ಲೋಕಸಭಾ ಚುನಾವಣೆ ಪ್ರಚಾರ: ಅರವಿಂದ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು

ಲೋಕಸಭೆ ಚುನಾವಣೆಯ ಅಂತಿಮ ಹಂತದ ಮರುದಿನ ಜೂನ್ 2 ರೊಳಗೆ ಶರಣಾಗುವಂತೆ ಆಮ್ ಆದ್ಮಿ ಪಕ್ಷದ ನಾಯಕನಿಗೆ ಸುಪ್ರೀಂ ಕೋರ್ಟ್ ಹೇಳಿದೆ. ದೆಹಲಿ ಮದ್ಯದ ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯವು ಬಂಧಿಸಿತ್ತು.

Update: 2024-05-10 11:08 GMT

ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಶುಕ್ರವಾರ (ಮೇ 10) ದೆಹಲಿ ಮುಖ್ಯಮಂತ್ರಿ ಅರವಿಂದ ಳಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಜೂನ್ 1 ರವರೆಗೆ ಮಧ್ಯಂತರ ಜಾಮೀನು ನೀಡಿದೆ. ಅವರು ಕಚೇರಿ ಅಥವಾ ಸಚಿವಾಲಯಕ್ಕೆ ಭೇಟಿ ನೀಡುವುದನ್ನು ಹಾಗೂ ಲೆಫ್ಟಿನೆಂಟ್ ಗವರ್ನರ್ ಅನುಮೋದನೆಯನ್ನು ಪಡೆಯದೆ ಅಧಿಕೃತ ಕಡತಗಳಿಗೆ ಸಹಿ ಹಾಕುವುದನ್ನು ನಿರ್ಬಂಧಿಸಿದೆ.

ಲೋಕಸಭೆ ಚುನಾವಣೆಯ ಅಂತಿಮ ಹಂತದ ಮರುದಿನ ಜೂನ್ 2 ರೊಳಗೆ ಶರಣಾಗುವಂತೆ ಆಮ್ ಆದ್ಮಿ ಪಕ್ಷದ ನಾಯಕನಿಗೆ ಸುಪ್ರೀಂ ಕೋರ್ಟ್ ಹೇಳಿದೆ. ದೆಹಲಿ ಮದ್ಯದ ಅಬಕಾರಿ ನೀತಿ ಹಗರಣದಲ್ಲಿ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯವು ಬಂಧಿಸಿತ್ತು.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧಿತರಾಗಿರುವ ಕೇಜ್ರಿವಾಲ್ ಜೂನ್ 2 ರಂದು ಶರಣಾಗಬೇಕು ಮತ್ತು ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠ ಹೇಳಿದೆ.  50 ದಿನಗಳ ಬಂಧನದ ನಂತರ ಲೋಕಸಭೆ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಳ್ಳಲು ಅವರನ್ನು 21 ದಿನಗಳ ಕಾಲ ಮುಕ್ತಗೊಳಿಸಿದೆ. 

ಆದರೆ ಜೂನ್ 4 ರಂದು ಮತ ಎಣಿಕೆಯಾದ ಒಂದು ದಿನದ ನಂತರ, ಜೂನ್ 5 ರವರೆಗೆ ಮಧ್ಯಂತರ ಜಾಮೀನು ನೀಡಬೇಕೆಂಬ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ (ಕೇಜ್ರಿವಾಲ್ ಪರ ಹಾಜರಾಗಿ) ಮನವಿಯನ್ನು ಪೀಠ ತಿರಸ್ಕರಿಸಿತು.

ಪ್ರಕರಣದಲ್ಲಿ ತನ್ನ ಬಂಧನವನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್ ಕಳೆದ ತಿಂಗಳು ನೀಡಿದ ತೀರ್ಪನ್ನು ಪ್ರಶ್ನಿಸಿ ಕೇಜ್ರಿವಾಲ್ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ವಿಷಯವು 2021-22 ಕ್ಕೆ ದೆಹಲಿ ಸರ್ಕಾರವು ಈಗ ರದ್ದುಗೊಳಿಸಿರುವ ಅಬಕಾರಿ ನೀತಿಯ ರಚನೆ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ಜಾರಿ ನಿರ್ದೇಶನಾಲಯ (ಇಡಿ) ವಕೀಲರ ವಾದವನ್ನು ತಿರಸ್ಕರಿಸಿತು.ʻಚುನಾವಣೆ ಪ್ರಚಾರಕ್ಕಾಗಿ ಮಧ್ಯಾಂತರ ಜಾಮೀನು ನೀಡಿದ ಯಾವುದೇ ಪೂರ್ವನಿದರ್ಶನವಿಲ್ಲ. ಅವರಿಗೆ ಜಾಮೀನು ನೀಡುವುದು ಜನಸಾಮಾನ್ಯರಿಗೆ ಹೋಲಿಸಿದರೆ ರಾಜಕಾರಣಿಗಳಿಗೆ ವಿಶೇಷ ಸ್ಥಾನ ನೀಡಿದಂತೆ ಆಗಲಿದೆʼ ಎಂಬ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ.

ʻಮಧ್ಯಂತರ ಜಾಮೀನು/ಬಿಡುಗಡೆ ನೀಡುವಾಗ ನ್ಯಾಯಾಲಯಗಳು ವ್ಯಕ್ತಿ ಮತ್ತು ಸಂದರ್ಭದ ವಿಶಿಷ್ಟತೆಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತವೆ. ಅದನ್ನು ನಿರ್ಲಕ್ಷಿಸುವುದು ಅನೀತಿ ಮತ್ತು ತಪ್ಪು. ಲೋಕಸಭೆ ಚುನಾವಣೆ ಅತ್ಯಂತ ಮಹತ್ವದ ಮತ್ತು ಪ್ರಮುಖ ಘಟನೆʼ ಎಂದು ಹೇಳಿತು.  ʻಅವರ ಮೇಲೆ ಗಂಭೀರ ಆರೋಪ ಮಾಡಲಾಗಿದೆ. ಆದರೆ, ಅವರನ್ನು ಅಪರಾಧಿ ಎಂದು ಘೋಷಿಸಿಲ್ಲ. ಯಾವುದೇ ಕ್ರಿಮಿನಲ್ ಅಪರಾಧದ ಹಿನ್ನೆಲೆಯಿಲ್ಲ ಮತ್ತು ಸಮಾಜಕ್ಕೆ ಬೆದರಿಕೆ ಇಲ್ಲ. ಅವರ ಬಂಧನದ ಕಾನೂನುಬದ್ಧತೆ ಮತ್ತು ಸಿಂಧುತ್ವವು ಉನ್ನತ ನ್ಯಾಯಾಲಯದ ಎದುರು ಇದೆ. ಅದು ಅಂತಿಮ ತೀರ್ಪು ಪ್ರಕಟಿಸಬೇಕಿದೆ,ʼ ಎಂದು ಹೇಳಿದೆ.

ʻಮೇಲಿನ ಕಾರಣಗಳಿಗಾಗಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಧ್ಯಾಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸುತ್ತೇವೆ . ಅವರು ಜೂನ್ 2, 2024 ರಂದು ಶರಣಾಗಬೇಕು. ಮುಖ್ಯಮಂತ್ರಿ ಕಚೇರಿ ಮತ್ತು ದೆಹಲಿ ಸಚಿವಾಲಯಕ್ಕೆ ಭೇಟಿ ನೀಡಬಾರದು.ಪ್ರಸ್ತುತ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರಿಗೆ ಜಾಮೀನು ನೀಡಲಾಗುತ್ತಿದೆ. ಸುಮಾರು 970 ದಶಲಕ್ಷ ಮತದಾರರ ಪೈಕಿ 650-700 ದಶಲಕ್ಷ ಮಂದಿ ಮುಂದಿನ ಐದು ವರ್ಷಗಳ ಕಾಲ ಈ ದೇಶದ ಸರ್ಕಾರವನ್ನು ಆಯ್ಕೆ ಮಾಡಲು ಮತ ಚಲಾಯಿಸುತ್ತಾರೆ. ಸಾರ್ವತ್ರಿಕ ಚುನಾವಣೆಗಳು ಪ್ರಜಾಪ್ರಭುತ್ವಕ್ಕೆ ಶಕ್ತಿಯನ್ನು ಪೂರೈಸುತ್ತವೆʼ ಎಂದು ಪೀಠ ಹೇಳಿದೆ. ಒಂದು ಶ್ಯೂರಿಟಿಯೊಂದಿಗೆ 50,000 ರೂ.ಗಳ ಜಾಮೀನು ಬಾಂಡ್‌ಗಳನ್ನು ಒದಗಿಸುವಂತೆ ನ್ಯಾಯಾಲಯ ಸೂಚಿಸಿದೆ.

ಇಂಡಿಯ ಒಕ್ಕೂಟದಲ್ಲಿ ಸಂಭ್ರಮ: ಸುದ್ದಿ ಕಾಳ್ಗಿಚ್ಚಿನಂತೆ ಹರಡಿ, ಇಂಡಿಯ ಒಕ್ಕೂಟದ ಪಕ್ಷಗಳಲ್ಲಿ ಹರ್ಷದ ಅಲೆ ಬೀಸಿತು. ಆಪ್‌ ಇದನ್ನು ʻಸತ್ಯದ ವಿಜಯʼ ಎಂದು ಕರೆದಿದೆ. ʻಸತ್ಯಕ್ಕೆ ತೊಂದರೆ ನೀಡಬಹುದು; ಆದರೆ, ಸೋಲಿಸಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟಿನ ತೀರ್ಪು ಸ್ವಾಗತಾರ್ಹ. ಸರ್ವಾಧಿಕಾರ ಕೊನೆಗೊಳ್ಳುತ್ತದೆ. ಸತ್ಯಮೇವ ಜಯತೆ,ʼ ಎಎಪಿ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ ಎಕ್ಸ್‌ನಲ್ಲಿ ಬರೆದಿದ್ದಾರೆ. ಪತ್ನಿ ಸುನೀತಾ, ʻಹನುಮಾನ್ ಜೀ ಕಿ ಜೈ. ಇದು ಪ್ರಜಾಪ್ರಭುತ್ವದ ಗೆಲುವು. ಲಕ್ಷಾಂತರ ಜನರ ಪ್ರಾರ್ಥನೆ ಮತ್ತು ಆಶೀರ್ವಾದದ ಫಲಿತಾಂಶ. ಎಲ್ಲರಿಗೂ ಧನ್ಯವಾದಗಳುʼ ಎಂದು ಎ‌ಕ್ಸ್‌ ನಲ್ಲಿ ಬರೆದಿದ್ದಾರೆ.

ಕೇಜ್ರಿವಾಲ್ ಅವರ ಬಿಡುಗಡೆ ಎಎಪಿ ಪ್ರಚಾರಕ್ಕೆ ಉತ್ತೇಜನ ನೀಡುವ ನಿರೀಕ್ಷೆಯಿದೆ. ದಿಲ್ಲಿಯಲ್ಲಿ ಮೇ 25 ರಂದು ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಆದೇಶವನ್ನು ಸ್ವಾಗತಿಸಿದ್ದಾರೆ.

Tags:    

Similar News