ಎಎಪಿಗೆ 25 ಕೋಟಿ ರೂ. ನೀಡುವಂತೆ ಉದ್ಯಮಿಗೆ ಕವಿತಾ ಒತ್ತಾಯ: ಸಿಬಿಐ

Update: 2024-04-13 11:09 GMT

ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ. ಕವಿತಾ ಅವರು ಆಮ್‌ ಆದ್ಮಿ ಪಕ್ಷಕ್ಕೆ 25 ಕೋಟಿ ರೂ. ನೀಡುವಂತೆ ಅರಬಿಂದೋ ಫಾರ್ಮಾ ಪ್ರವರ್ತಕ ಶರತ್ ಚಂದ್ರ ರೆಡ್ಡಿ ಅವರಿಗೆ ಒತ್ತಡ ಹೇರಿದ್ದರು ಎಂದು ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಹೇಳಿದೆ.

ನ್ಯಾಯಾಲಯ ಏಪ್ರಿಲ್ 15ರವರೆಗೆ ಕವಿತಾ ಅವರ ಸಿಬಿಐ ಕಸ್ಟಡಿಗೆ ಅನುಮತಿ ನೀಡಿದೆ. ದೆಹಲಿ ಮದ್ಯ ಹಗರಣ ಪ್ರಕರಣದ ಆರೋಪಿ ರೆಡ್ಡಿ ಅವರು ಈಗ ಅನುಮೋದಕರಾಗಿ ಬದಲಾಗಿದ್ದಾರೆ. ಅವರ ವಿರುದ್ಧ ಸಿಬಿಐ ಇನ್ನೂ ಆರೋಪಪಟ್ಟಿ ಸಲ್ಲಿಸಬೇಕಿದೆ.

ಸಿಬಿಐ ಆರೋಪ: ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರು ಎಎಪಿಗೆ ಹಣ ಪಾವತಿಸದಿದ್ದರೆ, ತೆಲಂಗಾಣ ಮತ್ತು ದೆಹಲಿ ಎರಡರಲ್ಲೂ ನಿಮ್ಮ ವ್ಯವಹಾರಕ್ಕೆ ಹಾನಿಯಾಗುತ್ತದೆ ಎಂದು ರೆಡ್ಡಿಗೆ ಬೆದರಿಕೆ ಹಾಕಿದರು ಎಂದು ಸಿಬಿಐ ವಕೀಲರು ನ್ಯಾಯಾಲಯ ಕ್ಕೆ ತಿಳಿಸಿದ್ದರು. 

ಕವಿತಾ ಸಗಟು ವ್ಯಾಪಾರಕ್ಕೆ ಮುಂಗಡ 25 ಕೋಟಿ ರೂ. ಮತ್ತು ಮದ್ಯದ ವ್ಯವಹಾರ ಪಡೆಯಲು ಪ್ರತಿ ಚಿಲ್ಲರೆ ವಲಯಕ್ಕೆ 5 ಕೋಟಿ ರೂ. ಪಾವತಿಸಬೇಕಾಗುತ್ತದೆ ಎಂದು ರೆಡ್ಡಿಗೆ ಹೇಳಿದ್ದರು. ಹಣವನ್ನು ಆಕೆಯ ಸಹಚರರಾದ ಅರುಣ್ ಆರ್ ಪಿಳ್ಳೈ ಮತ್ತು ಅಭಿಷೇಕ್ ಬೋಯಿನ್‌ ಪಲ್ಲಿ ಅವರಿಗೆ ಪಾವತಿಸಬೇಕಿತ್ತು. ಅವರು ಕೇಜ್ರಿವಾಲ್ ಪ್ರತಿನಿಧಿ ವಿಜಯ್ ನಾಯರ್ ಅವರೊಂದಿಗೆ ಸಮನ್ವಯ ಸಾಧಿಸುತ್ತಾರೆ ಎಂದು ಹೇಳಿದ್ದರು ಎಂದು ಸಿಬಿಐ ತಿಳಿಸಿದೆ.

ಕವಿತಾ ಅವರ ಎನ್‌ಜಿಒಗೆ 80 ಲಕ್ಷ ರೂ.: ಸಿಬಿಐ ಮಾರ್ಚ್ ಮತ್ತು ಮೇ 2021ರಲ್ಲಿ ಪಿಳ್ಳೈ, ಬೋಯೀನ್‌ಪಲ್ಲಿ ಮತ್ತು ಬುಚ್ಚಿಬಾಬು ಗೋರಂಟ್ಲಾ ಅವರು ದೆಹಲಿಯ ಹೋಟೆಲ್ ಒಬೆರಾಯ್‌ ನಲ್ಲಿ ತಂಗಿ, ನಿಬಂಧನೆಗಳನ್ನು ಸೇರಿಸಿ ಮದ್ಯ ನೀತಿಯನ್ನು ತಮ್ಮ ಪರವಾಗಿ ತಿರುಗಿಸಲು ಪ್ರಯತ್ನಿಸಿದ್ದರು. ಕವಿತಾ ಅವರ ಬೆಂಬಲದ ಭರವಸೆ ಪಡೆದ ನಂತರ, ಅರಬಿಂದೋ ರಿಯಾಲ್ಟಿ ಮತ್ತು ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಲ್ಪನಾ ಅವರ ಎನ್‌ಜಿಒ ತೆಲಂಗಾಣ ಜಾಗೃತಿಗೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅಡಿಯಲ್ಲಿ ಮಾರ್ಚ್ 2021 ರಲ್ಲಿ 80 ಲಕ್ಷ ರೂ. ಪಾವತಿಸಿತು ಎಂದು ಸಿಬಿಐ ಆರೋಪಿಸಿದೆ.

ಜೂನ್-ಜುಲೈ 2021 ರಲ್ಲಿ ಕವಿತಾ ಅವರು ತೆಲಂಗಾಣದ ಮಹಬೂಬ್ ನಗರದಲ್ಲಿರುವ ಕೃಷಿ ಭೂಮಿಯ ಮಾರಾಟಕ್ಕೆ ಒಪ್ಪಂದ ಮಾಡಿಕೊಳ್ಳುವಂತೆ ಶರತ್ ಚಂದ್ರ ರೆಡ್ಡಿ ಅವರ ಮೇಲೆ ಒತ್ತಡ ಹೇರಿದ್ದರು. ರೆಡ್ಡಿ ಈ ಭೂಮಿ ಖರೀದಿಸಲು ಉತ್ಸುಕರಾಗಿರಲಿಲ್ಲ. ಆ ಭೂಮಿಯ ಮೌಲ್ಯದ ಬಗ್ಗೆಯೂ ಅವರಿಗೆ ಗೊತ್ತಿರಲಿಲ್ಲ. ರೆಡ್ಡಿ ಅವರು ಭೂಮಿಗೆ 14 ಕೋಟಿ ರೂ. ಪಾವತಿಸಬೇಕು ಎಂದು ಕವಿತಾ ಒತ್ತಾಯಿಸಿದರು ಮತ್ತು ಅರಬಿಂದೋ ಗ್ರೂಪ್ ಕಂಪನಿಗಳಲ್ಲಿ ಒಂದಾದ ಮಹಿರಾ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಮಾರಾಟ ಒಪ್ಪಂದ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಸಿಬಿಐ ಹೇಳಿದೆ.

ಎಎಪಿ ಆರೋಪ: ರೆಡ್ಡಿ ಕಂಪನಿ ಚುನಾವಣೆ ಬಾಂಡ್‌ಗಳ ಮೂಲಕ ಬಿಜೆಪಿಗೆ 59.5 ಕೋಟಿ ರೂ. ಪಾವತಿಸಿದೆ ಎಂದು ಎಎಪಿ ಮಾರ್ಚ್ 24 ರಂದು ಆರೋಪಿಸಿತ್ತು. ʻಶರತ್ ರೆಡ್ಡಿ ಒಡೆತನದ ಕಂಪನಿಗಳು ಚುನಾವಣೆ ಬಾಂಡ್‌ ಖರೀದಿಸಿ, ಬಿಜೆಪಿಗೆ ನೀಡಿವೆ. ಇದೀಗ ಹಗರಣ ದೇಶದ ಮುಂದೆ ಬಯಲಾಗಿದೆ. ಅಬಕಾರಿ ನೀತಿ ರೂಪಿಸುತ್ತಿರುವಾಗಲೇ ರೆಡ್ಡಿ 4.5 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದರು ಮತ್ತು ಬಂಧನದ ನಂತರ 55 ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದರು. ಕಳೆದ ಎರಡು ವರ್ಷಗಳಿಂದ ಹುಡುಕುತ್ತಿದ್ದ ಹಣದ ಜಾಡು ಇಲ್ಲಿದೆʼ ಎಂದು ದೆಹಲಿ ಸಚಿವೆ ಅತಿಶಿ ಹೇಳಿದ್ದರು.

Tags:    

Similar News