ಪ್ರಧಾನಿ ಮೋದಿ ವಿರುದ್ಧ ಶ್ಯಾಮ್ ರಂಗೀಲಾ ಸ್ಪರ್ಧೆ

Update: 2024-05-02 10:42 GMT

ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸ್ಪರ್ಧಿಸುವುದಾಗಿ ಹಾಸ್ಯನಟ ಶ್ಯಾಮ್ ರಂಗೀಲಾ ಅವರು ಬುಧವಾರ ಹೇಳಿದ್ದಾರೆ. 

ರಂಗೀಲಾ ಅವರು ಎಕ್ಸ್‌ ನಲ್ಲಿ ʻವಾರಾಣಸಿಯಿಂದ ಸ್ಪರ್ಧಿಸುವ ಘೋಷಣೆ ನಂತರ ನಿಮ್ಮೆಲ್ಲರಿಂದ ಸಿಗುತ್ತಿರುವ ಪ್ರೀತಿಯಿಂದ ಉತ್ಸುಕನಾಗಿದ್ದೇನೆ. ವಾರಾಣಸಿ ತಲುಪಿದ ನಂತರ ವೀಡಿಯೊ ಸಂದೇಶದ ಮೂಲಕ ನನ್ನ ಅಭಿಪ್ರಾಯಗಳನ್ನು ತಿಳಿಸುತ್ತೇನೆ,ʼ ಎಂದಿದ್ದರು. 

ಹಿಂದಿನ ಪೋಸ್ಟ್‌ನಲ್ಲಿ, ʻನಾನು ವಾರಾಣಸಿಯಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ. ಏಕೆಂದರೆ, ಈಗ ಯಾರು ನಾಮಪತ್ರ ಹಿಂಪಡೆಯುತ್ತಾರೆ ಎಂಬುದು ಯಾರಿಗೂ ಖಚಿತವಾಗಿಲ್ಲʼ ಎಂದು ಬರೆದಿದ್ದರು. ಇತ್ತೀಚೆಗೆ ಸೂರತ್ ಮತ್ತು ಇಂದೋರ್ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧೆಯಿಂದ ಹಿಂದೆ ಸರಿದಿರುವುದನ್ನುಉಲ್ಲೇಖಿಸಿ). ʻನನ್ನ ಉಮೇದುವಾರಿಕೆಯು ವಾರಾಣಸಿಯ ಜನರಿಗೆ ಒಂದು ಆಯ್ಕೆಯನ್ನು ನೀಡುತ್ತದೆ. ಈ ವಾರ ಅಲ್ಲಿಗೆ ತೆರಳಿ, ನಾಮಪತ್ರ ಸಲ್ಲಿಸಲಿದ್ದೇನೆ,ʼ ಎಂದರು. 

ಜನರ ಬೆಂಬಲ ಕೋರಿಕೆ: ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋ ಸಂದೇಶದಲ್ಲಿ ʻಪ್ರಧಾನಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡಲು ವಾರಾಣಸಿಗೆ ಬರುತ್ತಿದ್ದೇನೆʼ ಎಂದು ಹೇಳಿದ್ದಾರೆ. 

ʻಚುನಾವಣೆ ಪ್ರಕ್ರಿಯೆ ಬಗ್ಗೆ ಗೊತ್ತಿಲ್ಲ. ಈ ಚುನಾವಣೆಯಲ್ಲಿ ಸ್ಪರ್ಧಿಸಲು ಜನರ ಸಹಾಯ ಬೇಕಾಗುತ್ತದೆ. ನನ್ನ ಬಳಿ ಚುನಾವಣಾ ಬಾಂಡ್‌ಗಳೂ ಇಲ್ಲ. ಹಾಗಾಗಿ, ನನಗೂ ಸ್ವಲ್ಪ ಹಣ ಬೇಕು. ಜಾರಿ ನಿರ್ದೇಶನಾಲಯ (ಇಡಿ) ಇತ್ಯಾದಿ ಬಗ್ಗೆ ಚಿಂತಿಸುವುದಿಲ್ಲ.ನನ್ನ ಖಾತೆಗಳಲ್ಲಿ ಅವರಿಗೆ ಏನೂ ಸಿಗುವುದಿಲ್ಲ. ಮೈ ಫಕೀ‌ರ್, ಜೋಲಾ ಉಟಾ ಕರ್ ಚಲ್ ದೇಂಗೆಜಿ (ನಾನು ಸನ್ಯಾಸಿ. ಹೆಗಲ ಚೀಲ ಎತ್ತಿಕೊಂಡು ಹೊರಡುತ್ತೇನೆ).ʼ 

ಮಿಮಿಕ್ರಿ ಕುಶಲ: ರಾಜಸ್ಥಾನದ ಪಿಲಿಬಂಗಾದ ಮನಕ್ತೇರಿ ಗ್ರಾಮದ ಶ್ಯಾಮ್ ರಂಗೀಲಾ, ರಾಜಕೀಯ ವ್ಯಕ್ತಿಗಳನ್ನು ಅನುಕರಣೆ  ಮೂಲಕ ಗುರುತಿಸಲ್ಪಟ್ಟಿದ್ದಾರೆ. ʻದಿ ಗ್ರೇಟ್ ಇಂಡಿಯನ್ ಲಾಫರ್ ಚಾಲೆಂಜ್‌ʼನಲ್ಲಿ ಪ್ರಧಾನಿ ಮೋದಿ ಮತ್ತು ಸಂಸದ ರಾಹುಲ್ ಗಾಂಧಿ ಅವರನ್ನು ಅನುಕರಿಸುವ ಮೂಲಕ ಖ್ಯಾತಿ ಗಳಿಸಿ ದರು. ಅವರ ವೃತ್ತಿಜೀವನ  2017ರಲ್ಲಿ ಉನ್ನತಿ ಕಂಡಿತು. ರಂಗೀಲಾ ವಾರಾಣಸಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ತಮ್ಮ ಹಿಂಬಾಲಕರನ್ನು ಇತ್ತೀಚೆಗೆ ಕೇಳಿದ್ದರು. ಆದರೆ, ರಾಜಕೀಯ ಅವರಿಗೆ ಹೊಸದಲ್ಲ. 2022 ರಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಸೇರಿದರು. 

ಒಂದು ಕಾಲದಲ್ಲಿ ಮೋದಿ ಅಭಿಮಾನಿ: ತಾವು ಪ್ರಧಾನಿ ಮೋದಿಯವರ ಹಿಂಬಾಲಕ ಎಂದು 2014ರಲ್ಲಿ ಹೇಳಿಕೊಂಡಿದ್ದ ಅವರು, ಬೆಂಬಲಿಸುವ ಅನೇಕ ವಿಡಿಯೋ ಹಂಚಿಕೊಂಡಿ ದ್ದರು. ʻರಾಹುಲ್ ಗಾಂಧಿ ಮತ್ತು ಅರವಿಂದ್ ಕೇಜ್ರಿವಾಲ್ ವಿರುದ್ಧವೂ ವಿಡಿಯೋ ಹಂಚಿಕೊಂಡಿದ್ದೆ. ವಿಡಿಯೋ ನೋಡಿದವರು ಮುಂದಿನ 70 ವರ್ಷ ಈತ ಬಿಜೆಪಿಗೆ ಮತ ಹಾಕುತ್ತಾನೆ ಎಂದುಕೊಳ್ಳಬಹುದು. ಆದರೆ, ಕಳೆದ 10 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆʼ.

Tags:    

Similar News