ಆರ್​ಎಸ್​ಎಸ್​ ಹೊಗಳಿದ ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ, ಕ್ಷಮೆಗೆ ಆಗ್ರಹ

ನಾಗಪುರದಲ್ಲಿರುವ ಆರ್​ಎಸ್​ಎಸ್​ ಕೇಂದ್ರ ಕಚೇರಿಯಲ್ಲಿ 2001ರವರೆಗೆ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ ಎಂದು ಸಿದ್ದರಾಮಯ್ಯ ಅವರು ಟೀಕಿಸಿದರು.;

Update: 2025-08-15 16:21 GMT

ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್​ಎಸ್​ಎಸ್​) ಹೊಗಳಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿಯವರ ಈ ನಡೆಯು ಸ್ವಾತಂತ್ರ್ಯ ಹೋರಾಟ, ರಾಷ್ಟ್ರಧ್ವಜ ಹಾಗೂ ಸಂವಿಧಾನದ ಮೂಲ ಆಶಯಗಳಿಗೆ ಮಾಡಿದ ಅವಮಾನವಾಗಿದೆ ಎಂದು ಬಣ್ಣಿಸಿರುವ ಅವರು, ಮೋದಿ ಅವರು ತಮ್ಮ ಮಾತುಗಳನ್ನು ಹಿಂಪಡೆದು ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, "ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಂದಿಗೂ ಭಾಗವಹಿಸದ ಮತ್ತು ಇತ್ತೀಚಿನವರೆಗೂ ತಮ್ಮ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸದ ಆರ್​ಎಸ್​ಎಸ್​​ ಅಭಿನಂದನೆ ಸಲ್ಲಿಸುವ ಮೂಲಕ ಪ್ರಧಾನಿಯವರು ಸ್ವಾತಂತ್ರ್ಯೋತ್ಸವದ ಪವಿತ್ರ ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ," ಎಂದು ಟೀಕಿಸಿದ್ದಾರೆ.

ನಾಗಪುರದಲ್ಲಿರುವ ಆರ್​ಎಸ್​ಎಸ್​ ಕೇಂದ್ರ ಕಚೇರಿಯಲ್ಲಿ 2001ರವರೆಗೆ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ ಎಂಬುದನ್ನು ನೆನಪಿಸಿದ ಅವರು, "ಧ್ವಜಾರೋಹಣ ಮಾಡಿದ್ದ ತಮ್ಮದೇ ಸಂಘಟನೆಯ ಯುವಕರ ವಿರುದ್ಧ ದೂರು ನೀಡಿ ಅವರನ್ನು ಜೈಲಿಗೆ ಕಳುಹಿಸಿದ್ದನ್ನು ದೇಶದ ಜನತೆ ಮರೆತಿಲ್ಲ," ಎಂದು ಉಲ್ಲೇಖಿಸಿದ್ದಾರೆ.

"ಕೋಮುವಾದವನ್ನೇ ಉಸಿರಾಗಿಸಿಕೊಂಡು, ಹಿಂದೂ ಧರ್ಮವನ್ನು ರಾಜಕೀಯ ಅಸ್ತ್ರವಾಗಿ ಬಳಸಿ ಭಾರತೀಯರನ್ನು ಒಡೆದು ಹಾಕಿದ ಆರ್​ಎಸ್​ಎಸ್​, ಕೇವಲ ಬಿಜೆಪಿಯನ್ನು ರಾಜಕೀಯವಾಗಿ ಬಲಪಡಿಸಲು ಹಗಲಿರುಳು ಶ್ರಮಿಸುತ್ತಿದೆ. ಆ ಸಂಘಟನೆಗೆ ದೇಶದ ಬಗ್ಗೆಯಾಗಲಿ, ಹಿಂದೂ ಧರ್ಮದ ಬಗ್ಗೆಯಾಗಲಿ ಯಾವುದೇ ಪ್ರೀತಿ, ಅಭಿಮಾನ ಅಥವಾ ಬದ್ಧತೆ ಇಲ್ಲ," ಎಂದು ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

Tags:    

Similar News