
ಗ್ರೀನ್‌ಲ್ಯಾಂಡ್ ಮೇಲೆ ಹಿಡಿತಕ್ಕೆ ಅಮೆರಿಕ ಹಠ; ವಿರೋಧಿಸಿದ 8 ಯುರೋಪಿಯನ್ ರಾಷ್ಟ್ರಗಳಿಗೆ ಶೇ. 10ರಷ್ಟು ಸುಂಕ!
ಟ್ರಂಪ್ ಹಾಕುವ ಯಾವುದೇ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ. ಉಕ್ರೇನ್ ಆಗಲಿ, ಗ್ರೀನ್‌ಲ್ಯಾಂಡ್ ಆಗಲಿ, ಬೆದರಿಕೆಯ ತಂತ್ರ ನಡೆಯುವುದಿಲ್ಲ, ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಪ್ರತಿಕ್ರಿಯಿಸಿದ್ದಾರೆ.
ಗ್ರೀನ್‌ಲ್ಯಾಂಡ್ ದ್ವೀಪದ ಮೇಲೆ ಅಮೆರಿಕದ ನಿಯಂತ್ರಣ ಸಾಧಿಸುವ ತಮ್ಮ ಇಚ್ಛೆಗೆ ಅಡ್ಡಬಂದ ಯುರೋಪಿನ ಎಂಟು ಪ್ರಮುಖ ರಾಷ್ಟ್ರಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಟ್ಟಿಗೆದ್ದಿದ್ದಾರೆ. ಈ ದೇಶಗಳಿಂದ ಆಮದಾಗುವ ಸರಕುಗಳ ಮೇಲೆ ಫೆಬ್ರವರಿಯಿಂದ ಶೇ. 10ರಷ್ಟು ಸುಂಕ ವಿಧಿಸುವುದಾಗಿ ಘೋಷಿಸುವ ಮೂಲಕ ಮಿತ್ರರಾಷ್ಟ್ರಗಳಿಗೇ ಬಿಸಿ ಮುಟ್ಟಿಸಿದ್ದಾರೆ.
ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿರುವ ತಮ್ಮ ಗಾಲ್ಫ್ ಕ್ಲಬ್‌ನಲ್ಲಿದ್ದ ಟ್ರಂಪ್, ಶನಿವಾರ (ಜ.17) ತಮ್ಮದೇ ಸಾಮಾಜಿಕ ಜಾಲತಾಣ ‘ಟ್ರುತ್ ಸೋಷಿಯಲ್’ನಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫ್ರಾನ್ಸ್, ಜರ್ಮನಿ, ಬ್ರಿಟನ್, ನೆದರ್ಲ್ಯಾಂಡ್ಸ್ ಮತ್ತು ಫಿನ್ಲ್ಯಾಂಡ್ ದೇಶಗಳು ಟ್ರಂಪ್ ಅವರ ಸುಂಕದ ಬರೆಗೆ ಗುರಿಯಾಗಲಿವೆ.
ಅಷ್ಟೇ ಅಲ್ಲದೆ, ಜೂನ್ 1ರ ಒಳಗೆ ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕಕ್ಕೆ ಸಂಪೂರ್ಣವಾಗಿ ಹಸ್ತಾಂತರಿಸುವ ಒಪ್ಪಂದವಾಗದಿದ್ದರೆ, ಈ ಆಮದು ಸುಂಕವನ್ನು ಶೇ. 25ಕ್ಕೆ ಏರಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇದು ಯುರೋಪ್ ಒಕ್ಕೂಟ ಮತ್ತು ಅಮೆರಿಕದ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ತೀವ್ರ ಬಿರುಕು ಮೂಡಿಸುವ ಸಾಧ್ಯತೆಯಿದೆ.
ಒತ್ತಡ ತಂತ್ರವೇ ಟ್ರಂಪ್ ಅಸ್ತ್ರ?
ನ್ಯಾಟೋ (NATO) ಒಕ್ಕೂಟದ ಸದಸ್ಯ ರಾಷ್ಟ್ರವಾಗಿರುವ ಡೆನ್ಮಾರ್ಕ್‌ನ ಅಧೀನದಲ್ಲಿರುವ ಗ್ರೀನ್‌ಲ್ಯಾಂಡ್, ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಅತ್ಯಂತ ನಿರ್ಣಾಯಕ ಎಂದು ಟ್ರಂಪ್ ವಾದಿಸುತ್ತಿದ್ದಾರೆ. ಈ ದ್ವೀಪವನ್ನು ಅಮೆರಿಕಕ್ಕೆ ಬಿಟ್ಟುಕೊಡುವಂತೆ ಡೆನ್ಮಾರ್ಕ್ ಮತ್ತು ಇತರೆ ಯುರೋಪಿಯನ್ ದೇಶಗಳನ್ನು ಮಾತುಕತೆಗೆ ಒಪ್ಪಿಸಲು 'ಸುಂಕ'ವನ್ನೇ ಅಸ್ತ್ರವಾಗಿ ಬಳಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
"ನಾವು ಇಷ್ಟು ದಿನ ಈ ದೇಶಗಳಿಗಾಗಿ ಏನೆಲ್ಲಾ ಮಾಡಿದ್ದರೂ, ಅವರು ನಮ್ಮ ಬೇಡಿಕೆಗೆ ಅಡ್ಡಗಾಲು ಹಾಕಿದ್ದಾರೆ. ಆದರೂ ಅಮೆರಿಕ ಸಂಯುಕ್ತ ಸಂಸ್ಥಾನವು ಡೆನ್ಮಾರ್ಕ್ ಅಥವಾ ಯಾವುದೇ ದೇಶದೊಂದಿಗೆ ಮಾತುಕತೆಗೆ ಸಿದ್ಧವಿದೆ," ಎಂದು ಟ್ರಂಪ್ ಪೋಸ್ಟ್ ಮಾಡಿದ್ದಾರೆ.
1949ರಿಂದಲೂ ಅಮೆರಿಕ ಮತ್ತು ಯುರೋಪ್ ನಡುವೆ ಬಲವಾದ ಮೈತ್ರಿಯಿದೆ. ಆದರೆ, ಟ್ರಂಪ್ ಅವರ ಈ ನಡೆ, ದಶಕಗಳ ಹಳೆಯ ಮಿತ್ರತ್ವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಯಿದೆ. ವಿಶೇಷವೆಂದರೆ, ಮಂಗಳವಾರ (ಜ.20) ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆಯಲಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ (World Economic Forum) ಟ್ರಂಪ್ ಪಾಲ್ಗೊಳ್ಳಲಿದ್ದು, ತಾವು ಬೆದರಿಕೆ ಹಾಕಿರುವ ಯುರೋಪಿಯನ್ ನಾಯಕರನ್ನೇ ಅಲ್ಲಿ ಎದುರುಗೊಳ್ಳಬೇಕಿದೆ.
ಐರೋಪ್ಯ ಒಕ್ಕೂಟದ ಆಕ್ರೋಶ
ಟ್ರಂಪ್ ಅವರ ಈ ಘೋಷಣೆ ಯುರೋಪಿಯನ್ ನಾಯಕರಿಗೆ ಆಘಾತ ತಂದಿದೆ. "ವಾಷಿಂಗ್ಟನ್‌ನಲ್ಲಿ ಅಮೆರಿಕದ ಅಧಿಕಾರಿಗಳೊಂದಿಗೆ ರಚನಾತ್ಮಕ ಸಭೆ ನಡೆದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿರುವುದು ಅಚ್ಚರಿ ಮೂಡಿಸಿದೆ," ಎಂದು ಡೆನ್ಮಾರ್ಕ್ ವಿದೇಶಾಂಗ ಸಚಿವ ಲಾರ್ಸ್ ಲೊಕ್ಕೆ ರಾಸ್ಮುಸ್ಸೆನ್ ಪ್ರತಿಕ್ರಿಯಿಸಿದ್ದಾರೆ.
ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್ ಮತ್ತು ಯುರೋಪಿಯನ್ ಕೌನ್ಸಿಲ್ ಮುಖ್ಯಸ್ಥ ಆಂಟೋನಿಯೊ ಕೋಸ್ಟಾ ಜಂಟಿ ಹೇಳಿಕೆ ನೀಡಿ, "ಸುಂಕ ವಿಧಿಸುವುದು ಟ್ರಾನ್ಸ್-ಅಟ್ಲಾಂಟಿಕ್ ಸಂಬಂಧಗಳನ್ನು ಹಾಳುಮಾಡುತ್ತದೆ ಮತ್ತು ಅಪಾಯಕಾರಿ ಪರಿಸ್ಥಿತಿಗೆ ತಳ್ಳುತ್ತದೆ. ಯುರೋಪ್ ತನ್ನ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ," ಎಂದು ತಿರುಗೇಟು ನೀಡಿದ್ದಾರೆ.
ಗ್ರೀನ್‌ಲ್ಯಾಂಡ್ ಮೇಲೆ ಕಣ್ಣು ಏಕೆ?
ಖನಿಜ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಮತ್ತು ಭೌಗೋಳಿಕವಾಗಿ ಆಯಕಟ್ಟಿನ ಜಾಗದಲ್ಲಿರುವ ಗ್ರೀನ್‌ಲ್ಯಾಂಡ್ ದ್ವೀಪ ಅಮೆರಿಕದ ಪಾಲಾಗಬೇಕು ಎಂಬುದು ಟ್ರಂಪ್ ಅವರ ದೀರ್ಘಕಾಲದ ಆಸೆ. ಅಮೆರಿಕದ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ (Golden Dome missile defense system) ಇದು ಅತ್ಯಗತ್ಯವಾಗಿದ್ದು, ರಷ್ಯಾ ಮತ್ತು ಚೀನಾ ಈ ದ್ವೀಪದ ಮೇಲೆ ಕಣ್ಣಿಡುವ ಸಾಧ್ಯತೆಯಿದೆ ಎಂಬುದು ಅವರ ವಾದ.
1951ರ ರಕ್ಷಣಾ ಒಪ್ಪಂದದ ಪ್ರಕಾರ ಅಮೆರಿಕ ಈಗಾಗಲೇ ಗ್ರೀನ್‌ಲ್ಯಾಂಡ್‌ನಲ್ಲಿ ಪ್ರವೇಶಾವಕಾಶ ಹೊಂದಿದೆ. ವಾಯುವ್ಯ ಭಾಗದ ಪಿಟುಫಿಕ್ ಬಾಹ್ಯಾಕಾಶ ನೆಲೆಯಲ್ಲಿ ಸುಮಾರು 200 ಅಮೆರಿಕನ್ ಸೈನಿಕರಿದ್ದಾರೆ. ಆದರೆ, ಟ್ರಂಪ್‌ಗೆ ದ್ವೀಪದ ಸಂಪೂರ್ಣ ಮಾಲೀಕತ್ವ ಬೇಕಿದೆ.
ಪ್ರತಿಭಟನೆಯ ಕಾವು
ಟ್ರಂಪ್ ನಿರ್ಧಾರದ ವಿರುದ್ಧ ಗ್ರೀನ್‌ಲ್ಯಾಂಡ್ ರಾಜಧಾನಿ ನ್ಯೂಕ್ ಮತ್ತು ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್‌ನಲ್ಲಿ ಭಾರಿ ಪ್ರತಿಭಟನೆಗಳು ನಡೆದಿವೆ. ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನೂರಾರು ಜನರು ಬೀದಿಗಿಳಿದು, "ಗ್ರೀನ್‌ಲ್ಯಾಂಡ್ ಮಾರಾಟಕ್ಕಿಲ್ಲ" (Greenland is not for sale), "ಹ್ಯಾಂಡ್ಸ್ ಆಫ್" ಎಂಬ ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಯಾವುದೇ ಬೆದರಿಕೆಗಳಿಗೆ ನಾವು ಬಗ್ಗುವುದಿಲ್ಲ. ಉಕ್ರೇನ್ ಆಗಲಿ, ಗ್ರೀನ್‌ಲ್ಯಾಂಡ್ ಆಗಲಿ, ಬೆದರಿಕೆಯ ತಂತ್ರ ನಡೆಯುವುದಿಲ್ಲ," ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

