KS Dakshina Murthy

ಎಲ್ಲರ ಸೊಲ್ಲಡಗಿಸಲು ಹೊರಟ ಟ್ರಂಪ್‌ಗೆ ತಿಳಿದಿರಲಿ: ಇರಾನ್‌, ವೆನೆಜುವೆಲಾ ಅಲ್ಲ


ಎಲ್ಲರ ಸೊಲ್ಲಡಗಿಸಲು ಹೊರಟ ಟ್ರಂಪ್‌ಗೆ ತಿಳಿದಿರಲಿ: ಇರಾನ್‌, ವೆನೆಜುವೆಲಾ ಅಲ್ಲ
x
ಇರಾನ್‌ ರಾಜಧಾನಿ ಟೆಹರಾನಿನಲ್ಲಿ ದೇಶಪ್ರೇಮದ ಸಂಕೇತವಾಗಿ ರಾಷ್ಟ್ರದ ಧ್ವಜಗಳನ್ನು ಗಟ್ಟಿಯಾಗಿ ಹಿಡಿದಿರುವ ಕೈಗಳನ್ನು ಪ್ರದರ್ಶಿಸುತ್ತಿರುವ ಬೃಹತ್‌ ಬ್ಯಾನರ್‌ ಅಡಿಯಲ್ಲಿ ರಸ್ತೆಯನ್ನು ದಾಟುತ್ತಿರುವ ಮಹಿಳೆಯರು. ಅವರಲ್ಲಿ ಒಬ್ಬಾಕೆ ವಿಜಯದ ಸಂಕೇತವನ್ನು ಪ್ರದರ್ಶಿಸುತ್ತಿದ್ದಾರೆ.

ಅಮೆರಿಕದ ಗುರಿ ತಪ್ಪದೇ ಇರುವ ದಾಳಿಯು ಇರಾನಿನ ಒಂದು ಕಟ್ಟಡವನ್ನು ದ್ವಂಸಗೊಳಿಸಿ ಮೂಲಸೌಕರ್ಯಗಳಿಗೆ ಹಾನಿ ಮಾಡಿ ಕೆಲವು ಉನ್ನತ ನಾಯಕರನ್ನೂ ಮುಗಿಸಬಹುದು. ಆದರೆ ಇರಾನಿನ ಸೈನಿಕರ ತಾಕತ್ತೇ ಬೇರೆ!

ಇರಾನ್-ನಲ್ಲಿ ಈಗ ಭುಗಿಲೆದ್ದಿರುವ ಅರಾಜಕತೆ, ದಂಗೆಯಲ್ಲಿ ಮಧ್ಯಪ್ರವೇಶ ಮಾಡುತ್ತೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ. ಇಂತಹ ಬೆದರಿಕೆ ಅತ್ಯಂತ ಆಘಾತಕಾರಿಯೂ ಹೌದು, ನಿರ್ಲಜ್ಜತನದ ಪರಮಾವಧಿಯೂ ಹೌದು. ಅದಕ್ಕಿಂತೂ ಕೆಟ್ಟ ವಿಷಯವೆಂದರೆ ಉಳಿದ ಜಗತ್ತು ಅದಕ್ಕೆ ತಲೆಯಾಡಿಸುತ್ತಿರುವುದು. ಟ್ರಂಪ್‌ ಏನೇ ಮಾಡಿದರೂ ಮತ್ತು ಅದು ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಎಷ್ಟೇ ಅಕ್ರಮವಾಗಿದ್ದರೂ ಅದು ಈಗ ʼಸರ್ವೇ ಸಾಮಾನ್ಯʼ ಎಂಬಂತೆ ರೂಢಿಗೆ ಬಂದುಬಿಟ್ಟಿದೆ.

ಇರಾನ್‌ ದೇಶದ ಆಂತರಿಕ ವ್ಯವಹಾರದಲ್ಲಿ ತಾನು ಹಸ್ತಕ್ಷೇಪ ಮಾಡುತ್ತೇನೆ ಎಂದು ಟ್ರಂಪ್‌ ಹೇಳುತ್ತಿರುವುದು ಅಲ್ಲಿ ಉಂಟಾಗುತ್ತಿರುವ ಪ್ರತಿಭಟನಾಕಾರರ ಸಾವಿನ ಬಗ್ಗೆ. ಅದನ್ನು ತಪ್ಪಿಸಬೇಕು ಎಂಬ ಅವರು ಮುಂದಿಟ್ಟಿರುವ ಉದ್ದೇಶವು ಇತ್ತೀಚೆಗೆ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್‌ ಮಡುರೊ ಅವರ ಅಪಹರಣಕ್ಕೆ ನೀಡಿದ ಕಾರಣಕ್ಕಿಂತಲೂ ದುರ್ಬಲವಾಗಿದೆ. ಮಡುರೊ ಅಪಹರಣಕ್ಕೆ ಅವರನ್ನು ಮಾದಕವಸ್ತು ಜಾಲದ ಸೂತ್ರಧಾರ ಎಂಬಂತೆ ಬಿಂಬಿಸಲಾಗಿತ್ತು. ಆದರೆ ಅವರ ಅಪಹರಣದ ನಾಟಕ ಮುಗಿದ ಬಳಿಕ ಮಾದಕವಸ್ತು ಆರೋಪದ ಬಗ್ಗೆ ಯಾರೊಬ್ಬರೂ ಸೊಲ್ಲೆತ್ತುತ್ತಿಲ್ಲ.

ಸಾರ್ವಭೌಮತ್ವಕ್ಕಿಲ್ಲ ಚಿಕ್ಕಾಸಿನ ಬೆಲೆ

ಮಡುರೊ ಅಪಹರಣದ ವೃತ್ತಾಂತವು ಮುಗಿದ ಬಳಿಕ ಟ್ರಂಪ್‌ ತಮ್ಮ ಪಥವನ್ನು ಬದಲಿಸಿದರು. ಅವರ ನೆಟ್ಟ ನೋಟ ವೆನೆಜುವೆಲಾದ ತೈಲ ಕೋಠಿಯ ಮೇಲೆ ಬಿತ್ತು. ಅದರ ಉತ್ಪಾದನೆ, ವ್ಯಾಪಾರವನ್ನೆಲ್ಲ ನಾನೇ ನಿಯಂತ್ರಿಸುತ್ತೇನೆ ಎಂದು ಹೇಳಿದರು. ಹಾಗೆ ಮಾಡುವ ಮೂಲಕ ಒಂದು ರಾಷ್ಟ್ರದ ಸಾರ್ವಭೌಮತ್ವದ ಪರಿಕಲ್ಪನೆಗೆ ತಮಗೆ ಕಿಂಚಿತ್ತೂ ಗೌರವವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಇನ್ನು ಇರಾನ್‌ ನಲ್ಲಿ ಕಳೆದ ಕೆಲವು ದಿನಗಳಲ್ಲಿ ಪೊಲೀಸ್‌ ಕಾರ್ಯಾಚರಣೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಜೀವ ಚೆಲ್ಲಿದ್ದಾರೆ ಮತ್ತು ನೂರಾರು ಜನರನ್ನು ಬಂಧಿಸಲಾಗಿದೆ ಎಂಬ ವರದಿಗಳು ಬರುತ್ತಿವೆ. ಒಂದು ವೇಳೆ ಜನರ ಸಾವುಗಳ ಬಗ್ಗೆ ಟ್ರಂಪ್‌ ಅವರಿಗೆ ನಿಜಕ್ಕೂ ಕಾಳಜಿ ಇರುವುದೇ ಹೌದಾದರೆ ಮ್ಯಾನ್ಮಾರ್‌, ಸುಡಾನ್‌ ಮತ್ತು ಯೆಮನ್‌ ದೇಶಗಳತ್ತ ತಮ್ಮ ಕಾಳಜಿಯನ್ನು ತೋರಿಸಬಹುದಿತ್ತು. ಆ ದೇಶಗಳ ಆಂತರಿಕ ಕಲಹಗಳಲ್ಲಿ ಸಾವಿರಾರು ಜನ ಸಾವನ್ನಪ್ಪಿದ್ದಾರೆ ಮತ್ತು ಇಂದಿಗೂ ಸಾಯುತ್ತಲೇ ಇದ್ದಾರೆ.

ಟ್ರಂಪ್‌ ಅವರಿಗೆ ನೆನಪಿರಬಹುದು; ೨೦೨೩ರ ಅಕ್ಟೋಬರ್‌ ಏಳರಂದು ಹಮಾಸ್‌ ದಾಳಿ ನಡೆಸಿದ ಬಳಿಕ ಗಾಜಾದ ಮೇಲೆ ಇಸ್ರೇಲ್‌ ನಿರಂತರ ಜನಾಂಗೀಯ ಹತ್ಯಾಕಾಂಡದ ದಾಳಿಗಳನ್ನು ನಡೆಸಿತು. ೨೦೨೪ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಫಿನಿಶ್‌ ದ ಜಾಬ್‌ (ಕೆಲಸ ಬೇಗ ಮುಗಿಸಿ) ಎಂದು ಬೆಂಜಮಿನ್‌ ನೆತನ್ಯಾಹು ಸರ್ಕಾರಕ್ಕೆ ಸಲಹೆ ಮಾಡುವ ಮೂಲಕ ಟ್ರಂಪ್‌ ಸುದ್ದಿಯಾಗಿದ್ದರು. ಮನುಷ್ಯ ಜೀವಿಗಳ ಬಗ್ಗೆ ಅವರಿಗಿರುವ ಕಾಳಜಿಯಾದರೂ ಅಷ್ಟೇ!

ಅಮೆರಿಕ ಅಧ್ಯಕ್ಷರಾದ ಬಳಿಕ ಅವರು ಇಸ್ರೇಲ್-ಪ್ಯಾಲೆಸ್ತೀನ್‌ ಕದನವನ್ನು ಕೊನೆಗೊಳಿಸಲು ಒಪ್ಪಂದವೇನೋ ಮಾಡಿಕೊಂಡರು ನಿಜ, ಆದರೆ ಅಷ್ಟು ಹೊತ್ತಿಗಾಗಲೇ ಸತ್ತ ಪ್ಯಾಲೆಸ್ತೀನಿಯರ ಸಂಖ್ಯೆ ೭೦ ಸಾವಿರಕ್ಕೂ ಅಧಿಕ. ಈ ಹತ್ಯಾಕಾಂಡದೊಂದಿಗೆ ಮತ್ತು ಗಾಜಾ ಪಟ್ಟಿಯ ಸಂಪೂರ್ಣ ವಿನಾಶದೊಂದಿಗೆ ʼಕೆಲಸ ಮುಗಿದುಹೋಗಿತ್ತು!ʼ

ಟ್ರಂಪ್‌ ಅವರ ಮುಂದಿನ ಗುರಿ ಇರಾನ್‌ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಅಷ್ಟು ಮಾತ್ರವಲ್ಲದೆ ಅಮೆರಿಕ ಇಂತಹುದನ್ನು ಮಾಡುವುದು ಸಹಜ ಎಂಬಂತೆ ಬಿಂಬಿಸಲಾಗುತ್ತಿದೆ.

ಸದ್ದಾಂ ಸದ್ದಡಗಿಸಿದ ರೀತಿಯಲ್ಲಿ….

ಈಗ ಒಂದು ಹೋಲಿಕೆ ಮಾಡಿ ನೋಡೋಣ: ೨೦೦೩ರಲ್ಲಿ ಇರಾಕ್‌ ಮೇಲಿನ ತನ್ನ ಆಕ್ರಮಣದ ಪೂರ್ವ ಸಿದ್ಧತೆಯ ಸಂದರ್ಭದಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ ಆಡಳಿತವು ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳಲು ದೀರ್ಘಾವಧಿ ಸಿದ್ಧತೆಯನ್ನು ನಡೆಸಿತ್ತು. ಅಂದಿನ ಇರಾಕ್‌ ಅಧ್ಯಕ್ಷ ಸದ್ದಾಂ ಹುಸೇನ್‌ ಅವರ ಆಡಳಿತವು ʼವಿನಾಶಕಾರಿ ಶಸ್ತ್ರಾಸ್ತ್ರಗಳ ಬೃಹತ್‌ ಸಂಗ್ರಹʼ ಅಂದರೆ ನಿಷೇಧಿತ ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳ ಸಂಗ್ರಹದ ಬಳಕೆಗೆ ಸಿದ್ಧವಾಗಿದೆ ಎಂದು ಬುಷ್‌ ಹೇಳಿದ್ದರು.

ದಾಳಿಗೆ ಪೂರಕವಾದ ವೇದಿಕೆಯನ್ನು ಸಿದ್ಧಪಡಿಸಲು ಮತ್ತು ಅದನ್ನು ಜಗತ್ತು ಒಪ್ಪಿಕೊಳ್ಳುವಂತೆ ಮಾಡಲು ಸದ್ದಾಂ ಹುಸೇನ್‌ ನನ್ನು ಅಲ್-ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್—ಗೆ ಹೋಲಿಸಿತು 9/11ರಂದು ಅಮೆರಿಕದ ಮೇಲೆ ನಡೆದ ದಾಳಿಯ ಜೊತೆಗೂ ನಂಟು ಕಲ್ಪಿಸಿತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅನುಮತಿ ಪಡೆಯಲೂ ಬುಷ್‌ ಪ್ರಯತ್ನ ನಡೆಸಿದರು. ಆದರೆ ರಷ್ಯಾ ಮತ್ತು ಫ್ರಾನ್ಸ್‌ ಈ ಆಕ್ರಮಣವನ್ನು ವಿರೋಧಿಸಿದವು. ಪ್ರಸ್ತಾವನೆಯನ್ನು ಔಪಚಾರಿಕವಾಗಿ ಮತಕ್ಕೆ ಕೈಗೆತ್ತಿಕೊಳ್ಳುವ ಮೊದಲೇ ಅಮೆರಿಕವು ಮುನ್ನುಗ್ಗಿ ಇರಾಕ್‌ ಮೇಲೆ ಮುಗಿಬಿದ್ದಿತು.

ಇಲ್ಲಿ ಗಮನ ನೀಡಬೇಕಾದ ಅಂಶವೇನೆಂದರೆ ಅಮೆರಿಕವು ತನ್ನ ವಾದಗಳು ಎಷ್ಟೇ ದುರ್ಬಲವಾಗಿದ್ದರೂ ತನ್ನ ಕ್ರಮಕ್ಕೆ ಸಾರ್ವಜನಿಕ ಅಂಗೀಕಾರವನ್ನು ಪಡೆಯಲು ಪ್ರಯತ್ನ ನಡೆಸಿತ್ತು. ಆದರೆ ನಂತರ ತಿಳಿದುಬಂದ ಅಂಶವೆಂದರೆ ಅಮೆರಿಕಕ್ಕೆ ಕೇವಲ ಇರಾಕ್‌-ನಲ್ಲಿ ಆಡಳಿತ ಬದಲಾವಣೆ ಮಾತ್ರ ಬೇಕಾಗಿತ್ತು.

ಆದರೆ ಈಗ ಇರಾನ್‌ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವ ತಮ್ಮ ಉದ್ದೇಶವನ್ನು ಟ್ರಂಪ್‌ ಬಹಿರಂಗವಾಗಿ ಘೋಷಿಸಿದ್ದಾರೆ. ಇದು ಅಯತೊಲ್ಲಾ ಖೊಮೇನಿ ಆಡಳಿತದ ಮೂಲಸೌಕರ್ಯಗಳ ಮೇಲೆ ನಡೆಸುವ ಉದ್ದೇಶಿತ ದಾಳಿಯಾಗುವ ನಿರೀಕ್ಷೆಯಿದೆ. ಅಲ್ಲಿನ ಕ್ರಾಂತಿಕಾರಿ ಸುರಕ್ಷತಾ ನೆಲೆಗಳು ಮತ್ತು ಆಡಳಿತಕ್ಕೆ ಆಧಾರವಾಗಿರುವ ಇತರ ಪ್ರಮುಖ ಕೇಂದ್ರಗಳು ದಾಳಿಯ ಗುರಿಯಾಗುವ ಆತಂಕ ವ್ಯಕ್ತವಾಗಿದೆ. ಈ ದಾಳಿಯು ೨೦೨೫ರ ಜೂನ್‌ ತಿಂಗಳಿನಲ್ಲಿ ಪೋರ್ಡೊದಲ್ಲಿರುವ ಇರಾನ್‌ ಪರಮಾಣು ರಿಯಾಕ್ಟರ್‌ ಮೇಲೆ ನಡೆದ ದಾಳಿಯಂತೆಯೇ ಇರಲಿದೆ. ಅದು ಈಗಾಗಲೇ ಆ ದೇಶದ ಪರಮಾಣು ಯೋಜನೆಯನ್ನು ಕುಂಠಿತಗೊಳಿಸಿದೆ.

ಟ್ರಂಪ್ ಅವರು ತಮ್ಮ ಅಧಿಕಾರಶಾಹಿ ಒರಟು ಧೋರಣೆಯೊಂದಿಗೆ ಜಗತ್ತನ್ನೇ ಆಳುತ್ತಿರುವಂತೆ ಕಾಣುತ್ತಿದ್ದಾರೆ. ಇತ್ತ ಅವರ ಮಿತ್ರ ನೆತನ್ಯಾಹು ಅವರು ಇರಾನ್-ಹಿಜ್ಬುಲ್ಲ-ಹಮಾಸ್-ಸಿರಿಯಾ ಮೈತ್ರಿಯನ್ನು ಮುರಿಯುವಲ್ಲಿ ಮತ್ತು ಇರಾನ್-ನ್ನು ಅಸಹಾಯಕರನ್ನಾಗಿ ಮಾಡುವ ಕಾರ್ಯತಂತ್ರದಲ್ಲಿ ಬಹಳ ದೊಡ್ಡ ಯಶಸ್ಸನ್ನು ಸಾಧಿಸಿದ್ದಾರೆ. ಈಗ ಅಮೆರಿಕ ಮಾಡಬೇಕಾಗಿರುವುದು ತನ್ನ ದಾಳಿಗೆ ಸರಿಯಾದ ಸಮಯವನ್ನು ನಿಗದಿಪಡಿಸುವುದು ಮಾತ್ರ. ಯಾವಾಗಲೂ ಗುಪ್ತವಾಗಿ ಕಾರ್ಯನಿರ್ವಹಿಸುವ ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್, ತಾನು ಇರಾನ್ನ ಪ್ರತಿಭಟನಾಕಾರ ಜೊತೆ ಹೆಜ್ಜೆ ಹಾಕುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದೆ. ಬಹುಶಃ ಇಂತಹ ಕಾರ್ಯಾಚರಣೆಗಳ ಇತಿಹಾಸದಲ್ಲೇ ಇದು ಮೊದಲೆನಿಸುತ್ತದೆ.

ರಣರಂಗದಲ್ಲಿ ನಾವಿದ್ದೇವೆ ನಿಮ್ಮ ಜೊತೆ!

ಇಸ್ರೇಲಿ ಮಾಧ್ಯಮಗಳು ವರದಿ ಮಾಡಿರುವಂತೆ, ʼಎಕ್ಸ್ʼ (ಟ್ವಿಟರ್) ಪೋಸ್ಟ್‌ನಲ್ಲಿ ಮೊಸಾದ್ ಇರಾನ್ ಪ್ರತಿಭಟನಾಕಾರರಿಗೆ ನೀಡಿರುವ ಸಂದೇಶ ಹೀಗಿದೆ: "ಬೀದಿಗಿಳಿದು ಹೋರಾಡಿ. ಸಮಯ ಬಂದಿದೆ. ನಾವು ನಿಮ್ಮೊಂದಿಗಿದ್ದೇವೆ. ಕೇವಲ ದೂರದಿಂದ ಅಥವಾ ಮಾತಿನ ಮೂಲಕ ಮಾತ್ರವಲ್ಲ, ನಾವು ನಿಮ್ಮೊಂದಿಗೆ ರಣರಂಗದಲ್ಲೂ ಇದ್ದೇವೆ."

ಕಳೆದ ಎರಡು ತಿಂಗಳುಗಳಲ್ಲಿ, ಮೊಸಾದ್ ಏಜೆಂಟ್‌ಗಳೆಂದು ಶಂಕಿಸಲಾದ ಸುಮಾರು 10 ಮಂದಿ ಇರಾನಿಯನ್ನರನ್ನು ಗಲ್ಲಿಗೇರಿಸಲಾಗಿದೆ.

ಇರಾನ್ ಮೇಲಿನ 12 ದಿನಗಳ ಯುದ್ಧ ಮತ್ತು ಅಮೆರಿಕದ ಕ್ಷಿಪಣಿ ದಾಳಿಯ ಕುರಿತು ಉಲ್ಲೇಖಿಸಿರುವ ಮೊಸಾದ್ ಅಧಿಕಾರಿಯೊಬ್ಬರು, ಕನಿಷ್ಠ 100 ಏಜೆಂಟ್‌ಗಳು ತಳಮಟ್ಟದಲ್ಲಿ ಪೂರ್ವಸಿದ್ಧತಾ ಕೆಲಸಗಳನ್ನು ಮಾಡಿದ್ದರು ಎಂದು ತಿಳಿಸಿದ್ದಾರೆ. ಇರಾನ್ನ ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ಕ್ಷಿಪಣಿ ಲಾಂಚರ್ಗಳನ್ನು ನಾಶಪಡಿಸುವ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿತ್ತು; ಇಸ್ರೇಲ್ ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ದಾಳಿ ಆರಂಭಿಸುವ ಮೊದಲೇ ಅವರು ಈ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದ್ದರು.

ಇರಾನ್ ನಲ್ಲಿ ಮೊಸಾದ್ ಯಾವತ್ತೂ ಸಕ್ರಿಯವಾಗಿದೆ ಎಂಬುದು ಹೊಸದೇನೂ ಅಲ್ಲ. ಆದರೂ ʼಎಕ್ಸ್ʼನಲ್ಲಿ ಅದು ಹಾಕಿರುವ ಪೋಸ್ಟ್ ಈ ಕುರಿತಾದ ಎಲ್ಲ ಅನುಮಾನಗಳನ್ನು ನಿವಾರಿಸಿದೆ. ಇದು ಇರಾನ್ ವಿರುದ್ಧ ಟ್ರಂಪ್ ಅವರ ಕಠಿಣ ಬೆದರಿಕೆಗಳು ಮತ್ತು ಇರಾನ್ ಜೊತೆ ವ್ಯಾಪಾರ ಮಾಡುವ ರಾಷ್ಟ್ರಗಳ ಮೇಲೆ ಶೇ.೨೫ರಷ್ಟು ದಂಡದಿಂದ ಕೂಡಿದ ಸುಂಕವನ್ನು ಹೇರುವ ಅವರ ನಿರ್ಧಾರಕ್ಕೆ ಪೂರಕವಾಗಿಯೇ ಇದೆ.

ಐರೋಪ್ಯ ರಾಷ್ಟ್ರಗಳೆಲ್ಲ ಮೌನ

ಅಮೆರಿಕದ ಬಗಲಲ್ಲಿರುವ ಮಿತ್ರ ರಾಷ್ಟ್ರಗಳಾದ ಐರೋಪ್ಯ ರಾಷ್ಟ್ರಗಳು ಟ್ರಂಪ್ ಅವರನ್ನು ವಿರೋಧಿಸುವ ಸ್ಥಿತಿಯಲ್ಲೇನೂ ಇಲ್ಲ. 2016ರಲ್ಲಿ ಟ್ರಂಪ್ ಇರಾನ್ ಜೊತೆಗೆ ಪರಮಾಣು ಒಪ್ಪಂದವನ್ನು ರದ್ದುಮಾಡಿದಾಗಲೂ ಈ ರಾಷ್ಟ್ರಗಳು ಮೌನಕ್ಕೆ ಶರಣಾಗಿದ್ದವು. ಈಗ ಅಮೆರಿಕ ಹೇರುವ ನಿರ್ಬಂಧಗಳಿಗೆ ತಾನೂ ಸಾಥ್ ನೀಡುವುದಾಗಿ ಯೂರೋಪಿಯನ್ ಕಮಿಷನ್ ಹೇಳಿದೆ. ಇದಕ್ಕಿಂತ ಶರಣಾಗತಿ ಇನ್ನೇನು ಬೇಕು? ಇನ್ನು ರಷ್ಯಾ ಉಕ್ರೇನ್ ಯುದ್ಧದಲ್ಲಿ ಸಂಪೂರ್ಣವಾಗಿ ವ್ಯಸ್ತವಾಗಿದೆ. ಟ್ರಂಪ್ ಅವರ ಜೊತೆ ತನ್ನದೇ ಆದ ವ್ಯವಹಾರಗಳನ್ನು ಹೊಂದಿರುವ ಚೀನಾ ಅಮೆರಿಕದ ವಿರುದ್ಧಒಂದೆರಡು ಹೇಳಿಕೆಗಳನ್ನು ನೀಡುವುದನ್ನು ಬಿಟ್ಟರೆ ಬೇರೇನೂ ಮಾಡುವ ಸ್ಥಿತಿಯಲ್ಲಂತೂ ಇಲ್ಲ.

ಈ ಎಲ್ಲ ಕಾರಣಗಳಿಂದ ಇರಾನ್ ಏಕಾಂಗಿಯಾಗಿದೆ.

ಹಿಂದೆಯೂ ಇರಾನ್ ಅನೇಕ ಬಾರಿ ಬಿಕ್ಕಟ್ಟುಗಳನ್ನು ಎದುರಿಸಿದೆ. ಅಲ್ಲಿನ ಸರ್ಕಾರಗಳನ್ನು ಮಣಿಸಬೇಕು ಎಂದು ಅಮೆರಿಕ ನೇತೃತ್ವದ ಮಿತ್ರ ರಾಷ್ಟ್ರಗಳು ಬಿಡದೇ ಪ್ರಯತ್ನ ನಡೆಸುತ್ತಲೇ ಬಂದಿವೆ. ಅದಕ್ಕಾಗಿ ಆ ರಾಷ್ಟ್ರದ ಒಳಗಿರುವ ಭಿನ್ನಮತೀಯರನ್ನು ಕೂಡ ಬಳಸಿಕೊಂಡ ಉದಾಹರಣೆಗಳಿವೆ. ಆದರೆ ಮೊದಲ ಬಾರಿಗೆ ನಡೆದಿದ್ದು ನೇರಾನೇರ ದಾಳಿ. 1950ರಲ್ಲಿ ಇಸ್ಲಾಮಿಕ್‌ ಕ್ರಾಂತಿಯ ಒಂದು ವರ್ಷದ ಬಳಿಕ ಅಮೆರಿಕದ ಕುಮ್ಮುಕ್ಕಿನ ಮೇರೆಗೆ ಸದ್ದಾಂ ಹುಸೇನ್‌ ನೇತೃತ್ವದ ಇರಾಕ್‌ ತನ್ನ ನೆರೆಯ ರಾಷ್ಟ್ರ ಇರಾನ್‌ ಮೇಲೆ ದಾಳಿ ನಡೆಸಿತು. ಆ ಕದನ ನಡೆದಿದ್ದು ಸುದೀರ್ಘ ಎಂಟು ವರ್ಷಗಳ ಕಾಲ.

ಇರಾಕಿನ ಆ ದಾಳಿಯನ್ನು ಯಶಸ್ವಿಯಾಗಿ ಎದುರಿಸಿದ ಇರಾನ್‌ ಕಲಿತದ್ದು ದೊಡ್ಡ ಪಾಠ. ಅದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಕಡೆಗೆ ಹೆಚ್ಚಿನ ಗಮನ ನೀಡಿತು. ಅದಕ್ಕಾಗಿ ಅದು ಇಸ್ಲಾಮಿಕ್‌ ಆಡಳಿತವನ್ನು ಮತ್ತಷ್ಟು ಬಲಪಡಿಸಿತು. ಇದನ್ನು ಹೊರತುಪಡಿಸಿ ಕಳೆದ ಹಲವಾರು ವರ್ಷಗಳ ಅವಧಿಯಲ್ಲಿ ಜಾತ್ಯತೀತ-ಉದಾರವಾದಿಗಳು, ಮಂದಗಾಮಿಗಳು ಮತ್ತು ಸುಧಾರಣಾವಾದಿ ಗುಂಪುಗಳಿಂದ ನಡೆದ ಪ್ರತಿಭಟನೆಗಳು ಒಂದೆರಡಲ್ಲ. ಆದರೆ ಅವ್ಯಾವೂ ಆಡಳಿತ ಬದಲಾವಣೆಯಲ್ಲಿ ಯಶಸ್ವಿಯಾಗಿಲ್ಲ.

ವಿಫಲವಾದ ಪ್ರತಿಭಟನೆಗಳ ಸರಣಿ

ಈ ಹಿಂದೆ ನಡೆದ ನಾನಾ ಚಳವಳಿಗಳ ಹಿಂದಿನ ಕಾರಣಗಳು ವಾಸ್ತವಕ್ಕೆ ಹತ್ತಿರವಾಗಿದ್ದವು ಮತ್ತು ಅವು ಜನರ ಪ್ರಜಾಸತ್ತಾತ್ಮಕ ಅಭಿವ್ಯಕ್ತಿಗಳಾಗಿದ್ದವು. ಉದಾಹರಣೆಗೆ ಹಿಜಾಬ್ ವಿವಾದ ಮತ್ತು ಬುರ್ಖಾವನ್ನು ಸರಿಯಾಗಿ ಧರಿಸಿಲ್ಲ ಎಂಬ ಕಾರಣಕ್ಕೆ ಬಂಧಿಸಲ್ಪಟ್ಟಿದ್ದ ಮಹಸಾ ಅಮಿನಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ನಂತರ ನಡೆದ ಮಹಿಳೆಯರ ಪ್ರತಿಭಟನೆಗಳು ಇದಕ್ಕೆ ಸಾಕ್ಷಿ.

ಆದರೆ, ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಈ ಪ್ರತಿಯೊಂದು ಅವಕಾಶವನ್ನೂ ಬಳಸಿಕೊಂಡು, ಈ ಪ್ರತಿಭಟನೆಗಳಲ್ಲಿಯೂ ಒಳನುಸುಳುವ ಮೂಲಕ ಆಡಳಿತವನ್ನು ಕೆಳಗಿಳಿಸಲು ಜನಸಮೂಹಕ್ಕೆ ಪ್ರಚೋದನೆ ನೀಡಲು ಪ್ರಯತ್ನ ನಡೆಸಿದವು. ಆದರೂ, ಇದುವರೆಗೆ ಅಂತಹ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ.

ಇರಾನ್ ಸರ್ಕಾರವು ಇಂತಹ ಪ್ರತಿಭಟನೆಗಳನ್ನು ಯಾವಾಗಲೂ "ವಿದೇಶಿ ಶಕ್ತಿಗಳ ಹಸ್ತಕ್ಷೇಪ" ಎಂದು ಕರೆಯುವ ಮೂಲಕ ಅವುಗಳ ಕಾನೂನುಬದ್ಧತೆಯನ್ನು ಪ್ರಶ್ನಿಸುತ್ತಲೇ ಬಂದಿದೆ.

ಈ ಪ್ರಕ್ರಿಯೆಯಲ್ಲಿ, ಅಮೆರಿಕ ಬೆಂಬಲಿತ ಆಡಳಿತ ಬದಲಾವಣೆಯ ಪ್ರಯತ್ನಗಳು ಇದುವರೆಗೆ ವ್ಯತಿರಿಕ್ತ ಪರಿಣಾಮವನ್ನೇ ಬೀರಿವೆ. ವಿಪರ್ಯಾಸವೆಂದರೆ, ಈ ಪ್ರಯತ್ನಗಳ ಫಲ ಏನೆಂದರೆ ಇರಾನ್ನಲ್ಲಿ ಇಸ್ಲಾಮಿಕ್ ಆಡಳಿತವು ಮತ್ತಷ್ಟು ಗಟ್ಟಿಯಾಗಿ ತಳವೂರಿದೆ.

ಆದರೆ ಈ ಬಾರಿ ಪರಿಸ್ಥಿತಿ ತೀರಾ ಭಿನ್ನವಾಗಿದೆ. ಇರಾನ್ ಬಸವಳಿದಂತೆ, ಅಸಹಾಯಕವಾದಂತೆ ಕಾಣುತ್ತಿದೆ. ಹಿಂದೆಲ್ಲ ಬಾಹ್ಯ ತಂತ್ರಗಳನ್ನು ಅದು ಯಶಸ್ವಿಯಾಗಿ ಎದುರಿಸಿತ್ತು ಎಂಬುದು

ಜರ್ಜರಿತವಾಗಿದೆ ಇರಾನ್

ನಿಜವಾದರೂ ಈಗಿರುವಷ್ಟು ದುರ್ಬಲ ಯಾವತ್ತೂ ಆಗಿರಲಿಲ್ಲ. ಕಳೆದ ಅನೇಕ ವರ್ಷಗಳಿಂದ ಹೇರಲಾದ ಆರ್ಥಿಕ ದಿಗ್ಬಂಧನಗಳು, ನಿರ್ಬಂಧಗಳು ದೇಶವನ್ನು ಜರ್ಝರಿತಗೊಳಿಸಿದೆ. ಇದರ ಜೊತೆಗೆ ಈ ವಲಯದ ಪ್ರಾದೇಶಿಕ ಮಿತ್ರ ರಾಷ್ಟ್ರಗಳಿಗೂ ಮಿಲಿಟರಿ ಹಿನ್ನಡೆ ಉಂಟಾಗಿದೆ. ಇದು ಇರಾನಿನ ಪ್ರಭಾವವನ್ನು ಕುಂಠಿತಗೊಳಿಸಿದೆ. ಆಂತರಿಕವಾಗಿ ಆಡಳಿತದ ಪರವಾಗಿರುವ ಅತಿದೊಡ್ಡ ಶಕ್ತಿ ಬಜಾರ್ ವರ್ಗವು ಅಥವಾ ಸಣ್ಣ ವ್ಯಾಪಾರಿಗಳ ಸಮೂಹವು ತೀವ್ರ ಆರ್ಥಿಕ ಸಂಕಷ್ಟದ ಕಾರಣದಿಂದ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದೆ.

ಇರಾನಿನಲ್ಲಿ ಆಡಳಿತ ಬದಲಾವಣೆಯನ್ನು ಜಾರಿಗೆ ತರಲು ಹೊರಟಿರುವ ಟ್ರಂಪ್ ಅವರ ಕಾರ್ಯತಂತ್ರವು ಮೇಲ್ನೋಟಕ್ಕೆ ಸರಳವಾಗಿ ಕಾಣಬಹುದು. ಆದರೆ ವಾಸ್ತವದಲ್ಲಿ ಅದು ಅಷ್ಟು ಸುಲಭವೇನೂ ಅಲ್ಲ. ವೆನೆಜುವೆಲಾ ಅಮೆರಿಕದ ಮಗ್ಗುಲಲ್ಲೇ ಇರುವುದರಿಂದ, ದೊಡ್ಡ ಮಟ್ಟದ ಆಕ್ರಮಣವಿಲ್ಲದೆಯೇ ಮಡುರೊ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಸಾಧ್ಯವಾಗಿತ್ತು. ಆದರೆ ಇರಾನ್ ಒಡ್ಡುತ್ತಿರುವ ಸವಾಲು ಬೇರೆಯದೇ ಆಗಿದೆ; ಅಮೆರಿಕದಿಂದ ಅದು ಇರುವ ಭಾರಿ ದೂರವೇ ಒಂದು ಪ್ರಮುಖ ಅಡಚಣೆ. 2003ರ ಆಕ್ರಮಣದ ನಂತರ ಇರಾಕ್ ಅನುಭವಿಸಿದ ಭೀಕರ ಅವಾಂತರಗಳು, ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದರೆ ಏನಾಗಬಹುದು ಎಂಬುದಕ್ಕೆ ಪಾಠವಾಗಿದೆ.

ಸುಮಾರು ಐದು ದಶಕಗಳ ಹಿಂದೆ ಒಂದು ಜನಪ್ರಿಯ ಕ್ರಾಂತಿಯ ಫಲವಾಗಿ ಇರಾನ್ ನಲ್ಲಿ ಇಸ್ಲಾಮಿಕ್ ಆಡಳಿತವು ಅಧಿಕಾರಕ್ಕೆ ಬಂದಿತು. ಅಯತೊಲ್ಲಾ ಖಮೇನಿ ಅವರು ಸಾಂಪ್ರದಾಯಿಕ ಮಾದರಿಯ ಸರ್ವಾಧಿಕಾರಿಯಲ್ಲ. ಅವರು ಮುಖ್ಯಸ್ಥರಾಗಿರುವ 'ಇಸ್ಲಾಮಿಕ್ ಕೌನ್ಸಿಲ್' ನೀತಿ ನಿರ್ಧಾರಗಳನ್ನು ಅನುಮೋದಿಸಬೇಕಾದರೂ, ಸರ್ಕಾರದ ದೈನಂದಿನ ಆಡಳಿತದಲ್ಲಿ ಅದರ ನೇರ ಪಾಲ್ಗೊಳ್ಳುವಿಕೆ ಇರುವುದಿಲ್ಲ. ಅಲ್ಲದೆ, ಅವರನ್ನು ವಿಶ್ವದ ಮುಸ್ಲಿಂ ಶಿಯಾ ಜನಸಂಖ್ಯೆಯ ಪ್ರಮುಖ ಆಧ್ಯಾತ್ಮಿಕ ಗುರುಗಳಲ್ಲಿ ಒಬ್ಬರೆಂದೂ ಗೌರವಿಸಲಾಗುತ್ತದೆ.

ಇಸ್ಲಾಮಿಕ್ ಸೈನಿಕರ ತಾಕತ್ತು

ಇರಾನಿನ ರಾಜಕೀಯ ಸಂರಚನೆಯು ಒಂದು ಬೃಹತ್ತಾದ ಸಂಘಟನೆ. ಅದು ಮೇಲ್ಮಟ್ಟದಿಂದ ತಳಮಟ್ಟದ ವರೆಗೂ ಪರಸ್ಪರ ಬೆಸೆದುಕೊಂಡಿದೆ. ಇದಕ್ಕೆ ʼಇಸ್ಲಾಮಿಕ್ ರೆವಲೂಷನರಿ ಗಾರ್ಡ್ʼಗಳ ದೊಡ್ಡ ಬಲವಿದೆ. ಇವರು ಕೇವಲ ವೃತ್ತಿಪರ ಸೈನಿಕರೆಂದು ಭಾವಿಸಬೇಕಾಗಿಲ್ಲ. ಇವರು ಸಿದ್ಧಾಂತಗಳಿಗೆ ಪ್ರೇರಿತರಾದವರು. ಅಮೆರಿಕದ ಗುರಿ ತಪ್ಪದೇ ಇರುವ ದಾಳಿಯು ಒಂದು ಕಟ್ಟಡವನ್ನು ದ್ವಂಸಗೊಳಿಸಬಹುದು ಅಥವಾ ಪ್ರಮುಖ ಮೂಲಸೌಕರ್ಯಗಳಿಗೆ ಹಾನಿ ಮಾಡಿಬಿಡಬಹುದು, ಅಷ್ಟೇ ಏಕೆ ಕೆಲವು ಉನ್ನತ ನಾಯಕರನ್ನೂ ಮುಗಿಸಿಬಿಡಬಹುದು. ಆದರೆ ಇರಾನಿನ ಈ ಸಾಂಸ್ಥಿಕ ಚೌಕಟ್ಟು ಹಾಗಿಲ್ಲ. ಅಲ್ಲಿ ಯಾವುದೇ ವ್ಯಕ್ತಿಯನ್ನು ಯಾವುದೇ ಕ್ಷಣದಲ್ಲಿ ಬದಲಾಯಿಸಿಬಿಡಬಲ್ಲ ಪರ್ಯಾಯ ವ್ಯವಸ್ಥೆಗಳಿವೆ ಮತ್ತು ಅಲ್ಲಿ ಯಾವತ್ತೂ ತುರ್ತು ಸಿದ್ಧತೆಗಳಿರುತ್ತವೆ.

ಇದಕ್ಕೆ ಉದಾಹರಣೆಯಾಗಿ 2020 ರಲ್ಲಿ ಟ್ರಂಪ್ ಅವರ ಮೊದಲ ಅವಧಿಯಲ್ಲಿ ನಡೆದ ದಾಳಿಯಲ್ಲಿ ಹತರಾದ ಕಾಸಿಂ ಸುಲೈಮಾನಿ ಅವರ ಪ್ರಕರಣವನ್ನೇ ತೆಗೆದುಕೊಳ್ಳಿ. ಇರಾನ್‌ನ ರೆವಲ್ಯೂಷನರಿ ಗಾರ್ಡ್‌ನ ಅಂಗವಾದ 'ಕುದ್ಸ್ ಫೋರ್ಸ್'ನ ಮುಖ್ಯಸ್ಥರಾಗಿದ್ದ ಅವರು ಅಪಾರ ಖ್ಯಾತಿಯನ್ನು ಹೊಂದಿದ್ದರು. ಅವರೊಂದು ದಂತಕಥೆ ಮತ್ತು ಅವರನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಅವರು ಹತರಾದ ಕೂಡಲೇ, ಅವರ ಸ್ಥಾನಕ್ಕೆ ಉಪನಾಯಕ ಇಸ್ಮಾಯಿಲ್ ಖಾನಿ ಅವರನ್ನು ನೇಮಿಸಲಾಯಿತು ಮತ್ತು ಆ ವಿಭಾಗವು ಇಂದಿಗೂ ಸಕ್ರಿಯವಾಗಿ ಮತ್ತು ಸಶಕ್ತವಾಗಿ ಕಾರ್ಯನಿರ್ವಹಿಸುತ್ತ ಬಂದಿದೆ.

ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರು ಹತ್ಯೆಗೀಡಾದಾಗ ಅಲ್ಲಿನ ಸರ್ಕಾರವೇನೂ ಕುಸಿದುಬೀಳಲಿಲ್ಲ. ಕೆನಡಿ ಅವರ ಸ್ಥಾನಕ್ಕೆ ಉಪಾಧ್ಯಕ್ಷ ಲಿಂಡನ್ ಜಾನ್ಸನ್ ಅವರನ್ನು ತಕ್ಷಣವೇ ನೇಮಿಸಲು ಅಲ್ಲಿ ವ್ಯವಸ್ಥೆಗಳಿದ್ದವು.ಹಾಗಾಗಿ ಇರಾನ್‌ನಲ್ಲಿ ಅಂತಹ ವ್ಯವಸ್ಥೆ ಇಲ್ಲ ಎಂದು ಯಾರಾದರೂ ಭಾವಿಸುವುದು ಮೂರ್ಖತನವಾಗುತ್ತದೆ ಮತ್ತು ಇದು ಅಜ್ಞಾನ ಹಾಗೂ ಅಹಂಕಾರದ ಫಲವಾಗಿರುತ್ತದೆ.

ಇರಾಕ್ ವಿಷಯದಲ್ಲಿ, ಸದ್ದಾಂ ಹುಸೇನ್‌ನನ್ನು ಮುಗಿಸಿದ ನಂತರ ಅಮೆರಿಕವು ಅಲ್ಲಿನ ಜನರು ತಮಗೆ ಕೃತಜ್ಞತೆಯಿಂದ ಬರಮಾಡಿಕೊಳ್ಳುತ್ತಾರೆ ಎಂದು ನಿರೀಕ್ಷಿಸಿತ್ತು. ಆರಂಭದಲ್ಲಿ ನಡೆದ ನಾಟಕೀಯ ಸಂಭ್ರಮಾಚರಣೆಗಳ ನಂತರ ಅಮೆರಿಕಕ್ಕೆ ಅದರ ವಾಸ್ತವದ ಅರಿವಾಗಿದೆ.

ಒಂದು ಅವಾಂತರ ತಂದ ಪರಿಣಾಮ

ಸದ್ದಾಂ ಹುಸೇನ್ ಆಡಳಿತದಲ್ಲಿದ್ದ ಇರಾಕ್ ಸೇನೆಯ ದೊಡ್ಡ ವಿಭಾಗ, ಅಧಿಕಾರಿಶಾಹಿ ಮತ್ತು ರಾಜಕೀಯ ಶಕ್ತಿಗಳ ಒಂದು ಗುಂಪು ಅಮೆರಿಕದ ವಿರುದ್ಧ ತಿರುಗಿಬಿದ್ದಿದ್ದನ್ನು ಒಮ್ಮೆ ನೆನಪಿಸಿಕೊಳ್ಳಬೇಕು. ಇದರ ಪರಿಣಾಮವಾಗಿ ಉಂಟಾದ ಅವಾಂತರವು ಇಡೀ ವಲಯವನ್ನು ತೀವ್ರವಾಗಿ ಬಾಧಿಸಿತು ಮತ್ತು ಅದರ ದುಷ್ಪರಿಣಾಮಗಳನ್ನು ಜಗತ್ತು ಇಂದಿಗೂ ಅನುಭವಿಸುತ್ತಿದೆ. ಉದಾಹರಣೆಗೆ, ಇಸ್ಲಾಮಿಕ್ ಸ್ಟೇಟ್ (ISIS) ಉಗಮಕ್ಕೆ ಕಾರಣವಾಗಿದ್ದು ಕೂಡ ಇದೇ. ಇಂದು, ಅಮೆರಿಕದ ಹೆಚ್ಚಿನ ಆಡಳಿತ ವರ್ಗವು ಇರಾಕ್ ಮೇಲಿನ ಆಕ್ರಮಣವನ್ನು ಒಂದು ವ್ಯೂಹಾತ್ಮಕ ತಪ್ಪು ಎಂದು ಪರಿಗಣಿಸುತ್ತದೆ.

ಇನ್ನು ಇರಾನ್ ವಿಷಯಕ್ಕೆ ಬಂದರೆ, ಒಂದು ವೇಳೆ ಟ್ರಂಪ್ ಅವರು ತಮ್ಮ ಬೆದರಿಕೆಯನ್ನು ಕಾರ್ಯರೂಪಕ್ಕೆ ತಂದು ಯಾವುದೇ ರೂಪದಲ್ಲಿ ಮಿಲಿಟರಿ ಹಸ್ತಕ್ಷೇಪ ಮಾಡಿದರೆ, ಅದರ ಪರಿಣಾಮಗಳು ಊಹಿಸಲೂ ಸಾಧ್ಯವಾಗದಷ್ಟು ಭೀಕರವಾಗಿರುತ್ತವೆ.

ಕ್ರಾಂತಿಯಾಗಿ ಐವತ್ತು ವರ್ಷಗಳೇನೋ ಕಳೆದಿರಬಹುದು. ಆದರೆ ಇರಾನ್ನ ಜನಸಂಖ್ಯೆಯ ಬಹುದೊಡ್ಡ ಭಾಗವು ಇಂದಿಗೂ ಅಮೆರಿಕವೆಂದರೆ ಉರಿದು ಬೀಳುತ್ತದೆ. ಇತಿಹಾಸವು ತೋರಿಸಿಕೊಟ್ಟಿರುವಂತೆ, ಆಂತರಿಕ ದಂಗೆಯ ಮೂಲಕ ಉಂಟಾಗುವ ಆಡಳಿತ ಬದಲಾವಣೆಯು ಹೊರಗಿನಿಂದ ಹೇರಲ್ಪಟ್ಟ ಬದಲಾವಣೆಗಿಂತ ಗುಣಾತ್ಮಕವಾಗಿ ಭಿನ್ನವಾಗಿರುತ್ತದೆ. ಈ ಸೂಕ್ಷ್ಮತೆಯನ್ನು ಟ್ರಂಪ್ ಅವರು ಅರ್ಥಮಾಡಿಕೊಂಡರೆ ಒಳ್ಳೆಯದು.

Next Story