ಕಾನ್ಪುರದಲ್ಲಿ ದಕ್ಷಿಣ ಏಷ್ಯಾದ ಅತಿ ದೊಡ್ಡ ಯುದ್ಧಸಾಮಗ್ರಿ, ಕ್ಷಿಪಣಿ ತಯಾರಿಕೆ ಸಂಕೀರ್ಣ

ಅದಾನಿಯಿಂದ 3,000 ಕೋಟಿ ರೂ. ಹೂಡಿಕೆ, 4,000 ಉದ್ಯೋಗ ಸೃಷ್ಟಿ

Update: 2024-02-26 13:58 GMT

ಕಾನ್ಪುರ, ಫೆ. 26- ಅದಾನಿ ಸಮೂಹವು ಮದ್ದುಗುಂಡುಗಳು ಮತ್ತು ಕ್ಷಿಪಣಿಗಳನ್ನು ತಯಾರಿಸಲು ಎರಡು ಮೆಗಾ ಸೌಲಭ್ಯಗಳನ್ನು ಕಾನ್ಪುರದಲ್ಲಿ ತೆರೆಯುವುದಾಗಿ ಸೋಮವಾರ ಘೋಷಿಸಿದೆ. 

ದಕ್ಷಿಣ ಏಷ್ಯಾದಲ್ಲಿ ಅತಿ ದೊಡ್ಡ ಸಂಕೀರ್ಣವಾಗಿರಲಿದ್ದು, ರಕ್ಷಣಾ ಉತ್ಪಾದನೆಯಲ್ಲಿ ಅಸ್ತಿತ್ವವನ್ನು ಬಲಪಡಿಸುತ್ತದೆ. ಅದಾನಿ ಡಿಫೆನ್ಸ್ ವೈ ಏರೋಸ್ಪೇಸ್ ಘಟಕ 500 ಎಕರೆ ಪ್ರದೇಶದಲ್ಲಿರಲಿದ್ದು, 3,000 ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮತ್ತು ಸಕಲ ಶಸ್ತ್ರಾಸ್ತ್ರಗಳನ್ನು ತಯಾರಿಸಲಿದೆ. 

ಸೌಲಭ್ಯಗಳನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ಸೆಂಟ್ರಲ್ ಕಮಾಂಡ್ ಲೆಫ್ಟಿನೆಂಟ್ ಜನರಲ್ ಎನ್‌.ಎಸ್. ರಾಜಾ ಸುಬ್ರಮಣಿ ಉದ್ಘಾಟಿಸಿದರು. 

ಕಾನ್ಪುರದ ಸೌಲಭ್ಯವು ಅತಿ ದೊಡ್ಡ ಸಮಗ್ರ ಯುದ್ಧಸಾಮಗ್ರಿ ಉತ್ಪಾದನಾ ಸಂಕೀರ್ಣಗಳಲ್ಲಿ ಒಂದಾಗಲಿದೆ. ಸಶಸ್ತ್ರ ಪಡೆಗಳು, ಅರೆಸೇನಾ ಪಡೆಗಳು ಮತ್ತು ಪೊಲೀಸರಿಗೆ ಉತ್ತಮ ಗುಣಮಟ್ಟದ ಸಣ್ಣ, ಮಧ್ಯಮ ಮತ್ತು ದೊಡ್ಡ ಕ್ಯಾಲಿಬರ್ ಮದ್ದುಗುಂಡುಗಳನ್ನು ಉತ್ಪಾದಿಸು ತ್ತದೆ. ಈಗಾಗಲೇ ಸಣ್ಣ ಕ್ಯಾಲಿಬರ್ ನ ಮದ್ದುಗುಂಡುಗಳನ್ನು ಹೊರತರಲು ಪ್ರಾರಂಭಿಸಿದೆ.

ಆದಿತ್ಯನಾಥ್ ಮಾತನಾಡಿ, ಈ ಸೌಲಭ್ಯಗಳಲ್ಲಿ ತಯಾರಾದ ಮದ್ದುಗುಂಡುಗಳು ಮತ್ತು ಕ್ಷಿಪಣಿಗಳು ರಾಷ್ಟ್ರವನ್ನು ಸುಭದ್ರಗೊಳಿಸಲು ನೆರವಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಕ್ಷಿಪಣಿಗಳು ಮತ್ತು ಯುದ್ಧಸಾಮಗ್ರಿಗಳಲ್ಲಿ ಸ್ವಾವಲಂಬನೆಯ ಅಗತ್ಯವನ್ನು ಒತ್ತಿ ಹೇಳಿದರು. ʻಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್ ಪ್ರಮುಖ ರಕ್ಷಣಾ ಕಂಪನಿಯಾಗಿದೆ. ಡ್ರೋನ್‌ಗಳು, ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ ತಂತ್ರಜ್ಞಾನಗಳು ಮತ್ತು ಸೈಬರ್ ರಕ್ಷಣೆಯಂಥ ಕ್ಷೇತ್ರದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಕಡೆ ಗಮನ ಹರಿಸಿದೆ ಎಂದರು.

ಅದಾನಿ ಡಿಫೆನ್ಸ್ ಮತ್ತು ಏರೋಸ್ಪೇಸ್‌ನ ಸಿಇಒ ಆಶಿಶ್ ರಾಜವಂಶಿ, ʻ 3,000 ಕೋಟಿ ರೂ. ಹೂಡಿಕೆಯಿಂದ 4,000 ಉದ್ಯೋಗಗಳನ್ನು ಸೃಷ್ಟಿಸುತ್ತದೆʼ ಎಂದರು.

2022 ರಲ್ಲಿ ಉತ್ತರ ಪ್ರದೇಶ ಹೂಡಿಕೆದಾರರ ಶೃಂಗಸಭೆಯಲ್ಲಿ ಅದಾನಿ ಗ್ರೂಪ್ ಎರಡು ವರ್ಷಗಳೊಳಗೆ ಯುದ್ಧಸಾಮಗ್ರಿ ಸಂಕೀರ್ಣವನ್ನು ಆರಂಭಿಸುವುದಾಗಿ ಹೇಳಿತ್ತು.

Tags:    

Similar News