದು ದರ್ಶನ್ ಅಭಿಮಾನಿಗಳಿಗೆ ಚೆನ್ನಾಗಿ ಗೊತ್ತಿದೆ. ನಮ್ಮ ಸೆಲೆಬ್ರಿಟಿಸ್ ಬಳಿ ಹಣ ಸಂಗ್ರಹ ಮಾಡಿ ಒಂದು ಶಾಲೆ ಶುರು ಮಾಡೋಣ. ಅವರನ್ನು ಈಗ ಅನಕ್ಷರಸ್ಥರು ಅಂತ ಯಾರೆಲ್ಲ ಹೇಳುತ್ತಿದ್ದಾರೋ ಅವರನ್ನೇ ಕರೆದುಕೊಂಡು ಬಂದು ದಯವಿಟ್ಟು ಶಿಕ್ಷಣ ನೀಡಿ ಅಂತ ಹೇಳೋಣ" ಎಂದು ಅಭಿಪ್ರಾಯಪಟ್ಟಿದ್ದಾರೆ.

ನಟ ದರ್ಶನ್ ಅಭಿನಯದ ಬಹುನಿರೀಕ್ಷಿತ 'ದಿ ಡೆವಿಲ್' ಸಿನಿಮಾ ಡಿಸೆಂಬರ್ 11ರಂದು ಅದ್ದೂರಿಯಾಗಿ ಬಿಡುಗಡೆ ಆಗಿ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಆರಂಭ ಪಡೆದಿದೆ. ಕೊಲೆ ಆರೋಪದ ಮೇಲೆ ದರ್ಶನ್ ಜೈಲಿನಲ್ಲಿ ಇರುವಾಗಲೇ ಬಿಡುಗಡೆಯಾದ ಈ ಚಿತ್ರವನ್ನು ಅವರ ಅಭಿಮಾನಿಗಳು ಹಬ್ಬದ ರೀತಿ ಸ್ವಾಗತಿಸಿದ್ದಾರೆ. 'ದಿ ಡೆವಿಲ್' ಚಿತ್ರ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ.

ಚಿತ್ರತಂಡದ ಅಧಿಕೃತ ಘೋಷಣೆಯ ಪ್ರಕಾರ, ಮೊದಲ ದಿನ ಈ ಸಿನಿಮಾ 13.8 ಕೋಟಿ ರೂಪಾಯಿ ಗಳಿಸಿದೆ. ವರದಿಗಳ ಪ್ರಕಾರ, ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಸಿನಿಮಾ 7 ಕೋಟಿ ರೂ. ಹೆಚ್ಚು ಕಲೆಕ್ಷನ್ ಮಾಡಿತ್ತು. ಮೊದಲ ದಿನದ ಭರ್ಜರಿ ಗಳಿಕೆಯ ನಂತರ, ಎರಡನೇ ಮತ್ತು ಮೂರನೇ ದಿನಗಳಲ್ಲಿ ಕಲೆಕ್ಷನ್ ಕುಸಿತ ಕಂಡಿದೆ. ಎರಡನೇ ದಿನ ಅಂದಾಜು 3.4 ಕೋಟಿ ರೂಪಾಯಿ ಮೂರನೇ ದಿನ ಅಂದಾಜು 3.75 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಮೂರು ದಿನಗಳಲ್ಲಿ ಸಿನಿಮಾ 17 ಕೋಟಿ ರೂ. ಗಡಿ ದಾಟಿದೆ ಎಂದು ವರದಿಯಾಗಿದೆ.

ನಿರ್ದೇಶಕ ಪ್ರಕಾಶ್ ವೀರ್ ಆ್ಯಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ದರ್ಶನ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜಕೀಯ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.

Read More
Next Story