ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ತಮಿಳುನಾಡಿನಲ್ಲಿ ಶೇ.72.09 ರಷ್ಟು ಮತದಾನವಾಗಿದೆ.
39 ಕ್ಷೇತ್ರಗಳಲ್ಲಿ ಆರು ಕೋಟಿ ಮತದಾರರನ್ನು ಹೊಂದಿರುವ ರಾಜ್ಯದಲ್ಲಿ ಧರ್ಮಪುರಿಯಲ್ಲಿ ಅತಿ ಹೆಚ್ಚು ಮತ ಚಲಾವಣೆ ನಡೆದಿದೆ. ಆದರೆ, ಚೆನ್ನೈ ಸೆಂಟ್ರಲ್ ಮತ್ತು ಚೆನ್ನೈ ದಕ್ಷಿಣದಂತಹ ನಗರ ಪ್ರದೆಶದ ಕ್ಷೇತ್ರಗಳಲ್ಲಿ ಕಡಿಮೆ ಮತದಾನವಾಗಿದೆ.ʻಮತ ಚಲಾವಣೆ ಪ್ರಮಾಣ ಹೆಚ್ಚಳದ ಜೊತೆಗೆ, ಶಾಂತಿಯುತವಾಗಿ ಮುಕ್ತಾಯಗೊಂಡಿದೆʼ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸತ್ಯಬ್ರತ ಸಾಹೂ ತಿಳಿಸಿದ್ದಾರೆ.
ಬಿಸಿಲಿನ ಝಳ: ಜನರು ಮತ ಚಲಾಯಿಸಲು ಹವಾಮಾನ ವೈಪರೀತ್ಯವನ್ನು ಧೈರ್ಯವಾಗಿ ಎದುರಿಸಿದ್ದಾರೆ. ಅನೇಕ ಗ್ರಾಮೀಣ ಬೂತ್‌ಗಳಲ್ಲಿ ಕುಡಿಯುವ ನೀರಿನ ಕೊರತೆ ಇದ್ದಿತ್ತು. ಮಧುರೈ ಮತ್ತು ಈರೋಡ್‌ನಂತಹ ಸ್ಥಳಗಳಲ್ಲಿ ತಾಪಮಾನ 41 ಡಿಗ್ರಿ ಸೆ. ಏರಿದೆ. ತೀವ್ರ ಬಿಸಿಲಿನಿಂದ ಮೂವರು ಹಿರಿಯ ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಈರೋಡ್‌ನ ಆರ್.ಸಂಗವಿ(66) ʻಈ ಬಿಸಿಯಲ್ಲಿ ನಾನು ಹೊರಗೆ ಹೋಗುವ ಆಲೋಚನೆಯನ್ನು ಮಾಡುವುದಿಲ್ಲ. ಹೊರಗೆ ಹೋಗುವುದು ತುಂಬಾ ಅಪಾಯಕಾರಿʼ ಎಂದು ಹೇಳಿದರು. ಚೆನ್ನೈನಲ್ಲಿ 2014 ಮತ್ತು 2019 ರ ಚುನಾವಣೆಗಳಿಗೆ ಹೋಲಿಸಿದರೆ, ಮತದಾನದ ಶೇಕಡಾವಾರು ಸುಧಾರಿಸಿದೆ. ಚೆನ್ನೈ ಸೆಂಟ್ರಲ್ ಕ್ಷೇತ್ರದಲ್ಲಿ ಸಂಜೆ 5 ಗಂಟೆಗೆ ಮತ ಚಲಾಯಿಸಿದ ಜೆಸಿಂಧಾ ಪ್ರಿಯಾ(19), ಕಾಲೇಜಿನಲ್ಲಿ ಮತದಾರರ ನೋಂದಣಿ ಶಿಬಿರ ಆಯೋಜಿಸಿದ್ದನ್ನು ಪ್ರಸ್ತಾಪಿಸಿದರು.
ಪ್ರಜಾಪ್ರಭುತ್ವದಲ್ಲಿ ಭರವಸೆ: ದಿಂಡಿಗಲ್‌ನಲ್ಲಿ 102 ವರ್ಷ ವಯಸ್ಸಿನ ಮಹಿಳೆಯೊಬ್ಬರು ಸಹಾಯಕನ ಜೊತೆಗೆ ಮತ ಚಲಾಯಿಸಿ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮಿಂಚಿದರು. ʻಮತ ಚಲಾವಣೆ ನಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತದೆ ಎಂಬ ಭರವಸೆ ಇದೆ,ʼ ಎಂದು ಎಲ್‌ಜಿಇಟಿಕ್ಯು ಸಮುದಾಯದ ಸುಧಾ ಹೇಳಿದರು.
ಧರ್ಮಪುರಿ ಕ್ಷೇತ್ರದಲ್ಲಿ ಅತಿ ಹೆಚ್ಚು(ಶೇ.75.44) ಮತದಾನವಾಗಿದೆ. ಈ ಕ್ಷೇತ್ರದಲ್ಲಿ ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ಅವರ ಪತ್ನಿ ಸೌಮ್ಯಾ ಅನ್ಬುಮಣಿ, ಎಐಎಡಿಎಂಕೆಯ ಆರ್. ಅಶೋಕನ್ ಮತ್ತು ಡಿಎಂಕೆಯ ಎ.ಮಣಿ ಸ್ಪರ್ಧಿಸಿದ್ದಾರೆ. ಪಿಎಂಕೆ ಹಿರಿಯ ಕಾರ್ಯಾಧ್ಯಕ್ಷ ಕೆ. ಬಾಲು,ʻಬೆಂಗಳೂರು ಮತ್ತು ಚೆನ್ನೈನಂತಹ ನಗರಗಳಿಂದ ಆಗಮಿಸಿದವರಿಂದ ಮತ ಪ್ರಮಾಣ ಹೆಚ್ಚಿದೆ,ʼ ಎಂದು ಹೇಳಿದರು.
ಚೆನ್ನೈ ಸೆಂಟ್ರಲ್ ಕ್ಷೇತ್ರದಲ್ಲಿ ಅತಿ ಕಡಿಮೆ ಮತ ಚಲಾವಣೆ (ಶೇ.67.35) ಆಗಿದೆ.
ಬಹಿಷ್ಕರಿಸಿದವರಿಂದ ಮತ ಚಲಾವಣೆ: ಶ್ರೀಪೆರಂಬದೂರು ಕ್ಷೇತ್ರದ ಏಕನಪುರಂ, ವಿಲ್ಲುಪುರಂ ಕ್ಷೇತ್ರದ ನಡುಕುಪ್ಪಂ ಮತ್ತು ತಿರುಚ್ಚಿ ಕ್ಷೇತ್ರದ ವೆಂಗವಾಯಲ್‌ನಂತಹ ಕೆಲವು ಗ್ರಾಮಗಳಲ್ಲಿ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದ ಗ್ರಾಮಸ್ಥರು ಸಂಜೆ 5 ಗಂಟೆ ನಂತರ ಮತ ಚಲಾಯಿಸಿದರು. ನಡುಕುಪ್ಪಂ ಗ್ರಾಮದಲ್ಲಿ ಸಂಜೆ 5 ಗಂಟೆ ನಂತರ 1,500 ಮತದಾರರು ಸಾಲುಗಟ್ಟಿ ನಿಂತಿದ್ದು ಗೊಂದಲಕ್ಕೆ ಕಾರಣವಾಯಿತು. ಆದರೆ, ಎಲ್ಲರಿಗೂ ಮತದಾನಕ್ಕೆ ಅವಕಾಶ ನೀಡಲಾಯಿತು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ಚೆನ್ನೈ ದಕ್ಷಿಣ ಕ್ಷೇತ್ರದ ಬಿಜೆಪಿ ನಾಯಕಿ ಮತ್ತು ಸ್ಪರ್ಧಿ ತಮಿಳಿಸೈ ಸೌಂದರರಾಜನ್ ಅವರು ಡಿಎಂಡಿಕೆ ಪಕ್ಷದ ನಾಯಕಿ ಪ್ರೇಮಲತಾ ಮತ್ತು ವಿರುಧುನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಅವರ ಪುತ್ರ ವಿಜಯ ಪ್ರಭಾಕರನ್ ಅವರನ್ನು ಸಲ್ಲಿಗ್ರಾಮಮ್ ಮತಗಟ್ಟೆಯಲ್ಲಿ ಭೇಟಿ ಮಾಡಿದರು. ತಮಿಳು ಚಿತ್ರರಂಗದ ಸೆಲೆಬ್ರಿಟಿಗಳಾದ ವಿಜಯ್, ಅಜಿತ್ ಮತ್ತು ತ್ರಿಶಾ ಅಭಿಮಾನಿಗಳಿಗೆ ಮತ ಹಾಕುವಂತೆ ಮನವಿ ಮಾಡಿದರು. ಆದರೆ, ನೀಲಂಕರೈ ಮತಗಟ್ಟೆಯಲ್ಲಿ ವಿಜಯ್ ಹಾಜರಿಯಿಂದ ಗೊಂದಲ ಉಂಟಾಯಿತು.