ಹೊಸದಿಲ್ಲಿ, ಫೆ. 20- ಈರುಳ್ಳಿ ರಫ್ತಿನ ಮೇಲಿನ ನಿಷೇಧ ಮಾರ್ಚ್ 31 ರವರೆಗೆ ಮುಂದುವರಿಯಲಿದೆ.
ಬೆಲೆ ನಿಯಂತ್ರಣ ಮತ್ತು ದೇಶಿ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ. ಡಿಸೆಂಬರ್ 8, 2023 ರಂದು ಸರ್ಕಾರ ಈರುಳ್ಳಿ ರಫ್ತು ನಿಷೇಧಿಸಿತ್ತು. ʻರಫ್ತಿನ ಮೇಲಿನ ನಿಷೇಧ ಜಾರಿಯಲ್ಲಿದೆ ಮತ್ತು ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲʼ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಗ್ರಾಹಕರಿಗೆ ಸಮಂಜಸವಾದ ಬೆಲೆಯಲ್ಲಿ ಈರುಳ್ಳಿ ಲಭ್ಯವಾಗುವುದನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಆದ್ಯತೆ ಎಂದು ಅವರು ಹೇಳಿದರು. ದೇಶದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾದ ಲಾಸಲ್‌ಗೋನ್‌ನಲ್ಲಿ ಫೆ.19 ರಂದು ಕ್ವಿಂಟಲ್ ಗೆ 1,280 ರೂ.ನಿಂದ 1,800 ರೂ.ಗೆ ಏರಿಕೆಯಾಗಿದೆ( ಶೇ.40.62 ಹೆಚ್ಚಳ).
ಮಾರ್ಚ್ 31 ರ ನಂತರವೂ ನಿಷೇಧವನ್ನು ತೆಗೆದುಹಾಕುವ ಸಾಧ್ಯತೆಯಿಲ್ಲ, ಏಕೆಂದರೆ, ಚಳಿಗಾಲದ ಈರುಳ್ಳಿ ಬೆಳೆ ಮಹಾರಾಷ್ಟ್ರದಲ್ಲಿ ಕಡಿಮೆ ವ್ಯಾಪ್ತಿಯಲ್ಲಿ ಇದೆ. 2023 ರಲ್ಲಿ ಈರುಳ್ಳಿ ಉತ್ಪಾದನೆ 22.7 ದಶಲಕ್ಷ ಟನ್ ಉತ್ಪಾದನೆಯಾಗಿದೆ.
ಕೃಷಿ ಸಚಿವಾಲಯದ ಅಧಿಕಾರಿಗಳು ಮುಂಬರುವ ದಿನಗಳಲ್ಲಿ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತ್‌ಗಳಲ್ಲಿ ಮೌಲ್ಯಮಾಪನ ಮಾಡುತ್ತಾರೆ.