ಪಶುವೈದ್ಯ ವಿದ್ಯಾರ್ಥಿ ಸಾವು: ತನಿಖೆಗೆ ಎಸ್‌ಐಟಿ ರಚನೆ

Update: 2024-03-01 14:06 GMT

ತಿರುವನಂತಪುರಂ/ವಯನಾಡು, ಫೆ.29- ವಯನಾಡಿನ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯ ಸಾವಿನ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. 

ಕಾಲೇಜನ ಎರಡನೇ ವರ್ಷದ ವಿದ್ಯಾರ್ಥಿ ಸಿದ್ಧಾರ್ಥನ್(20), ಫೆಬ್ರವರಿ 18 ರಂದು ಹಾಸ್ಟೆಲ್‌ನ ಸ್ನಾನಗೃಹದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಥಳೀಯ ಎಸ್‌ಎಫ್‌ಐ ಮುಖಂಡರು ಮತ್ತು ಕಾರ್ಯಕರ್ತರು ಆತನನ್ನು ಹೊಡೆದು ಕೊಂದಿದ್ದಾರೆ ಎಂದು ಆತನ ಸಹಪಾಠಿಗಳು ಹೇಳಿದರು ಎಂದು ಅವರ ಪೋಷಕರು ತಿಳಿಸಿದ್ದಾರೆ.

ಬುಧವಾರ 18 ಆರೋಪಿಗಳ ಪೈಕಿ ಆರು ಮಂದಿಯನ್ನು ಬಂಧಿಸಲಾಗಿತ್ತು. ಪಾಲಕ್ಕಾಡಿನಲ್ಲಿ ಪ್ರಕರಣದ ಪ್ರಮುಖ ಆರೋಪಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

ಸಿದ್ಧಾರ್ಥನ್ ಸಾವು ರಾಜ್ಯದಲ್ಲಿ ರಾಜಕೀಯ ವಾಗ್ವಾದ ಸೃಷ್ಟಿಸಿದ್ದು, ಕಾಂಗ್ರೆಸ್ ಮತ್ತು ಆನಂತರ ಬಿಜೆಪಿ, ಆಡಳಿತಾರೂಢ ಸಿಪಿಐ(ಎಂ) ನ ವಿದ್ಯಾರ್ಥಿ ಘಟಕ ಎಸ್‌ಎಫ್‌ಐ ಯುವಕನನ್ನು ಥಳಿಸಿದೆ ಎಂದು ಆರೋಪಿಸಿವೆ. ಆದರೆ, ಎಸ್‌ಎಫ್‌ಐ ಆರೋಪವನ್ನು ನಿರಾಕರಿಸಿದೆ.

ಆರೋಪಿಗಳು ಯಾವುದೇ ಸಂಘಟನೆಗೆ ಸೇರಿದ್ದರೂ, ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಕಾನೂನು ಸಚಿವ ಪಿ.ರಾಜೀವ್ ಹೇಳಿದ್ದಾರೆ.

ಪೋಸ್ಟ್‌ಮಾರ್ಟಂ ವರದಿ ಪ್ರಕಾರ, ಆತನಿಗೆ ಯಾವುದೇ ಆಹಾರ ನೀಡದೆ, ಕ್ರೂರವಾಗಿ ಥಳಿಸಲಾಗಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಮೃತನ ತಂದೆ ಹೇಳಿದ್ದರು.

ಆರಂಭದಲ್ಲಿ ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು, ಆನಂತರ ಪೋಷಕರ ದೂರು ಆಧರಿಸಿ 12 ವಿದ್ಯಾರ್ಥಿಗಳ ಮೇಲೆ ಆತ್ಮಹತ್ಯೆಗೆ ಪ್ರಚೋದನೆ, ಅಕ್ರಮ ಬಂಧನ ಮತ್ತು ಆಯುಧಗಳಿಂದ ಹಲ್ಲೆ ಮತ್ತಿತರ ಅಪರಾಧಗಳಿಗಾಗಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಬಳಿಕ ಆರೋಪಿಗಳ ಸಂಖ್ಯೆ 18 ಕ್ಕೆ ಏರಿಕೆಯಾಗಿದೆ.

Tags:    

Similar News