ಮಂಗಳೂರಿನಲ್ಲಿ ಗುಂಡಿನ ಸದ್ದು| ಪೇದೆ ಖಾಸಗಿ ಭಾಗಕ್ಕೆ ಹೊಡೆದು ಪರಾರಿಗೆ ಯತ್ನ- ಬ್ಯಾಂಕ್ ಡಕಾಯಿತನ ಕಾಲಿಗೆ ಪೊಲೀಸ್ ಗುಂಡು
ಸ್ಥಳಕ್ಕಾಗಮಿಸಿದ ಆರೋಪಿ ಮುರುಗಂಡಿ ತೇವರ್ ಏಕಾಏಕಿ ತನ್ನ ಕೈಯ ಬೇಡಿಯನ್ನು ಹಿಡಿದಿದ್ದ ಕಾನ್‌ಸ್ಟೇಬಲ್ ಮಂಜುನಾಥ್ ಅವರ ಖಾಸಗಿ ಭಾಗಕ್ಕೆ ಹೊಡೆದು, ಬೇಡಿಯ ಸರಪಳಿಯಿಂದಲೇ ಅವರ ಕತ್ತು ಹಿಸುಕಿ ಪರಾರಿಗೆ ಯತ್ನಿಸಿದ್ದಾನೆ.;
ಮಂಗಳೂರು ನಗರದ ಹೊರವಲಯದ ಕೋಟೆಕಾರು ವ್ಯವಸಾಯ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ದರೋಡೆ ನಡೆದ ನಾಲ್ಕೇ ದಿನದಲ್ಲಿ ಆರೋಪಿ ಕಣ್ಣನ್ ಮಣಿಗೆ ಗುಂಡಿನ ರುಚಿ ತೋರಿಸಿದ ಮಂಗಳೂರು ಪೊಲೀಸರು, ಈಗ ಎರಡನೇ ಬಾರಿ ಗುಂಡಿನ ಸದ್ದು ಮೊಳಗಿಸಿದ್ದಾರೆ.
ತನಿಖೆ ಮಹಜರಿಗೆ ಕರೆದೊಯ್ದ ಸಂದರ್ಭದಲ್ಲಿ ಪ್ರಮುಖ ಆರೋಪಿ ಪೊಲೀಸ್ ಪೇದೆಯೊಬ್ಬರ ಖಾಸಗಿ ಭಾಗಕ್ಕೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪದಲ್ಲಿ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಪ್ರಮುಖ ಆರೋಪಿ ಮುರುಗಂಡಿ ತೇವಾರ್ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಆತನಿಂದ ದಾಳಿಗೆ ಒಳಗಾದ ಪೊಲೀಸ್ ಪೇದೆ ಮಂಜುನಾಥ್ ಅವರಿಗೂ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ದರೋಡೆ ಪ್ರಕರಣದ ಕಿಂಗ್‌ಪಿನ್ ಮುರುಗಂಡಿ ತೇವಾರ್ ಅನ್ನು ಜನವರಿ 20ರಂದು ಅಂದರೆ ಘಟನೆ ನಡೆದ ಎರಡೇ ದಿನಕ್ಕೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ಪೊಲೀಸರು ಬಂಧಿಸಿದ್ದರು. ಸದ್ಯ ಆತ ಮಂಗಳೂರು ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಶನಿವಾರ ಸ್ಥಳ ಮಹಜರು ನಡೆಸಲು ಆತನನ್ನು ಉಳ್ಳಾಲದ ಅಜ್ಜಿನಡ್ಕಕ್ಕೆ ಪೊಲೀಸರು ಕರೆದೊಯ್ದಿದ್ದಾರೆ. ಈ ವೇಳೆ ಆತ ಪೊಲೀಸ್ ಕಾನ್ ಸ್ಟೇಬಲ್ ಖಾಸಗಿ ಭಾಗಕ್ಕೆ ಹಲ್ಲೆ ನಡೆಸಿ ಬೇಡಿಯಿಂದಲೇ ಪೊಲೀಸ್ ಕತ್ತು ಹಿಸುಕಿ ಪರಾರಿಗೆ ಯತ್ನಿಸಿದ್ದಾನೆ. ಈ ವೇಳೆ ಪೊಲೀಸ್ ಇನ್‌ಸ್ಪೆಕ್ಟರ್ ಆತನ ಕಾಲಿಗೆ ಗುಂಡಿಕ್ಕಿ ಬಂಧಿಸಿದ್ದಾರೆ.
ಅಡಗಿಸಿಟ್ಟಿದ್ದ ಮಾರಕಾಯುಧದ ಮಹಜರಿಗೆ ಆರೋಪಿಯ ಕರೆದೊಯ್ದ ಪೊಲೀಸರು
ನವೆಂಬರ್ 2024ರಲ್ಲಿ ಬ್ಯಾಂಕ್ ದರೋಡೆಯ ಸಂಚು ರೂಪಿಸಲು ಕಿಂಗ್ ಪಿನ್ ಮುರುಗಂಡಿ ತೇವಾರ್ ಹಾಗೂ ಯೋಸುವ ರಾಜೇಂದ್ರನ್ ಇಬ್ಬರೂ ಮಂಗಳೂರಿನ ಸ್ಥಳೀಯ ಶಶಿ ತೇವಾರ್ ಅನ್ನು ಉಳ್ಳಾಲದ ಅಜ್ಜಿನಡ್ಕದಲ್ಲಿ ಭೇಟಿಯಾಗಿದ್ದರು. ಈ ವೇಳೆ ಶಶಿ ತೇವಾರ್ ತನ್ನೊಂದಿಗೆ ಮಾರಕಾಯುಧ ಒಂದನ್ನು ತಂದಿದ್ದ. ಆದರೆ ಆ ಸಂದರ್ಭ ಮುರುಗಂಡಿ ತೇವಾರ್ ಮಾರಕಾಯುಧವನ್ನು ತನ್ನೊಂದಿಗೆ ಒಯ್ಯಲು ಸಿದ್ಧನಿಲ್ಲದ ಕಾರಣ ಅದನ್ನು ಅಲ್ಲಿಯೇ ಬಚ್ಚಿಡಲಾಗಿತ್ತು.
ಪರಾರಿಗೆತ್ನಿಸಿದ ಆರೋಪಿ ಮುರುಗಂಡಿಗೆ ಕಾಲಿಗೆ ಗುಂಡು
ಈ ಬಗ್ಗೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿ, ಸದ್ಯ ಬಂಧನಕ್ಕೊಳಗಾಗಿರುವ ಮುರುಗಂಡಿ ತೇವಾರ್ ಪೊಲೀಸ್ ಮಹಜರಿನ ವೇಳೆ ಮಾರಕಾಯುಧವನ್ನು ಬಚ್ಚಿಟ್ಟಿರುವ ವಿಚಾರವನ್ನು ಬಾಯಿಬಿಟ್ಟಿದ್ದ. ಈ ಮಾಹಿತಿಯನ್ವಯ ಮಾರಕಾಯುಧದ ಜಪ್ತಿಗೆ ಉಳ್ಳಾಲ ಪೊಲೀಸ್ ಇನ್‌ಸ್ಪೆಕ್ಟರ್, ಓರ್ವ ಸಬ್ ಇನ್‌ಸ್ಪೆಕ್ಟರ್ ಮತ್ತು ಇಬ್ಬರು ಕಾನ್ಸ್‌ಟೇಬಲ್‌ಗಳನ್ನು ಒಳಗೊಂಡ ಪೊಲೀಸ್ ತಂಡ ಮುರುಗಂಡಿ ತೇವರ್‌ನೊಂದಿಗೆ ಶನಿವಾರ ಮಧ್ಯಾಹ್ನ ಅಜ್ಜಿನಡ್ಕಕ್ಕೆ ತೆರಳಿದ್ದರು.
ಆಗ ಪೊಲೀಸರ ವಶದಲ್ಲಿದ್ದ ಮುರುಗಂಡಿ ತೇವರ್, ಏಕಾಏಕಿ ತನ್ನ ಕೈಯ ಬೇಡಿಯನ್ನು ಹಿಡಿದಿದ್ದ ಕಾನ್‌ಸ್ಟೇಬಲ್ ಮಂಜುನಾಥ್ ಅವರ ಖಾಸಗಿ ಭಾಗಕ್ಕೆ ಹೊಡೆದು, ಬೇಡಿಯ ಸರಪಳಿಯಿಂದಲೇ ಅವರ ಕತ್ತು ಹಿಸುಕಿ ಪರಾರಿಗೆ ಯತ್ನಿಸಿದ್ದಾನೆ.
ಇದನ್ನು ಗಮನಿಸಿದ ಉಳ್ಳಾಲ ಠಾಣಾ ಇನ್‌ಸ್ಪೆಕ್ಟರ್ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ, ಮುರುಗಂಡಿ ತೇವರ್ ಈ ಎಚ್ಚರಿಕೆಗೂ ಸೊಪ್ಪು ಹಾಕದೆ ಪರಾರಿಗೆ ಯತ್ನಿಸಿದ್ದಾನೆ. ಆಗ ಅವರು ಆತನ ಮೊಣಕಾಲಿನ ಕೆಳಗೆ ಎರಡನೇ ಸುತ್ತಿನ ಗುಂಡು ಹಾರಿಸಿದ್ದಾರೆ. ಈ ಘಟನೆಯಿಂದ ಗಾಯಗೊಂಡ, ಕಾನ್‌ಸ್ಟೆಬಲ್ ಮಂಜುನಾಥ್ ಮತ್ತು ಆರೋಪಿ ಮುರುಗಂಡಿ ತೇವರ್ ಇಬ್ಬರನ್ನೂ ತಕ್ಷಣ ದೇರಳಕಟ್ಟೆ ಬಳಿಯ ಯೇನಪೋಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಇಬ್ಬರೂ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಘಟನೆ ಬಗ್ಗೆ ಚರ್ಚೆ
ಆದರೆ, ಈ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿವೆ. ಭದ್ರತೆಯ ನಡುವೆಯೂ ಆರೋಪಿ ತಲೆಮರೆಸಿಕೊಳ್ಳಲು ಯತ್ನಿಸುವುದು ಹಾಗೂ ಪೊಲೀಸರು ಕಾಲಿಗೆ ಗುಂಡು ಹಾರಿಸುವುದು ... ಇಂತಹ ಘಟನೆಗಳು ಆಗಿಂದಾಗ ಸಂಭವಿಸುತ್ತಿದ್ದು, ಈ ಬಗ್ಗೆ ಚರ್ಚೆಗಳು ಆರಂಭವಾಗಿವೆ.
ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ಅವರು ಈ ಬಗ್ಗೆ ತಮ್ಮ ಜಾಲತಾಣದಲ್ಲಿ ಬರೆದುಕೊಂಡಿದ್ದು, "ಗಂಭೀರ ಕ್ರಿಮಿನಲ್ ಪ್ರಕರಣಗಳ ಆರೋಪಿಗಳು, ಕುಖ್ಯಾತ ಕ್ರಿಮಿನಲ್ ಗಳನ್ನು ಸ್ಥಳ ಮಹಜರಿಗೆ ಕರೆದು ತರುವಾಗ ಪೊಲೀಸರು ಸಿಕ್ಕಾಪಟ್ಟೆ ಭದ್ರತೆಯೊಂದಿಗೆ ಕರೆತರುತ್ತಾರೆ. ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳು ನುರಿತ ಕ್ರಿಮಿನಲ್ ಗಳು, ಇವರನ್ನು ಸ್ಥಳ ಮಹಜರಿಗೆ ಕರೆತರುವಾಗ ಹೆಚ್ಚಿನ ಭದ್ರತೆಯ ಜೊತೆಗೆ, ಬೇಡಿಗಳನ್ನು ಖಂಡಿತಾ ತೊಡಿಸಿರುತ್ತಾರೆ. ಅಚ್ಚರಿ ಅಂದರೆ, ಸತತ ಎರಡು ಸಲ ಸ್ಥಳ ಮಹಜರು ಸಂದರ್ಭ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳುವ ಯತ್ನ ನಡೆಸಿದ್ದಾರೆ. ಎರಡು ಬಾರಿಯೂ, ಆರೋಪಿಗಳ ಕಾಲಿಗೆ ಗುಂಡು ಹೊಡೆದು ತಪ್ಪಿಸಿಕೊಳ್ಳುವ ಯತ್ನ ವಿಫಲಗೊಳಿಸಲಾಗಿದೆ," ಎಂದು ಹೇಳಿದ್ದಾರೆ.