ನವದೆಹಲಿ, ಮೇ 6 -ಬಿಆರ್‌ಎಸ್ ನಾಯಕಿ ಕೆ. ಕವಿತಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಇಲ್ಲಿನ ನ್ಯಾಯಾಲಯ ಸೋಮವಾರ ವಜಾಗೊಳಿಸಿದೆ.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಇಡಿ ತನಿಖೆ ನಡೆಸುತ್ತಿವೆ. ಸಿಬಿಐ ಮತ್ತು ಇಡಿ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಅರ್ಜಿಯನ್ನು ವಜಾಗೊಳಿಸಿದ್ದು, ʻಆರೋಪಿ ವಿರುದ್ಧ ಸಾಕಷ್ಟು ಸಾಕ್ಷ್ಯ ಇದೆʼ ಎಂದು ಹೇಳಿದರು.
ಚರ್ಚೆ, ದಾಖಲಾದ ವಸ್ತು ಮತ್ತು ಆರೋಪಿಗಳ ವಿರುದ್ಧದ ಆರೋಪದ ಗಂಭೀರತೆಯ ಹಿನ್ನೆಲೆಯಲ್ಲಿ ಈ ಹಂತದಲ್ಲಿ ಅರ್ಜಿದಾರರಿಗೆ ಜಾಮೀನು ನೀಡಲು ನ್ಯಾಯಾಲಯವು ಒಲವು ತೋರಿಲ್ಲ. ʻಸಾಕ್ಷಿಗಳ ಬೆದರಿಕೆಗೆ ಸಂಬಂಧಿಸಿದಂತೆ ಅವರ ನಡವಳಿಕೆಯನ್ನು ಪರಿಗಣಿಸಿ, ಪ್ರಭಾವಿ ವ್ಯಕ್ತಿಯಾಗಿರುವ ಅವರು ಪ್ರಕರಣದ ಇತರ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಬಹುದು ಎಂಬುದನ್ನು ಪರಿಗಣಿಸಿ, ಆರೋಪಿಗೆ ಜಾಮೀನು ನಿರಾಕರಿಸಲಾಗಿದೆ,ʼ’ ಎಂದು ನ್ಯಾಯಾಧೀಶರು ಹೇಳಿದರು. ಆರೋಪಿಯ ಹೆಚ್ಚಿನ ತನಿಖೆ ಅಗತ್ಯವಿಲ್ಲ. ಅವರನ್ನು ಕಸ್ಟಡಿಯಲ್ಲಿ ಇರಿಸುವುದರಿಂದ ಯಾವುದೇ ಉದ್ದೇಶ ಪೂರೈಕೆಯಾಗುವುದಿಲ್ಲ ಎಂದು ವಕೀಲ ನಿತೇಶ್ ರಾಣಾ ಅವರು ಸಲ್ಲಿಸಿದ ಅರ್ಜಿಯಲ್ಲಿ ಹೇಳಿದ್ದರು.
ಆದರೆ, ಕೇಂದ್ರ ತನಿಖಾ ಸಂಸ್ಥೆಗಳ ವಾದಗಳನ್ನು ನ್ಯಾಯಾಧೀಶರು ಒಪ್ಪಿಕೊಂಡರು.ʻದೇಶದ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಪ್ರವೃತ್ತಿಯಿಂದಾಗಿ, ವೈಯಕ್ತಿಕ ಸ್ವಾತಂತ್ರ್ಯಕ್ಕಿಂತ ಸಾರ್ವಜನಿಕ ಆಸಕ್ತಿಗೆ ಆದ್ಯತೆ ನೀಡಬೇಕು. ತನಿಖೆ ಅತ್ಯಂತ ನಿರ್ಣಾಯಕ ಹಂತದಲ್ಲಿದೆʼ ಎಂದು ನ್ಯಾಯಾಧೀಶರು ಹೇಳಿದರು. ವೈದ್ಯಕೀಯ ಕಾರಣಕ್ಕಾಗಿ ಜಾಮೀನು ನೀಡಬೇಕೆಂಬ ವಾದವನ್ನು ನ್ಯಾಯಾಧೀಶರು ತಿರಸ್ಕರಿಸಿದರು. ʻಜೈಲಿನ ದವಾಖಾನೆಯಲ್ಲಿ ಅಗತ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಂತದಲ್ಲಿ 'ನಿಯಮಿತ' ಅಥವಾ 'ಮಧ್ಯಂತರ' ಜಾಮೀನಿನ ಮೇಲೆ ಆರೋಪಿಯನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಅರ್ಜಿ ವಜಾ ಗೊಳಿಸಲಾಗಿದೆ,ʼ ಎಂದು ನ್ಯಾಯಾಧೀಶರು ಹೇಳಿದರು.