
ಇರಾನ್ ಹತ್ಯಾಕಾಂಡಕ್ಕೆ ಟ್ರಂಪ್ ಎಚ್ಚರಿಕೆಯ ಬ್ರೇಕ್: ಗಲ್ಲು ಶಿಕ್ಷೆಗಳು ರದ್ದು!
ಇರಾನ್‌ನಲ್ಲಿ ಪ್ರತಿಭಟನಾಕಾರರ ಹತ್ಯೆ ಮತ್ತು ಗಲ್ಲು ಶಿಕ್ಷೆ ನಿಂತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 2,600ಕ್ಕೂ ಹೆಚ್ಚು ಬಲಿ ಪಡೆದ ಈ ಸಂಘರ್ಷದ ಇತ್ತೀಚಿನ ಅಪ್‌ಡೇಟ್ ಇಲ್ಲಿದೆ.
ಇರಾನ್ ಮೇಲಿನ ಡೊನಾಲ್ಡ್ ಟ್ರಂಪ್ ಅವರ ಸರಣಿ ಎಚ್ಚರಿಕೆಗಳು ಮತ್ತು ಮಿಲಿಟರಿ ದಾಳಿಯ ಬೆದರಿಕೆಗಳು ಕೊನೆಗೂ ಕೆಲಸ ಮಾಡಿದಂತೆ ಕಾಣುತ್ತಿವೆ. ಕಳೆದ ಹಲವು ದಿನಗಳಿಂದ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಇರಾನ್ ಪ್ರತಿಭಟನಾಕಾರರ ಹತ್ಯಾಕಾಂಡಕ್ಕೆ ಈಗ ದಿಢೀರ್ ಬ್ರೇಕ್ ಬಿದ್ದಿದೆ. ಸ್ವತಃ ಅಮೆರಿಕ ಅಧ್ಯಕ್ಷರೇ ವಾಷಿಂಗ್ಟನ್‌ನಲ್ಲಿ ಈ ವಿಷಯವನ್ನು ಖಚಿತಪಡಿಸಿದ್ದು, ಇರಾನ್‌ನಲ್ಲಿ ನಡೆಯಬೇಕಿದ್ದ ಸಾಮೂಹಿಕ ಗಲ್ಲು ಶಿಕ್ಷೆಗಳು ಮತ್ತು ಹತ್ಯೆಗಳು ಸದ್ಯಕ್ಕೆ ಸ್ಥಗಿತಗೊಂಡಿವೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
26 ವರ್ಷದ ಯುವಕ ಎರ್ಫಾನ್ ಸುಲ್ತಾನಿಯ ಗಲ್ಲು ಶಿಕ್ಷೆ ರದ್ದಾಗಿರುವುದು ಮತ್ತು ಇರಾನ್ ವಿದೇಶಾಂಗ ಸಚಿವರು ಶಾಂತಿಯ ಮಂತ್ರ ಜಪಿಸುತ್ತಿರುವುದು ಜಾಗತಿಕ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. 3,000ಕ್ಕೂ ಹೆಚ್ಚು ಜನರ ಬಲಿ ಪಡೆದ ಈ ರಕ್ತಸಿಕ್ತ ಹೋರಾಟ ಈಗ ಯಾವ ತಿರುವು ಪಡೆಯಲಿದೆ ಮತ್ತು ಅಮೆರಿಕದ ಮುಂದಿನ ನಡೆ ಏನು ಎಂಬ ಸಂಪೂರ್ಣ ವಿವರ ಇಲ್ಲಿದೆ.
ಟ್ರಂಪ್ ಹೇಳಿದ್ದೇನು?
ಕಳೆದ ಕೆಲವು ದಿನಗಳಿಂದ ಇರಾನ್ ಸರ್ಕಾರದ ವಿರುದ್ಧ ಕಠಿಣ ಎಚ್ಚರಿಕೆಗಳನ್ನು ನೀಡುತ್ತಿದ್ದ ಡೊನಾಲ್ಡ್ ಟ್ರಂಪ್, ಬುಧವಾರ ವಾಷಿಂಗ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ "ಇರಾನ್‌ನಲ್ಲಿ ಹತ್ಯೆಗಳು ನಿಲ್ಲುತ್ತಿವೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಅಲ್ಲಿ ಗಲ್ಲು ಶಿಕ್ಷೆಗಳು ನಡೆಯುವುದಿಲ್ಲ ಎಂದು ನನಗೆ ತಿಳಿಸಲಾಗಿದೆ. ಇದು ಅತ್ಯಂತ ಪ್ರಮುಖ ಮೂಲಗಳಿಂದ ಬಂದ ಮಾಹಿತಿಯಾಗಿದೆ ಎಂದಿದ್ದಾರೆ.
ಎರ್ಫಾನ್ ಸುಲ್ತಾನಿ ಪ್ರಕರಣ
26 ವರ್ಷದ ಪ್ರತಿಭಟನಾಕಾರ ಎರ್ಫಾನ್ ಸುಲ್ತಾನಿಯನ್ನು ಇರಾನ್ ಸರ್ಕಾರ ಬುಧವಾರ ಗಲ್ಲಿಗೇರಿಸಲು ನಿರ್ಧರಿಸಿತ್ತು. ಆದರೆ ಅಂತರಾಷ್ಟ್ರೀಯ ಒತ್ತಡ ಮತ್ತು ಟ್ರಂಪ್ ಅವರ ಎಚ್ಚರಿಕೆಯ ನಂತರ, ಈ ಗಲ್ಲು ಶಿಕ್ಷೆಯನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ.
ಇರಾನ್ ವಿದೇಶಾಂಗ ಸಚಿವರ ಸ್ಪಷ್ಟನೆ
ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಪ್ರತಿಭಟನಾಕಾರರನ್ನು ಗಲ್ಲಿಗೇರಿಸುವ ಯಾವುದೇ ಉದ್ದೇಶ ತಮಗಿಲ್ಲ ಎಂದು ಹೇಳಿದ್ದಾರೆ. "ಪ್ರತಿಭಟನಾಕಾರರನ್ನು ಗಲ್ಲಿಗೇರಿಸುವ ಪ್ರಶ್ನೆಯೇ ಇಲ್ಲ. ದೇಶದಲ್ಲಿ ಈಗ ಪರಿಸ್ಥಿತಿ ಶಾಂತವಾಗಿದೆ," ಎಂದು ಅವರು ಪ್ರತಿಪಾದಿಸಿದ್ದಾರೆ.
ಆದರೆ, ಇರಾನ್‌ನ ನ್ಯಾಯಾಂಗ ವ್ಯವಸ್ಥೆಯು ಕಠಿಣ ಸಂದೇಶ ರವಾನಿಸಿದೆ. ಬಂಧಿತ ಪ್ರತಿಭಟನಾಕಾರರ ವಿಚಾರಣೆಯನ್ನು ವೇಗವಾಗಿ ನಡೆಸಿ ಶಿಕ್ಷೆ ವಿಧಿಸಬೇಕು ಎಂದು ಅಲ್ಲಿನ ಮುಖ್ಯ ನ್ಯಾಯಾಧೀಶರು ಆದೇಶಿಸಿದ್ದಾರೆ.
ಭೀಕರ ಹತ್ಯಾಕಾಂಡ: ಸಾವಿನ ಸಂಖ್ಯೆ 2,600 ದಾಟಿದೆ
ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು 1979ರ ಇಸ್ಲಾಮಿಕ್ ಕ್ರಾಂತಿಯ ನಂತರದ ಅತ್ಯಂತ ಭೀಕರ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ಮಾನವ ಹಕ್ಕುಗಳ ಸಂಸ್ಥೆಗಳ ಪ್ರಕಾರ, ಭದ್ರತಾ ಪಡೆಗಳ ಗುಂಡೇಟಿಗೆ ಈಗಾಗಲೇ 2,600ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಕೆಲವು ಮೂಲಗಳ ಪ್ರಕಾರ ಈ ಸಂಖ್ಯೆ 3,000 ದಾಟಿರಬಹುದು. ಸುಮಾರು 18,000ಕ್ಕೂ ಹೆಚ್ಚು ಜನರನ್ನು ಬಂಧಿಸಿ ಜೈಲಿಗೆ ಹಾಕಲಾಗಿದೆ.
ಅಮೆರಿಕದ ನಿಲುವು
ಟ್ರಂಪ್ ಅವರು ಈ ಹಿಂದೆ 'ಟ್ರೂತ್ ಸೋಶಿಯಲ್'ನಲ್ಲಿ ಪೋಸ್ಟ್ ಮಾಡಿ, "ಇರಾನ್ ದೇಶಪ್ರೇಮಿಗಳೇ, ಪ್ರತಿಭಟನೆ ಮುಂದುವರಿಸಿ, ನಿಮಗೆ ಶೀಘ್ರವೇ ಸಹಾಯ ಬರಲಿದೆ ಎಂದು ಭರವಸೆ ನೀಡಿದ್ದರು. ಟ್ರಂಪ್ ಇನ್ನೂ ಸೇನಾ ಕ್ರಮದ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿಲ್ಲ. ಆದರೆ, ಸದ್ಯಕ್ಕೆ 'ಕಾದು ನೋಡುವ' ತಂತ್ರ ಅನುಸರಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಅಮೆರಿಕ ತನ್ನ ಸೇನಾ ಸಿಬ್ಬಂದಿಯನ್ನು ಕತಾರ್‌ನ ವಾಯುನೆಲೆಯಿಂದ ಸ್ಥಳಾಂತರಿಸಲು ಆರಂಭಿಸಿದೆ.

