ಪ್ರಧಾನಿ ಪ್ರವಾಸ: 10 ದಿನ,12 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ

Update: 2024-03-04 06:24 GMT

ಲೋಕಸಭೆ ಚುನಾವಣೆಯ ಘೋಷಣೆಗೆ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಅವರು 12 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 29 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಹಲವಾರು ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ.

ತೆಲಂಗಾಣ, ತಮಿಳುನಾಡು, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಅರುಣಾಚಲ ಪ್ರದೇಶ, ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ದೆಹಲಿಗೆ ಭೇಟಿ ನೀಡಲಿದ್ದಾರೆ ಎಂದು ಪಿಎಂಒ ತಿಳಿಸಿದೆ.

ಹಲವು ಯೋಜನೆಗಳ ಅನಾವರಣ: ಸೋಮವಾರ ತೆಲಂಗಾಣದ ಅದಿಲಾಬಾದ್‌ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ. ಆನಂತರ ತಮಿಳುನಾಡಿನ ಕಲ್ಪಕ್ಕಂನಲ್ಲಿರುವ ಭಾರತೀಯ ನಾಭಿಕೀಯ ವಿದ್ಯುತ್ ನಿಗಮ ಲಿಮಿಟೆಡ್ (ಭಾವಿನಿ) ಗೆ ಭೇಟಿ ನೀಡಲಿದ್ದಾರೆ. ಎರಡೂ ಕಡೆ ಸಾರ್ವಜನಿಕ ಸಭೆಗಳಲ್ಲಿ ಮಾತನಾಡಲಿದ್ದಾರೆ.

ಮಾರ್ಚ್ 5 ರಂದು ತೆಲಂಗಾಣದ ಸಂಗಾರೆಡ್ಡಿಯಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿ, ಕಾರ್ಯಕ್ರಮವೊಂದ ರಲ್ಲಿ ಮಾತನಾಡಲಿದ್ದಾರೆ. ಒಡಿಶಾದಲ್ಲಿ ಅವರು ಹಲವು ಅಭಿವೃದ್ಧಿ ಉಪಕ್ರಮಗಳ ಉದ್ಘಾಟನೆ ಮತ್ತು ಅಡಿಪಾಯ ಹಾಕಲಿದ್ದಾರೆ. ಚಂಡಿಖೋಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಲಿದ್ದಾರೆ.

ಮಾರ್ಚ್ 6 ರಂದು ಅವರು ಕೋಲ್ಕತ್ತಾದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಲಿದ್ದು,ಬರಾಸತ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುವರು. ಬಿಹಾರದ ಬೆಟ್ಟಿಯಾದಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಾರ್ಚ್ 7 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿದ್ದು, ಸಂಜೆ ದೆಹಲಿಯಲ್ಲಿ ಮಾಧ್ಯಮ ಕಾರ್ಯಕ್ರಮದಲ್ಲಿ ಭಾಗವಹಿಸ ಲಿದ್ದಾರೆ. ಮಾ.8 ರಂದು ದೆಹಲಿಯಲ್ಲಿ ರಾಷ್ಟ್ರೀಯ ಸೃಷ್ಟಿಕರ್ತರ ಪ್ರಶಸ್ತಿಯಲ್ಲಿ ಭಾಗವಹಿಸಿ, ಸಂಜೆ ಅಸ್ಸಾಂಗೆ ತೆರಳುತ್ತಾರೆ.

ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್‌ನಲ್ಲಿ ಸೆಲಾ ಸುರಂಗದ ಉದ್ಘಾಟನೆ, ಆನಂತರ ಇಟಾನಗರದಲ್ಲಿ ಬಹು ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸುವರು.

ಆನಂತರ, ಅಸ್ಸಾಂನ ಜೋರ್ಹತ್‌ನಲ್ಲಿ ಅಹೋಮ್ ಸೇನಾ ಕಮಾಂಡರ್ ಲಚಿತ್ ಬೊರ್ಫುಕನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ನಂತರ ಅವರು ಜೋರ್ಹತ್‌ನಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಸಿಲಿಗುರಿಯಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಮತ್ತು ಅಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮಾರ್ಚ್ 10 ರಂದು ಮೋದಿ ಅವರು ಉತ್ತರ ಪ್ರದೇಶದಲ್ಲಿರಲಿದ್ದು, ಅಜಂಗಢದಲ್ಲಿ ವಿವಿಧ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮರುದಿನ ದೆಹಲಿಯಲ್ಲಿ ನಡೆಯಲಿರುವ ‘ನಮೋ ಡ್ರೋನ್ ದೀದಿ’ ಮತ್ತು ‘ಲಖಪತಿ ದೀದಿ’ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಅವರು ದ್ವಾರಕಾ ಎಕ್ಸ್‌ಪ್ರೆಸ್‌ವೇಯ ಹರಿಯಾಣ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಸಂಜೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಾರ್ಚ್ 12 ರಂದು, ಮೋದಿ ಅವರು ಗುಜರಾತ್‌ನ ಸಬರಮತಿ ಮತ್ತು ರಾಜಸ್ಥಾನದ ಪೋಖ್ರಾನ್‌ಗೆ ಭೇಟಿ ನೀಡಲಿದ್ದಾರೆ ಮತ್ತು ನಂತರ ಮಾರ್ಚ್ 13 ರಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಗುಜರಾತ್ ಮತ್ತು ಅಸ್ಸಾಂನಲ್ಲಿ ಮೂರು ಪ್ರಮುಖ ಸೆಮಿಕಂಡಕ್ಟರ್ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಅವರು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಮಾಜದ ಹಿಂದುಳಿದ ವರ್ಗಗಳಿಗೆ ತಲುಪುವ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್-ಮೇನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳ ಪೂರ್ವಭಾವಿಯಾಗಿ ತಮ್ಮ ಸರ್ಕಾರದ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಸೂಚಿಯ ಮೇಲೆ ಗಮನ ಹರಿಸುತ್ತಿರುವ ಪ್ರಧಾನಿ ಅವರು ವಿವಿಧ ಸ್ಥಳಗಳಲ್ಲಿ ಲಕ್ಷ ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸುತ್ತಿದ್ದಾರೆ. .

Tags:    

Similar News