ಬೆಂಗಳೂರಿನಲ್ಲಿ ಬಿಗಡಾಯಿಸಿದ ನೀರಿನ ಸಮಸ್ಯೆ: ಶಾಲೆಗೆ ರಜೆ ಘೋಷಣೆ
ಬತ್ತಿದ ಬೋರ್‌ವೆಲ್: ಕುಡಿಯಲು, ಕೈ ತೊಳೆಯಲು ನೀರಿಲ್ಲದೆ ಮಕ್ಕಳ ಪರದಾಟ | ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ;
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಶಾಲೆಯನ್ನು ಮುಚ್ಚುವ ಹಂತಕ್ಕೆ ಪರಿಸ್ಥಿತಿ ತಲುಪಿದ್ದು, ಮುಂದಿನ ದಿನಗಳಲ್ಲಿ ಏನಾಗಲಿದೆ ಎನ್ನುವ ಆತಂಕ ಶುರುವಾಗಿದೆ. ಶಾಲೆಯಲ್ಲಿ ನೀರಿಲ್ಲ ಎನ್ನುವ ಕಾರಣಕ್ಕೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಖಾಸಗಿ ಶಾಲೆಯೊಂದನ್ನು ಮುಚ್ಚಲಾಗಿದ್ದು, ಬೆಂಗಳೂರಿನ ನೀರಿನ ಸಮಸ್ಯೆ ಆತಂಕ ಸೃಷ್ಟಿಸಿದೆ. ಈ ಖಾಸಗಿ ಶಾಲೆಯಲ್ಲಿ 100 ಜನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಮೂರು ದಿನ ರಜೆ
ಖಾಸಗಿ ಶಾಲೆಯಲ್ಲಿ ನೀರಿನ ಸಮಸ್ಯೆ ಎದುರಾಗಿರುವುದರಿಂದ ಮಂಗಳವಾರದಿಂದಲೇ ಶಾಲೆಗೆ ರಜೆ ಘೋಷಿಸಲಾಗಿದ್ದು, ಮಾರ್ಚ್ 10ರ ವರೆಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ನೀರು ಇಲ್ಲದೆ ಇರುವುದು ಸಮಸ್ಯೆ ಆಗುತ್ತಿರುವುದರಿಂದ ಶಾಲೆಗೆ ರಜೆ ಘೋಷಿಸಿರುವುದಾಗಿಯೂ, ಶಾಲೆಯಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಸ್ಥಳೀಯ ಪ್ರತಿನಿಧಿಗಳಿಗೆ ತಿಳಿಸಿದ್ದರೂ ಪರಿಹಾರವಾಗಿಲ್ಲ ಎಂದು ಶಾಲೆಯ ಸಿಬ್ಬಂದಿಯೊಬ್ಬರು ತಿಳಿಸಿರುವುದಾಗಿ ವರದಿ ಆಗಿದೆ.
ಸರ್ಕಾರಿ ಶಾಲೆಯಲ್ಲೂ ಸಮಸ್ಯೆ
ನೀರಿನ ಸಮಸ್ಯೆ ಇದೆ ಎಂದು ಖಾಸಗಿ ಶಾಲೆ ರಜೆ ಘೋಷಿಸಿದೆ. ಇದೇ ಸಂದರ್ಭದಲ್ಲಿ ಬನ್ನೇರುಘಟ್ಟ ಹಾಗೂ ಹೊಸಕೆರೆಹಳ್ಳಿ ಭಾಗದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು, ಶಾಲಾ- ಕಾಲೇಜುಗಳಲ್ಲೂ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಈ ಭಾಗದಲ್ಲಿ ಬೋರ್ ವೆಲ್ ನೀರನ್ನೇ ಹಲವು ಶಾಲಾ- ಕಾಲೇಜುಗಳು ಅವಲಂಬಿಸಿದ್ದು, ಬೋರ್ ವೆಲ್ ಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ಬೋರ್ ವೆಲ್ ಗಳಲ್ಲಿ ನೀರು ಬತ್ತಿದ್ದು, ಟ್ಯಾಂಕರ್ ನೀರನ್ನೇ ಅವಲಂಬಿಸುವಂತಾಗಿದೆ. ಕಳೆದ ಎರಡು ವಾರದಿಂದ ಟ್ಯಾಂಕರ್ ಗಳ ಮೂಲಕವೇ ನೀರು ತರಿಸಿಕೊಳ್ಳುತ್ತಿದ್ದೇವೆ. ಆದರೆ,ಟ್ಯಾಂಕರ್ ನೀರಿನ ದರವನ್ನು ಹೆಚ್ಚಿಸಲಾಗಿದ್ದು, ಭಾರೀ ಮೊತ್ತದ ಹಣ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಶಾಲೆಯ ಮುಖ್ಯಶಿಕ್ಷಕಿ ಎಂ ಗಂಗಮ್ಮ ತಿಳಿಸಿದ್ದಾರೆ.
ಶಾಲೆಯಲ್ಲಿ ಮಕ್ಕಳು ಊಟ ಮಾಡಿದ ನಂತರ ಕೈ ತೊಳೆಯುವುದಕ್ಕೆ ಹಾಗೂ ಕುಡಿಯುವುದಕ್ಕೆ ನೀರು ಸಿಗದೆ ಸಮಸ್ಯೆ ಎದುರಿಸುವಂತಾಗಿದೆ. ನೀರಿನ ಸಮಸ್ಯೆಯಿಂದಾಗಿ ಖಾಸಗಿ ಶಾಲೆಗಳಲ್ಲದೆ ಇದೀಗ ಸರ್ಕಾರಿ ಶಾಲೆಗಳನ್ನೂ ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಶಾಲೆಗಳಲ್ಲಿ ನೀರಿಲ್ಲದೆ ಮಕ್ಕಳನ್ನು ನಿಭಾಯಿಸಲು ಸಾಧ್ಯವಾಗದೆ ಶಾಲೆಗಳಿಗೆ ರಜೆ ನೀಡಲಾಗುತ್ತಿದೆ.
350ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಕಷ್ಟ
ಈ ಸರ್ಕಾರಿ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ನೀರು ಸಮಸ್ಯೆ ಇರುವುದರಿಂದ ಮಕ್ಕಳಿಗೆ ಸಂಕಷ್ಟವಾಗಿದೆ. ನೀರಿನ ಸಮಸ್ಯೆ ಪರಿಹರಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಪ್ರತಿನಿಧಿಗಳಿಗೆ ಈಗಾಗಲೇ ನೀರು ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರೂ, ಈ ಸಮಸ್ಯೆ ಪರಿಹಾರವಾಗಿಲ್ಲ ಎಂದು ಶಾಲೆಯ ಶಿಕ್ಷಕರೊಬ್ಬರು ತಿಳಿಸಿದ್ದಾರೆ.
ಹೊಸಕೆರೆಹಳ್ಳಿಯಲ್ಲಿ ರಾಜಕೀಯ ಜೋರು
ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ ನೀರು ಪೂರೈಕೆಯಲ್ಲಿ ಬಹುದೊಡ್ಡ ರಾಜಕೀಯವೇ ನಡೆಯುತ್ತಿದೆ. ಹೊಸಕೆರೆಹಳ್ಳಿಯ ಹಲವು ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ.