Khamenei calls Trump a criminal; Trump thunders, calling for the end of Irans regime!
x

ಇರಾನ್‌ ನಾಯಕ ಆಯತೊಲ್ಲಾ ಅಲಿ ಖಮೇನಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ಟ್ರಂಪ್ ಒಬ್ಬ 'ಅಪರಾಧಿ' ಎಂದ ಖಮೇನಿ; ಇರಾನ್ ಆಡಳಿತ ಕೊನೆಗೊಳ್ಳಲಿದೆ ಎಂದ ಟ್ರಂಪ್

ಖಮೇನಿ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, ಇರಾನ್‌ನಲ್ಲಿ ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದಾರೆ. "ಖಮೇನಿ ಒಬ್ಬ ಮಾನಸಿಕ ರೋಗಿ ಎಂದು ತಿಳಿಸಿದ್ದಾರೆ.


Click the Play button to hear this message in audio format

ಇರಾನ್‌ನಲ್ಲಿ ನಡೆಯುತ್ತಿರುವ ಭೀಕರ ನಾಗರಿಕ ಪ್ರತಿಭಟನೆಗಳ ಬೆನ್ನಲ್ಲೇ, ಇರಾನ್ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ವಾಗ್ಯುದ್ಧ ತಾರಕಕ್ಕೇರಿದೆ. ಪ್ರತಿಭಟನಾಕಾರರಿಗೆ ಬೆಂಬಲ ನೀಡುತ್ತಿರುವ ಟ್ರಂಪ್ ಅವರನ್ನು ಖಮೇನಿ 'ಅಪರಾಧಿ' ಎಂದು ಕರೆದರೆ, ಪ್ರತಿಯಾಗಿ ಟ್ರಂಪ್ ಅವರು ಇರಾನ್‌ನಲ್ಲಿ ಖಮೇನಿಯವರ ಸುಮಾರು 40 ವರ್ಷಗಳ ಸುದೀರ್ಘ ಆಡಳಿತ ಕೊನೆಗೊಳ್ಳುವ ಸಮಯ ಬಂದಿದೆ ಎಂದು ಕರೆ ನೀಡಿದ್ದಾರೆ.

ಕಳೆದ ಡಿಸೆಂಬರ್ 28 ರಿಂದ ಇರಾನ್‌ನ ಹದಗೆಟ್ಟ ಆರ್ಥಿಕ ಪರಿಸ್ಥಿತಿಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಈ ಹಿಂಸಾಚಾರದ ಕುರಿತು ಶನಿವಾರ ಮೊದಲ ಬಾರಿಗೆ ಮೌನ ಮುರಿದ ಅಲಿ ಖಮೇನಿ, ಈ ಬಂಡಾಯದಲ್ಲಿ 'ಸಾವಿರಾರು' ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಇರಾನ್ ಸರ್ಕಾರವು ಪ್ರತಿಭಟನೆಯನ್ನು ಹತ್ತಿಕ್ಕಲು ನಡೆಸಿದ ಭೀಕರ ದಮನಕಾಂಡದ ಮೊದಲ ಅಧಿಕೃತ ಅಂಕಿ-ಅಂಶ ಇದಾಗಿದೆ. ಇದೇ ವೇಳೆ ಅವರು ಈ ಸಾವು-ನೋವುಗಳಿಗೆ ಅಮೆರಿಕವೇ ನೇರ ಕಾರಣ ಎಂದು ಆರೋಪಿಸಿದ್ದಾರೆ.

"ಈ ಬಂಡಾಯದಲ್ಲಿ ಅಮೆರಿಕ ಅಧ್ಯಕ್ಷರು ಖುದ್ದಾಗಿ ಭಾಗಿಯಾಗಿ ವಿಧ್ವಂಸಕ ಶಕ್ತಿಗಳನ್ನು ಪ್ರೋತ್ಸಾಹಿಸಿದ್ದಾರೆ. ನಾವು ನಿಮಗೆ ಮಿಲಿಟರಿ ನೆರವು ನೀಡುತ್ತೇವೆ ಎಂದು ಹೇಳುವ ಮೂಲಕ ಇರಾನ್ ರಾಷ್ಟ್ರದ ವಿರುದ್ಧ ಸಂಚು ರೂಪಿಸಿದ್ದಾರೆ. ಆದ್ದರಿಂದ ಸಾವು-ನೋವು ಮತ್ತು ಹಾನಿಗಳಿಗೆ ಅಮೆರಿಕ ಅಧ್ಯಕ್ಷರೇ ಅಪರಾಧಿ," ಎಂದು ಖಮೇನಿ ಸರ್ಕಾರಿ ದೂರದರ್ಶನದಲ್ಲಿ ನೀಡಿದ ಭಾಷಣದಲ್ಲಿ ಕಿಡಿಕಾರಿದ್ದಾರೆ.

ಟ್ರಂಪ್ ತಿರುಗೇಟು: 'ಇರಾನ್ ನಾಯಕ ಒಬ್ಬ ಮಾನಸಿಕ ರೋಗಿ'

ಖಮೇನಿ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, ಇರಾನ್‌ನಲ್ಲಿ ನಾಯಕತ್ವ ಬದಲಾವಣೆಗೆ ಆಗ್ರಹಿಸಿದ್ದಾರೆ. "ಖಮೇನಿ ಒಬ್ಬ ಮಾನಸಿಕ ರೋಗಿ. ಅವರು ತಮ್ಮ ದೇಶವನ್ನು ಸರಿಯಾಗಿ ಆಳುವುದನ್ನು ಕಲಿಯಬೇಕು ಮತ್ತು ಸ್ವಂತ ಜನರ ಕೊಲ್ಲುವುದನ್ನು ನಿಲ್ಲಿಸಬೇಕು. ಕಳಪೆ ನಾಯಕತ್ವದಿಂದಾಗಿ ಇರಾನ್ ಇಂದು ವಿಶ್ವದಲ್ಲೇ ವಾಸಿಸಲು ಯೋಗ್ಯವಲ್ಲದ ಕೆಟ್ಟ ಸ್ಥಳವಾಗಿದೆ. ಇರಾನ್‌ಗೆ ಈಗ ಹೊಸ ನಾಯಕತ್ವದ ಅಗತ್ಯವಿದೆ," ಎಂದು ಟ್ರಂಪ್ ಹೇಳಿದ್ದಾರೆ.

ವಿಶೇಷವೆಂದರೆ, ಒಂದು ದಿನದ ಹಿಂದಷ್ಟೇ ಟ್ರಂಪ್ ಅವರು "ಇರಾನ್ 800 ಜನರ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಿರುವುದನ್ನು ನಾನು ಗೌರವಿಸುತ್ತೇನೆ" ಎಂದು ಸಮಾಧಾನದ ಧ್ವನಿಯಲ್ಲಿ ಮಾತನಾಡಿದ್ದರು. ಆದರೆ ಖಮೇನಿ ಅವರ 'ಅಪರಾಧಿ' ಎಂಬ ಪದದ ಬಳಕೆಯು ಟ್ರಂಪ್ ಅವರನ್ನು ಮತ್ತೊಮ್ಮೆ ಕೆರಳಿಸಿದ್ದು, ಇರಾನ್ ಮೇಲಿನ ಮಿಲಿಟರಿ ದಾಳಿಯ ಸಾಧ್ಯತೆಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ.

ದಶಕಗಳಲ್ಲೇ ಕಾಣದ ಭೀಕರ ಹತ್ಯೆ

ಮಾನವ ಹಕ್ಕುಗಳ ಸಂಘಟನೆಗಳ ವರದಿಯ ಪ್ರಕಾರ, ಇರಾನ್‌ನಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಇದುವರೆಗೆ ಕನಿಷ್ಠ 3,095 ಜನರು ಸಾವನ್ನಪ್ಪಿದ್ದಾರೆ. ಇದು 1979ರ ಇಸ್ಲಾಮಿಕ್ ಕ್ರಾಂತಿಯ ನಂತರದ ಅತಿ ದೊಡ್ಡ ಹಿಂಸಾಚಾರ ಎಂದು ವಿಶ್ಲೇಷಿಸಲಾಗಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಇರಾನ್ ಸರ್ಕಾರ ಇಡೀ ದೇಶದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿತ್ತು. ಶನಿವಾರವಷ್ಟೇ ಕೆಲವು ಭಾಗಗಳಲ್ಲಿ ಸೀಮಿತ ಪ್ರಮಾಣದ ಇಂಟರ್ನೆಟ್ ಸೇವೆ ಪುನರಾರಂಭಗೊಂಡಿದೆ ಎಂದು ವರದಿಗಳು ತಿಳಿಸಿವೆ.

ಇನ್ನೊಂದೆಡೆ, ದೇಶಭ್ರಷ್ಟ ಇರಾನ್ ರಾಜಕುಮಾರ ರೆಜಾ ಪಹ್ಲವಿ ಅವರು ಮತ್ತೊಮ್ಮೆ ಬೀದಿಗಿಳಿದು ಪ್ರತಿಭಟಿಸಲು ಜನರಿಗೆ ಕರೆ ನೀಡಿದ್ದಾರೆ. ಆದರೆ ಇರಾನ್ ಸೇನೆಯ ಬಿಗಿ ಬಂದೋಬಸ್ತ್ ಮತ್ತು ಇಂಟರ್ನೆಟ್ ಕಡಿತದಿಂದಾಗಿ ಸದ್ಯಕ್ಕೆ ಪರಿಸ್ಥಿತಿ ಸ್ತಬ್ಧವಾದಂತೆ ಕಂಡುಬರುತ್ತಿದೆ.

Read More
Next Story