
ಇರಾನ್ ಪ್ರತಿಭಟನೆ: ಸಾವು-ನೋವಿಗೆ ಟ್ರಂಪ್ ನೇರ ಹೊಣೆ, ಅವರು ಅಪರಾಧಿ: ಖಮೇನಿ
ಇರಾನ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಅಲ್ಲಿ ಸಿಲುಕಿದ್ದ ಹಲವು ಭಾರತೀಯರು ಶುಕ್ರವಾರ ರಾತ್ರಿ ಸುರಕ್ಷಿತವಾಗಿ ನವದೆಹಲಿಗೆ ಮರಳಿದ್ದಾರೆ.
ಇರಾನ್‌ನಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆ ಮತ್ತು ಹಿಂಸಾಚಾರದ ವೇಳೆ ಸಂಭವಿಸಿದ ಸಾವಿರಾರು ಸಾವು-ನೋವುಗಳಿಗೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ನೇರ ಹೊಣೆ ಎಂದು ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಆರೋಪ ಮಾಡಿದ್ದಾರೆ. ಈ ಕೃತ್ಯಗಳಿಗಾಗಿ ಟ್ರಂಪ್ ಅವರನ್ನು 'ಅಪರಾಧಿ' ಎಂದು ಪರಿಗಣಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ದೇಶದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗಳು ದೇಶವಿರೋಧಿ ಸ್ವರೂಪ ಪಡೆದುಕೊಂಡಿದ್ದು, ಇದರ ಹಿಂದೆ ಅಮೆರಿಕದ ಕೈವಾಡವಿದೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಖಮೇನಿ, "ನಾವು ದೇಶವನ್ನು ಅನಗತ್ಯವಾಗಿ ಯುದ್ಧಕ್ಕೆ ತಳ್ಳುವುದಿಲ್ಲ. ಆದರೆ, ಇರಾನ್ ವಿರುದ್ಧ ಸಂಚು ರೂಪಿಸಿದ ದೇಶೀಯ ಅಥವಾ ಅಂತಾರಾಷ್ಟ್ರೀಯ ಅಪರಾಧಿಗಳನ್ನು ಶಿಕ್ಷಿಸದೇ ಬಿಡುವುದಿಲ್ಲ," ಎಂದು ಗುಡುಗಿದ್ದಾರೆ. ಇರಾನ್‌ನ ಸೇನೆ, ರಾಜಕೀಯ ಮತ್ತು ಆರ್ಥಿಕತೆಯ ಮೇಲೆ ನಿಯಂತ್ರಣ ಸಾಧಿಸುವುದು ಅಮೆರಿಕದ ಹುನ್ನಾರವಾಗಿದೆ ಎಂದು ಅವರು ದೂರಿದ್ದಾರೆ.
ಪ್ರತೀಕಾರಕ್ಕೆ ಧಾರ್ಮಿಕ ಮುಖಂಡರ ಕರೆ
ಇದೇ ವೇಳೆ, ಇರಾನ್‌ನ ಪ್ರಮುಖ ಮೂಲಭೂತವಾದಿ ಧಾರ್ಮಿಕ ಮುಖಂಡರಾದ ಆಯತೊಲ್ಲಾ ಅಹಮದ್ ಖತಾಮಿ ಅವರು ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. "ಶಸ್ತ್ರಸಜ್ಜಿತ ಕಪಟಿಗಳನ್ನು ಹತ್ಯೆ ಮಾಡಬೇಕು," ಎಂದು ಅವರು ಕರೆ ನೀಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಶಾಂತಿಯನ್ನು ಬಯಸುತ್ತಿಲ್ಲ ಎಂದಿರುವ ಅವರು, "ಟ್ರಂಪ್ ಹಾಗೂ ಬೆಂಜಮಿನ್ ನೆತನ್ಯಾಹು ನಮ್ಮ ಸೈನಿಕರ ಸೇಡಿನ ಕ್ರಮಕ್ಕೆ ಕಾಯಬೇಕಿದೆ," ಎಂದು ಎಚ್ಚರಿಕೆ ನೀಡಿದ್ದಾರೆ.
ಟ್ರಂಪ್ ಬೆಂಬಲವಿದೆ, ಹೋರಾಟ ನಿಲ್ಲಿಸಬೇಡಿ
ಇನ್ನೊಂದೆಡೆ, 1ಫ979ರ ಇಸ್ಲಾಮಿಕ್ ಕ್ರಾಂತಿಯ ನಂತರ ದೇಶ ತೊರೆದು ಅಮೆರಿಕದಲ್ಲಿ ನೆಲೆಸಿರುವ ಇರಾನ್‌ನ ಪದಚ್ಯುತ ರಾಜವಂಶದ ರೆಜಾ ಪಹ್ಲವಿ, ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ವಾಷಿಂಗ್ಟನ್‌ನಲ್ಲಿ ಮಾತನಾಡಿದ ಅವರು, "ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಇರಾನ್ ಜನರಿಗೆ ಎಲ್ಲ ರೀತಿಯ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ಹೀಗಾಗಿ ಇರಾನಿಯನ್ನರು ತಮ್ಮ ಹೋರಾಟವನ್ನು ಮುಂದುವರಿಸಬೇಕು," ಎಂದು ಕರೆ ನೀಡಿದ್ದಾರೆ.
ಬೆಚ್ಚಿಬೀಳಿಸುವ ಸಾವು-ನೋವಿನ ಲೆಕ್ಕ
ಅಮೆರಿಕ ಮೂಲದ ಮಾನವ ಹಕ್ಕುಗಳ ಸಂಸ್ಥೆ ಎಚ್‌ಆರ್‌ಎಎನ್‌ಎ (HRANA) ವರದಿಯ ಪ್ರಕಾರ, ಇರಾನ್ ಪ್ರತಿಭಟನೆಯಲ್ಲಿ ಈವರೆಗೆ ಬರೋಬ್ಬರಿ 3,090 ಜನರು ಮೃತಪಟ್ಟಿದ್ದಾರೆ. ಇದರಲ್ಲಿ 2,895 ಮಂದಿ ಪ್ರತಿಭಟನಾಕಾರರೇ ಆಗಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಹಿಂಸಾಚಾರದ ವೇಳೆ 350 ಮಸೀದಿಗಳು, 126 ಪ್ರಾರ್ಥನಾ ಮಂದಿರಗಳು, 400 ಆಸ್ಪತ್ರೆಗಳು, 106 ಆಂಬ್ಯುಲೆನ್ಸ್‌ಗಳು ಹಾಗೂ 21 ಅಗ್ನಿಶಾಮಕ ವಾಹನಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುರಕ್ಷಿತವಾಗಿ ಮರಳಿದ ಭಾರತೀಯರು
ಇರಾನ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ, ಅಲ್ಲಿ ಸಿಲುಕಿದ್ದ ಹಲವು ಭಾರತೀಯರು ಶುಕ್ರವಾರ ರಾತ್ರಿ ಸುರಕ್ಷಿತವಾಗಿ ನವದೆಹಲಿಗೆ ಮರಳಿದ್ದಾರೆ. "ನಮಗೆ ಇರಾನ್‌ನಲ್ಲಿ ಯಾವುದೇ ಸಮಸ್ಯೆಯಾಗಿಲ್ಲ," ಎಂದು ಪ್ರಯಾಣಿಕರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

