ಯಕ್ಷರಂಗದ ಮೊದಲ ಮಹಿಳಾ ಭಾಗವತ ಲೀಲಾವತಿ ಬೈಪಡಿತ್ತಾಯ ನಿಧನ
ಅವರ ಪುತ್ರ ಯಕ್ಷಗಾನದ ಹಿಮ್ಮೇಳ ಕಲಾವಿದ ಹಾಗೂ ಪತ್ರಕರ್ತ ಅವಿನಾಶ್ ಬೈಪಡಿತ್ತಾಯ ತಮ್ಮ ತಾಯಿಯ ನಿಧನ ಸುದ್ದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.;
ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ., ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ತೆಂಕು ತಿಟ್ಟು ಯಕ್ಷಗಾನ ರಂಗದ ಮೊಟ್ಟಮೊದಲ ವೃತ್ತಿಪರ ಯಕ್ಷಗಾನ ಮಹಿಳಾ ಭಾಗವತರಾದ ಲೀಲಾವತಿ ಬೈಪಡಿತ್ತಾಯ(78) ಶನಿವಾರ(ಡಿ14ರಂದು) ಅಲ್ಪ ಕಾಲದಿ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಮಂಗಳೂರಿನ ಬಜಪೆ ತಲಕಳದ ಸ್ವಗೃಹದಲ್ಲಿ ನಿಧನ ಇಹಲೋಕ ತ್ಯಜಿಸಿದ್ದಾರೆ ಎಂಬುದಾಗಿ ಅವರ ಕುಟುಂಬದ ಮೂಲಗಳು ತಿಳಿಸಿವೆ.
ಕೇರಳದ ಕಾಸರಗೋಡಿನ ಮಧೂರಿನಲ್ಲಿ 1947ನೇ ಮೇ 23 ರಂದು ಜನಿಸಿದ ಲೀಲಾವತಿ ಅವರು ಹಿರಿಯ ಹಿಮ್ಮೇಳವಾದಕ ಹರಿನಾರಾಯಣ ಬೈಪಡಿತ್ತಾಯರ ಪತ್ನಿ. ಅವರ ಪುತ್ರ ಹಿಮ್ಮೇಳವಾದಕ ಹಾಗೂ ಪತ್ರಕರ್ತ ಅವಿನಾಶ್ ಬೈಪಡಿತ್ತಾಯ ತಮ್ಮ ತಾಯಿಯ ನಿಧನ ಸುದ್ದಿಯನ್ನು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.
ಲೀಲಾವತಿ ಬೈಪಾಡಿತ್ತಾಯರು ಸರಿ ಸುಮಾರು ನಾಲ್ಕು ದಶಕಗಳ ಕಾಲ ತಮ್ಮ ಭಾಗವತಿಕೆಯ ಕಂಠಸಿರಿಯಿಂದ ಮನೆಮಾತಾದವರು. ಲೀಲಾವತಿ ಅವರ ಕಲಾ ತಪಸ್ಸನ್ನು ಗುರುತಿಸಿ ರಾಜ್ಯ ಸರಕಾರ ಗುರುತಿಸಿ 2010ನೇ ಕರ್ನಾಟಕದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತ್ತು. 2012ರಲ್ಲಿ ಕರ್ನಾಟಕ ಸರಕಾರದ ಸಾಧಕ ಹಿರಿಯ ನಾಗರಿಕರು ಪ್ರಶಸ್ತಿ, 2023ರಲ್ಲಿ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿ. ಆಳ್ವಾಸ್ ನುಡಿಸಿರಿ, ಉಳ್ಳಾಲ ಅಬ್ಬಕ್ಕ ಪ್ರಶಸ್ತಿ ಸೇರಿದಂತೆ ನೂರಾರು ಸನ್ಮಾನ ಪಡೆದಿದ್ದಾರೆ.
ಶಾಲೆಗೆ ಹೋಗದೆಯೇ, ಅಣ್ಣನಿಂದ, ಅಕ್ಕ ಪಕ್ಕದವರಿಂದಲೋ ಅಕ್ಷರಾಭ್ಯಾಸ ಮಾಡಿಸಿಕೊಂಡಿದ್ದವರು ಲೀಲಾವರಿ ಬೈಪಡಿತ್ತಾಯ ಅವರು ಹಿಂದಿ ವಿಶಾರದ ಕೂಡ ಆಗಿದ್ದರು. ಸಂಗೀತ ಕಲಿತಿದ್ದ ಅವರನ್ನು ತೆಂಕುತಿಟ್ಟಿನ ಅಗ್ರಮಾನ್ಯ ಹಿಮ್ಮೇಳ ಗುರುಗಳಾದ ಹರಿನಾರಾಯಣ ಬೈಪಾಡಿತ್ತಾಯರು ವಿವಾಹವಾಗಿದ್ದರು. ಹೆಣ್ಣು ಮಕ್ಕಳಿಗೆ ಯಕ್ಷಗಾನ ನೋಡುವುದಕ್ಕೂ ಅವಕಾಶವಿಲ್ಲದ ಸಂಪ್ರದಾಯವಿದ್ದ ಆ ಕಾಲದಲ್ಲಿ ತೆಂಕು ತಿಟ್ಟಿನ ಅಗ್ರಮಾನ್ಯ ಭಾಗವತರಲ್ಲೊಬ್ಬರಾಗಿ ಅವರು ಬೆಳೆದರು. ಏಕೈಕ ವೃತ್ತಿಪರ ಮಹಿಳಾ ಭಾಗವತರಾಗಿ ಅಗ್ಗಳಿಕೆ ಪಡೆದರು.
ಅಂದಿನ ಸುಬ್ರಹ್ಮಣ್ಯ, ಪುತ್ತೂರು, ಕದ್ರಿ, ಕರ್ನಾಟಕ, ಅರುವ (ಅಳದಂಗಡಿ), ಕುಂಬಳೆ ಬಪ್ಪನಾಡು ಮೇಳ, ಕುಂಬಳೆ, ತಲಕಳ ಮುಂತಾದ ಡೇರೆ-ಬಯಲಾಟ ಮೇಳಗಳಲ್ಲಿ ನಿರಂತರ ಇಪ್ಪತ್ತು ವರ್ಷಗಳ ಕಾಲ ವೃತ್ತಿ ಕಲಾವಿದರಾಗಿಯೂ 17ಕ್ಕೂ ಹೆಚ್ಚು ವರ್ಷಗಳಿಂದ ಅತಿಥಿ ಕಲಾವಿದರಾಗಿಯೂ ಯಕ್ಷಗಾನಕ್ಕೆ ಲೀಲಾವತಿ ಅವರು ಸೇವೆ ಸಲ್ಲಿಸಿದ್ದಾರೆ. ಬಜಪೆ ತಲಕಳದ ಮನೆಯಲ್ಲಿ ಸೇರಿದಂತೆ ಹಲವೆಡೆ ವಯಕ್ಷಗಾನ ಭಾಗವತಿಕೆಯ ತರಗತಿಗಳನ್ನೂ ನಡೆಸಿ ನೂರಾರು ಮಂದಿಗೆ ಗುರುಗಳೂ ಆಗಿದ್ದರು.
ಪಿಟೀಲು ವಾದಕ ಪದ್ಮನಾಭ ಸರಳಾಯರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದರು. ಪತ್ರಕರ್ತ ಅವಿನಾಶ್ ಹಾಗೂ ಗುರುಪ್ರಸಾದ್ ಅವರ ಪುತ್ರರು.
ಕಲಾ ಸಾಂಗತ್ಯ
ಯಕ್ಷಗಾನ ಲೋಕದಲ್ಲಿ ಬೆಳಗಿ ಕಲೆಯನ್ನೂ ಬೆಳೆಸಿದ ಕೀರ್ತಿವಂತರಾದ ಶೇಣಿ ಗೋಪಾಲಕೃಷ್ಣ ಭಟ್, ಬಣ್ಣದ ಮಾಲಿಂಗ,ಹೊಸಹಿತ್ಲು ಮಹಾಲಿಂಗ ಭಟ್, ಪಡ್ರೆ ಚಂದು, ಪುತ್ತೂರು ನಾರಾಯಣ ಹೆಗ್ಡೆ, ಅಳಿಕೆ ರಾಮಯ್ಯ ರೈ, ಕೆ.ಗೋವಿಂದ ಭಟ್, ಪುತ್ತೂರು ಕೃಷ್ಣ ಭಟ್, ಕೋಳ್ಯೂರು ರಾಮಚಂದ್ರ ರಾವ್, ಎಂಪೆಕಟ್ಟೆ ರಾಮಯ್ಯ ರೈ, ಕುಂಬಳೆ ಸುಂದರ ರಾವ್, ಶಂಕರನಾರಾಯಣ ಸಾಮಗರು, ರಾಮದಾಸ ಸಾಮಗರು, ಎಂ.ಎಲ್.ಸಾಮಗರು, ತೆಕ್ಕಟ್ಟೆ ಆನಂದ ಮಾಸ್ತರ್, ಪ್ರಭಾಕರ ಜೋಷಿ ಮುಂತಾದ ಯಕ್ಷಲೋಕದ ಘಟಾನುಘಟಿ ದಿಗ್ಗಜರನ್ನು ತಾಳಮದ್ದಳೆಯಲ್ಲಿ, ಯಕ್ಷಗಾನ ಪ್ರದರ್ಶನಗಳಲ್ಲಿ ಕುಣಿಸಿದ, ಮಾತನಾಡಿಸಿದ ಅನುಭವ ಲೀಲಾ ಅವರಿಗಿದೆ.
ಬಲಿಪ ನಾರಾಯಣ ಭಾಗವತರು, ದಾಮೋದರ ಮಂಡೆಚ್ಚರು, ಕಡತೋಕ ಭಾಗವತರು, ನೆಡ್ಲೆ ನರಸಿಂಹ ಭಟ್, ಬಲ್ಲಾಳರು, ದಿವಾಣ ಭೀಮ ಭಟ್, ಅಡೂರು ವೆಂಕಟ ಮದ್ಲೆಗಾರರು ಮುಂತಾದ ಅಗ್ರಗಣ್ಯ ಹಿಮ್ಮೇಳ ಕಲಾವಿದರ ಸಲಹೆಯೂ ಅವರಿಗೂ ಲಭಿಸಿತ್ತು.
ಲೀಲಾವತಿ ಅವರ ನಿಧನಕ್ಕೆ ಅಪಾರ ಯಕ್ಷಗಾನ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.