ಬೆಳಗಾವಿ ʼಗಾಂಧಿ ಭಾರತʼ | ಭಾರತದ ನಕ್ಷೆ ವಿರೂಪ ಬ್ಯಾನರ್: ಪ್ರತಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರ
ಐತಿಹಾಸಿನ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸ್ಮರಣಾರ್ಥ ನಡೆಯುತ್ತಿರುವ ʼಗಾಂಧಿ ಭಾರತʼ ಕಾರ್ಯಕ್ರಮಕ್ಕೆ ಅನುದಾನ ನೀಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರತಿಪಕ್ಷಗಳಿಗೆ ಇದೀಗ ಮತ್ತೊಂದು ಅಸ್ತ್ರ ಸಿಕ್ಕಿದೆ.;
ಐತಿಹಾಸಿನ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸ್ಮರಣಾರ್ಥ ನಡೆಯುತ್ತಿರುವ ʼಗಾಂಧಿ ಭಾರತʼ ಕಾರ್ಯಕ್ರಮಕ್ಕೆ ಅನುದಾನ ನೀಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಪ್ರತಿಪಕ್ಷಗಳಿಗೆ ಇದೀಗ ಮತ್ತೊಂದು ಅಸ್ತ್ರ ಸಿಕ್ಕಿದೆ.
ಬೆಳಗಾವಿಯಲ್ಲಿ ಗುರುವಾರ ಆರಂಭವಾಗಿರುವ ʼಗಾಂಧಿ ಭಾರತʼ ಕಾರ್ಯಕ್ರಮದಲ್ಲಿ ವಿರೂಪಗೊಂಡಿರುವ ಭಾರತದ ನಕ್ಷೆ ಬಳಸಿರುವ ವಿಷಯ, ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಬಿಜೆಪಿ ಶುಕ್ರವಾರ(ಡಿ.27) ಬೆಂಗಳೂರಿನ ವಿಧಾನಸೌಧದ ಬಳಿಕ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸುವುದಾಗಿ ಘೋಷಿಸಿದೆ.
1924ರಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಶತಮಾನೋತ್ಸವ ಅಂಗವಾಗಿ ಗಾಂಧಿ ಭಾರತ ಎಂಬ ಎರಡು ದಿನದ ಕಾರ್ಯಕ್ರಮ ಹಮ್ಮಿಕೊಂಡಿದೆ.
ಆದರೆ, ʼಗಾಂಧಿ ಭಾರತʼ ಕಾರ್ಯಕ್ರಮಕ್ಕೆ ಸ್ವಾಗತ ಕೋರುವ ಬ್ಯಾನರ್ ಹಾಗೂ ಕಟೌಟ್‌ಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಇಲ್ಲದ ಭಾರತದ ನಕ್ಷೆ ಮುದ್ರಿಸಿರುವುದು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ರಾಜ್ಯ ಸರ್ಕಾರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯ ಬಿಜೆಪಿ ಹಾಗೂ ಜೆಡಿಎಸ್ ಕೂಡ ರಾಜ್ಯ ಸರ್ಕಾರದ ವಾಗ್ದಾಳಿ ನಡೆಸಿವೆ. ಪಿಒಕೆ ಇಲ್ಲದಂತಹ ಭಾರತ ನಕ್ಷೆ ಕೇವಲ ಪಾಕಿಸ್ತಾನ ಮತ್ತು ಚೀನಾದಲ್ಲಿ ಮಾತ್ರ ಸಿಗುತ್ತದೆ ಎಂದು ಕಿಡಿಕಾರಿವೆ.
ಪಿಒಕೆ ಇಲ್ಲದ ಭಾರತದ ನಕಾಶೆಯ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ತೀವ್ರ ವಿವಾದ ಸೃಷ್ಟಿಸಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿ ಹಲವರು ಕಾಂಗ್ರೆಸ್ ಬ್ಯಾನರ್‌ನಲ್ಲಿರುವ ಭಾರತದ ನಕ್ಷೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ್ರೋಹದ ಕೃತ್ಯ-ಬಿಜೆಪಿ
ಬೆಳಗಾವಿಯಲ್ಲಿ ʼಗಾಂಧಿ ಭಾರತʼ ಹೆಸರಿನ ಬ್ಯಾನರ್‌ನಲ್ಲಿ ಹಾಕಿಸಿರುವ ಭಾರತದ ನಕ್ಷೆಯಲ್ಲಿ ಕಾಶ್ಮೀರ ಭೂಭಾಗವನ್ನೇ ಇಟಲಿ ಕಾಂಗ್ರೆಸ್ ಕೈಬಿಟ್ಟಿದೆ. ಭಾರತದ ನಕ್ಷೆಯನ್ನು ತಿರುಚುವುದು, ಮಾರ್ಪಾಡು ಮಾಡುವುದು ದೇಶದ್ರೋಹದಂತಹ ಗಂಭೀರ ಅಪರಾಧ ಕೃತ್ಯ. ಕಾಂಗ್ರೆಸ್ ಸಮಾವೇಶದ ನೇತೃತ್ವ ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದಕ್ಕೆ ನೇರ ಹೊಣೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಆದರೆ ವೋಟಿಗಾಗಿ ಓಲೈಕೆ ರಾಜಕಾರಣ ಮಾಡುತ್ತ ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸುವ ಕಾಂಗ್ರೆಸ್ ದೇಶದ್ರೋಹದ ಮನಸ್ಥಿತಿಯು ಬ್ಯಾನರ್ ಗಳಿಂದ ಜಗಜ್ಜಾಹೀರಾಗಿದೆ ಎಂದು ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಬ್ಯಾನರ್ ಪ್ರಮಾದದ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇದು ವ್ಯವಸ್ಥಿತವಾದ ಷಡ್ಯಂತ್ರ ಹಾಗೂ ಪಿತೂರಿ. ಭಾರತದ ಮುಕುಟವನ್ನೇ ತೆಗೆದು ಹಾಕುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಸಿಯಾಚಿನ್ ಎಲ್ಒಸಿ, ಪಿಒಕೆಯನ್ನು ಕಾಂಗ್ರೆಸ್ಸಿನವರೇ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.
ದೇಶದ ಒಂದಿಂಚೂ ಭೂಮಿಯನ್ನು ಪಾಕಿಸ್ತಾನ ಹಾಗೂ ಚೀನಾಗೆ ಬಿಟ್ಟುಕೊಡುವುದಿಲ್ಲ ಎಂದು ಪ್ರಧಾನಿ ಮೋದಿ ಅವರು ಹೇಳಿದರೆ, ದುಷ್ಟ ಕಾಂಗ್ರೆಸ್ಸಿನವರು ನಕ್ಷೆಯನ್ನೇ ಬದಲಾವಣೆ ಮಾಡಿ ದೇಶಕ್ಕೆ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್ಸಿನವರಿಗೆ ದೇಶದ ಕುರಿತು ಬದ್ಧತೆ ಹೇಗಿದೆ ಎಂಬುದು ಇದರಲ್ಲೇ ತಿಳಿಯುತ್ತದೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಅಖಂಡತೆಯ ಬಗ್ಗೆ ಕಾಂಗ್ರೆಸ್ ನಿಲುವು ಏನು ಎಂದು ಪ್ರಶ್ನಿಸಿದ ಅವರು, ಅಂಬೇಡ್ಕರ್ ಆಗಲಿ, ಭಾರತದ ಬದ್ಧತೆಯ ಬಗ್ಗೆ ಆಗಲಿ ಕಾಂಗ್ರೆಸ್ ನಾಯಕರಿಗೆ ಎಷ್ಟು ಕಳಕಳಿ ಇದೆ ಎಂಬುದು ಈಗ ತಿಳಿಯುತ್ತಿದೆ. ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್ ಹೆಸರು ಹೇಳುವ ನೈತಿಕತೆಯನ್ನು ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಕಾಂಗ್ರೆಸ್ ಕ್ರಮವನ್ನು ಖಂಡಿಸಿ ಡಿ.27ರ ಶುಕ್ರವಾರ ಬೆಂಗಳೂರಿನ ವಿಧಾನಸೌಧದ ಆವರಣದ ಗಾಂಧಿ ಪ್ರತಿಮೆ ಎದುರು ಪಕ್ಷದ ವತಿಯಿಂದ ಧರಣಿ ನಡೆಸಲಾಗುವುದು ಎಂದು ಹೇಳಿರುವ ರಾಜ್ಯ ಬಿಜೆಪಿ ಅಧ್ಯಕ್ಷರು, ದೇಶದ ನಕ್ಷೆ ವಿರೂಪದ ವಿಷಯವನ್ನು ರಾಜಕೀಯವಾಗಿ ಇನ್ನಷ್ಟು ದೊಡ್ಡದು ಮಾಡುವ ಸಂದೇಶ ನೀಡಿದ್ದಾರೆ.
ಕೇಂದ್ರ ಬಿಜೆಪಿ ನಾಯಕರ ಆಕ್ರೋಶ
ಬೆಳಗಾವಿಯಲ್ಲಿ ಭಾರತದ ನಕಾಶೆ ತಿರುಚಿದ ಪ್ರಕರಣ ಸಂಬಂಧ ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ದೇಶವನ್ನು ಇಬ್ಭಾಗ ಮಾಡುತ್ತಿದೆ. ಅದರ ತುಷ್ಟೀಕರಣದ ಮನಸ್ಥಿತಿ ಮತ್ತೆ ಬಹಿರಂಗವಾಗಿದೆ ಎಂದಿದ್ದಾರೆ.
ಈ ಮಧ್ಯೆ ಜೆಡಿಎಸ್ ಕೂಡ ಬಿಜೆಪಿಯ ಟ್ವೀಟ್ ಸಂದೇಶವನ್ನೇ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಬ್ಯಾನರ್ ಸರಿಪಡಿಸಿದ್ದೇವೆ: ಕಾಂಗ್ರೆಸ್ ಸ್ಪಷ್ಟನೆ
ʼಭಾರತದ ನಕಾಶೆ ವಿರೂಪಗೊಳಿಸಿದ್ದ ವಿಚಾರ ವಿವಾದದ ಸ್ವರೂಪ ಪಡೆಯುತ್ತಿದ್ದಂತೆ ಗಾಂಧಿ ಭಾರತ ಕಾರ್ಯಕ್ರಮದ ನೇತೃತ್ವ ವಹಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
"ಬ್ಯಾನರ್ ಹಾಕುವಾಗ ಯಾರಿಂದಲೋ ತಪ್ಪಾಗಿದೆ. ನಮ್ಮ ಗಮನಕ್ಕೆ ಬಂದ ತಕ್ಷಣ ಸರಿಪಡಿಸಿದ್ದೇವೆ. ದೇಶದ ಐಕ್ಯತೆಗಾಗಿಯೇ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಇದರಲ್ಲಿ ಯಾವುದೇ ವಿವಾದ ಇಲ್ಲ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ. ಬಿಜೆಪಿಯವರು ಹಾಲು, ಮೊಸರಿಗೆ ಸಣ್ಣ ಕಲ್ಲು ಹಾಕುತ್ತಿದ್ದಾರೆ. ಬಿಜೆಪಿಯವರ ಹೊಟ್ಟೆಕಿಚ್ಚಿಗೆ ಯಾವುದೇ ಮದ್ದಿಲ್ಲ. ಅವರು ಆರೋಪ ಮಾಡುತ್ತಿರಲಿ, ನಾವು ನಮ್ಮ ಕೆಲಸ ನಾವು ಮಾಡುತ್ತೇವೆ" ಎಂದು ಬಿಜೆಪಿ ನಾಯಕರ ಟೀಕೆಗೆ ತಿರುಗೇಟು ನೀಡಿದ್ದಾರೆ.