ದೆಹಲಿಯಲ್ಲಿ ಮಾಲಿನ್ಯದ ಕಾಟ ಮುಂದುವರಿಕೆ: 'ಅತ್ಯಂತ ಕಳಪೆ' ಮಟ್ಟದಲ್ಲೇ ಗಾಳಿಯ ಗುಣಮಟ್ಟ
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಸೋಮವಾರ ಬೆಳಿಗ್ಗೆ ದೆಹಲಿಯ ಒಟ್ಟಾರೆ ಎಕ್ಯೂಐ (AQI) 396 ರಷ್ಟಿತ್ತು. ಇದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಮಟ್ಟವಾಗಿದೆ.
ಶುದ್ದಗಾಳಿಗಾಗಿ ಯುವಕರು ಪ್ರತಿಭಟನೆ ನಡೆಸಿದರು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಸಮಸ್ಯೆ ಸೋಮವಾರವೂ (ನ.24) ಮುಂದುವರಿದಿದ್ದು, ವಾಯು ಗುಣಮಟ್ಟ ಸೂಚ್ಯಂಕ (AQI) ಮತ್ತೆ 'ಅತ್ಯಂತ ಕಳಪೆ' (Very Poor) ವಿಭಾಗದಲ್ಲಿ ದಾಖಲಾಗಿದೆ. ಜನ ಸಾಮಾನ್ಯರು ಉಸಿರಾಡಲು ಪರದಾಡುವಂತಾಗಿದ್ದು, ಮಾಲಿನ್ಯದಿಂದ ಸದ್ಯಕ್ಕೆ ಮುಕ್ತಿ ಸಿಗುವ ಲಕ್ಷಣಗಳು ಕಾಣುತ್ತಿಲ್ಲ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಸೋಮವಾರ ಬೆಳಿಗ್ಗೆ ದೆಹಲಿಯ ಒಟ್ಟಾರೆ ಎಕ್ಯೂಐ (AQI) 396 ರಷ್ಟಿತ್ತು. ಇದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಮಟ್ಟವಾಗಿದೆ.
ಕುಸಿದ ತಾಪಮಾನ, ಮಂಜಿನ ಮುನ್ಸೂಚನೆ
ಒಂದೆಡೆ ಮಾಲಿನ್ಯವಾದರೆ, ಇನ್ನೊಂದೆಡೆ ಚಳಿಯ ಪ್ರಮಾಣವೂ ಹೆಚ್ಚಾಗಿದೆ. ಕನಿಷ್ಠ ತಾಪಮಾನವು ವಾಡಿಕೆಗಿಂತ 2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿ 9.3 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಬೆಳಿಗ್ಗೆ 8.30ರ ಸುಮಾರಿಗೆ ಶೇ.97 ರಷ್ಟು ತೇವಾಂಶ (Humidity) ದಾಖಲಾಗಿದೆ. ಹಗಲಿನಲ್ಲಿ ಸಾಧಾರಣ ಮಂಜು ಕವಿಯುವ ಸಾಧ್ಯತೆಯಿದ್ದು, ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.