ಕೇರಳ ಸಿಎಂ ಮತ್ತು ಪ್ರಧಾನಿ ಒಂದೇ: ಕಾಂಗ್ರೆಸ್

Update: 2024-04-17 12:35 GMT

ಕಣ್ಣೂರು (ಕೇರಳ), ಏ. 17- ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಬ್ಬರೂ ತಾವು ಒಂದೇ ಅಲ್ಲ ಎಂದು ಜನರನ್ನು ನಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ʻ ಪ್ರಧಾನಿ ಮತ್ತು ಮುಖ್ಯಮಂತ್ರಿ ಇಬ್ಬರೂ ಒಂದೇ ಎಂಬುದು ರಾಜ್ಯದ ಜನತೆಗೆ ಚೆನ್ನಾಗಿ ತಿಳಿದಿದೆʼ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್,ಕಣ್ಣೂರು ಸಮೀಪದ ಪಾನೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಸಿಎಂ ವಿಜಯನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ʻವಿಜಯನ್‌ ಕಳೆದ ಒಂದು ತಿಂಗಳಿಂದ ಮೋದಿ ವಿರುದ್ಧ ಒಂದು ಮಾತೂ ಆಡದೆ, ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರನ್ನು ನಿರಂತರವಾಗಿ ಟೀಕಿಸುತ್ತಿದ್ದಾರೆ. ಮೋದಿ ಅವರು ರಾಜ್ಯ ಸರ್ಕಾರದ ವಿರುದ್ಧ ಮಾಡಿದ ಆರೋಪಗಳಿಗೆ ಉತ್ತರಿಸುವಾಗಲೂ ಸಿಎಂ ವಿನಮ್ರ ಮತ್ತು ಜಾಗರೂಕತೆಯಿಂದ ಮಾತನ್ನಾಡಿದರುʼ ಎಂದು ಸತೀಶನ್ ಆರೋಪಿಸಿದರು. 

ʻವಿಜಯನ್ ಅವರು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಆರೋಪ ಮಾಡುವ ಮೂಲಕ ಬಿಜೆಪಿಯನ್ನು ಸಂತೋಷಪಡಿಸಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಯುಡಿಎಫ್ ಪರ ಅಲೆ ಇದೆ ಮತ್ತು ರಾಷ್ಟ್ರಮಟ್ಟದಲ್ಲಿ ಇಂಡಿಯ ಒಕ್ಕೂಟದ ಪರ ಅಲೆ ಇದೆ. ಕೇರಳದಲ್ಲಿ ಸಿಪಿಐ (ಎಂ) ಮತ್ತು ಬಿಜೆಪಿ ಒಂದೇ ಒಂದು ಸ್ಥಾನವನ್ನೂ ಗೆಲ್ಲುವುದಿಲ್ಲ. ಯುಡಿಎಫ್ ರಾಜ್ಯದ ಎಲ್ಲಾ 20 ಲೋಕಸಭೆ ಕ್ಷೇತ್ರಗಳಲ್ಲಿ ಗೆಲ್ಲಲಿದೆʼ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಕೇರಳದಲ್ಲಿ ಸೋಮವಾರ ನಡೆದ ಎರಡು ಚುನಾವಣಾ ಸಭೆಗಳಲ್ಲಿ ಪ್ರಧಾನಿ ಮಾಡಿದ ಭಾಷಣ, ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್ ಸರ್ಕಾರದ ವಿರುದ್ಧ ಅವರು ಮಾಡಿದ ಆರೋಪಗಳಿಗೆ ಸಿಎಂ ವಿಜಯನ್ ನೀಡಿದ ಉತ್ತರಗಳ ಹಿನ್ನೆಲೆಯಲ್ಲಿ ಸತೀಶನ್ ಅವರ ಹೇಳಿಕೆ ಬಂದಿದೆ. 

ಮಂಗಳವಾರ ಪ್ರತಿಕ್ರಿಯಿಸಿದ್ದ ವಿಜಯನ್, ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದ ಅಭಿವೃದ್ಧಿ ಸೂಚ್ಯಂಕದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರಧಾನಿಯನ್ನು ಒತ್ತಾಯಿಸಿದರು.ತಮ್ಮ ಸರ್ಕಾರಕ್ಕೆ ಕೇಂದ್ರ ಸರ್ಕಾರ ನೀಡಿದ ಪುರಸ್ಕಾರಗಳನ್ನು ಪರಿಶೀಲಿಸಬೇಕು ಎಂದು ಹೇಳಿದರು.

Tags:    

Similar News