ರಾಯ್ ಬರೇಲಿಯಿಂದ ರಾಹುಲ್‌, ಅಮೇಥಿಯಿಂದ ಕೆ.ಎಲ್. ಶರ್ಮಾ ಸ್ಪರ್ಧೆ

Update: 2024-05-03 06:43 GMT

ಮೇ 3: ರಾಹುಲ್ ಗಾಂಧಿ ಅವರು ರಾಯ್ ಬರೇಲಿಯಿಂದ ಹಾಗೂ ಪಕ್ಷದ ನಾಯಕ ಕಿಶೋರಿ ಲಾಲ್ ಶರ್ಮಾ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಕಾಂಗ್ರೆಸ್‌ ಶುಕ್ರವಾರ ಹೇಳಿದೆ. ಇದರಿಂದ, ಉತ್ತರ ಪ್ರದೇಶದ ಎರಡು ಪ್ರಮುಖ ಲೋಕಸಭೆ ಸ್ಥಾನಗಳಿಗೆ ಅಭ್ಯರ್ಥಿಗಳ ಆಯ್ಕೆಯಲ್ಲಿನ ಅನಿಶ್ಚಿತತೆ ಕೊನೆಗೊಂಡಿದೆ. 

ಐದನೇ ಸುತ್ತಿನಲ್ಲಿ ಮೇ 20 ರಂದು ಚುನಾವಣೆ ನಡೆಯಲಿರುವ ಸ್ಥಾನಗಳಿಗೆ ಶುಕ್ರವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. 

2019 ರಲ್ಲಿ ರಾಹುಲ್ ಗಾಂಧಿ ಕುಟುಂಬದ ಭದ್ರಕೋಟೆಯಾದ ಅಮೇಥಿಯನ್ನು ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಕಳೆದುಕೊಂಡರು. ಇರಾನಿ ಅವರು ಈಗಾಗಲೇ ಈ ಸ್ಥಾನದಿಂದ ಉಮೇದುವಾರಿಕೆ ಸಲ್ಲಿಸಿದ್ದಾರೆ. ರಾಯ್ ಬರೇಲಿಯಿಂದ ದಿನೇಶ್ ಪ್ರತಾಪ್ ಸಿಂಗ್ ಅವರು ಅಭ್ಯರ್ಥಿ ಎಂದು ಬಿಜೆಪಿ ಗುರುವಾರ ಹೇಳಿದೆ. ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರ ವಿರುದ್ಧ ಸೋತಿದ್ದರು. 

ಗಾಂಧಿ ಕುಟುಂಬದ ಮೇಲೆ ಒತ್ತಡ: ಈ ಎರಡೂ ಸ್ಥಾನಗಳಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್ಸಿನ ಉತ್ತರ ಪ್ರದೇಶದ ನಾಯಕತ್ವದಿಂದ ಗಾಂಧಿ ಕುಟುಂಬದ ಮೇಲೆ ಅಪಾರ ಒತ್ತಡವಿತ್ತು. ರಾಹುಲ್ ಮತ್ತು ಪ್ರಿಯಾಂಕಾ ಇಬ್ಬರನ್ನೂ ಕಣಕ್ಕಿಳಿಸುವಂತೆ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸದಸ್ಯರು ಪಕ್ಷದ ನಾಯಕತ್ವ ವನ್ನು ಒತ್ತಾಯಿಸಿದ್ದರು. 

ಅಮೇಥಿಯಿಂದ ಶರ್ಮಾ ಸ್ಪರ್ಧೆ: ಅಮೇಥಿ ಕ್ಷೇತ್ರದಿಂದ ಕಿಶೋರಿ ಲಾಲ್ ಶರ್ಮಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಅವರು ಶುಕ್ರವಾರ (ಮೇ 3) ನಾಮಪತ್ರ ಸಲ್ಲಿಸಲಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸಲಿದ್ದಾರೆ. 2019 ರಲ್ಲಿ ರಾಹುಲ್ ಗಾಂಧಿ ಅವರನ್ನು ಸ್ಮೃತಿ ಇರಾನಿ ಅವರು ಸೋಲಿಸುವ ವರೆಗೂ ಕಾಂಗ್ರೆಸ್ ಭದ್ರಕೋಟೆ ಎಂದು ಪರಿಗಣಿಸಲಾದ ಅಮೇಥಿ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಯೊಬ್ಬರು ಸ್ಪರ್ಧಿಸಲಿದ್ದಾರೆ. 

ಸೋನಿಯಾ ಗಾಂಧಿ 1999 ರಿಂದ 2004 ರವರೆಗೆ ಮತ್ತು ಆನಂತರ ರಾಹುಲ್ 2004 ರಿಂದ 2019 ರವರೆಗೆ ಅಮೇಥಿಯನ್ನು ಪ್ರತಿನಿಧಿಸಿದ್ದರು ಸೋನಿಯಾ ಗಾಂಧಿ ಆನಂತರ ರಾಯ್ ಬರೇಲಿ ಕ್ಷೇತ್ರಕ್ಕೆ ತೆರಳಿದರು. ಅದಕ್ಕೂ ಮೊದಲು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು 1981 ರಿಂದ 1991 ರವರೆಗೆ ಅಮೇಥಿಯಿಂದ ಕಾಂಗ್ರೆಸ್ ಸಂಸದರಾಗಿದ್ದರು. 

ಗಾಂಧಿ ಕುಟುಂಬದ ಆಪ್ತ: ಶರ್ಮಾ ಮೂಲತಃ ಪಂಜಾಬ್‌ನ ಲುಧಿಯಾನದವರು. 1983ರಿಂದ ರಾಜೀವ್ ಅವರ ನಿಕಟವರ್ತಿಯಾಗಿದ್ದರು. 1991ರಲ್ಲಿ ರಾಜೀವ್‌  ಅವರ ಹತ್ಯೆ ನಂತರ ಅಮೇಥಿಯಲ್ಲಿ ಕ್ಯಾಪ್ಟನ್ ಸತೀಶ್ ಶರ್ಮಾ ಅವರೊಂದಿಗೆ ಕೆಲಸ ಮುಂದುವರಿಸಿದರು. 1999ರಲ್ಲಿ ಅಮೇಥಿಯಿಂದ ಸೋನಿಯಾ ಅವರ ಮೊದಲ ಚುನಾವಣೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕ್ಷೇತ್ರದಲ್ಲಿ ಅವರ ಪ್ರತಿನಿಧಿಯಾಗಿದ್ದರು. 2004ರಲ್ಲಿ ಸೋನಿಯಾ ಅವರ ರಾಯ್‌ ಬರೇಲಿ ಗೆಲುವು ಮತ್ತು ಅಮೇಥಿಯಿಂದ ರಾಹುಲ್ ಅವರ ಮೊದಲ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಸುಮಾರು ನಾಲ್ಕು ದಶಕಗಳಿಂದ ಈ ಪ್ರದೇಶದಲ್ಲಿ ಪಕ್ಷದ ಅಸ್ತಿತ್ವವನ್ನು ಕಾಪಾಡಿಕೊಳ್ಳುವಲ್ಲಿ ಶರ್ಮಾ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಪಂಜಾಬ್ ಮತ್ತು ಬಿಹಾರದಲ್ಲೂ ಕಾಂಗ್ರೆಸ್ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ.

ಮೇ 20ರಂದು ಚುನಾವಣೆ: ಮೇ 20 ರಂದು ಎರಡೂ ಕ್ಷೇತ್ರಗಳಿಗೆ ಮತದಾನ ನಿಗದಿಯಾಗಿದೆ. ಇಂಡಿಯ ಒಕ್ಕೂಟದ ಭಾಗವಾಗಿ ಸಮಾಜವಾದಿ ಪಕ್ಷದೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ರಾಜ್ಯದಲ್ಲಿ 17 ಲೋಕಸಭೆ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.

Tags:    

Similar News