ಪ್ರಧಾನಿ ಮೋದಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲು
ಇದೇ ಮೊದಲ ಬಾರಿಗೆ ಚುನಾವಣೆ ಆಯೋಗವು ಪ್ರಧಾನಿಯೊಬ್ಬರ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಿಕೊಂಡಿದೆ. ರಾಜಸ್ಥಾನದ ಬನ್ಸ್ವಾರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 25ರಂದು ವಿಭಜಕ ಮತ್ತು ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ, ವಿರೋಧ ಪಕ್ಷಗಳು ದೂರು ಸಲ್ಲಿಸಿದ್ದವು. ದೂರಿಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣೆ ಆಯೋಗ ಬಿಜೆಪಿಯನ್ನು ಕೇಳಿದೆ. ಅದೇ ಹೊತ್ತಿನಲ್ಲಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಲ್ಲಿಸಿರುವ ದೂರುಗಳಿಗೆ ಪ್ರತಿಕ್ರಿಯೆ ನೀಡುವಂತೆ ಆಯೋಗ ಕಾಂಗ್ರೆಸ್ಸಿಗೆ ಸೂಚಿಸಿದೆ.;
ಇದೇ ಮೊದಲ ಬಾರಿಗೆ ಚುನಾವಣೆ ಆಯೋಗವು ಪ್ರಧಾನಿಯೊಬ್ಬರ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಿಕೊಂಡಿದೆ.
ರಾಜಸ್ಥಾನದ ಬನ್ಸ್ವಾರಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 25ರಂದು ವಿಭಜಕ ಮತ್ತು ಅವಹೇಳನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ, ವಿರೋಧ ಪಕ್ಷಗಳು ದೂರು ಸಲ್ಲಿಸಿದ್ದವು. ದೂರಿಗೆ ಪ್ರತಿಕ್ರಿಯೆ ನೀಡುವಂತೆ ಚುನಾವಣೆ ಆಯೋಗ ಬಿಜೆಪಿಯನ್ನು ಕೇಳಿದೆ.
ಅದೇ ಹೊತ್ತಿನಲ್ಲಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿರಿಯ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸಲ್ಲಿಸಿರುವ ದೂರುಗಳಿಗೆ ಪ್ರತಿಕ್ರಿಯೆ ನೀಡುವಂತೆ ಆಯೋಗ ಕಾಂಗ್ರೆಸ್ಸಿಗೆ ಸೂಚಿಸಿದೆ.
ನಡ್ಡಾ ಅವರಿಗೆ ಇಸಿ ಪತ್ರ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಪತ್ರ ಬರೆದಿರುವ ಚುನಾವಣೆ ಆಯೋಗ ಏಪ್ರಿಲ್ 21 ರಂದು ಬನ್ಸ್ವಾರಾದಲ್ಲಿ ಮೋದಿ ಅವರು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್, ಸಿಪಿಐ ಮತ್ತು ಸಿಪಿಐ(ಎಂಎಲ್) ಸಲ್ಲಿಸಿರುವ ದೂರುಗಳಿಗೆ ಸೋಮವಾರದೊಳಗೆ (ಏಪ್ರಿಲ್ 29) ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ʻಪಕ್ಷದ ಎಲ್ಲಾ ಸ್ಟಾರ್ ಪ್ರಚಾರಕರು ರಾಜಕೀಯ ಸಂವಾದದ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತಾರೆ ಮತ್ತು ಮಾದರಿ ನೀತಿ ಸಂಹಿತೆಯ ನಿಬಂಧನೆಗಳನ್ನು ಚಾಚೂ ತಪ್ಪದೆ ಅನುಸರಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಬೇಕೆಂದು ನಡ್ಡಾ ಅವರಿಗೆ ಆಯೋಗ ಹೇಳಿದೆ.
ಪ್ರಧಾನಿಯೊಬ್ಬರ ವಿರುದ್ಧ ದೂರಿನ ಬಗ್ಗೆ ಆಯೋಗ ಗಮನ ಹರಿಸಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಟಾರ್ ಪ್ರಚಾರಕರನ್ನು ನಿಯಂತ್ರಿಸುವ ಮೊದಲ ಹೆಜ್ಜೆಯಾಗಿ ಪಕ್ಷದ ಅಧ್ಯಕ್ಷರನ್ನು ಜವಾಬ್ದಾರಿಯಾಗಿಸಲು ಜನಪ್ರತಿನಿಧಿಗಳ ಪ್ರಾತಿನಿಧ್ಯ ಕಾಯ್ದೆಯನ್ನು ಬಳಸಿಕೊಳ್ಳಲು ಆಯೋಗ ಮುಂದಾಗಿದೆ.
ಖರ್ಗೆ ಅವರಿಗೂ ಪತ್ರ: ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಮತ್ತು ರಾಹುಲ್ ಗಾಂಧಿ ಅವರಿಗೂ ಇಂಥದ್ದೇ ಪತ್ರವನ್ನು ಆಯೋಗ ಕಳಿಸಿದೆ. ಆಯೋಗದ ಪತ್ರಗಳಲ್ಲಿ ಮೋದಿ, ರಾಹುಲ್ ಅಥವಾ ಖರ್ಗೆ ಅವರ ಹೆಸರಿಲ್ಲ. ಬದಲಾಗಿ, ಅದು ಸ್ವೀಕರಿಸಿದ ಮೂವರು ನಾಯಕರ ವಿರುದ್ಧದ ಆರೋಪಗಳ ವಿವರಗಳಿರುವ ದೂರಿನ ಪ್ರತಿಯನ್ನು ಆಯಾ ಪತ್ರಗಳಿಗೆ ಲಗತ್ತಿಸಲಾಗಿದೆ.
ಕಾಂಗ್ರೆಸ್ ದೂರು: ಇಸಿಗೆ ನೀಡಿದ ದೂರಿನಲ್ಲಿ,ʻಕಾಂಗ್ರೆಸ್ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರುಹಂಚಿಕೆ ಮಾಡಲು ಬಯಸಿದೆ ಹಾಗೂ ವಿವಾಹಿತ ಮಹಿಳೆಯರ ʻಮಂಗಲಸೂತ್ರ ʼವನ್ನೂ ಬಿಡುವುದಿಲ್ಲ ಎಂದು ಮೋದಿ ಹೇಳಿದ್ದಾರೆʼ ಎಂದು ಕಾಂಗ್ರೆಸ್ ಆರೋಪಿಸಿದೆ. ಮತ್ತೊಂದೆಡೆ, ʻತಮಿಳುನಾಡಿನ ಕೊಯಮತ್ತೂರಿನಲ್ಲಿ ರಾಹುಲ್ ತಮ್ಮ ಭಾಷಣದಲ್ಲಿ ಮೋದಿ ವಿರುದ್ಧ ದುರುದ್ದೇಶಪೂರಿತ ಮತ್ತು ಸಂಪೂರ್ಣ ಕೆಟ್ಟ ಆರೋಪ ಮಾಡಿದ್ದಾರೆʼ ಎಂದು ಬಿಜೆಪಿ ಆಯೋಗಕ್ಕೆ ಪತ್ರ ಬರೆದಿತ್ತು.
ʻಎಸ್‌ಸಿ ಮತ್ತು ಎಸ್‌ಟಿಗಳ ವಿರುದ್ಧದ ತಾರತಮ್ಯದಿಂದಾಗಿ ರಾಮ ಮಂದಿರ ಶಂಕುಸ್ಥಾಪನೆ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಿಲ್ಲ ಎಂದು ಹೇಳುವ ಮೂಲಕ ಖರ್ಗೆ ಮಾದರಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆʼ ಎಂದು ಬಿಜೆಪಿ ಆರೋಪಿಸಿದೆ.