ಕೇಂದ್ರದ ವಿರುದ್ಧ ದಕ್ಷಿಣ ರಾಜ್ಯಗಳ ಪ್ರತಿಭಟನೆಗೆ ಕಾರಣ ಏನು?

ವಿವಾದದ ಪ್ರಮುಖ ಅಂಶಗಳೆಂದರೆ, ತೆರಿಗೆ ಹಂಚಿಕೆಯಲ್ಲಿ ತಾರತಮ್ಯ,ರಾಜ್ಯಗಳ ಹಣಕಾಸಿನ ಸ್ವಾಯತ್ತತೆ ಕೊರತೆ ಮತ್ತು ರಾಜ್ಯ ಯೋಜನೆಗಳ ಮೇಲೆ ಕೇಂದ್ರದ ಬಿಗಿ ಮುಷ್ಟಿ.;

Update: 2024-02-07 12:05 GMT

ದಕ್ಷಿಣದ ಮೂರು ರಾಜ್ಯಗಳು ಕೇಂದ್ರದ ಹಣಕಾಸಿನ ನೀತಿಯನ್ನು ವಿರೋಧಿಸಿ, ದೆಹಲಿಯಲ್ಲಿ ಬುಧವಾರ ಪ್ರತಿಭಟಿಸಿವೆ. ತೆರಿಗೆ ಹಂಚಿಕೆ, ರಾಜ್ಯಗಳ ಹಣಕಾಸಿನ ಸ್ವಾಯತ್ತೆಗೆ ಧಕ್ಕೆ ಮತ್ತು ರಾಜ್ಯದ ಯೋಜನೆಗಳ ಮೇಲೆ ಕೇಂದ್ರದ ಬಿಗಿ ಹಿಡಿತವನ್ನು ರಾಜ್ಯಗಳು ಪ್ರತಿಭಟಿಸುತ್ತಿವೆ.. 

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟದ ಸದಸ್ಯರು, ಶಾಸಕರು ಮತ್ತು ಎಂಎಲ್‌ಸಿಗಳು ಫೆಬ್ರವರಿ 7ರಂದು ಜಂತರ್ ಮಂತರ್‌ನಲ್ಲಿ ಧರಣಿ ನಡೆಸಿದ್ದು, ಗುರುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಚಿವರು ಧರಣಿ ನಡೆಸಲಿದ್ದಾರೆ. ತಮಿಳುನಾಡಿನ ಡಿಎಂಕೆ ಸರ್ಕಾರ ಪ್ರತಿಭಟನೆಯನ್ನು ಬೆಂಬಲಿಸುವುದಾಗಿ ಹೇಳಿದೆ. ತೆಲಂಗಾಣ ಕೂಡ ಈ ಹಿಂದೆ ತೆರಿಗೆ ಹಂಚಿಕೆ ವಿರುದ್ಧ ಧ್ವನಿ ಎತ್ತಿತ್ತು. 

16 ನೇ ಹಣಕಾಸು ಆಯೋಗವನ್ನು ರಚಿಸಲಾಗಿದ್ದು, ಇದು ತೆರಿಗೆ ಹಂಚಿಕೆ ಮತ್ತು ಅನುದಾನ ನೀತಿಗೆ ಬದಲಾವಣೆಗಳನ್ನು ಶಿಫಾರಸು ಮಾಡುವ ಏಕೈಕ ಸಂಸ್ಥೆ. ತನ್ನ ವರದಿಯನ್ನು ಅಕ್ಟೋಬರ್ 2025 ರೊಳಗೆ ಸಲ್ಲಿಸಲಿದೆ.

ಕರ್ನಾಟಕ:

ದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ,ʻತೆರಿಗೆ ಸಂಗ್ರಹದಲ್ಲಿ ಕರ್ನಾಟಕ (ಭಾರತದ ರಾಜ್ಯಗಳಲ್ಲಿ) ಎರಡನೇ ಸ್ಥಾನ ಹಾಗೂ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಈ ವರ್ಷ ಕರ್ನಾಟಕ 4.30 ಲಕ್ಷ ಕೋಟಿ ರೂ.ಗೂ ಹೆಚ್ಚು ತೆರಿಗೆ ನೀಡಲಿದೆ . ಆದರೆ, ನಾವು ಕೊಡುವ 100 ರೂ.ಗೆ ಕೇವಲ 12-13 ರೂ. ಕೊಡಲಾಗುತ್ತಿದೆʼ ಎಂದರು.

ತೆರಿಗೆ ಪಾಲು: ಸಿದ್ದರಾಮಯ್ಯ ಅವರ ಪ್ರಕಾರ, ಬಜೆಟ್ ಗಾತ್ರ ದ್ವಿಗುಣಗೊಂಡಿದ್ದರೂ, ರಾಜ್ಯದ ತೆರಿಗೆ ಪಾಲು ಅರ್ಧಕ್ಕಿಂತ ಹೆಚ್ಚು ಕಡಿತಗೊಂಡಿದೆ. ರಾಜ್ಯಗಳಿಂದ ಸಂಗ್ರಹಿಸುವ ಸೆಸ್ ಮತ್ತು ಸರ್ಚಾರ್ಜ್ ಕೂಡ ಪ್ರತಿ ವರ್ಷ ಏರುತ್ತಿದೆ. ಆದರೆ, ಒಂದು ಪೈಸೆ ಕೂಡ ರಾಜ್ಯಗಳಿಗೆ ಹಿಂತಿರುಗುತ್ತಿಲ್ಲ.

14 ನೇ ಹಣಕಾಸು ಆಯೋಗ (2015-2020)ದಡಿ ಕರ್ನಾಟಕದ ತೆರಿಗೆ ಪಾಲು ಶೇ.4.71 ರಿಂದ 15 ನೇ ಹಣಕಾಸು ಆಯೋಗ(2020-2025)ದಡಿ ಅಡಿ ಶೇ.3.64 ಕ್ಕೆ ಇಳಿದಿದೆ. ಇದರಿಂದ ಕರ್ನಾಟಕಕ್ಕೆ 62,098 ಕೋಟಿ ರೂ.ನಷ್ಟವಾಗಿದೆ. 15 ನೇ ಹಣಕಾಸು ಆಯೋಗ ಮಧ್ಯಂತರ ಬಜೆಟ್‌ನಲ್ಲಿ ರಾಜ್ಯಕ್ಕೆ 5,495 ಕೋಟಿ ರೂ. ವಿಶೇಷ ಅನುದಾನ ಶಿಫಾರಸು ಮಾಡಿತು. ಆದರೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೊಡಲು ನಿರಾಕರಿಸಿದರು ಎಂದು ದೂರಿದ್ದಾರೆ.

ಬರ ಪರಿಹಾರ: ರಾಜ್ಯ ಬರಗಾಲವನ್ನು ಎದುರಿಸುತ್ತಿದ್ದು, 236 ರಲ್ಲಿ 223 ತಾಲೂಕುಗಳು ಬಾಧಿತವಾಗಿವೆ; ಅದರಲ್ಲಿ 123 ತೀವ್ರವಾಗಿ ಬಾಧಿತವಾಗಿವೆ. ಆದರೆ, ಕೇಂದ್ರ ಸರ್ಕಾರ ಕೇಳಿದ್ದ 17,901 ಕೋಟಿ ರೂ. ಬಿಡುಗಡೆ ಮಾಡಿಲ್ಲ. ಬೆಳೆ ಹಾನಿಯಿಂದ ರಾಜ್ಯಕ್ಕೆ 35,000 ಕೋಟಿ ರೂ. ನಷ್ಟವಾಗಿದೆ.

ಜಿಎಸ್‌ಟಿ: ಜಿಎಸ್‌ಟಿಯ ದೋಷಪೂರಿತ ಅನುಷ್ಠಾನ ಮತ್ತು ಇತರ ಅಂಶಗಳಿಂದ ರಾಜ್ಯಕ್ಕೆ 1.87 ಲಕ್ಷ ಕೋಟಿ ರೂ. ನಷ್ಟವಾಗಿದೆ. ಜಿಎಸ್‌ಟಿಗೂ ಮುನ್ನ ರಾಜ್ಯದ ತೆರಿಗೆ ಸಂಗ್ರಹದ ಬೆಳವಣಿಗೆ ಶೇ.15 ಇತ್ತು.

ಯೋಜನೆಗಳು: ಕಳೆದ ಬಜೆಟ್‌ನಲ್ಲಿ ಕೇಂದ್ರ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ 5,300 ಕೋಟಿ ರೂ.ಗಳಲ್ಲಿ ಒಂದು ರೂ. ಕೂಡ ಬಿಡುಗಡೆ ಮಾಡಿಲ್ಲ. ಮಹದಾಯಿ ಮತ್ತು ಮೇಕೆದಾಟು ಯೋಜನೆಗಳಿಗೆ ಪರಿಸರ ಮತ್ತು ಇತರ ಅನುಮತಿ ಬಾಕಿ ಇದೆ. .

ಕೇರಳ: 

ಗುರುವಾರ ಪ್ರತಿಭಟನೆ ನಡೆಸಲಿರುವ ಕೇರಳ ಸರ್ಕಾರ, ಕೇಂದ್ರ ತನ್ನ ಪಾಲನ್ನು ನಿರಾಕರಿಸುವ ಮತ್ತು ರಾಜ್ಯದ ಸಾಲದ ಮಿತಿಯನ್ನು ಕಡಿತ ಗೊಳಿಸುವ ಮೂಲಕ ರಾಜ್ಯವನ್ನು ʻನಿರ್ಲಕ್ಷಿಸಿದೆʼ ಎಂದು ಆರೋಪಿಸಿದೆ. ಮತ್ತು, ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.

ಹಣಕಾಸಿನ ಸ್ವಾತಂತ್ರ್ಯ: ಮೊಕದ್ದಮೆಯಲ್ಲಿ ರಾಜ್ಯದ ಹಣಕಾಸಿನಲ್ಲಿ ಕೇಂದ್ರದ ಹಸ್ತಕ್ಷೇಪ ನಡೆಸುತ್ತಿದೆ ಎಂದು ಆರೋಪಿಸಿದೆ. ಇದರಿಂದ ಬಜೆಟ್‌ನ ಬದ್ಧತೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ. ರಾಜ್ಯದ ಅಧಿಕಾರ, ಸ್ವಾಯತ್ತೆ ಮತ್ತು ಶಾಸನಾಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ದೂರಿನಲ್ಲಿ ಇದೆ.

ಸಾಲದ ಮಿತಿ: ಕೇಂದ್ರ ಸರ್ಕಾರವು 2021-22 ರಿಂದ ಪೂರ್ವಾನ್ವಯವಾಗುವಂತೆ ರಾಜ್ಯದ ಸಾಲದ ಮಿತಿಯನ್ನು ಕಡಿಮೆ ಮಾಡಿದೆ. ಹಣಕಾಸು ಆಯೋಗದ ಅನುಮೋದಿತ ಶಿಫಾರಸುಗಳನ್ನು ಕೂಡ ಮೀರಿದೆ. ಕೇರಳದ ಅರ್ಹ ಸಾಲದ ಮಿತಿ 39,626 ಕೋಟಿ ರೂ.ಗಳಿಂದ 28,830 ಕೋಟಿ ರೂ.ಗೆ ಕುಸಿದಿದೆ. ಸಾಲದ ಮಿತಿ ಕಡಿತವು ರಾಜ್ಯವನ್ನು ಗಂಭೀರ ಆರ್ಥಿಕ ಬಿಕ್ಕಟ್ಟಿಗೆ ತಳ್ಳಬಹುದು ಎಂದು ಕೇರಳ ಸರ್ಕಾರ ಹೇಳಿದೆ. 26,000 ಕೋಟಿ ರೂ. ʻಸದ್ಯ ಮತ್ತು ತುರ್ತಾಗಿ ಅಗತ್ಯವಿದೆʼ ಎಂದು ಹೇಳಿದೆ.

ಜಿಎಸ್‌ಟಿ: ಕೇರಳ ಸರ್ಕಾರದ ಪ್ರಕಾರ, ಕೇಂದ್ರದಿಂದ ರಾಜ್ಯದ ಆದಾಯ 57,400 ಕೋಟಿ ರೂ.ನಷ್ಟು ಕುಸಿದಿದೆ. ಜಿಎಸ್‌ಟಿ ಪರಿಹಾರದಲ್ಲಿ 12,000 ಕೋಟಿ ರೂ. ಕೊರತೆ ಮತ್ತು ಆದಾಯ ಕೊರತೆ ಅನುದಾನದಲ್ಲಿ 8,400 ಕೋಟಿ ರೂ. ಕಡಿತವಾಗಿದೆ.

ಕೇಂದ್ರ ಸುಪ್ರೀಂ ಕೋರ್ಟ್‌ಗೆ ನೀಡಿದ ಉತ್ತರದಲ್ಲಿ ʻಕೇರಳವು ಆರ್ಥಿಕವಾಗಿ ಅನಾರೋಗ್ಯಕರ ರಾಜ್ಯಗಳಲ್ಲಿ ಒಂದು. ಪಂಜಾಬ್ ಮತ್ತು ಪಶ್ಚಿಮ ಬಂಗಾಳದ ಜೊತೆಗೆ ದೇಶದಲ್ಲಿ ಅತ್ಯಂತ ಕೆಟ್ಟ ಹಣಕಾಸು ನಿರ್ವಹಣೆಯನ್ನು ಹೊಂದಿದೆ ಎಂದು ಹೇಳಿತ್ತು. ಪಶ್ಚಿಮ ಬಂಗಾಳ ಮತ್ತು ಪಂಜಾಬ್ ನಲ್ಲಿ ಟಿಎಂಸಿ ಮತ್ತು ಎಎಪಿ ಆಡಳಿತ ನಡೆಸುತ್ತಿವೆ.

ತಮಿಳುನಾಡು: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕೇರಳದ ಪ್ರತಿಭಟನೆಯನ್ನು ಬೆಂಬಲಿಸುವುದಾಗಿ ಹೇಳಿದ್ದು, ಈ ಸಂಬಂಧ ಜನವರಿ 7ರಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರಿಗೆ ಪತ್ರ ಬರೆದಿದ್ದಾರೆ. ಸುಪ್ರೀಂ ಕೋರ್ಟ್‌ನ ಗಮನ ಸೆಳೆಯುವ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ಅಧಿಕಾರ ದುರ್ಬಳಕೆ: 

ರಾಜ್ಯಗಳ ಸಾಲ ಪಡೆಯುವ ಸಾಮರ್ಥ್ಯವನ್ನು ನಿರ್ಬಂಧಿಸಲು ಸಂವಿಧಾನದ 293 ನೇ ವಿಧಿ ಅಡಿಯಲ್ಲಿ ಕೇಂದ್ರ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ. ಸ್ಟಾಲಿನ್ ಅವರ ಪತ್ರದ ಪ್ರಕಾರ, ರಾಜ್ಯಗಳ ಸಂಪನ್ಮೂಲ ಸಂಗ್ರಹ ಮತ್ತು ಅಭಿವೃದ್ಧಿಯೋಜನೆಗಳಿಗೆ ಅನುದಾನ ನೀಡುವ ರಾಜ್ಯಗಳ ಸಾಮರ್ಥ್ಯ ವನ್ನು ಕೇಂದ್ರ ದುರ್ಬಲಗೊಳಿ ಸುತ್ತಿದೆ.

ʻರಾಜ್ಯ ಶೇ. 15 ರಷ್ಟು ಬೆಳವಣಿಗೆಯನ್ನು ಸಾಧಿಸಿದ್ದರೂ, ನಿವ್ವಳ ಸಾಲದ ಮಿತಿಯನ್ನು ಕೇವಲ ಶೇ.8ಕ್ಕೆ ಲೆಕ್ಕಾಚಾರ ಮಾಡಲು ಜಿಎಸ್‌ ಡಿಪಿ ಬೆಳವಣಿಗೆಯನ್ನು ನಿಗದಿಪಡಿಸಿದೆ. ಇದರಿಂದ ಪ್ರಸಕ್ತ ವರ್ಷದಲ್ಲಿ 6,000 ಕೋಟಿ ರೂ. ಸಾಲವನ್ನು ಕಳೆದುಕೊಂಡಿದೆʼ ಎಂದು ಪತ್ರದಲ್ಲಿ ಇದೆ. ಎರಡನೆಯದಾಗಿ, 17,111 ಕೋಟಿ ರೂ. ಕಡ್ಡಾಯ ಸಾಲ ನೀಡುವಂತೆ ಒತ್ತಾಯಿಸಿದೆ. ಮೂರನೆಯದಾಗಿ, ಚೆನ್ನೈ ಮೆಟ್ರೋ ಹಂತ-II ನ್ನು ಅನುಮೋದಿಸುವಲ್ಲಿ ʻಉದ್ದೇಶಪೂರ್ವಕ ವಿಳಂಬʼ ಮಾಡಲಾಗಿದೆ. 33,594 ಕೋಟಿ ರೂ. ಸಾಲವನ್ನು ರಾಜ್ಯದ ನಿವ್ವಳ ಸಾಲದ ಮಿತಿಯೊಳಗೆ ಸೇರಿಸಿದೆ ಎಂದು ದೂರಿದ್ದಾರೆ.

ಜಿಎಸ್ಟಿ: ಜಿಎಸ್‌ಟಿ ಪೂರ್ವಕ್ಕೆ ಹೋಲಿಸಿದರೆ ವಾರ್ಷಿಕ 20,000 ಕೋಟಿ ರೂ. ಆದಾಯ ಕೊರತೆ ಎದುರಿಸುತ್ತಿದೆ; ಕೇಂದ್ರ ನೀಡಲು ನಿರಾಕರಿಸುತ್ತಿದೆ.

ತೆರಿಗೆ ಹಂಚಿಕೆ: ತಮಿಳುನಾಡು ಹಣಕಾಸು ಸಚಿವ ತಂಗಂ ತೆನ್ನರಸು ಅವರ ಪ್ರಕಾರ, ರಾಜ್ಯ ಕೇಂದ್ರಕ್ಕೆ ಕೊಡುಗೆ ನೀಡುವ ಪ್ರತಿ 1 ರೂ.ಗೆ ಕೇವಲ 29 ಪೈಸೆ ಪಡೆಯುತ್ತದೆ. ಆದರೆ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶಕ್ಕೆ ಪ್ರತಿ 1 ರೂ.ಗೆ 2.73 ರೂ. ಕೊಡಲಾಗುತ್ತಿದೆ. 2014-15 ಮತ್ತು 2021-22 ರ ನಡುವೆ ರಾಜ್ಯ ಕೇಂದ್ರಕ್ಕೆ ನೇರ ತೆರಿಗೆ ಆದಾಯ 5.16 ಲಕ್ಷ ಕೋಟಿ ರೂ. ನೀಡಿದ್ದು, ವಾಪಸ್‌ 2.08 ಲಕ್ಷ ಕೋಟಿ ರೂ.

ತೆಲಂಗಾಣ:

ತೆರಿಗೆ ಹಂಚಿಕೆ: ಈ ಹಿಂದೆಯೇ ತೆಲಂಗಾಣ ತೆರಿಗೆ ಹಂಚಿಕೆಯಲ್ಲಿನ ಅನ್ಯಾಯದ ಬಗ್ಗೆ ಧ್ವನಿ ಎತ್ತಿತ್ತು. ಜೂನ್ 2023 ರಲ್ಲಿ ಅಂದಿನ ಹಣಕಾಸು ಮತ್ತು ಆರೋಗ್ಯ ರಾಜ್ಯ ಸಚಿವ ಟಿ. ಹರೀಶ್ ರಾವ್ ಅವರು 15 ನೇ ಹಣಕಾಸು ಆಯೋಗವು ಕೇಂದ್ರ ತೆರಿಗೆಯ ಶೇ.41ನ್ನು ರಾಜ್ಯಗಳಿಗೆ ಕೊಡಲು ಶಿಫಾರಸು ಮಾಡಿದ್ದರೂ, ರಾಜ್ಯಗಳು ಶೇ.30 ಮಾತ್ರ ಪಡೆಯುತ್ತಿವೆ ಎಂದಿದ್ದರು. ತೆರಿಗೆ ಹಂಚಿಕೆಯಲ್ಲಿ ತೆಲಂಗಾಣದ ಪಾಲು 2014-15ರಲ್ಲಿ ಶೇ.2.893 ರಿಂದ 2021-22ರಲ್ಲಿ ಶೇ.2.102ಕ್ಕೆ ಇಳಿದಿದೆ ಎಂದು ದೂರಿದ್ದರು.

Tags:    

Similar News