Bank Robbery | ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ: ಇಬ್ಬರು ಮಾಸ್ಟರ್ ಮೈಂಡ್​​ಗಳ ಬಂಧನ

ಸ್ಥಳೀಯ ನಿವಾಸಿ ಮಹಮ್ಮದ್ ನಜೀರ್ ಜೊತೆ ಸಂಪರ್ಕ ಮಾಡಿ 6 ತಿಂಗಳ ಹಿಂದೆ ಸಂಚು ರೂಪಿಸಿದ ಈ ಇಬ್ಬರು ದಿನಾಂಕ ಹಾಗೂ ಸಮಯ ನಿಗದಿ ಮಾಡಿದ್ದರು.;

Update: 2025-02-26 07:08 GMT

ಕೋಟೆಕಾರು ಬ್ಯಾಂಕ್‌ ದರೋಡೆ

ಉಳ್ಳಾಲ ತಾಲ್ಲೂಕಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್​ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಾಸ್ಟರ್​ ಮೈಂಡ್​ಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೆ.ಸಿ.ರೋಡ್ ನಿವಾಸಿ ಮಹಮ್ಮದ್ ನಜೀರ್​ ಹಾಗೂ ಭಾಸ್ಕರ್ ಬೆಳ್ಚಪಾಡ ಅಲಿಯಾಸ್ ಶಶಿ ಥೇವರ್ ಬಂಧಿತ ಮಾಸ್ಟರ್​ ಮೈಂಡ್​ಗಳು. ಸ್ಥಳೀಯ ನಿವಾಸಿ ಮಹಮ್ಮದ್ ನಜೀರ್ ಜೊತೆ ಸಂಪರ್ಕ ಮಾಡಿ 6 ತಿಂಗಳ ಹಿಂದೆ ಸಂಚು ರೂಪಿಸಿ ದರೋಡೆ ನಡೆಸಲು ಇಬ್ಬರು ದಿನಾಂಕ ಹಾಗೂ ಸಮಯ ನಿಗದಿ ಮಾಡಿದ್ದರು. ಇದೀಗ ಈ ಪ್ರಮುಖ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪಿಗಳಲ್ಲಿ ಮಂಗಳೂರು ಪೊಲೀಸರು ಈಗಾಗಲೇ ಮುರುಗನ್ ಡಿ. ದೇವರ್, ಯೋಶುವಾ ರಾಜೇಂದ್ರನ್, ಕಣ್ಣನ್ ಮಣಿ ಮತ್ತು ಚಿನ್ನಾಭರಣ ಅಡಗಿಸಿಡಲು ಸಹಕರಿಸಿದ್ದ ಷಣ್ಮುಗಂ ಸುಂದರಂನನ್ನು ಬಂಧಿಸಿದ್ದಾರೆ.

ಆರೋಪಿಗಳು ದೋಚಿದ್ದ 18.314ಕೆ.ಜಿ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. 360ಗ್ರಾಂ ಚಿನ್ನಾಭರಣ ಇನ್ನೂ ಸಿಕ್ಕಿಲ್ಲ. ಬ್ಯಾಂಕ್‌ನವರ ಲೆಕ್ಕಾಚಾರ ಪ್ರಕಾರ 11,67,044 ರೂ. ದರೋಡೆ ಮಾಡಲಾಗಿದ್ದು, 18.314 ಕೆಜಿ ಚಿನ್ನ ಹಾಗೂ 3,80,500 ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಉಳಿದ 7,86,544 ರೂ. ಮೊತ್ತ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಏನಿದು ಘಟನೆ?

ಜನವರಿ 16ರಂದು ಮಂಗಳೂರಿನ ಕೋರೆಕಾರು ವ್ಯವಸಾಯ ಸೇವಾ ಸಹಕಾರ ನಿಯಮಿತದ ಬ್ಯಾಂಕಿಗೆ ನುಗ್ಗಿದ ದುಷ್ಕರ್ಮಿಗಳು ಬಂದೂಕು ತೋರಿಸಿ ನಗದು, ಚಿನ್ನ ದರೋಡೆ ಮಾಡಿದ್ದರು.

ಶಸ್ತ್ರಸಜ್ಜಿತ ಐದು ಮಂದಿ ಆಗಂತುಕರು ಫಿಯೆಟ್ ಕಾರಿನಲ್ಲಿ ಬಂದು 12 ಕೋಟಿ ರೂ. ಮೌಲ್ಯದ ನಗದು, ಚಿನ್ನ ದರೋಡೆ ಮಾಡಿ ಪರಾರಿಯಾಗಿದ್ದರು. ಮುಂಬೈನ ತಿಲಕನಗರದಿಂದ ಮುರುಗಂಡಿ ಮೂವರು ಸಹಚರರ ಜತೆ ಫಿಯೆಟ್ ಕಾರಿನಲ್ಲಿ ಹೊರಟ್ಟಿದ್ದ ಕಣ್ಣನ್ ಮಣಿ ಮತ್ತು ಇನ್ನಿಬ್ಬರು ರೈಲಿನಲ್ಲಿ ಬಂದಿದ್ದು, ದರೋಡೆ ಬಳಿಕ ಮುರುಗಂಡಿ ಮತ್ತು ಯೊಸುವಾ ರಾಜೇಂದ್ರನ್ ಫಿಯೆಟ್​ ಕಾರಿನಲ್ಲಿ ಕೇರಳ ಮೂಲಕ ತಮಿಳುನಾಡಿಗೆ ಪರಾರಿಯಾಗಿದ್ದರು. ಮೂವರು ಆರೋಪಿಗಳು ರಿಕ್ಷಾದಲ್ಲಿ ಹಾಗೂ ಒಬ್ಬ ಬಸ್​ ಮೂಲಕ ಮಂಗಳೂರು ಸೆಂಟ್ರಲ್​ ರೈಲ್ವೆ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಮುಂಬೈಗೆ ಪರಾರಿಯಾಗಿದ್ದರು.

Tags:    

Similar News