ಬೀದಿನಾಯಿಗಳ ಕುರಿತ ಆದೇಶದ ಬೆನ್ನಲ್ಲೇ, ಸುಪ್ರೀಂ ಕೋರ್ಟ್ ಆವರಣದಲ್ಲಿ ಆಹಾರ ತ್ಯಾಜ್ಯಕ್ಕೆ ನಿಷೇಧ
ಆಗಸ್ಟ್ 11ರಂದು, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರ ಪೀಠವು, ನಾಯಿ ಕಡಿತದ ಘಟನೆಗಳು "ಅತ್ಯಂತ ಗಂಭೀರ" ಪರಿಸ್ಥಿತಿ ಸೃಷ್ಟಿಸಿವೆ ಎಂದು ಅಭಿಪ್ರಾಯಪಟ್ಟಿದೆ. .;
ದೆಹಲಿ-ಎನ್ಸಿಆರ್ನಲ್ಲಿರುವ ಎಲ್ಲಾ ಬೀದಿನಾಯಿಗಳನ್ನು ಹಿಡಿದು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ ಮರುದಿನವೇ, ಸುಪ್ರೀಂ ಕೋರ್ಟ್ ತನ್ನ ಮತ್ತೊಂದು ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ. ನಾಯಿಗಳ ದಾಳಿ ತಡೆಯುವ ಉದ್ದೇಶದಿಂದ, ನ್ಯಾಯಾಲಯದ ಆವರಣದೊಳಗೆ ಯಾವುದೇ ಕಾರಣಕ್ಕೂ ಆಹಾರ ತ್ಯಾಜ್ಯ ಎಸೆಯುವುದನ್ನು ನಿಷೇಧಿಸಿದೆ.
ಸುಪ್ರೀಂ ಕೋರ್ಟ್ ಆವರಣದ ಕಾರಿಡಾರ್ಗಳಲ್ಲಿ ಮತ್ತು ಲಿಫ್ಟ್ಗಳಲ್ಲಿ ಬೀದಿನಾಯಿಗಳ ಓಡಾಟ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸುತ್ತೋಲೆಯಲ್ಲಿ ಏನಿದೆ?
"ಎಲ್ಲಾ ಆಹಾರ ತ್ಯಾಜ್ಯಗಳನ್ನು ಮುಚ್ಚಳವಿರುವ ಕಸದ ಬುಟ್ಟಿಗಳಲ್ಲಿಯೇ ವಿಲೇವಾರಿ ಮಾಡಬೇಕು. ಯಾವುದೇ ಸಂದರ್ಭದಲ್ಲೂ ಆಹಾರವನ್ನು ತೆರೆದ ಸ್ಥಳಗಳಲ್ಲಿ ಅಥವಾ ಮುಚ್ಚಳವಿಲ್ಲದ ಪಾತ್ರೆಗಳಲ್ಲಿ ಬಿಸಾಡಬಾರದು. ಆಹಾರಕ್ಕಾಗಿ ಪ್ರಾಣಿಗಳು ಆಕರ್ಷಿತರಾಗುವುದನ್ನು ಮತ್ತು ಹುಡುಕಾಡುವುದನ್ನು ತಡೆಯಲು ಈ ಕ್ರಮ ಅತ್ಯಗತ್ಯ. ಇದು ಪ್ರಾಣಿಗಳ ದಾಳಿಯ ಅಪಾಯ ಕಡಿಮೆ ಮಾಡುತ್ತದೆ ಮತ್ತು ನೈರ್ಮಲ್ಯ ಕಾಪಾಡುತ್ತದೆ. ಎಲ್ಲರ ಸುರಕ್ಷತೆಗಾಗಿ ಈ ನಿರ್ದೇಶನವನ್ನು ಪಾಲಿಸುವುದು ಅತ್ಯವಶ್ಯಕ," ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಆಗಸ್ಟ್ 11ರಂದು, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಆರ್. ಮಹದೇವನ್ ಅವರ ಪೀಠವು, ನಾಯಿ ಕಡಿತದ ಘಟನೆಗಳು ಅತ್ಯಂತ ಗಂಭೀರ ಪರಿಸ್ಥಿತಿ ಸೃಷ್ಟಿಸಿವೆ ಎಂದು ಅಭಿಪ್ರಾಯಪಟ್ಟು, ದೆಹಲಿ-ಎನ್ಸಿಆರ್ನ ಎಲ್ಲಾ ಬೀದಿನಾಯಿಗಳನ್ನು "ಸಾಧ್ಯವಾದಷ್ಟು ಬೇಗ" ಶಾಶ್ವತವಾಗಿ ನಿರಾಶ್ರಿತ ತಾಣಗಳಿಗೆ ಸ್ಥಳಾಂತರಿಸಲು ಆದೇಶಿಸಿತ್ತು. ಅಲ್ಲದೆ, ಆರು-ಎಂಟು ವಾರಗಳಲ್ಲಿ ಸುಮಾರು 5,000 ನಾಯಿಗಳಿಗೆ ಆಶ್ರಯ ಕಲ್ಪಿಸುವ ವ್ಯವಸ್ಥೆ ಮಾಡುವಂತೆ ದೆಹಲಿ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು. ಈ ಸ್ಥಳಾಂತರ ಪ್ರಕ್ರಿಯೆಗೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಅಡ್ಡಿಪಡಿಸಿದರೆ, ಅವರ ವಿರುದ್ಧ ಕಠಿಣ ಕ್ರಮ ಹಾಗೂ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವುದಾಗಿಯೂ ನ್ಯಾಯಾಲಯ ಎಚ್ಚರಿಸಿತ್ತು. ಈ ಮಹತ್ವದ ಆದೇಶದ ಬೆನ್ನಲ್ಲೇ, ಇದೀಗ ಸುಪ್ರೀಂ ಕೋರ್ಟ್ ತನ್ನದೇ ಆವರಣದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೆ ತಂದಿದೆ.