ಅಧಿಕಾರ ಚಲಾಯಿಸುವ ಟ್ರಂಪ್ ಹಪಾಹಪಿ: ಭಾರತದ ವಿರುದ್ಧ ಇನ್ನೂ ತಣ್ಣಗಾಗಿಲ್ಲ ಕೋಪ
x
ತಾವು ಎಷ್ಟೇ ಪ್ರಯತ್ನ ಮಾಡಿದರೂ ಕಳೆದ ವರ್ಷದ ಮೇ ತಿಂಗಳಲ್ಲಿ ನಡೆದ ಭಾರತ-ಪಾಕಿಸ್ತಾನ ನಡುವಿನ ಯುದ್ಧ ಕೊನೆಗೊಳ್ಳಲು ದ್ವಿಪಕ್ಷೀಯ ಮಾತುಕತೆಯೇ ಕಾರಣವೇ ಹೊರತು ಮೂರನೆಯವರ ಮಧ್ಯಸ್ಥಿಕೆ ಕಾರಣವಲ್ಲ ಎಂದು ಭಾರತ ಹೇಳಿಕೊಳ್ಳುತ್ತಿರುವುದು ನೊಬೆಲ್ ಶಾಂತಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟು ಕುಳಿತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಗಂಟಲ ಮುಳ್ಳಾಗಿ ಪರಿಣಮಿಸಿದೆ.

ಅಧಿಕಾರ ಚಲಾಯಿಸುವ ಟ್ರಂಪ್ ಹಪಾಹಪಿ: ಭಾರತದ ವಿರುದ್ಧ ಇನ್ನೂ ತಣ್ಣಗಾಗಿಲ್ಲ ಕೋಪ

ವೆನೆಜುವೆಲಾದಿಂದ ಆರಂಭಿಸಿ ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ತನಕ ಟ್ರಂಪ್‌ ಕೈಗೊಳ್ಳುತ್ತಿರುವ ಕ್ರಮಗಳು ನಿಯಮಗಳನ್ನು ಗಾಳಿಗೆ ತೂರಿ ʼನಗ್ನ ಅಧಿಕಾರʼ ಪ್ರದರ್ಶನದತ್ತ ಸಾಗುತ್ತಿರುವಂತಿದೆ.


Click the Play button to hear this message in audio format

ಈ ವರ್ಷದ ಆರಂಭದಿಂದಲೂ ಅಮೆರಿಕದ ಕ್ರಮಗಳು, ಅದರ ಹೇಳಿಕೆಗಳು, ಪ್ರತಿಕ್ರಿಯೆಗಳು ನೇರವಾಗಿ ಅಥವಾ ಪರೋಕ್ಷವಾಗಿ ಭಾರತೀಯ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುತ್ತಿದೆ.

ಮೊಟ್ಟಮೊದಲ ಕ್ರಮವೆಂದರೆ ವೆನೆಜುವೆಲಾದಲ್ಲಿ ನಡೆಸಿದ ಮಿಲಿಟರಿ ಕಾರ್ಯಾಚರಣೆ ಮತ್ತು ಅಲ್ಲಿನ ಅಧ್ಯಕ್ಷ ನಿಕೊಲಸ್‌ ಮಡುರೊ ಮತ್ತು ಆವರ ಪತ್ನಿ ಸಿಲಾ ಫ್ಲೋರೆಸ್‌ ಅವರನ್ನು ಅವರ ದೇಶದಿಂದಲೇ ಅಪಹರಿಸಿದ್ದು. ಹಾಗೆ ಮಾಡಲು ಕಾರಣ ಅಮೆರಿಕಕ್ಕೆ ಮಾದಕ ವಸ್ತು ಕಳ್ಳಸಾಗಣೆ ಮಾಡಲು ಅವಕಾಶ ನೀಡಿದ ಕ್ರಿಮಿನಲ್ ಆರೋಪ. ಇದರ ಹಿಂದಿನ ಭೌಗೋಳಿಕ ರಾಜಕೀಯ ಉದ್ದೇಶಗಳು ಮತ್ತು ಕಾರ್ಯತಂತ್ರಗಳು ಈಗ ಬಹಿರಂಗಗೊಂಡಿವೆ. ಇದು ಇಡೀ ಜಗತ್ತಿನ ಮೇಲೆ ಅದರಲ್ಲೂ ಮುಖ್ಯವಾಗಿ ಭಾರತದಂತಹ ಉದಯೋನ್ಮುಖ ಜಾಗತಿಕ ಶಕ್ತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಮಡುರೊ ಮತ್ತು ಆವರ ಪತ್ನಿ ಸಿಲಾ ಅವರನ್ನು ಬಲವಂತವಾಗಿ ಪದಚ್ಯುತಗೊಳಿಸುವಂತೆ ಆದೇಶ ಹೊರಡಿಸುವ ಮೂಲಕ ಅಮೆರಿಕದ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಮುನ್ನಡೆಸಲು ತಾನು ಏನನ್ನಾದರೂ ಮಾಡಲು ಸಿದ್ಧ ಎಂಬುದನ್ನು ಟ್ರಂಪ್‌ ಸಾಬೀತುಪಡಿಸಿದ್ದಾರೆ. ಇಂತಹ ಕೃತ್ಯವನ್ನು ಜಾರಿಗೆ ತರುವ ಮೂಲಕ ಎರಡನೇ ಮಹಾಯುದ್ಧದ ನಂತರ ಅಮೆರಿಕ ಮತ್ತು ಅದರ ಮಿತ್ರಗಳು ಜಾರಿಗೆ ತಂದಿದ್ದ ʼನಿಯಮ ಆಧಾರಿತ ವಿಶ್ವ ವ್ಯವಸ್ಥೆʼಯನ್ನು ತಾವೇ ಉಲ್ಲಂಘಿಸಿದ್ದಾರೆ.

ಶಿಷ್ಟಾಚಾರದಲ್ಲಿ ನಂಬಿಕೆ ಇಲ್ಲದ ಅಧ್ಯಕ್ಷ

ಹಾಗಂತ ಈ ಹಿಂದೆ ಅಮೆರಿಕವನ್ನು ಆಳಿದ ನಾಯಕರು ವಿಶ್ವ ವ್ಯವಸ್ಥೆಯನ್ನು ಪೋಷಿಸುವ ನಿಯಮಗಳನ್ನು ಮುರಿದೇ ಇಲ್ಲ ಎಂದೇನೂ ಅಲ್ಲ. ಆದರೆ ಅವರೆಲ್ಲ ತಮ್ಮ ಕ್ರಮಗಳನ್ನು ಯಾವುದಾದರೊಂದು ಸಮರ್ಥನೆಯ ಮುಖವಾಡ ಧರಿಸಿ ಮರೆಮಾಚಲು ಪ್ರಯತ್ನಿಸುತ್ತಿದ್ದರು. ಟ್ರಂಪ್‌ ಅವರಿಗೆ ಆ ಬಗೆಯ ಶಿಷ್ಟಾಚಾರದಲ್ಲೆಲ್ಲ ನಂಬಿಕೆ ಇಲ್ಲ. ಅಮೆರಿಕಕ್ಕೆ ಇತರ ರಾಷ್ಟ್ರಗಳ ಮೇಲೆ ಮುಕ್ತವಾಗಿ ತನ್ನ ಇಚ್ಛೆಯನ್ನು ಹೇರುವ ಶಕ್ತಿ ಇರುವುದರಿಂದ ಅಗತ್ಯವೆನಿಸಿದಾಗಲೆಲ್ಲ ಹಾಗೆಯೇ ಮಾಡುತ್ತದೆ ಎಂಬುದು ಅವರ ಧೋರಣೆಯಾಗಿದೆ.

ಯಾವುದೇ ಒಂದು ದೇಶದ ಸಾರ್ವಭೌಮತೆ ಅತ್ಯಂತ ಪವಿತ್ರವಾದುದು. ಇತರ ದೇಶಗಳ ಆಂತರಿಕ ವಿಚಾರದಲ್ಲಿ ಯಾವತ್ತೂ ಹಸ್ತಕ್ಷೇಪ ಮಾಡಬಾರದು ಎಂಬ ತತ್ವವನ್ನು ಅಮೆರಿಕ ಯಾವತ್ತೂ ಪ್ರತಿಪಾದಿಸುತ್ತ ಬಂದಿದೆ. ಆದರೆ ಅದೇ ಹೊತ್ತಿಗೆ ಅದು ಇತರ ದೇಶಗಳ ಸಾರ್ವಭೌಮತ್ವವನ್ನು ಉಲ್ಲಂಘಿಸುವ ಹಾಗೂ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವಲ್ಲಿ ಮುಂಚೂಣಿಯಲ್ಲಿದೆ. ತಾವು ಕೈಗೊಂಡಿರುವ ಕ್ರಮಗಳು ಅಂತಾರಾಷ್ಟ್ರೀಯ ಕಾನೂನಿನ ವ್ಯಾಪ್ತಿಯಲ್ಲಿಯೇ ಇವೆ ಎಂದು ತೋರಿಸುವ ಯಾವುದೇ ಹಂಬಲವನ್ನು ಟ್ರಂಪ್‌ ಹೊಂದಿಲ್ಲ. ಯಾವುದೇ ಜಾಗತಿಕ ನಿಯಮ ಅಥವಾ ಸಂಪ್ರದಾಯಗಳು ತಮಗೆ ಲಾಗೂ ಆಗುವುದಿಲ್ಲ ಎಂಬ ಧೋರಣೆಯಲ್ಲಿಯೇ ಅವರಿದ್ದಾರೆ. ಅವರಿಗೆ ಯಾವತ್ತೂ ಆಕರ್ಷಕವಾಗಿ ಕಾಣುವುದು ಖುಲ್ಲಂಖುಲ್ಲ ಅಧಿಕಾರ ಚಲಾಯಿಸುವ ಹಪಾಹಪಿ. ಅಂತಹ ಬಲಪ್ರದರ್ಶನ ಮಾಡುವಲ್ಲಿ ಅವರು ಯಾವತ್ತೂ ಹಿಂಜರಿಯುವುದಿಲ್ಲ.

ಅಂತಾರಾಷ್ಟ್ರೀಯ ವ್ಯವಸ್ಥೆಯು ನ್ಯಾಯ ಮತ್ತು ಸಮಾನತೆಯ ಮೇಲೆಯೇ ಯಾವತ್ತೂ ಆಧಾರಿತವಾಗಿರಬೇಕು ಎಂದು ಭಾರತವು ಯಾವತ್ತೂ ಪ್ರತಿಪಾದಿಸುತ್ತ ಬಂದಿದೆ. ಹಾಗಾಗಿ ಅದು ಸಹಜವಾಗಿ ತನ್ನದೇ ಹಿತಾಸಕ್ತಿಗಳಿಗೆ ಉತ್ತೇಜನ ನೀಡುವುದರಲ್ಲಿ ನಿರತವಾಗಿದೆ. ಆದರೆ ಅಂತಹ ಹಿತಾಸಕ್ತಿಗಳನ್ನು ಇತರ ರಾಷ್ಟ್ರಗಳ, ಅದರಲ್ಲೂ ವಿಶೇಷವಾಗಿ ʼಗ್ಲೋಬಲ್‌ ಸೌತ್‌ʼ ಅಥವಾ ದಕ್ಷಿಣದ ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿಗಳ ಜೊತೆಗೆ ತಳಕು ಹಾಕಲು ಪ್ರಯತ್ನಿಸುತ್ತ ಬಂದಿದೆ.

ಭಾರತವು ತನ್ನ ಸ್ವಾತಂತ್ರ್ಯ ಮತ್ತು ಕಾರ್ಯತಂತ್ರದ ಸ್ವಾಯತ್ತತೆಯನ್ನು ಬಹಳ ಗೌರವಿಸುತ್ತದೆ. ವಾಸ್ತವವಾಗಿ ತನ್ನ ಅಭಿವೃದ್ಧಿಯ ಈ ಹಂತದಲ್ಲಿ ನಿಯಮ ಆಧಾರಿತ ಜಾಗತಿಕ ವ್ಯವಸ್ಥೆಯು ಭಾರತಕ್ಕೆ ಬಹಳ ಅಮೂಲ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಭಾರತವು ವೆನೆಜುವೆಲಾ ಅಧ್ಯಕ್ಷರೆಂದು ಗುರುತಿಸಿದ್ದ ಮಡುರೊ ಅವರ ವಿರುದ್ಧ ಟ್ರಂಪ್‌ ಕೈಗೊಂಡಿರುವ ಕ್ರಮವು ಅಸಮಾಧಾನಕ್ಕೆ ಕಾರಣವಾಗಿದೆ. ವೆನೆಜುವೆಲಾದಲ್ಲಿ ಅಮೆರಿಕ ನಡೆಸಿದ ಮಿಲಿಟರಿ ಕಾರ್ಯಾಚರಣೆಯ ವಿಚಾರದಲ್ಲಿ ಭಾರತ ಎಚ್ಚರಿಕೆಯ ಹೇಳಿಕೆಯನ್ನು ನೀಡಿದೆ. ಯಾಕೆಂದರೆ ಭಾರತ-ಅಮೆರಿಕ ವ್ಯಾಪಾರ ಒಪ್ಪಂದವು ಇನ್ನೂ ಫೈಸಲಾಗಿಲ್ಲ. ಇಂತಹ ಸಮಯದಲ್ಲಿ ಟ್ರಂಪ್‌ ಭಾರತದ ವಿರುದ್ಧ ಕೆರಳಿ ಕೆಂಡವಾಗಬಾರದು ಅಥವಾ ಹಗೆತನ ಬೆಳೆಸಿಕೊಳ್ಳಬಾರದು ಎಂಬುದಷ್ಟೇ ಅದರ ಉದ್ದೇಶ,

ಒಪ್ಪಂದ-ಒಪ್ಪಿದ್ದು ಯಾರು?

ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಒಪ್ಪಂದವು ಅಂತಿಮಗೊಂಡಿದೆ ಎಂದು ಕೆಲವು ದಿನಗಳ ಹಿಂದಷ್ಟೇ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೋವಾರ್ಡ್‌ ಲುಟ್ನಿಕ್‌ ಹೇಳಿದ್ದರು. ಆದರೆ ಅದಕ್ಕೇನಾದರೂ ಅಧಿಕೃತ ಮುದ್ರೆ ಒತ್ತಬೇಕಿದ್ದರೆ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷರ ಜೊತೆ ಮಾತನಾಡಬೇಕು ಎಂದೂ ಅವರು ಭಾರತದ ಸಂಧಾನಕಾರರಿಗೆ ತಾಕೀತುಮಾಡಿದ್ದರು.

ಮೋದಿ ಅವರು ಹಾಗೆ ಮಾಡಲಿಲ್ಲ. ಆದ್ದರಿಂದ ಒಪ್ಪಂದ ಅಂತಿಮಗೊಳ್ಳಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಅಮೆರಿಕವು ಭಾರತಕ್ಕೆ ಒಪ್ಪಿಕೊಂಡಿದ್ದಕ್ಕಿಂತಲೂ ಹೆಚ್ಚಿನ ಸುಂಕದ ದರಗಳಲ್ಲಿ ಇತರ ದೇಶಗಳ ಜೊತೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿತು. ಅದಾದ ಬಳಿ ಭಾರತದ ಸಂಧಾನಕಾರರು ಮರಳಿ ಒಪ್ಪಂದವನ್ನು ಮಾಡಿಕೊಳ್ಳಲು ಸಮ್ಮತಿ ಸೂಚಿಸಿದರು. ಆಗ ಲುಟ್ನಿಕ್‌ ಅವರು ಹೇಳಿದ್ದು; "ರೈಲು ನಿಲ್ದಾಣದಿಂದ ಹೊರಟು ಹೋಗಿದೆ!” ಎಂದು. ಜೊತೆಗೆ ಒಪ್ಪಂದವು ಇನ್ನು ಮುಂದೆ ಲಭ್ಯವಿಲ್ಲ ಎಂದೂ ಸ್ಪಷ್ಟಪಡಿಸಿದ್ದರು.

ಈ ಒಪ್ಪಂದ ಕುರಿತಂತೆ ಲುಟ್ನಿಕ್‌ ಅವರು ನೀಡಿದ ಹೇಳಿಕೆಯನ್ನು ಭಾರತವು ನಿರಾಕರಿಸಿದೆ. ಅಷ್ಟೇ ಅಲ್ಲದೆ, ಉಭಯ ರಾಷ್ಟ್ರಗಳು ಬೇರೆ ಬೇರೆ ಸಂದರ್ಭಗಳಲ್ಲಿ ಒಪ್ಪಂದವನ್ನು ಅಂತಿಗೊಳಿಸುವ ಬಂದಿದ್ದವು ಎಂದೂ ಸ್ಪಷ್ಟಪಡಿಸಿದೆ. ೨೦೨೫ರಲ್ಲಿ ಮೋದಿ ಮತ್ತು ಟ್ರಂಪ್‌ ಎಂಟು ಬಾರಿ ದೂರವಾಣಿ ಮೂಲಕ ಚರ್ಚೆ ನಡೆಸಿದ್ದಾರೆ ಎಂದೂ ಭಾರತ ಸಮಜಾಯಿಷಿ ನೀಡಿದೆ. ಆ ಮಾತುಕತೆಗಳು ದ್ವಿಪಕ್ಷೀಯ ಸಂಬಂಧಗಳ ನಾನಾ ಆಯಾಮಗಳ ಕುರಿತಾಗಿದ್ದವು ಎಂಬುದೂ ಗಮನಾರ್ಹ.

ಭಾರತವು ಈ ಮಾತುಕತೆಗಳಿಗೆ ಸಂಬಂಧಿಸಿದಂತೆ ತನ್ನದೇ ಆದ ಅಧಿಕೃತ ಅಭಿಪ್ರಾಯಗಳನ್ನು ದಾಖಲಿಸಿರುವುದು ಉತ್ತಮವೇ ಆಗಿದೆ. ಆದರೆ ಭಾರತ ಈ ಬಗ್ಗೆ ಹೆಚ್ಚಿನ ವಿವರಗಳನ್ನು ಸಾರ್ವಜನಿಕವಾಗಿ ನೀಡುವುದು ಇನ್ನೂ ಉತ್ತಮ. ಅಂದರೆ ದೂರವಾಣಿ ಕರೆಗಳು ದಾಖಲಾದ ದಿನಾಂಕ ಯಾವುದು, ಯಾರು ಯಾರಿಗೆ ಕರೆ ಮಾಡಿದರು, ಇಬ್ಬರು ನಾಯಕರು ಚರ್ಚಿಸಿದ ವಿಷಯಗಳಾದರೂ ಏನು ಎಂಬುದನ್ನು ಬಹಿರಂಗಪಡಿಸುವುದು ಸೂಕ್ತ. ಇಂತಹ ವಿವರಗಳನ್ನು ಒದಗಿಸುವುದರಿಂದ ರಾಜತಾಂತ್ರಿಕ ನಿಯಮಗಳಿಗೆ ಅಥವಾ ಸಂಬಂಧಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ಅಲ್ಲದೆ ವ್ಯಾಪಾರ ಒಪ್ಪಂದದ ಮುಂದಿನ ಮಾತುಕತೆಗಳಿಗೆ ಯಾವುದೇ ಅಡೆತಡೆ ಉಂಟಾಗುವುದಿಲ್ಲ.

ವ್ಯಾಪಾರ ಒಪ್ಪಂದದ ಯಾವ ಅಂಶಗಳಿಗೆ ಈಗಾಗಲೇ ಸಮ್ಮತಿ ದೊರೆತಿದೆ ಮತ್ತು ಪರಿಹಾರ ಕಾಣದ ಭಿನ್ನಾಭಿಪ್ರಾಯಗಳು ಯಾವುವು ಎಂಬುದನ್ನು ಮೋದಿ ಸರ್ಕಾರವು ಸಾರ್ವಜನಿಕವಾಗಿ ಬಹಿರಂಗಪಡಿಸಬಹುದು. ಈ ಮೂಲಕ, ಒಪ್ಪಂದವು ಅಂತಿಮಗೊಂಡಿತ್ತು ಎಂಬ ಲುಟ್ನಿಕ್ ಅವರ ಹೇಳಿಕೆಗೆ ಹೆಚ್ಚು ಪರಿಣಾಮಕಾರಿಯಾದ ಪ್ರತಿಕ್ರಿಯೆ ನೀಡಲು ಸಾಧ್ಯವಾಗುತ್ತದೆ. ಭಾರತವು ತನ್ನ ರೈತರ ಹಿತಾಸಕ್ತಿಯ ದೃಷ್ಟಿಯಿಂದ ಕೃಷಿಗೆ ಸಂಬಂಧಿಸಿದ ಕೆಲವು ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗೆಯೇ, ಸಾಂಸ್ಕೃತಿಕ ಅಥವಾ ಧಾರ್ಮಿಕ ಸೂಕ್ಷ್ಮತೆಯ ವಿಷಯಗಳಲ್ಲೂ ಅದು ರಾಜಿ ಮಾಡಿಕೊಳ್ಳಲಾಗದು.

ಸರ್ಕಾರದ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸುವುದರಿಂದ ಈ ಎರಡು ಕ್ಷೇತ್ರಗಳಲ್ಲಿ ಭಾರತದ ಸಾರ್ವಜನಿಕ ಅಭಿಪ್ರಾಯದಲ್ಲಿ ಉಂಟಾಗಬಹುದಾದ ಯಾವುದೇ ತಪ್ಪು ತಿಳುವಳಿಕೆಯನ್ನು ದೂರ ಮಾಡುತ್ತದೆ.

ಪರಿಶೀಲನೆಯಲ್ಲಿರುವ ಶಾಂತಿಯ ಹಕ್ಕುಗಳು

ಟ್ರಂಪ್ ಅವರಿಗೆ ಈಗ ಒಂದು ವಿಷಯವು ಗೀಳಾಗಿ ಪರಿಣಮಿಸಿದೆ; ಅದು ಕಳೆದ ವರ್ಷದ ಮೇ ತಿಂಗಳಲ್ಲಿ ಪಾಕಿಸ್ತಾನದ ಜೊತೆಗಿನ ಸಂಘರ್ಷವನ್ನು ನಿಲ್ಲಿಸಿರುವುದು ದ್ವಿಪಕ್ಷೀಯವಾಗಿ (ಎರಡೂ ದೇಶಗಳ ನಡುವೆ ಮಾತ್ರ) ಸಾಧಿಸಲ್ಪಟ್ಟಿದೆ ಎಂಬ ಭಾರತದ ನಿಲುವಿಗೆ ಸಂಬಂಧಿಸಿದ್ದಾಗಿದೆ. ಭಾರತ-ಪಾಕಿಸ್ತಾನದ ಸಂಬಂಧಗಳು ದ್ವಿಪಕ್ಷೀಯ ಮಟ್ಟದ್ದು ಮತ್ತು ಅದರಲ್ಲಿ ಯಾವುದೇ ಮೂರನೇ ವ್ಯಕ್ತಿಯ ಪಾತ್ರವಿಲ್ಲ ಎಂಬ ಭಾರತದ ಸಾಂಪ್ರದಾಯಿಕ ನಿಲುವಿಗೆ ಇದು ಅನುಗುಣವಾಗಿದೆ. ಸಹಜವಾಗಿಯೇ, ಭಾರತವು ಪ್ರಮುಖ ರಾಷ್ಟ್ರಗಳೊಂದಿಗೆ ಭಾರತ-ಪಾಕಿಸ್ತಾನದ ವಿಷಯಗಳ ಬಗ್ಗೆ, ವಿಶೇಷವಾಗಿ ಯುದ್ಧ ಮತ್ತು ಶಾಂತಿಗೆ ಸಂಬಂಧಿಸಿದಂತೆ ಚರ್ಚಿಸುವುದಿಲ್ಲ ಎಂದು ಇದರ ಅರ್ಥವಲ್ಲ. ಆದರೆ ಪಾಕಿಸ್ತಾನದೊಂದಿಗಿನ ಸಂಬಂಧದಲ್ಲಿ ಭಾರತವು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆಯೇ ಹೊರತು, ಯಾವುದೇ ದೇಶದ ಆದೇಶದ ಮೇರೆಗೆ ಅಥವಾ ಪ್ರಭಾವದ ಅಡಿಯಲ್ಲಿ ಅಲ್ಲ ಎಂಬುದು ಇದರ ನಿಜವಾದ ಅರ್ಥವಾಗಿದೆ ಎಂಬುದನ್ನು ಗಮನಿಸಬೇಕು.

ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವು ತಮ್ಮ ಮಧ್ಯಸ್ಥಿಕೆಯಿಂದಲೇ ಕೊನೆಗೊಂಡಿದ್ದು ಎಂದು ಟ್ರಂಪ್ ದೃಢವಾಗಿ ನಂಬಿದ್ದಾರೆ. ಒಂದು ವೇಳೆ ತಾವು ಹಾಗೆ ಮಾಡದೇ ಇರುತ್ತಿದ್ದರೆ ಅದು ಪರಮಾಣು ಯುದ್ಧಕ್ಕೆ ದಾರಿಮಾಡಿಕೊಡುತ್ತಿತ್ತು ಎಂದು ಅವರು ಭಾವಿಸಿಕೊಂಡಿದ್ದಾರೆ. ಹೀಗಾಗಿ ತಮ್ಮಿಂದಾಗಿ ಲಕ್ಷಾಂತರ ಜನರ ಜೀವ ಉಳಿದಿದೆ ಎಂಬುದು ಟ್ರಂಪ್ ಪ್ರತಿಪಾದನೆ. ಇದೂ ಸೇರಿದಂತೆ ಎಂದು ಯುದ್ಧಗಳನ್ನು ಕೊನೆಗಾಣಿಸಿದ ಹೆಗ್ಗಳಿಕೆ ತಮ್ಮದಾದ್ದರಿಂದ ನೋಬೆಲ್ ಶಾಂತಿ ಪ್ರಶಸ್ತಿಗೆ ತಾವೇ ಅರ್ಹ ಅವರ ನಂಬಿಕೆ. ಹಾಗೆ ಶಾಂತಿ ಪುರಸ್ಕಾರ ಸಿಗದೇ ಹೋದುದಕ್ಕೆ ಅವರು ಅಸಮಾಧಾನ ವ್ಯಕ್ತಪಡಿಸುತ್ತಲೇ ಇದ್ದಾರೆ. ವಾರಕ್ಕೊಮ್ಮೆಯಾದರೂ ಅವರು ಅಂತಹ ಹೇಳಿಕೆ ನೀಡದೇ ಇರುವುದಿಲ್ಲ.

ಜನವರಿ ಮೊದಲ ವಾರದಲ್ಲಿ ಅಮೆರಿಕದ ತೈಲ ಮತ್ತು ಅನಿಲ ಉದ್ಯಮದ ಮುಖಂಡರೊಂದಿಗೆ ನಡೆಸಿದ ಸಭೆಯ ವೇಳೆ ಟ್ರಂಪ್ ಮತ್ತೆ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ವೆನೆಜುವೆಲಾದ ಪೆಟ್ರೋಲಿಯಂ ಉದ್ಯಮದಲ್ಲಿ ತೊಡಗಿಸಿಕೊಳ್ಳುವ ವಿಚಾರ ಬಂದಾಗ ಈ ಮಾತು ಹೇಳಿದ್ದರು. ಟ್ರಂಪ್ ಸಕಾಲದಲ್ಲಿ ಮಧ್ಯ ಪ್ರವೇಶ ಮಾಡಿದ್ದರಿಂದ ಕನಿಷ್ಠ ಒಂದು ಕೋಟಿ ಜನರ ಪ್ರಾಣ ಉಳಿಯಿತು ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದನ್ನೂ ನೆನಪಿಸಿದರು.

ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ಧರ್ ನೊಬೆಲ್ ಶಾಂತಿ ಬಹುಮಾನ ಸಮಿತಿಗೇ ಪತ್ರ ಬರೆದು, ಸಂಘರ್ಷ ತಪ್ಪಿಸಿ ಯಶಸ್ವಿಯಾಗಿ ಶಾಂತಿ ಸ್ಥಾಪಿಸುವಂತೆ ಮಾಡಿದ ಟ್ರಂಪ್ ಅವರಿಗೆ ಶಾಂತಿ ಪುರಸ್ಕಾರ ನೀಡಬೇಕು ಎಂದು ಮನವಿ ಮಾಡಿದ್ದರು.

ಆದರೆ ಉಭಯ ದೇಶಗಳ ನಡುವಿನ ಕದನ ಅಂತ್ಯ ಕಂಡಿದ್ದು ದ್ವಿಪಕ್ಷೀಯ ಮಾತುಕತೆಯಿಂದಲೇ ಹೊರತು ಮೂರನೆಯವರ ಮಧ್ಯಪ್ರವೇಶದಿಂದ ಅಲ್ಲ ಎಂಬ ಭಾರತದ ನಿಲುವು ಟ್ರಂಪ್ ಅವರನ್ನು ಸಹಜವಾಗಿ ಕೆರಳಿಸಿದೆ. ಹಾಗಾಗಿಯೇ ಅಮೆರಿಕ ಅಧ್ಯಕ್ಷರು ಮೋದಿ ಅವರ ಮೇಲೆ ಹಗೆತನ ಸಾಧಿಸುತ್ತಿದ್ದಾರೆ. ಭಾರತ-ಪಾಕಿಸ್ತಾನ ಸಂಘರ್ಷ ನಿಲ್ಲಲು ತಮ್ಮ ಪಾತ್ರ ಕಾರಣ ಎಂದು ಭಾರತ ಒಪ್ಪಿಕೊಳ್ದದ ಕಾರಣ ತಮಗೆ ನೊಬೆಲ್ ಪ್ರಶಸ್ತಿ ಸಿಗಲು ಭಾರತ ಸಹಾಯ ಮಾಡುತ್ತಿಲ್ಲ ಎಂಬುದು ಟ್ರಂಪ್ ಅಸಮಾಧಾನಕ್ಕೆ ಕಾರಣವಾಗಿದೆ.

ಭಾರತದ ಮೇಲೆ ಭಾರೀ ಪ್ರಮಾಣದ ವ್ಯಾಪಾರ ಸುಂಕವನ್ನು ಹೇರಲು ಇದೇ ಬಹುಮುಖ್ಯ ಕಾರಣ. ಜೊತೆಗೆ ಭಾರತವು ರಷ್ಯಾದಿಂದ ತೈಲವನ್ನು ಖರೀದಿಸಿದ್ದೂ ಅವರಿಗೆ ಕಿರಿಕಿರಿಯಾಗಿದೆ. ಹಾಗಾಗಿ ಶೇ.೨೫ರಷ್ಟು ಹೆಚ್ಚುವರಿ ಸುಂಕವನ್ನು ಕೂಡ ಅವರು ವಿಧಿಸಿದರು. ಭಾರತವು ರಷ್ಯಾದಿಂದ ತೈಲ ಆಮದನ್ನು ಗಣೀಯವಾಗಿ ಕಡಿಮೆಮಾಡಿದ್ದರೂ ಸುಂಕವಿನ್ನೂ ಜಾರಿಯಲ್ಲಿಯೇ ಇದೆ ಎಂಬುದನ್ನು ಗಮನಿಸಬೇಕು. ಇದು ಕೇವಲ ರಷ್ಯಾಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಲು ಮಾತ್ರವಲ್ಲದೆ ವೈಯಕ್ತಿಕ ದ್ವೇಷದ ಕಾರಣವೂ ಅದರ ಹಿಂದೆ ಎಂಬುದು ನಿಚ್ಚಳವಾಗಿ ಕಾಣುತ್ತಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಭಾರತ ಮತ್ತು ಅಮೆರಿಕ ಸಂಬಂಧಗಳಲ್ಲಿ ಸದ್ಯೋಭವಿಷ್ಯದಲ್ಲಿ ಸ್ಥಿರತೆ ಕಾಣಲಿದೆ ಎಂಬ ನಿರೀಕ್ಷೆಯಂತೂ ಇಲ್ಲ.


Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ʼನ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Read More
Next Story