ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ; ಬಾಲ್ಕನಿಂದ ಹಾರಿ ತಂದೆ, ಮಕ್ಕಳು ಸಾವು
ಶಪತ್ ಸೊಸೈಟಿ ಎಂಬ ವಸತಿ ಕಟ್ಟಡದ ಎಂಟನೇ ಮತ್ತು ಒಂಬತ್ತನೇ ಮಹಡಿಯಲ್ಲಿ ಮಂಗಳವಾರ ಬೆಳಿಗ್ಗೆ 9.58 ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಯಶ್ ಯಾದವ್ 10 ವರ್ಷ ವಯಸ್ಸಿನ ತನ್ನ ಇಬ್ಬರು ಮಕ್ಕಳೊಂದಿಗೆ ಬಾಲ್ಕನಿಯಿಂದ ಹಾರಿದ್ದಾರೆ.;
ಕಟ್ಟಡವನ್ನು ಆವರಿಸಿಕೊಂಡಿರುವ ಬೆಂಕಿ
ದೆಹಲಿಯ ದ್ವಾರಕಾ ಸೆಕ್ಟರ್ -13 ರ ವಸತಿ ಕಟ್ಟಡವೊಂದರಲ್ಲಿ ಮಂಗಳವಾರ ಬೆಳಿಗ್ಗೆ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಬೆಂಕಿಯಿಂದ ತಪ್ಪಿಸಿಕೊಳ್ಳಲು 9 ನೇ ಮಹಡಿಯ ಮನೆಯಿಂದ ಹಾರಿದ ತಂದೆ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ದೆಹಲಿಯ ದ್ವಾರಕಾ ಸೆಕ್ಟರ್ -13 ರಲ್ಲಿರುವ ಶಪತ್ ಸೊಸೈಟಿ ಎಂಬ ವಸತಿ ಕಟ್ಟಡದ ಎಂಟನೇ ಮತ್ತು ಒಂಬತ್ತನೇ ಮಹಡಿಯಲ್ಲಿ ಮಂಗಳವಾರ ಬೆಳಿಗ್ಗೆ 9.58 ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಬೆಂಕಿಯ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಯಶ್ ಯಾದವ್ 10 ವರ್ಷ ವಯಸ್ಸಿನ ತನ್ನ ಇಬ್ಬರು ಮಕ್ಕಳೊಂದಿಗೆ ಬಾಲ್ಕನಿಯಿಂದ ಹಾರಿದರು. ಈ ವೇಳೆ ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಾಗಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೂವರು ಮೃತಪಟ್ಟಿದ್ದಾರೆ.
ಯಶ್ ಯಾದವ್ ಅವರ ಪತ್ನಿ ಮತ್ತು ಹಿರಿಯ ಮಗ ಬೆಂಕಿಯಿಂದ ಬದುಕುಳಿದಿದ್ದು, ಐಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿಯ ನಿಯೋಜನೆ
ಸ್ಥಳದಲ್ಲಿ ಐದು ಅಗ್ನಿಶಾಮಕ ದಳದ ವಾಹನಗಳನ್ನು ನಿಯೋಜನೆ ಮಾಡಲಾಗಿದ್ದು,ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಶಪತ್ ಸೊಸೈಟಿಯ ಎಲ್ಲಾ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಯಾವುದೇ ಅಹಿತಕರ ಘಟನೆಯನ್ನು ತಪ್ಪಿಸಲು ಕಟ್ಟಡದಲ್ಲಿ ವಿದ್ಯುತ್ ಮತ್ತು ಅನಿಲ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿದೆ.