ಗೃಹಲಕ್ಷ್ಮಿ ಯಶೋಗಾಥೆ | ಹಣ ಕೂಡಿಟ್ಟು ಸೊಸೆಗೆ ಫ್ಯಾನ್ಸಿ ಸ್ಟೋರ್‌ ಹಾಕಿಕೊಟ್ಟ ಅತ್ತೆ

ಒಂದು ಕಡೆ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಟೀಕೆ, ವ್ಯಂಗ್ಯಗಳು ಮುಂದುವರಿದಿರುವಾಗಲೇ ಮತ್ತೊಂದು ಕಡೆ ಆ ಯೋಜನೆಗಳಿಂದ ಪ್ರಯೋಜನ ಪಡೆದ ಜನಸಾಮಾನ್ಯರ ಯಶೋಗಾಥೆಗಳು ಸುದ್ದಿಯಾಗುತ್ತಲೇ ಇವೆ.

Update: 2024-08-28 11:39 GMT

ಒಂದು ಕಡೆ ಗ್ಯಾರಂಟಿ ಯೋಜನೆಗಳ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಟೀಕೆ, ವ್ಯಂಗ್ಯಗಳು ಮುಂದುವರಿದಿರುವಾಗಲೇ ಮತ್ತೊಂದು ಕಡೆ ಆ ಯೋಜನೆಗಳಿಂದ ಪ್ರಯೋಜನ ಪಡೆದ ಜನಸಾಮಾನ್ಯರ ಯಶೋಗಾಥೆಗಳು ಸುದ್ದಿಯಾಗುತ್ತಲೇ ಇವೆ.

ಅದರಲ್ಲೂ ಪ್ರತಿ ತಿಂಗಳು ಮನೆಯ ಯಜಮಾನತಿಗೆ ಎರಡು ಸಾವಿರ ರೂಪಾಯಿ ನಗದು ನೇರ ಪಾವತಿಯ ಗೃಹಲಕ್ಷ್ಮಿ ಯೋಜನೆ ಬಡ ಕುಟುಂಬಗಳ ಮಹಿಳೆಯರ ಬದುಕಿನಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗುತ್ತಿರುವ ಉದಾಹರಣೆಗಳು ಹೆಚ್ಚುತ್ತಿವೆ.

ಗೃಹ ಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ ಬೆಳಗಾವಿ ಜಿಲ್ಲೆಯ ರಾಯಭಾಗ ಜಿಲ್ಲೆಯ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಅವರ ಜನೋಪಕಾರ ಸುದ್ದಿಯಾದ ಬೆನ್ನಲ್ಲೇ ಇದೀಗ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನಿಂದ ಮತ್ತೊಂದು ಯಶೋಗಾಥೆ ಸದ್ದು ಮಾಡಿದೆ.

ಶಿಗ್ಗಾವಿ ತಾಲೂಕಿನ ನೇರಲಗಿ ಗ್ರಾಮದ ದಾಕ್ಷಾಯಿಣಿ ಪಾಟೀಲ ಮತ್ತು ಅವರ ಸೊಸೆ ಕುಮಾರಿ ಶಿವನಗೌಡ ಪಾಟೀಲ ಅವರು ಸರ್ಕಾರದ ಗೃಹಲಕ್ಷಿ ಯೋಜನೆಯ ಸದುಪಯೋಗದ ಮಾದರಿಯೊಂದನ್ನು ಹಾಕಿಕೊಟ್ಟಿದ್ದಾರೆ.

ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಫಲಾನುಭವಿಯಾಗಿರುವ ದಾಕ್ಷಾಯಿಣಿ ಪಾಟೀಲ ಅವರು ತಮಗೆ ಕಳೆದ ಹತ್ತು ತಿಂಗಳಿನಿಂದ ಬಂದಿದ್ದ 20 ಸಾವಿರ ರೂಪಾಯಿಗಳನ್ನು ಕೂಡಿಟ್ಟು, ತಮ್ಮ ಸೊಸೆ ಕುಮಾರಿ ಅವರ ಕನಸಾಗಿದ್ದ ಫ್ಯಾನ್ಸಿ ಸ್ಟೋರ್ ಇಡುವ ಆಸೆಯನ್ನು ನನಸು ಮಾಡಿದ್ದಾರೆ.

ದಾಕ್ಷಾಯಿಣಿ ಅವರು ಕಳೆದ ಹತ್ತು ತಿಂಗಳುಗಳಿಂದ ತಮ್ಮ ಖಾತೆಗೆ ಬಂದಿದ್ದ 20 ಸಾವಿರ ರೂಪಾಯಿಗಳನ್ನು ಯಾವುದಕ್ಕೂ ಬಳಸದೆ ತಮ್ಮ ಬ್ಯಾಂಕ್ ಖಾತೆಯಲ್ಲೇ ಕೂಡಿಟ್ಟಿದ್ದರು. ಆ ನಡುವೆ ಅವರ ಸೊಸೆ ಕುಮಾರಿ ಅವರು ತನಗೆ ಸ್ವಂತ ಫ್ಯಾನ್ಸಿ ಸ್ಟೋರ್ ಮಾಡಿ ದುಡಿಮೆ ಮಾಡುವ ಆಸೆಯನ್ನು ಅತ್ತೆಯ ಬಳಿ ಹೇಳಿಕೊಂಡಿದ್ದರು. ಇದೀಗ ಶ್ರಾವಣ ಮಾಸದ ಶುಭ ಸಂದರ್ಭವೆಂದು ದಾಕ್ಷಾಯಿಣಿ ಅವರು ತಮ್ಮ ಸೊಸೆಗೆ ತಾವು ಕೂಡಿಟ್ಟಿದ್ದ 20 ಸಾವಿರ ರೂಪಾಯಿ ನೀಡಿ ಹೊಸ ಫ್ಯಾನ್ಸಿ ಸ್ಟೋರ್ ಹಾಕಿಸಿಕೊಟ್ಟಿದ್ದಾರೆ.


ಮಂಗಳವಾರ(ಆ.27) ನೇರಲಗಿ ಗ್ರಾಮದ ಅವರ ಮನೆಯಲ್ಲಿಯೇ ಸ್ನೇಹಾ ಜನರಲ್ ಸ್ಟೋರ್ ಅಂಡ್ ಬ್ಯಾಂಗಲ್ಸ್ ಸ್ಟೋರ್ ಎಂಬ ಹೊಸ ಫ್ಯಾನ್ಸಿ ಸ್ಟೋರ್ ಆರಂಭವಾಗಿದೆ. ಅತ್ತೆ-ಸೊಸೆಯರು ಸೇರಿ ಪೂಜೆ ಮಾಡಿ ಅಂಗಡಿಗೆ ಚಾಲನೆ ನೀಡಿದ್ದಾರೆ. ಅಂಗಡಿ ಪೂಜೆಯ ವೇಳೆ ದೇವರ ಪಟಗಳ ಜೊತೆ ಪಡಿತರ ಚೀಟಿ ಮತ್ತು ಬ್ಯಾಂಕ್ ಪಾಸ್ ಪುಸ್ತಕವನ್ನೂ ಪೂಜೆ ಸಲ್ಲಿಸುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಮಹಿಳೆಯರು ಕೃತಜ್ಞತೆ ಸಲ್ಲಿಸಿದ್ದಾರೆ.

ಮೊದಲ ದಿನವೇ ಗ್ರಾಮದ ಮಹಿಳೆಯರು ಹೊಸ ಫ್ಯಾನ್ಸಿ ಸ್ಟೋರ್ನಲ್ಲಿ ಭರ್ಜರಿ ವ್ಯಾಪಾರ ಮಾಡಿದ್ದಾರೆ. ಜೊತೆಗೆ ಅತ್ತೆ ಸೊಸೆಯ ನಡುವಿನ ಅನ್ಯೂನತೆ ಮತ್ತು ಗೃಹ ಲಕ್ಷಿ ಯೋಜನೆಯ ಸಾರ್ಥಕ ಬಳಕೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಮೂಲಕ ಶಿಗ್ಗಾವಿಯ ಅತ್ತೆ ಸೊಸೆ ಜೋಡಿ ಗೃಹಲಕ್ಷಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕಾದ ಮಾದರಿಯೊಂದನ್ನು ರಾಜ್ಯದ ಎಲ್ಲಾ ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ನೀಡಿದ್ದಾರೆ.

ಈ ಮೊದಲು ಗೃಹ ಲಕ್ಷ್ಮಿ ಯೋಜನೆ ಹಣ ಉಳಿಸಿ ಫ್ರಿಡ್ಜ್ ತೆಗೆದುಕೊಂಡ, ಹೋಳಿಗೆ ಊಟ ಹಾಕಿಸಿದ ಉದಾಹರಣೆಗಳ ನಡುವೆ, ಶಿಗ್ಗಾಯಿ ಅತ್ತೆ- ಸೊಸೆಯ ಈ ಸಾಧನೆ ಸ್ಫೂರ್ತಿದಾಯಕವಾಗಿದೆ. ಸೋಮವಾರ ಬೆಳಗಾವಿ ಜಿಲ್ಲೆಯ ರಾಯಭಾಗದ ಅಕ್ಕಾತಾಯಿ ಅವರನ್ನು ಭೇಟಿ ಮಾಡಿ ಸನ್ಮಾನಿಸಿದ್ದ ಸಿಎಂ ಸಿದ್ದರಾಮಯ್ಯ ಕೂಡ ಇದನ್ನೇ ಹೇಳಿದ್ದರು. ಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ಇಡೀ ಊರಿಗೇ ಹೋಳಿಗೆ ಊಟ ಹಾಕಿಸಿದ ನಿಮ್ಮ ದೊಡ್ಡ ಗುಣ ಮೆಚ್ಚುವಂತಹದ್ದೇ. ಆದರೆ, ಇಂತಹ ಹಣವನ್ನು ನೀವು ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯ ಮತ್ತು ಆದಾಯ ಹೆಚ್ಚಳಕ್ಕಾಗಿ ಬಳಸಿ. ಆಗ ಅದು ಸಾರ್ಥಕತೆ ಪಡೆಯುತ್ತದೆ ಎಂದಿದ್ದರು. 

Tags:    

Similar News