ಬಿಜೆಪಿ ಕಚೇರಿಯಿಂದ ವಾಲ್ಮೀಕಿ, ಅಂಬೇಡ್ಕರ್‌ ಚಿತ್ರ ಹೊರಕ್ಕೆ: ಆಕ್ರೋಶ

ಬಿಜೆಪಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಕಾಣದಿರುವುದನ್ನು ಪತ್ರಕರ್ತರು ಪ್ರಶ್ನಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ವರದಿಯಾಗಿದೆ. ಇಲ್ಲಿ ಈಗಾಗಲೇ ಬಿಜೆಪಿ ಲೋಕಸಭಾ ಚುನಾವಣಾ ಅಭ್ಯರ್ಥಿಯ ವಿರುದ್ಧ ಲಿಂಗಾಯತರ ವಿರೋಧ ವ್ಯಕ್ತವಾಗಿತ್ತು;

Update: 2024-04-13 08:32 GMT
ಡಾ.ಬಿ ಆರ್‌ ಅಂಬೇಡ್ಕರ್‌

ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹರ್ಷಿ ವಾಲ್ಮೀಕಿ ಭಾವಚಿತ್ರಗಳನ್ನು ಹುಬ್ಬಳ್ಳಿಯ ಅರವಿಂದ ನಗರ ಬಿಜೆಪಿ ಕಚೇರಿಯಿಂದ ತೆಗೆದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಹುಬ್ಬಳ್ಳಿಯ ಬಿಜೆಪಿ ಕಚೇರಿಯ ಸಭಾಂಗಣದಲ್ಲಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹರ್ಷಿ ವಾಲ್ಮೀಕಿ ಭಾವಚಿತ್ರಗಳನ್ನು ಶುಕ್ರವಾರ ಬಿಜೆಪಿ ಪಕ್ಷದ ಕಾರ್ಯಕರ್ತರೊಬ್ಬರು ಕಚೇರಿಯಿಂದ ಹೊರಗೆ ತೆಗೆದುಕೊಂಡು ಹೋಗುತ್ತಿದ್ದ ದೃಶ್ಯ ವೈರಲ್ ಆಗಿತ್ತು.

ಶುಕ್ರವಾರ ಬಿಜೆಪಿಯ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಮಂಜುಳಾ ಅವರು ಪ್ರತಿಕಾಗೋಷ್ಠಿ ಕರೆದಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಅಂಬೇಡ್ಕರ್ ಮತ್ತು ವಾಲ್ಮೀಕಿ ಭಾವಚಿತ್ರಗಳನ್ನು ಹೊರಗೆ ತೆಗೆದುಕೊಂಡು ಹೋದರು. ಪತ್ರಿಕಾಗೋಷ್ಠಿ ನಡೆಯುವ ವೇದಿಕೆಯಲ್ಲಿ ಬಿಜೆಪಿ ಸಂಸ್ಥಾಪಕರಾದ ಶ್ಯಾಮ ಪ್ರಸಾದ ಮುಖರ್ಜಿ, ದೀನದಯಾಳ ಉಪಾಧ್ಯಾಯ, ಭಾರತಮಾತೆ, ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಮಹರ್ಷಿ ವಾಲ್ಮೀಕಿ ಭಾವಚಿತ್ರಗಳನ್ನು ಇರಿಸಲಾಗಿತ್ತು. ಆದರೆ, ಬಸವಣ್ಣನವರ ಭಾವಚಿತ್ರ ಇರಲಿಲ್ಲ. ಬಸವಣ್ಣನವರ ಭಾವಚಿತ್ರ ಇರಿಸಿಲ್ಲವೇಕೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಈ ಘಟನೆ ನಡೆಯಿತು.

ʻಹುಬ್ಬಳ್ಳಿಯ ಗೋಕುಲ ಗಾರ್ಡನ್‌ನಲ್ಲಿ ಬಿಜೆಪಿಯಿಂದ ಎಸ್‌ಟಿ ಸಮಾವೇಶ ನಡೆಯಲಿದ್ದು, ಪೂರ್ವಭಾವಿ ಸಭೆಯನ್ನು ಪಕ್ಷದ ಕಚೇರಿಯಲ್ಲಿ ನಿಗದಿ ಮಾಡಲಾಗಿತ್ತು. ಮಹನೀಯರ ಚಿತ್ರಗಳನ್ನು ಅಲ್ಲಿಗೆ ತೆಗೆದುಕೊಂಡು ಹೋಗಲಾಗಿದೆʼ ಎಂದು ಹುಬ್ಬಳ್ಳಿ ಮಹಾನಗರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅವರು ತಿಳಿಸಿದ್ದಾರೆ.

ಲಿಂಗಾಯತರ ವಿಷಯ ಚರ್ಚೆ  

ಹುಬ್ಬಳ್ಳಿ- ಧಾರವಾಡದಲ್ಲಿ ಕಳೆದ ವಿಧಾನಸಭೆ ಚುನಾವಣೆ ಹಾಗೂ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತರ ವಿಷಯ ಪ್ರಧಾನವಾಗಿದೆ. ಲಿಂಗಾಯತರಿಗೆ ಇಲ್ಲಿ ಅನ್ಯಾಯವಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದೀಗ ಹುಬ್ಬಳ್ಳಿ - ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಅವರು ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ದಿಂಗಾಲೇಶ್ವರ ಸ್ವಾಮೀಜಿ ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಈ ಬೆಳವಣಿಗೆಗಳ ನಡುವೆ ಬಿಜೆಪಿ ಕಚೇರಿಯಲ್ಲಿ ಬಸವಣ್ಣನವರ ಭಾವಚಿತ್ರ ಕಾಣಿಸದಿರುವುದು ಚರ್ಚೆಗೆ ಗ್ರಾಸವಾಗಿದೆ. 

Tags:    

Similar News