ಮಧುಮೇಹಿಯಾದರೂ ಸಿಹಿತಿಂಡಿ, ಮಾವಿನಹಣ್ಣು ತಿನ್ನುವ ಕೇಜ್ರಿವಾಲ್:‌ ಇಡಿ ಹೇಳಿಕೆ

Update: 2024-04-18 12:08 GMT

ಏಪ್ರಿಲ್ 18- ತಮ್ಮ ವೈದ್ಯರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕಿಸಲು ಅವಕಾಶ ಮಾಡಿಕೊಡಬೇಕು ಎಂಬ  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ಇಡಿ ವಿರೋಧಿಸಿದೆ.  ಟೈಪ್ 2 ಮಧುಮೇಹದಿಂದ ಬಳಲುತ್ತಿದ್ದರೂ ಸಕ್ಕರೆ ಅಂಶವಿರುವ ಆಹಾರ ಸೇವಿಸುತ್ತಿದ್ದಾರೆ ಎಂದು ಇಡಿ ಹೇಳಿದೆ.

ತಿಹಾರ್ ಜೈಲಿನಲ್ಲಿರುವ ಕೇಜ್ರಿವಾಲ್‌ ಅವರಿಗೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಲು ನ್ಯಾಯಾಲಯ ಅನುಮತಿ ನೀಡಿದೆ. ಸಿಬಿಐ ಮತ್ತು ಇಡಿ ಪ್ರಕರಣಗಳ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಕೇಜ್ರಿವಾಲ್‌ ಅವರ ಡಯಟ್ ಚಾರ್ಟ್ ಮತ್ತಿತರ ವಿವರ ಸಲ್ಲಿಸುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸಕ್ಕರೆ ಮಟ್ಟದಲ್ಲಿ ಏರುಪೇರಾಗುತ್ತಿರುವ ಕಾರಣ ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ವೈದ್ಯರನ್ನು ಸಂಪರ್ಕಿಸಲು ಅನುಮತಿ ಕೋರಿ ಕೇಜ್ರಿವಾಲ್ ನ್ಯಾಯಾಲಯದ ಮೊರೆ ಹೋಗಿದ್ದರು.

ಮನೆ ಆಹಾರ ನಿಲ್ಲಿಸಲು ಪ್ರಯತ್ನ: ಮಧುಮೇಹದಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದರೂ, ಪೂರಿ, ಮಾವಿನಹಣ್ಣು, ಆಲೂಗಡ್ಡೆ ಮತ್ತು ಸಿಹಿತಿಂಡಿ ತಿನ್ನುತ್ತಿದ್ದಾರೆ. ವೈದ್ಯಕೀಯ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆʼ ಎಂದು ಇಡಿ ತಿಳಿಸಿದೆ. ಕೇಜ್ರಿವಾಲ್ ಅವರ ಕಾನೂನು ತಂಡ, ಮುಖ್ಯಮಂತ್ರಿ ವೈದ್ಯರು ಸೂಚಿಸಿದ ಆಹಾರ ಸೇವಿಸುತ್ತಿದ್ದಾರೆ ಎಂದು ಹೇಳಿದೆ. 

Tags:    

Similar News