Thuglak row | ಟಿ.ಎಂ. ಕೃಷ್ಣ ಅವರಿಗೆ ಎಂ.ಎಸ್.ಸುಬ್ಬುಲಕ್ಷ್ಮಿ ಪ್ರಶಸ್ತಿ; ವಿವಾದ ಸೃಷ್ಟಿಸಿದ ಗುರುಮೂರ್ತಿ ಟೀಕೆ

ಗಾಯಕ ಟಿ.ಎಂ. ಕೃಷ್ಣ ಅವರನ್ನು ಸಂಗೀತ ಕಲಾನಿಧಿ ಎಂ.ಎಸ್‌. ಸುಬ್ಬಲಕ್ಷ್ಮಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ʼಸಸ್ಯಾಹಾರ ಉತ್ತೇಜಿಸಿದ್ದಕ್ಕಾಗಿ ಕಟುಕನಿಗೆ ಭಗವಾನ್ ಮಹಾವೀರ್ ಪ್ರಶಸ್ತಿ ಪ್ರದಾನ ಮಾಡಿದಂತೆ; ಎಂದು ತಮಿಳಿನ ರಾಜಕೀಯ ವಾರಪತ್ರಿಕೆ ʼತುಘ್ಲಕ್‌ʼ ಸಂಪಾದಕ ಗುರುಮೂರ್ತಿ ಟೀಕಿಸಿದ್ದಾರೆ.;

Update: 2024-10-23 12:59 GMT

ತಮಿಳಿನ ʼತುಘ್ಲಕ್ʼ ರಾಜಕೀಯ ವಾರಪತ್ರಿಕೆಯ ವಾರ್ಷಿಕ ಸಭೆಗೆ ಸಭಾಂಗಣ ನೀಡದ ಸಂಗೀತ ಅಕಾಡೆಮಿಯ ಕ್ರಮ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಪತ್ರಿಕೆಯ ಕಾರ್ಯಕ್ರಮಕ್ಕಾಗಿ ಸಭಾಂಗಣವನ್ನು ಕಾಯ್ದಿರಿಸಿದ ಒಂದು ತಿಂಗಳ ಬಳಿಕ ದಿಢೀರ್ ರದ್ದು ಮಾಡಿದ ಹಿನ್ನೆಲೆಯಲ್ಲಿ ತುಘ್ಲಕ್ ವಾರಪತ್ರಿಕೆ ಸಂಪಾದಕ ಎಸ್‌.ಗುರುಮೂರ್ತಿ ಅವರು ʼದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್ʼ ಪತ್ರಿಕೆಯಲ್ಲಿ ಸಂಗೀತ ಅಕಾಡೆಮಿಯ ಕಾರ್ಯ ವೈಖರಿ ಟೀಕಿಸಿ ಬರೆದಿರುವ ಲೇಖನ ಪರ-ವಿರೋಧ ಚರ್ಚೆಗೆ ವೇದಿಕೆ ಒದಗಿಸಿದೆ.

ಈ ಮಧ್ಯೆ ಸಂಗೀತ ಅಕಾಡೆಮಿಯ ನಿಲುವನ್ನು ತಮಿಳಿನ ಖ್ಯಾತ ಬರಹಗಾರ ಪೆರುಮಾಳ್ ಮುರುಗನ್ ಬೆಂಬಲಿಸಿರುವುದು ವಿವಾದವನ್ನು ಮತ್ತಷ್ಟು ಜಟಿಲಗೊಳಿಸಿದೆ.

ಏನಿದು ವಿವಾದ?

ಕರ್ನಾಟಕ ಸಂಗೀತದ ಮೆಕ್ಕಾ ಎಂದೇ ಕರೆಯಲಾಗುವ ಚೆನ್ನೈನ ಸಂಗೀತ  ಅಕಾಡೆಮಿ ಈಗ ವಿವಾದಕ್ಕೆ ಸಿಲುಕಿದೆ. ಅಕಾಡೆಮಿಯ ಸಭಾಂಗಣವನ್ನು ವಿವಿಧ ಕಾರ್ಯಕ್ರಮಗಳಿಗೆ ಬಾಡಿಗೆ ನೀಡಲಾಗುತ್ತದೆ. ಅದರಂತೆ 2025 ಜನವರಿ 14 ರಂದು ತನ್ನ ವಾರ್ಷಿಕ ಸಭೆಗಾಗಿ ತುಘ್ಲಕ್ ವಾರಪತ್ರಿಕೆಯು ಸಭಾಂಗಣ ಕಾಯ್ದಿರಿಸಿತ್ತು. ಆದರೆ, ಒಂದು ತಿಂಗಳ ಬಳಿಕ ಅದನ್ನು ಅಕಾಡೆಮಿ ರದ್ದು ಮಾಡಿತು.

ಈ ಕುರಿತು ತುಘಲಕ್ ಸಂಪಾದಕ ಎಸ್‌.ಗುರುಮೂರ್ತಿ ಅವರು ಅ.10 ರಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯಲ್ಲಿ ಲೇಖನ ಬರೆದಿದ್ದರು. ಖ್ಯಾತ ಗಾಯಕ ಟಿ.ಎಂ.ಕೃಷ್ಣ ಅವರಿಗೆ 2024 ನೇ ಸಾಲಿನ ಸಂಗೀತ ಕಲಾನಿಧಿ ಎಂ.ಎಸ್‌. ಸುಬ್ಬಲಕ್ಷ್ಮಿ ಪ್ರಶಸ್ತಿ ನೀಡಿದಕ್ಕಾಗಿ ಅಕಾಡೆಮಿಯನ್ನು ಟೀಕಿಸಿದ್ದರು.

ಗುರುಮೂರ್ತಿ ಅವರ ಲೇಖನಕ್ಕೆ ಸ್ಪಷ್ಟೀಕರಣ ನೀಡಿದ್ದ ಸಂಗೀತ ಅಕಾಡೆಮಿಯು, ನೀವು ನಿಮ್ಮ ಸ್ವಂತ ಕಾರ್ಯಕ್ರಮಕ್ಕಾಗಿ ಸಭಾಂಗಣ ಕಾಯ್ದಿರಿಸಿದ್ದಿರಿ. ಆದರೆ, ಅದು ಎಲ್ಲರನ್ನೂ ಒಳಗೊಳ್ಳುವಂತಿರಲಿಲ್ಲ. ಹಾಗಾಗಿ ಬುಕ್ಕಿಂಗ್‌ ರದ್ದು ಮಾಡಲಾಯಿತು ಎಂದು ಹೇಳಿತ್ತು.

ಗುರುಮೂರ್ತಿ ಬರೆದದ್ದು ಏನು?

ಗಾಯಕ ಟಿ.ಎಂ. ಕೃಷ್ಣ ಅವರನ್ನು ಸಂಗೀತ ಕಲಾನಿಧಿ ಎಂ.ಎಸ್‌. ಸುಬ್ಬಲಕ್ಷ್ಮಿ ಪ್ರಶಸ್ತಿಗೆ ಆಯ್ಕೆ ಮಾಡಿರುವ ಕ್ರಮವನ್ನು ʼಸಸ್ಯಾಹಾರ ಉತ್ತೇಜಿಸಿದ್ದಕ್ಕಾಗಿ ಕಟುಕನಿಗೆ ಭಗವಾನ್ ಮಹಾವೀರ್ ಪ್ರಶಸ್ತಿ ಪ್ರದಾನ ಮಾಡಿದಂತಿದೆʼ. ಇದು ಕರ್ನಾಟಕ ಸಂಗೀತದ ಅನುಯಾಯಿಗಳಿಗೆ ತೀವ್ರ ನೋವು ಉಂಟು ಮಾಡಿದೆ ಎಂದು ಗುರುಮೂರ್ತಿ ಬರೆದಿದ್ದರು.

ಗುರುಮೂರ್ತಿ ಅವರು RBI ಕೇಂದ್ರ ಮಂಡಳಿಯಲ್ಲಿ ಅರೆಕಾಲಿಕ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಸಿದ್ಧಾಂತದ ಪಾಲಕರೂ ಆಗಿದ್ದರು.

ಎಂ.ಎಸ್. ಸುಬ್ಬಲಕ್ಷ್ಮಿ ಅವರನ್ನು ಅವಮಾನಿಸಿರುವ ವ್ಯಕ್ತಿಗೆ ಅವರ ಹೆಸರಿನ ಪ್ರಶಸ್ತಿ ನೀಡಿ ಗೌರವಿಸುವ ಘನ ಕಾರ್ಯವನ್ನು ಸಂಗೀತ ಅಕಾಡೆಮಿ ಮಾಡಿದೆ. ಆ ಮೂಲಕ ತನ್ನ ಘನತೆಯನ್ನು ತಾನೇ ಕುಗ್ಗಿಸಿಕೊಂಡಿದೆ. ಸೌಮ್ಯ ಮತ್ತು ವಿನಮ್ರ ಸ್ವಭಾವದ ಎಂ.ಎಸ್ ಸುಬ್ಬಲಕ್ಷ್ಮಿ ಅವರ ಪರಂಪರೆಯನ್ನು ದುರ್ಬಲಗೊಳಿಸಿರುವ ಪ್ರಶ್ನಾತೀತ, ಉದಾರವಾದಿ ಧೋರಣೆ ಹೊಂದಿರುವ ಕೃಷ್ಣ ಅವರಿಗೆ ಪ್ರಶಸ್ತಿ ನೀಡಿರುವುದು ಸರಿಯಲ್ಲ ಎಂದು ಟೀಕಿಸಿದ್ದರು.

'ಸಾಮರಸ್ಯಕ್ಕಾಗಿ ಸಂಗೀತ'

ಗುರುಮೂರ್ತಿ ಅವರ ನಿಲುವಿಗೆ ತಮಿಳಿನ ಹೆಸರಾಂತ ಲೇಖಕ ಪೆರುಮಾಳ್ ಮುರುಗನ್ ಅವರು ಅಸಂತೃಪ್ತಿ ವ್ಯಕ್ತಪಡಿಸಿದ್ದಾರೆ.

ನಾನು ಗುರುಮೂರ್ತಿ ಅವರ ಲೇಖನವನ್ನು ಓದಿದ್ದೇನೆ. ಅವರು ನಿಜವಾಗಿಯೂ ವಿಚಲಿತರಾದಂತೆ ಕಾಣುತ್ತಿದೆ. ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಕರ್ನಾಟಕ ಸಂಗೀತ ಸಾಧನವಾಗಿದೆ. ಅದನ್ನು ಬಳಸುತ್ತಿರುವ ಕಲಾವಿದರನ್ನು ಅಕಾಡೆಮಿ ಗೌರವಿಸುತ್ತಿದೆ ಎಂಬುದು ಗುರುಮೂರ್ತಿ ಅವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದರು.

ʼನಾನು ಬರೆದಿರುವ ಗೀತೆಯನ್ನು ಹಾಡಿ ಕೃಷ್ಣ ಪೆರಿಯಾರ್ ಅವರನ್ನು ವೈಭವೀಕರಿಸಿದ್ದಾರೆʼ ಎಂದು ಗುರುಮೂರ್ತಿ ಲೇಖನದಲ್ಲಿ ಹೇಳಿಕೊಂಡಿದ್ದಾರೆ. ಪೆರಿಯಾರ್ ಅವರು ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡುವುದು, ಹಾಡುವುದು ಗುರುಮೂರ್ತಿ ಅವರಿಗೆ 'ವೈಭವೀಕರಣ'ದಂತೆ ಕಾಣುತ್ತಿದೆ. ಆದರೆ, ಪೆರಿಯಾರ್ ಕುರಿತು ಸಮಾಜದಲ್ಲಿ ಚರ್ಚೆ ಅಗತ್ಯವಿದೆ ಎಂದು ಹೇಳಿದರು.

ಗುರುಮೂರ್ತಿ ಅವರು ನನ್ನ ಪುಸ್ತಕ ಮಾಥೋರುಬಗನ್ (one part women) ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನನ್ನ ಕೃತಿಯು ಮಹಿಳೆಯರನ್ನು ಕೀಳಾಗಿ ಕಂಡಿದೆ ಎಂದೂ ಟೀಕಿಸಿದ್ದಾರೆ. ವಾಸ್ತವವಾಗಿ ಈ ಪುಸ್ತಕವನ್ನು ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರೇ ಓದಿ ಗೌರವಿಸಿದ್ದಾರೆ. ಹೀಗಾಗಿ ಗುರುಮೂರ್ತಿ ಅವರ ಲೇಖನವು ತೀರ್ಪು ಮತ್ತು ನ್ಯಾಯಾಲಯವನ್ನೇ ಅಗೌರವಿಸುವಂತಿದೆ ಎಂದು ಮುರುಗನ್ ಹೇಳಿದರು.

ಟಿ.ಎಂ ಕೃಷ್ಣ ಅವರನ್ನು ಸಂಗೀತ ಅಕಾಡೆಮಿಯು ಅರ್ಹತೆಯ ಆಧಾರದ ಮೇಲೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈಗಾಗಲೇ ಅದು ಹೇಳಿಕೆಯನ್ನೂ ನೀಡಿದೆ. ಹೀಗಿರುವಾಗ ಗುರುಮೂರ್ತಿ ಅವರ ಟೀಕೆಗೆ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.

ಕೃಷ್ಣ ಆಯ್ಕೆ ವಿರೋಧಿಸಿ ಪ್ರತಿಭಟನೆ

ಟಿ.ಎಂ.ಕೃಷ್ಣ ಅವರನ್ನು ಸಂಗೀತ ಕಲಾನಿಧಿ ಎಂ.ಎಸ್‌. ಸುಬ್ಬಲಕ್ಷ್ಮಿ ಪ್ರಶಸ್ತಿಗೆ ಆಯ್ಕೆ ಮಾಡಿದ ಸಂಗೀತ ಅಕಾಡೆಮಿಯ ಕ್ರಮ ಖಂಡಿಸಿ ವರ್ಷಾರಂಭದಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆದಿವೆ. ಕೆಲವು ಖ್ಯಾತ ಪ್ರದರ್ಶಕರು ಅಕಾಡೆಮಿಯ ನಿರ್ಧಾರವನ್ನು ಬಹಿಷ್ಕರಿಸಿದ್ದರು. ಅಲ್ಲದೇ ತಾವು ಪಡೆದಿದ್ದ ಪ್ರಶಸ್ತಿಗಳನ್ನು ಕೂಡ ಹಿಂದಿರುಗಿಸಿದ್ದರು.

ಟಿ.ಎಂ. ಕೃಷ್ಣ ಅವರು ಹಲವಾರು ಸಂದರ್ಭಗಳಲ್ಲಿ ಕರ್ನಾಟಕ ಸಂಗೀತದ ಪರಿಸರ ವ್ಯವಸ್ಥೆಯನ್ನು ಬ್ರಾಹ್ಮಣ, ಗಣ್ಯ ಮತ್ತು ಬಹಿಷ್ಕಾರ ಎಂದು ಟೀಕಿಸಿದ್ದ ಹಿನ್ನೆಲೆಯಲ್ಲಿ ವಿರೋಧ ವ್ಯಕ್ತವಾಗಿದೆ.

ಕೃಷ್ಣ ಅವರು ಸಾಂಪ್ರದಾಯಿಕ ಸಭಾ ಕಛೇರಿ ವಿಧಾನಗಳಿಂದ ದೂರ ಉಳಿದಿದ್ದರು. ಸಂಗೀತವನ್ನು ಕೊಳೆಗೇರಿ, ಚರ್ಚ್, ಮಸೀದಿ ಹಾಗೂ ಬೀದಿಗೆ ಕೊಂಡೊಯ್ದಿದ್ದರು. ಹಿಂದುಳಿದ ಸಮುದಾಯಗಳಲ್ಲಿ ಸಂಗೀತವನ್ನು ಗುರುತಿಸಿ, ಅವರು ಕರ್ನಾಟಕ ಸಂಗೀತ ಪ್ರಸ್ತುತಪಡಿಸುವಂತೆ ಪ್ರೇರೇಪಿಸಿದ್ದರು.

ಎಂ.ಎಸ್. ಸುಬ್ಬಲಕ್ಷ್ಮಿ ವಿರುದ್ಧ ಟೀಕೆ

ಕರ್ನಾಟಕ ಸಂಗೀತದ ದಂತಕಥೆ ಎಂ.ಎಸ್ ಸುಬ್ಬುಲಕ್ಷ್ಮಿ ಅವರನ್ನು ಈ ಹಿಂದೆ ವಿಮರ್ಶೆ ಮಾಡಿದ್ದ ಟಿ.ಎಂ. ಕೃಷ್ಣ ಅವರು, ಎಂ.ಎಸ್. ಸುಬ್ಬಲಕ್ಷ್ಮಿ ಅಭಿಮಾನಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದರು.

“ಎಂ.ಎಸ್. ಸುಬ್ಬಲಕ್ಷ್ಮಿ ಅವರು ನಾಲ್ಕು ದಶಕಗಳಿಂದ ಹಾಡುತ್ತಿದ್ದಾರೆ. ಅವರ ಪ್ರತಿಭೆಯು ಅವರಿಂದ ಏನನ್ನು ನಿರೀಕ್ಷಿಸುತ್ತದೆಯೋ ಅದಕ್ಕಿಂತ ಹೆಚ್ಚಾಗಿ ಯಾರಾದರೂ ಅಥವಾ ಇತರರು ಅವರಿಂದ ಏನನ್ನು ನಿರೀಕ್ಷಿಸುತ್ತಾರೋ ಅದನ್ನು ಅವರು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಲೇಖನದಲ್ಲಿ ಬರೆದಿದ್ದರು. ಸುಬ್ಬಲಕ್ಷ್ಮಿ ಅವರ ಹಾಡುಗಳು ಯಾವಾಗಲೂ ಯಾವುದಾದರು ಒಂದು ಕ್ಷೇತ್ರವನ್ನು ಮೆಚ್ಚಿಸುವಂತಿರುತ್ತವೆ. ತಮ್ಮ ಪತಿಯನ್ನೇ ಸಂಗೀತವನ್ನಾಗಿ ಕಂಡು ತೃಪ್ತಿಪಡಿಸುವ ಹಾಡುಗಾರಿಕೆ ಪ್ರಸ್ತುತಪಡಿಸುತ್ತಿದ್ದರು. ಅವರು ಒಬ್ಬ ತಾಯಿಯಾಯಿ, ಗೃಹಿಣಿಯಾಗಿ, ಸಂತರಾಗಿ, ವಿಮೋಚಕರಾಗಿದ್ದರು. ಜೊತೆಗೆ ರೂಪದರ್ಶಿಯೂ ಆಗಿದ್ದರು ಎಂದು ಬರೆದಿದ್ದರು.

ಮಾರ್ಚ್ನಲ್ಲಿ ಅಕಾಡೆಮಿಯು ಕೃಷ್ಣ ಅವರಿಗೆ ಸಂಗೀತ ಕಲಾನಿಧಿ ಪ್ರಶಸ್ತಿ ಘೋಷಿಸಿದಾಗ ಸಾಂಪ್ರದಾಯಿಕ ಕರ್ನಾಟಕ ಸಂಗೀತಗಾರರು ಮತ್ತು ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಅಕಾಡೆಮಿಯಿಂದ ಸ್ವಯಂ ರಕ್ಷಣೆ ಹೇಳಿಕೆ

ಕೃಷ್ಣ ವಿರುದ್ಧ ಸಾಕಷ್ಟು ಆರೋಪಗಳಿದ್ದರೂ ಸಂಗೀತ ಅಕಾಡೆಮಿಯ ಅಧ್ಯಕ್ಷ ಎನ್.ಮುರಳಿ ಅವರು ಪ್ರಶಸ್ತಿಗೆ ಆಯ್ಕೆ ಮಾಡಿದ್ದರು. ಅಸಾಂಪ್ರದಾಯಿಕ ವಿಧಾನದ ಹೊರತಾಗಿಯೂ, ಕೃಷ್ಣ ಅವರು ಇಂದು ಅಗ್ರಗಣ್ಯ ಕರ್ನಾಟಕ ಸಂಗೀತಗಾರ ಎನಿಸಿದ್ದಾರೆ. ಹಾಗಾಗಿ ಅವರು ಪ್ರಶಸ್ತಿಗೆ ಅರ್ಹರು ಎಂದು ಹೇಳಿದ್ದರು.

'ಸುಸ್ಥಿರ ಅವಧಿಯೊಳಗೆ ಸಂಗೀತದಲ್ಲಿ ಶ್ರೇಷ್ಠತೆ ಕಾಣುವುದೇ ನಮ್ಮ ಅಗ್ರಗಣ್ಯ ಮಾನದಂಡ. ಅದನ್ನು ಟಿ.ಎಂ. ಕೃಷ್ಣ ಅವರು ಸಾಧಿಸಿದ್ದಾರೆ ಎಂದು ಮುರಳಿ ಹೇಳಿಕೆಯಲ್ಲಿ ತಿಳಿಸಿದ್ದರು.

ಇದಕ್ಕೆ ತಿರುಗೇಟು ನೀಡಿದ್ದ ತುಘ್ಲಕ್‌ ಸಂಪಾದಕ ಗುರುಮೂರ್ತಿ ಅವರು, ಸಂಗೀತ ಅಕಾಡೆಮಿಯು ಕೃಷ್ಣ ಅವರನ್ನು ಮೂಲಭೂತ ಶ್ರದ್ಧೆಯಿಲ್ಲದೆ ಆರಿಸಿದೆ. ಇದರಿಂದ ಸುಬ್ಬುಲಕ್ಷ್ಮಿಯ ಮೇಲಿನ ನಿಂದನೆಗೆ ನೀರೆರೆದಿದೆ. ಇದು ಉದ್ದೇಶಪೂರ್ವಕವಾದ ನಿರ್ಲಕ್ಷ್ಯದ ಅಪರಾಧ ಎಂದು ತಮ್ಮ ಲೇಖನದಲ್ಲಿಆಕ್ರೋಶ ವ್ಯಕ್ತಪಡಿಸಿದ್ದರು.

ಟಿ.ಎಂ. ಕೃಷ್ಣ ಅವರು ಎಂ.ಎಸ್ ಸುಬ್ಬುಲಕ್ಷ್ಮಿ ಕುರಿತು ಕೀಳಾಗಿ ಹೇಳಿರುವುದು ಸುಳ್ಳಲ್ಲ ಎಂದು ಮುರುಗನ್ ಹೇಳಿದ್ದಾರೆ. ಟಿ.ಎಂ. ಕೃಷ್ಣ ಅವರು ಕರ್ನಾಟಕ ಸಂಗೀತ ಮತ್ತು ಎಂ.ಎಸ್ ಸುಬ್ಬುಲಕ್ಷ್ಮಿ ಕುರಿತಾಗಿ ಹಲವು ಲೇಖನಗಳನ್ನು ಬರೆದಿದ್ದಾರೆ. ಅವರು ಮುಕ್ತವಾಗಿ ಮಾತನಾಡುತ್ತಾರೆ. ಅವರ ಅಭಿಪ್ರಾಯ, ಸತ್ಯವನ್ನು ನೋಡಲು ಬಯಸುವವರು ಅದನ್ನು ಸ್ವೀಕರಿಸುತ್ತಾರೆ. ಸಮಾಜದ ವಿವಿಧ ಸ್ತರಗಳ ಜನರ ಮಧ್ಯೆ ಸೇತುವೆ ನಿರ್ಮಿಸಲು ಕರ್ನಾಟಕ ಸಂಗೀತ ಬಳಸಿಕೊಂಡಿದ್ದಾರೆ. ಹಾಗಾಗಿ ಸಂಗೀತ ಕಲಾನಿಧಿ ಬಿರುದಿಗೆ ಟಿಎಂಕೆ ಯೋಗ್ಯರು ಎಂದು ಹೇಳಿದ್ದಾರೆ.

ತುಘ್ಲಕ್ ಪತ್ರಿಕೆ ಪರ ಬೆಂಬಲ

ತುಘ್ಲಕ್ ವಾರಪತ್ರಿಕೆ ಕಾರ್ಯಕ್ರಮ ರದ್ದುಪಡಿಸಿದ ಅಕಾಡೆಮಿಯು ವೃತ್ತಿಪರವಾಗಿಲ್ಲ ಎಂದು ಹಿರಿಯ ಪತ್ರಕರ್ತ ಮತ್ತು ಕಟ್ಟಾ ತುಘ್ಲಕ್ ಓದುಗರಾದ ಜಿ.ಸಿ ಶೇಖರ್ ದಿ ಫೆಡರಲ್ಗೆ ತಿಳಿಸಿದರು.

ತುಘ್ಲಕ್ ಓದುಗರ ಸಭೆಯು ಕೇವಲ ಒಂದು ಕಾರ್ಯಕ್ರಮವಲ್ಲ. ಇದು ಯಾವಾಗಲೂ ತಮಿಳುನಾಡು ಮತ್ತು ರಾಷ್ಟ್ರ ರಾಜಕೀಯ ಭೂದೃಶ್ಯದ ಮೇಲೆ ಪ್ರಭಾವ ಬೀರುವ ಮಹತ್ವದ ವಾರ್ಷಿಕ ಸಭೆ ಆಗಿರುತ್ತದೆ ಎಂದು ಹೇಳಿದರು.

2008 ರ ಸಭೆಯನ್ನು ಸ್ಮರಿಸಿದ ಅವರು, ತುಘ್ಲಕ್ ಸಂಸ್ಥಾಪಕ ಮತ್ತು ಆಗಿನ ಸಂಪಾದಕ ಚೋ. ರಾಮಸ್ವಾಮಿ ಅವರು ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಹೆಸರಿಸಿದ್ದರು ಎಂದರು.

ತುಘ್ಲಕ್‌ ವೇದಿಕೆಯಲ್ಲಿ ಮೋದಿ -ಅಡ್ವಾಣಿ

2012 ರ ವಾರ್ಷಿಕ ಸಭೆಯಲ್ಲಿ ನರೇಂದ್ರ ಮೋದಿ ಮತ್ತು ಎಲ್.ಕೆ ಅಡ್ವಾಣಿ ಅವರು ತುಘ್ಲಕ್ ಕಾರ್ಯಕ್ರಮದ ವೇದಿಕೆ ಹಂಚಿಕೊಂಡಿದ್ದರು. ಮೋದಿ ಅವರಿಗೆ ಅವಕಾಶ ಬಿಟ್ಟುಕೊಡುವಂತೆ ಅಂದೇ ಎಲ್‌.ಕೆ. ಅಡ್ವಾಣಿ ಅವರಿಗೆ ಚೋ. ರಾಮಸ್ವಾಮಿ ಅವರು ಬಹಿರಂಗವಾಗಿ ಒತ್ತಾಯಿಸಿದ್ದರು ಎಂದು ಶೇಖರ್ ಸ್ಮರಿಸಿದರು.

ಸಂಗೀತ ಅಕಾಡೆಮಿಯು ಇಂತಹ ಪ್ರಮುಖ ಸಭೆಯನ್ನು ರದ್ದುಗೊಳಿಸಿ , ಅದರ ಘನತೆ ತಗ್ಗಿಸಿಕೊಂಡಿದೆ. ಗುರುಮೂರ್ತಿಯವರ ಲೇಖನ ಕುರಿತು ಅದು ಹೇಳಿಕೆ ನೀಡಬಹುದಿತ್ತು. ಬದಲಾಗಿ, ಅದು ಕ್ಷುಲ್ಲಕವಾಗಿ ವರ್ತಿಸಿದೆ ಎಂದು ಅವರು ಹೇಳಿದರು. ಈ ಕುರಿತು ಸಂಗೀತ ಅಕಾಡೆಮಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮತ್ತು ಇ ಮೇಲ್ ಮೂಲಕ ಪ್ರತಿಕ್ರಿಯೆ ಪಡೆಯಲು ದಿ ಫೆಡರಲ್ ಪ್ರಯತ್ನಿಸಿದರೂ ಯಾರೂ ಕರೆ ಸ್ವೀಕರಿಸಲಿಲ್ಲ.

ನ್ಯಾಯಾಲಯದ ಮೆಟ್ಟಿಲೇರಿದ ವಿವಾದ

ಏತನ್ಮಧ್ಯೆ, ಸಂಗೀತ ಕಲಾನಿಧಿ ಎಂ.ಎಸ್ ಸುಬ್ಬುಲಕ್ಷ್ಮಿ ಪ್ರಶಸ್ತಿಯನ್ನು ಕೃಷ್ಣ ಅವರಿಗೆ ಪ್ರದಾನ ಮಾಡುವ ನಿರ್ಧಾರವನ್ನು ಪ್ರಶ್ನಿಸಿ ದಿವಂಗತ ಎಂ.ಎಸ್ ಸುಬ್ಬಲಕ್ಷ್ಮಿ ಅವರ ಮೊಮ್ಮಗ ವಿ.ಶ್ರೀನಿವಾಸನ್ ಮದ್ರಾಸ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಶ್ರೀನಿವಾಸನ್ ಅವರು ಎಂ.ಎಸ್ ಅವರ ಸಾವಿನ ನಂತರ ಕೃಷ್ಣ ಅವರು "ನೀಚ, ವೃಥಾರೋಪದ ದಾಳಿ ಮಾಡಿದ್ದಾರೆ. ಸುಬ್ಬಲಕ್ಷ್ಮಿ ಹೆಸರಿನ ಪ್ರಶಸ್ತಿಯನ್ನು ಅವರಿಗೆ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

Tags:    

Similar News