Wayanad Landslide | ʼದ ಫೆಡರಲ್ʼ ಪ್ರತ್ಯಕ್ಷ ವರದಿ: ಪ್ರಕೃತಿಯ ರುದ್ರನರ್ತನದ ಎದುರು ಹುಲುಮಾನವನ ಅದಮ್ಯ ಸ್ಥೈರ್ಯದ ಕಥೆ
ಈ ಕಟು ಸವಾಲಿನ ರಕ್ಷಣಾ ಕಾರ್ಯಾಚರಣೆಯಲ್ಲಿ ಎದ್ದು ಕಾಣುವುದು ಕಾಯಬೇಕಾದ ಪ್ರಕೃತಿಯೇ ಮುನಿದು ರುದ್ರನರ್ತನ ನಡೆಸುತ್ತಿರುವಾಗಲೂ ಹುಲು ಮಾನವನ ಬದುಕುವ ಛಲ, ಸ್ಥೈರ್ಯ ಮತ್ತು ಅದಮ್ಯ ಜೀವನೋತ್ಸಾಹ.;
ನಿರಂತರ ಮಳೆ, ಬೆಟ್ಟಗಳ ನೆತ್ತಿಗೆ ಮೈಚಾಚಿ ಕೆಸರು, ಕಲ್ಲು-ಮರ-ಮಟ್ಟಿಗಳನ್ನು ಕೊಚ್ಚಿಕೊಂಡು ಹೋಗುತ್ತಿರುವ ಚಲಿಯಾರ್ ನದಿ (ಸ್ಥಳೀಯವಾಗಿ ಮಂಡುಕ್ಕೈ ನದಿ ಎನ್ನುತ್ತಾರೆ), ಮತ್ತು ಕೆಸರಿನಡಿ ಹೂತುಹೋಗಿರುವ ನೂರಾರು ಮನೆಗಳು, ಮನೆಯಲ್ಲೇ ಮಣ್ಣಾದ ಜೀವಗಳು.. - ಇದು ಕೆಲವೇ ದಿನಗಳ ಹಿಂದೆ ಜಗತ್ತಿನ ಅತ್ಯಂತ ಸುಂದರ ಹಸಿರ ಕಣಿವೆಯಾಗಿದ್ದ ವಯನಾಡಿನ ಚೋರಲ್ಮಲಾ ಮತ್ತು ಮುಂಡುಕ್ಕೈ ಕಣಿವಯೆ ಸದ್ಯದ ಸ್ಥಿತಿ.
ಈಗ ಅಲ್ಲಿ ಪ್ರಳಯ ಸದೃಶ ರಣರಂಗದ ನಡುವೆ ಉಸಿರು ಕಳೆದುಕೊಂಡ ಮತ್ತು ಉಸಿರು ಹಿಡಿದಿಟ್ಟುಕೊಂಡಿರುವ ಜೀವಗಳ ರಕ್ಷಣೆಗಾಗಿ ಸಾವಿರಾರು ಮಂದಿ ಜೀವರಕ್ಷಕರು ಸುರಿವ ಮಳೆಯ ನಡುವೆಯೂ ಬೆವರು ಸುರಿಸುತ್ತಾ ದುಡಿಯುತ್ತಿದ್ದಾರೆ. ದಣಿವರಿಯದ ಆ ಆಪತ್ಬಾಂಧವರ ಬೃಹತ್ ಶೋಧ ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
ದುರಂತದ ಪ್ರಮಾಣ ಲೆಕ್ಕಕ್ಕೆ ಸಿಗದು ಮತ್ತು ಅದನ್ನು ಎದುರಿಸಲು ಸೇನೆಯ ಸಂಯೋಜಿತ ಪಡೆಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಗಳು ನಡೆಸುತ್ತಿರುವ ತ್ವರಿತ ಮತ್ತು ಸಮಯೋಚಿತ ಸಮಗ್ರ ಸಾಹಸಗಳು ಕೂಡ ಎಣೆಯಿಲ್ಲದ್ದು.
ರಕ್ಷಣಾತಂಡಗಳ ಅವಿರತ ಶ್ರಮ
ರಕ್ಷಣಾ ತಂಡಗಳು ಜನರ ರಕ್ಷಣೆಗೆ ಅವಿರತ ಪ್ರಯತ್ನ ನಡೆಸಿವೆ. ಅದರಲ್ಲೂ ವಿಶೇಷವಾಗಿ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಮತ್ತು ಕೇರಳ ರಾಜ್ಯ ಘಟಕಗಳ ಮಿಲಿಟರಿ ಸಿಬ್ಬಂದಿಗಳು ಕೈಗೊಂಡ ಕಠಿಣ ಕೆಲಸಗಳಿಗೆ ʼದ ಫೆಡರಲ್ ಕರ್ನಾಟಕʼ ಸಾಕ್ಷಾತ್ ಸಾಕ್ಷಿಯಾಗಿದೆ. ಮಂಗಳವಾರ ಮುಂಜಾನೆ ವಿಪತ್ತು ಅಪ್ಪಳಿಸಿದಂದಿನಿಂದಲೇ ಅವರು ದಣಿವರಿಯಿಲ್ಲದೆ ಕೆಲಸ ಮಾಡುತ್ತಿದ್ದಾರೆ, ನೂರಾರು ಜೀವಗಳನ್ನು ಉಳಿಸಿದ್ದಾರೆ ಮತ್ತು ಕಲ್ಲು, ಮಣ್ಣು, ಮರ-ದಿಣ್ಣೆಗಳ ಬೃಹತ್ ರಾಶಿಯ ಅಡಿಯಲ್ಲಿ ಹೂತುಹೋಗಿರುವ ದೇಹಗಳನ್ನು ರಕ್ಷಿಸುತ್ತಿದ್ದಾರೆ.
ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್‌ನ ಶ್ರೇಣಿಯ ಅಧಿಕಾರಿಯಾದ ಶ್ಜಿಲ್ ಕೆ ಅವರು ʼದಿ ಫೆಡರಲ್ ಕರ್ನಾಟಕʼದೊಂದಿಗೆ ಕಾರ್ಯಾಚರಣೆಯ ವಿಶೇಷ ಒಳನೋಟವನ್ನು ಹಂಚಿಕೊಂಡಿದ್ದಾರೆ. “ನಮ್ಮ ತಂಡ ಮಂಗಳವಾರದಿಂದ ರಕ್ಷಣಾ ಕಾರ್ಯಾಚರಣೆಗೆ ಇಳಿದಿದೆ. ನಾವು ಹಲವಾರು ಶವಗಳನ್ನು ಹೊರತೆಗೆದಿದ್ದೇವೆ ಮತ್ತು ನೂರಾರು ಜನರನ್ನು ರಕ್ಷಿಸಿದ್ದೇವೆ. ಪರಿಸ್ಥಿತಿ ಭೀಕರವಾಗಿದೆ. ಆದರೆ ನಾವು ಸಹಾಯ ಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡಲು ನಾವು ಬದ್ಧರಾಗಿದ್ದೇವೆʼʼ ಎಂದು ಹೇಳಿದರು.
ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ಕೇರಳ ಮತ್ತು ನೆರೆಯ ರಾಜ್ಯಗಳ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳೂ ಈ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ದು, ಅವರ ಪಾತ್ರವೂ ನಿರ್ಣಾಯಕವಾಗಿದೆ. ಈ ತಂಡಗಳು ರಕ್ಷಣಾ ಪಡೆಗಳೊಂದಿಗೆ ಕೈಜೋಡಿಸಿವೆ. ಈ ಸವಾಲಿನ ಪರಿಸ್ಥಿತಿಯನ್ನು ನಿಭಾಯಿಸಲು ಬೆಂಬಲ ಮತ್ತು ಪರಿಣತಿಯ ದೃಢವಾದ ಕಾರ್ಯಯೋಜನೆ ರೂಪಿಸಿಕೊಂಡಿವೆ. ಈ ಬಿಕ್ಕಟ್ಟಿನ ಸಮಯದಲ್ಲಿ ನೆರೆಯ ರಾಜ್ಯಗಳ ಸಹಾಯ ಮತ್ತು ಸಹಕಾರದ ಪ್ರಯತ್ನವು ರಾಜ್ಯಗಳ ನಡುವಿನ ಏಕತೆ ಮತ್ತು ಒಗ್ಗಟ್ಟನ್ನು ಒತ್ತಿಹೇಳುತ್ತದೆ.
ಪ್ರಕೃತಿಯ ಕ್ರೋಧ
ಎಡೆಬಿಡದೆ ಸುರಿಯುತ್ತಿರುವ ಮಳೆಯೇ ರಕ್ಷಣಾ ತಂಡಗಳ ಮುಂದಿರುವ ದೊಡ್ಡ ಸವಾಲು. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಲಿಯಾರ್ ನದಿಯು ತನ್ನ ವಾಡಿಕೆಯ ವಿಸ್ತಾರಕ್ಕಿಂತ ಹತ್ತಾರು ಪಟ್ಟು ಹಿಗ್ಗಿದ್ದು, ಇಡೀ ಕಣಿವೆಯನ್ನು ತುಂಬಿ ಹರಿಯಲು ಕಾರಣವಾಗಿದೆ. ಈ ಕ್ಷಿಪ್ರ ನೀರಿನ ಹರಿವು ಮತ್ತು ಸಂಪೂರ್ಣ ಅದುರುತ್ತಿರುವ ಭೂಮಿಯು ರಕ್ಷಣಾ ಕಾರ್ಯಾಚರಣೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಈ ಸವಾಲುಗಳ ಹೊರತಾಗಿಯೂ, ಭಾರತೀಯ ಸೇನೆಯು ಈ ಕಠಿಣ ಪರಿಸ್ಥಿತಿಯಲ್ಲೂ ಕಾರ್ಯಾಚರಣೆಯನ್ನು ಮುಂದುವರಿಸುವ ಸಲಕರಣೆ ಮತ್ತು ಸಂಪನ್ಮೂಲವನ್ನು ಹೊಂದಿದೆ. ನೀರಿನ ಅಡಿಯಲ್ಲಿ ಮತ್ತು ಭೂಕುಸಿತದಿಂದ ದ್ವೀಪದಂತೆ ನಿರ್ಮಾಣವಾಗಿರುವ ಪ್ರದೇಶಗಳಲ್ಲಿನ ಮನೆಗಳನ್ನು ತಲುಪಲು ಮತ್ತು ಪತ್ತೆಹಚ್ಚಲು ಹಲವಾರು ತಾತ್ಕಾಲಿಕ ಸೇತುವೆಗಳನ್ನು ರಚಿಸಿದೆ. ಈ ಕ್ಲಿಷ್ಟಕರ ಪರಿಸ್ಥಿತಿ ನಿರ್ವಹಿಸಲು ಅವರ ಈ ವಿನೂತನ ಪ್ರಯತ್ನಗಳೂ ರಕ್ಷಣಾ ಕಾರ್ಯಾಚರಣೆಗೆ ಸಹಾಯಕವಾಗಿವೆ.
ಸ್ವಯಂಸೇವಕರು, ಇತರ ಸಂಘಟನೆಗಳು
ಅಧಿಕೃತ ರಕ್ಷಣಾ ತಂಡಗಳು ನಿರ್ಣಾಯಕವಾಗಿದ್ದರೂ, ಅವರೊಂದಿಗೆ ಕೈಜೋಡಿಸಿರುವ ಸ್ವಯಂಸೇವಕರ ಕೊಡುಗೆಗಳನ್ನು ಕಡೆಗಣಿಸಲಾಗುವುದಿಲ್ಲ. ಮಂಗಳವಾರದಿಂದ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ), ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ), ಮತ್ತು ಸೇವಾ ಭಾರತಿ ಸೇರಿದಂತೆ ವಿವಿಧ ಸಂಘಟನೆಗಳ ಸ್ವಯಂಸೇವಕರು ರಕ್ಷಣಾ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ. ಟ್ರಾಫಿಕ್ ನಿರ್ವಹಿಸುವಲ್ಲಿ, ಆಂಬ್ಯುಲೆನ್ಸ್‌ಗಳ ಚಲನೆಯನ್ನು ಸುಗಮಗೊಳಿಸುವಲ್ಲಿ ಮತ್ತು ರಕ್ಷಣಾ-ಕಾರ್ಯಾಚರಣೆ ವಾಹನಗಳು ಕಲ್ಪೆಟ್ಟಾ, ಮೆಪ್ಪಾಡಿ, ಚೋರಲ್ಮಲಾ, ಮುಂಡಕ್ಕೈ ಮತ್ತು ಪಟ್ಟಮಲಗಳಿಗೆ ಹೋಗುವ ಅಪಾಯಕಾರಿ ರಸ್ತೆಗಳಲ್ಲಿ ಸಾಗುವಾಗ ಅಡ್ಡಿಆತಂಕಗಳು ಎದುರಾಗದಂತೆ ನಿಭಾಯಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.
ತುರ್ತು ಸೇವೆಗಳು ಮತ್ತು ನೆರೆ ಪೀಡಿತ ಪ್ರದೇಶಗಳಿಗೆ ತ್ವರಿತವಾಗಿ ತಲುಪಲು ಅವರ ಸೇವೆ ಸಹಾಯಕವಾಗಿದೆ. ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯ ಸಂತ್ರಸ್ತರಿಗೆ ಆಹಾರ ಮತ್ತು ನೀರನ್ನು ವಿತರಿಸುವ ಕೆಲಸವನ್ನು ಸ್ವಯಂಸೇವಕರು ಮಾಡುತ್ತಿದ್ದಾರೆ. ಅವರ ಈ ಕಾರ್ಯ ಸಂತ್ರಸ್ತರಿಗೆ ಹೆಚ್ಚು ಅಗತ್ಯವಿರುವ ಪರಿಹಾರ ಮತ್ತು ಸಾಂತ್ವನವನ್ನು ನೀಡುತ್ತಿದೆ.
ಸ್ವಯಂ ಸೇವಕರು ಆಸ್ಪತ್ರೆಗಳಿಗೆ ತೆರಳಿ ಸಂತ್ರಸ್ತರ ಕುಟುಂಬಗಳು ಮತ್ತು ಸಂಬಂಧಿಕರಿಗೆ ಅಗತ್ಯ ನೆರವು ನೀಡುತ್ತಿದ್ದಾರೆ. ಮೃತದೇಹಗಳನ್ನು ಗುರುತಿಸುವಲ್ಲಿ ಸಹಾಯ ಮಾಡುವುದು, ಮರಣೋತ್ತರ ಪರೀಕ್ಷೆಯ ಕಾರ್ಯವಿಧಾನಗಳನ್ನು ಸಂಯೋಜಿಸುವುದು ಮತ್ತು ಅಂತಿಮ ವಿಧಿವಿಧಾನಗಳಿಗಾಗಿ ಸ್ಮಶಾನಗಳಿಗೆ ಶವ ಸಾಗಣೆಯನ್ನು ಖಚಿತಪಡಿಸಿಕೊಳ್ಳುವುದನ್ನು ಸಹ ಅವರು ಮಾಡುತ್ತಿದ್ದಾರೆ. ಈ ಸ್ವಯಂಸೇವಕರು ತೋರಿದ ಸಹಾನುಭೂತಿ ಮತ್ತು ಸಮರ್ಪಣೆಯು ಪ್ರತಿಕೂಲ ಪರಿಸ್ಥಿತಿಯಲ್ಲಿ ಸಾಮುದಾಯಿಕ ಮತ್ತು ಮಾನವೀಯತೆಯ ಮನೋಭಾವಕ್ಕೆ ಸಾಕ್ಷಿಯಾಗಿದೆ.
ಸಹಾಯ ಮನೋಭಾವ
ಎಸ್‌ಡಿಪಿಐ ಸ್ವಯಂಸೇವಕ ಅಬ್ರಹಾಂ ಕೋಜಿ ಅವರು ತಮ್ಮ ಅನುಭವವನ್ನು ʼದ ಫೆಡರಲ್ ಕರ್ನಾಟಕʼದೊಂದಿಗೆ ಹಂಚಿಕೊಂಡಿದ್ದು, ʻʻಇಲ್ಲಿನ ವಿನಾಶವು ಹೃದಯವಿದ್ರಾವಕವಾಗಿದೆ. ರಸ್ತೆಗಳನ್ನು ತೆರವುಗೊಳಿಸುವ ಮತ್ತು ಸಂಚಾರವನ್ನು ನಿರ್ದೇಶಿಸುವ ಮೂಲಕ ಅಧಿಕೃತ ರಕ್ಷಣಾ ತಂಡಗಳನ್ನು ಬೆಂಬಲಿಸಲು ನಾವು ನಮ್ಮ ಕೈಲಾದಷ್ಟು ಮಾಡುತ್ತಿದ್ದೇವೆ. ಅಂತಹ ಸಂದರ್ಭಗಳಲ್ಲಿ ಪ್ರತಿ ನಿಮಿಷವೂ ಮುಖ್ಯವಾಗುತ್ತದೆ ಮತ್ತು ಸಹಾಯ ಮಾಡಲು ನಾವು ಏನು ಬೇಕಾದರೂ ಮಾಡಲು ಸಿದ್ದರಿದ್ದೇವೆʼʼ ಎಂದು ಹೇಳಿದರು.
ಆಂಬ್ಯುಲೆನ್ಸ್ ವಾಹನಗಳ ವೈದ್ಯಕೀಯ ಸಿಬ್ಬಂದಿಗೆ ಸಹಾಯ ಮಾಡುವ ಸ್ವಯಂಸೇವಕ ತಂಡದ ಭಾಗವಾಗಿರುವ ವಿನ್ಸಿ ಕೆ ಅವರು ಮಾತನಾಡಿ, “ನಮ್ಮ ತಂಡವು ಆಂಬ್ಯುಲೆನ್ಸ್‌ಗಳನ್ನು ಯಾವುದೇ ಸಮಸ್ಯೆಗಳಿಲ್ಲದೇ, ತಡಮಾಡದೇ ನಿರ್ದಿಷ್ಟ ಸ್ಥಳಗಳಿಗೆ ತಲುಪಿಸಲು ಸಹಾಯ ಮಾಡುತ್ತದೆ. ಘಟನಾ ಸ್ಥಳಕ್ಕೆ ಬೇಕಾದ ಸರಕು- ಸರಂಜಾಮು ಸಾಗಿಸುವುದರಿಂದ ಹಿಡಿದು ಪ್ರಥಮ ಚಿಕಿತ್ಸೆ ನೀಡುವವರೆಗೆ ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಿರುವ ಸಲಕರಣೆ, ಸಹಾಯ ನೀಡಲು ನಾವು ಸಹಾಯ ಮಾಡುತ್ತೇವೆ. ಇದು ಸಂಘಟಿತ ಪ್ರಯತ್ನವಾಗಿದೆʼʼ ಎಂದು ವಿನ್ಸಿ ವಿವರಿಸಿದರು.
ಈ ಕಟು ಸವಾಲಿನ ರಕ್ಷಣಾ ಕಾರ್ಯಾಚರಣೆಯಲ್ಲಿ ಎದ್ದು ಕಾಣುವುದು ಕಾಯಬೇಕಾದ ಪ್ರಕೃತಿಯೇ ಮುನಿದು ರುದ್ರನರ್ತನ ನಡೆಸುತ್ತಿರುವಾಗಲೂ ಹುಲು ಮಾನವನ ಬದುಕುವ ಛಲ, ಸ್ಥೈರ್ಯ ಮತ್ತು ಅದಮ್ಯ ಜೀವನೋತ್ಸಾಹ. ಮಿಲಿಟರಿ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಇತರ ಸಿಬ್ಬಂದಿ ಮತ್ತು ಸ್ವಯಂಸೇವಕರ ಪ್ರಯತ್ನಗಳು ಅದಕ್ಕೆ ಸಾಕ್ಷಿಯಾಗಿದೆ. ಮೂರನೇ ದಿನವೂ ಭೀಕರ ಪರಿಸ್ಥಿತಿ ಮತ್ತು ವ್ಯತಿರಿಕ್ತ ಹವಾಮಾನ ಮುಂದುವರಿಯುತ್ತಿದ್ದರೂ ಈ ಜೀವರಕ್ಷಕರು ತಮ್ಮ ಅಚಲವಾದ ಸಮರ್ಪಣಾ ಭಾವನೆ ಕುಂದದಂತೆ ಜೀವಂತವಾಗಿರಿಸಿಕೊಂಡಿದ್ದಾರೆ.