
ಅಮೆರಿಕ ಹಾಗೂ ತೈವಾನ್ ವ್ಯಾಪಾರ ಒಪ್ಪಂದ ಮಾಡಿಕೊಂಡಿವೆ.
ಅಮೆರಿಕ-ತೈವಾನ್ ಐತಿಹಾಸಿಕ ಒಪ್ಪಂದ: 250 ಬಿಲಿಯನ್ ಡಾಲರ್ ಹೂಡಿಕೆ, ಸುಂಕ ಕಡಿತ; ಏನಿದರ ಪೂರ್ಣ ವಿವರ?
ಟ್ರಂಪ್ ಆಡಳಿತವು ಆರಂಭದಲ್ಲಿ ತೈವಾನ್ ಸರಕುಗಳ ಮೇಲೆ ಶೇ. 32ರಷ್ಟು ಸುಂಕ ವಿಧಿಸಲು ನಿರ್ಧರಿಸಿತ್ತು. ನಂತರ ಅದನ್ನು ಶೇ. 20ಕ್ಕೆ ಇಳಿಸಲಾಗಿತ್ತು. ಈಗ ಏರ್ಪಟ್ಟಿರುವ ಹೊಸ ಒಪ್ಪಂದದ ಅನ್ವಯ, ಈ ದರವನ್ನು ಶೇ. 15ಕ್ಕೆ ಇಳಿಸಲಾಗಿದೆ.
ವಿಶ್ವದ ಆರ್ಥಿಕ ಮತ್ತು ತಂತ್ರಜ್ಞಾನ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಅಮೆರಿಕ ಮತ್ತು ತೈವಾನ್ ಗುರುವಾರ (ಜ.15) ಐತಿಹಾಸಿಕ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ, ಅಮೆರಿಕದ ತಂತ್ರಜ್ಞಾನ ವಲಯದಲ್ಲಿ ತೈವಾನ್ ಬರೋಬ್ಬರಿ 250 ಬಿಲಿಯನ್ ಡಾಲರ್ (ಸುಮಾರು 21 ಲಕ್ಷ ಕೋಟಿ ರೂ.) ಹೂಡಿಕೆ ಮಾಡಲಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಸರ್ಕಾರವು ತೈವಾನ್‌ನಿಂದ ಆಮದಾಗುವ ಸರಕುಗಳ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಲು ಒಪ್ಪಿಗೆ ನೀಡಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವರ್ಷ ಏಪ್ರಿಲ್‌ನಲ್ಲಿ ತಮ್ಮ ಮಹತ್ವಾಕಾಂಕ್ಷೆಯ ಸುಂಕ ಯೋಜನೆಯನ್ನು ಅನಾವರಣಗೊಳಿಸಿದ ನಂತರ ನಡೆದ ಪ್ರಮುಖ ಬೆಳವಣಿಗೆ ಇದಾಗಿದೆ. ಟ್ರಂಪ್ ಈಗಾಗಲೇ ಯುರೋಪಿಯನ್ ಯೂನಿಯನ್ ಮತ್ತು ಜಪಾನ್‌ನೊಂದಿಗೆ ಇಂತಹ ಒಪ್ಪಂದಗಳನ್ನು ಮಾಡಿಕೊಂಡಿದ್ದು, ಈಗ ತೈವಾನ್ ಸರದಿ. ಇದೇ ವೇಳೆ, ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾದ ಚೀನಾದೊಂದಿಗಿನ ಸಂಬಂಧವನ್ನು ಸ್ಥಿರಗೊಳಿಸಲು ಟ್ರಂಪ್ ಒಂದು ವರ್ಷದ ವಾಣಿಜ್ಯ ಕದನ ವಿರಾಮವನ್ನೂ ಘೋಷಿಸಿದ್ದಾರೆ.
ಸುಂಕ ಕಡಿತದ ಲೆಕ್ಕಾಚಾರವೇನು?
ಟ್ರಂಪ್ ಆಡಳಿತವು ಆರಂಭದಲ್ಲಿ ತೈವಾನ್ ಸರಕುಗಳ ಮೇಲೆ ಶೇ. 32ರಷ್ಟು ಸುಂಕ ವಿಧಿಸಲು ನಿರ್ಧರಿಸಿತ್ತು. ನಂತರ ಅದನ್ನು ಶೇ. 20ಕ್ಕೆ ಇಳಿಸಲಾಗಿತ್ತು. ಈಗ ಏರ್ಪಟ್ಟಿರುವ ಹೊಸ ಒಪ್ಪಂದದ ಅನ್ವಯ, ಈ ದರವನ್ನು ಶೇ. 15ಕ್ಕೆ ಇಳಿಸಲಾಗಿದೆ. ಅಮೆರಿಕದ ಪ್ರಮುಖ ಏಷ್ಯಾ-ಪೆಸಿಫಿಕ್ ವ್ಯಾಪಾರ ಪಾಲುದಾರರಾದ ಜಪಾನ್ ಮತ್ತು ದಕ್ಷಿಣ ಕೊರಿಯಾಗಳಿಗೆ ವಿಧಿಸಲಾಗುವ ಸುಂಕದ ದರವೇ ಇದೀಗ ತೈವಾನ್‌ಗೂ ಅನ್ವಯವಾಗಲಿದೆ.
ಒಪ್ಪಂದದ ಪ್ರಮುಖಾಂಶಗಳೇನು?
ಅಮೆರಿಕದ ವಾಣಿಜ್ಯ ಇಲಾಖೆಯ ಪ್ರಕಾರ, ಇದೊಂದು "ಆರ್ಥಿಕ ಪಾಲುದಾರಿಕೆ"ಯಾಗಿದ್ದು, ಅಮೆರಿಕದಲ್ಲಿ ವಿಶ್ವದರ್ಜೆಯ ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸಲು ನೆರವಾಗಲಿದೆ. ಅಮೆರಿಕದ ಸೆಮಿಕಂಡಕ್ಟರ್ (ಚಿಪ್) ವಲಯವನ್ನು ತವರು ನೆಲದಲ್ಲೇ ಬಲಪಡಿಸುವುದು (Reshoring) ಈ ಒಪ್ಪಂದದ ಪ್ರಮುಖ ಉದ್ದೇಶ. ಸುಂಕ ಕಡಿತದ ಜೊತೆಗೆ, ತೈವಾನ್‌ನಿಂದ ಬರುವ ಜೆನೆರಿಕ್ ಔಷಧಗಳು ಮತ್ತು ವಿಮಾನದ ಬಿಡಿಭಾಗಗಳ ಆಮದಿಗೆ ಅಮೆರಿಕ ವಿನಾಯಿತಿ ನೀಡಲಿದೆ. ಅಮೆರಿಕದಲ್ಲಿ ಹೂಡಿಕೆ ಮಾಡುವ ತೈವಾನ್‌ನ ಚಿಪ್ ತಯಾರಕರಿಗೆ ವಿಶೇಷ ತೆರಿಗೆ ವಿನಾಯಿತಿಗಳು ಸಿಗಲಿವೆ. ಸೆಮಿಕಂಡಕ್ಟರ್‌ಗಳು, ಕೃತಕ ಬುದ್ಧಿಮತ್ತೆ (AI) ಅಪ್ಲಿಕೇಶನ್‌ಗಳು ಮತ್ತು ಇಂಧನ ವಲಯದಲ್ಲಿ ತೈವಾನ್ ಕಂಪನಿಗಳು ಅಮೆರಿಕದಲ್ಲಿ 250 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿವೆ.
ಚೀನಾ ಕೆಂಗಣ್ಣು: ಇದು 'ಆರ್ಥಿಕ ಲೂಟಿ'
ತೈವಾನ್ ತನ್ನದೇ ಭೂಪ್ರದೇಶ ಎಂದು ಪ್ರತಿಪಾದಿಸುವ ಚೀನಾ, ಈ ಒಪ್ಪಂದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಒಪ್ಪಂದ ಘೋಷಣೆಯಾಗುವ ಒಂದು ದಿನದ ಮುಂಚೆಯೇ ಪ್ರತಿಕ್ರಿಯಿಸಿದ್ದ ಬೀಜಿಂಗ್, ಇದನ್ನು ಅಮೆರಿಕ ನಡೆಸುತ್ತಿರುವ "ಆರ್ಥಿಕ ಲೂಟಿ" ಎಂದು ಜರಿದಿದೆ. ಈ ಒಪ್ಪಂದದ ಕೇಂದ್ರಬಿಂದುವಾಗಿರುವುದು ತೈವಾನ್ ಮೂಲದ ವಿಶ್ವದ ಅತಿದೊಡ್ಡ ಚಿಪ್ ತಯಾರಕ ಕಂಪನಿ 'ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಾರ್ಪೊರೇಷನ್' (TSMC). ಎಐ (AI) ಕ್ರಾಂತಿಯಿಂದಾಗಿ ಕಂಪನಿಯ ಲಾಭ ಗಣನೀಯವಾಗಿ ಏರಿಕೆಯಾಗಿದೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಟಿಎಸ್‌ಎಂಸಿ ಬರೋಬ್ಬರಿ 506 ಬಿಲಿಯನ್ ತೈವಾನ್ ಡಾಲರ್ (ಸುಮಾರು 16 ಬಿಲಿಯನ್ ಯುಎಸ್ ಡಾಲರ್) ನಿವ್ವಳ ಲಾಭ ಗಳಿಸಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 35ರಷ್ಟು ಹೆಚ್ಚು. 2026ರ ಸಾಲಿನಲ್ಲಿ ಬಂಡವಾಳ ವೆಚ್ಚವನ್ನು (Capex) 52 ರಿಂದ 56 ಬಿಲಿಯನ್ ಡಾಲರ್‌ಗೆ ಏರಿಸಲು ಕಂಪನಿ ನಿರ್ಧರಿಸಿದೆ. ಕಳೆದ ವರ್ಷ ಇದು 40 ಬಿಲಿಯನ್ ಡಾಲರ್ ಇತ್ತು. ಟಿಎಸ್‌ಎಂಸಿ ಅಮೆರಿಕದಲ್ಲಿ ಸುಮಾರು 165 ಬಿಲಿಯನ್ ಡಾಲರ್ ಹೂಡಿಕೆಗೆ ಬದ್ಧವಾಗಿದ್ದು, ಅರಿಝೋನಾದಲ್ಲಿ ಹೊಸ ಘಟಕಗಳ ನಿರ್ಮಾಣವನ್ನು ತ್ವರಿತಗೊಳಿಸುತ್ತಿದೆ.

