ಜಾರ್ಖಂಡ್‌: 35,700 ಕೋಟಿ ರೂ.ಯೋಜನೆಗಳಿಗೆ ಪ್ರಧಾನಿ ಚಾಲನೆ

Update: 2024-03-01 11:52 GMT

ಸಿಂದ್ರಿ (ಜಾರ್ಖಂಡ್), ಮಾ.1- ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಜಾರ್ಖಂಡ್‌ನಲ್ಲಿ 35,700 ಕೋಟಿ ರೂ.ಗಳ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. 

ಧನ್‌ಬಾದ್ ಜಿಲ್ಲೆಯ ಸಿಂದ್ರಿಯಲ್ಲಿರುವ ಹಿಂದೂಸ್ತಾನ್ ಉರ್ವರಕ್ ಮತ್ತು ರಸಾಯನ್ ಲಿಮಿಟೆಡ್‌ನ 8,900 ಕೋಟಿ ರೂ.ಗಳ ರಸಗೊಬ್ಬರ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. 

ʻಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಜಾರ್ಖಂಡ್ ನ್ನು ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡಬೇಕಾಗುತ್ತದೆ. ಬಿರ್ಸಾ ಮುಂಡಾ ಅವರ ಭೂಮಿ ಶಕ್ತಿಯ ಮೂಲ ಆಗಲಿದೆ ಎಂಬ ನಂಬಿಕೆ ನನಗಿದೆ. 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಬೇಕಿದೆ ಎಂದು ಪ್ರಧಾನಿ ಹೇಳಿದರು. 

ಇಂದು ದೇಶ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ (ಪ್ರಸಕ್ತ ಹಣಕಾಸು ವರ್ಷ) ಶೇ. 8.4 ಬೆಳವಣಿಗೆ ದರ ಸಾಧಿಸಿದೆʼ ಎಂದರು. 

ಸಿಂದ್ರಿ ಸ್ಥಾವರವು 12.7 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಉತ್ಪಾದಿಸುತ್ತದೆ. ಡಿಸೆಂಬರ್ 2021 ಮತ್ತು ನವೆಂಬರ್ 2022 ರಲ್ಲಿ ಗೋರಖ್‌ಪುರ ಮತ್ತು ರಾಮಗುಂ ಡಂನಲ್ಲಿ ಇಂಥ ಸೌಲಭ್ಯಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿತ್ತು. ಇದು ಪುನರುಜ್ಜೀವನಗೊಂಡ ಮೂರನೇ ರಸಗೊಬ್ಬರ ಸ್ಥಾವರವಾಗಿದೆ. ಈ ಘಟಕದಿಂದ ದೇಶ ಯೂರಿಯಾದಲ್ಲಿ ಸ್ವಾವಲಂಬಿಯಾಗಲಿದೆ. ದೇಶದ ಯೂರಿಯಾ ಉತ್ಪಾದನೆ 2014 ರಲ್ಲಿ 225 ಲಕ್ಷ ಟನ್‌ಗಳಿಂದ 310 ಲಕ್ಷ ಟನ್‌ಗೆ ತಲುಪಿದೆ. ತಲ್ಶೇರ್‌ (ಒಡಿಶಾ) ರಸಗೊಬ್ಬರ ಸ್ಥಾವರ 18 ತಿಂಗಳಲ್ಲಿ ಕಾರ್ಯಾಚರಣೆ ಪ್ರಾರಂಭಿಸಲಿದೆʼ ಎಂದು ಅವರು ಹೇಳಿದರು.

ಪ್ರಧಾನಿ ರೈಲು, ವಿದ್ಯುತ್ ಮತ್ತು ಕಲ್ಲಿದ್ದಲು ಯೋಜನೆಗಳಿಗೆ ಚಾಲನೆ ನೀಡಿದರು. ರೈಲ್ವೆ ಯೋಜನೆಗಳಲ್ಲಿ ಸೋನೆ ನಗರ ಮತ್ತು ಆಂಡಾಲ್, ತೋರಿ-ಶಿವಪುರ ಒಂದು ಮತ್ತು ಎರಡು ಮತ್ತು ಬಿರಟೋಲಿ-ಶಿವಪುರ ಮೂರನೇ ಮಾರ್ಗ, ಮೋಹನ್‌ಪುರ-ಹಂಸ್ದಿಹಾ ಹೊಸ ರೈಲು ಮಾರ್ಗಗಳು ಮತ್ತು ಧನ್‌ಬಾದ್-ಚಂದ್ರಾ ಪುರ ರೈಲು ಮಾರ್ಗಗಳನ್ನು ಸಂಪರ್ಕಿಸುವ ಮೂರನೇ ಮತ್ತು ನಾಲ್ಕನೇ ಮಾರ್ಗಗಳು ಸೇರಿವೆ.  ಮೂರು ರೈಲುಗಳಿಗೆ ಪ್ರಧಾನಿ ಚಾಲನೆ ನೀಡಿದರು.

ಛತ್ರಾದಲ್ಲಿ ಉತ್ತರ ಕರಣಪುರ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ ನ ಘಟಕ1 (660 ಮೆಗಾ‌ವ್ಯಾಟ್)‌ ) ಸೇರಿದಂತೆ ಜಾರ್ಖಂಡ್‌ನಲ್ಲಿ ಪ್ರಮುಖ ವಿದ್ಯುತ್ ಯೋಜ ನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ಕೋಲ್ ಇಂಡಿಯಾ ಲಿಮಿಟೆಡ್‌ನ ಅಂಗಸಂಸ್ಥೆ ಸೆಂಟ್ರಲ್ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ (ಸಿಸಿಎಲ್)ನ ಉತ್ತರ ಉರಿಮರಿ ಕಲ್ಲಿದ್ದಲು ನಿರ್ವಹಣಾ ಘಟಕವನ್ನು ರಾಮಗಢ ಜಿಲ್ಲೆಯಲ್ಲಿ ಉದ್ಘಾಟಿಸಿದರು. 

Tags:    

Similar News