Internal Reservation | ಒಳ ಮೀಸಲಾತಿ ಮಧ್ಯಂತರ ವರದಿ ಸಲ್ಲಿಕೆಗೆ ಆಗ್ರಹ

Internal Reservation: ಬಡ್ತಿ ಮೀಸಲಾತಿ, ಗುತ್ತಿಗೆ ನೌಕರರ ನೇಮಕಾತಿ ಸಂದರ್ಭದಲ್ಲೂ ಒಳ ಮೀಸಲಾತಿ ಪರಿಗಣಿಸಬೇಕು. ಮತಕ್ಷೇತ್ರಗಳ ಮೀಸಲಾತಿಯಲ್ಲೂ ಒಳ ಮೀಸಲಾತಿ ಕಡ್ಡಾಯಗೊಳಿಸಬೇಕು.;

Update: 2025-02-08 09:55 GMT
ನ್ಯಾ. ನಾಗಮೋಹನ್‌ ದಾಸ್

ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಪ್ರಮಾಣ ನಿಗದಿಪಡಿಸಲು ರಚನೆಯಾಗಿರುವ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ಆಯೋಗವು ಸರ್ಕಾರಕ್ಕೆ ಕೂಡಲೆ ಮಧ್ಯಂತರ ವರದಿ ಸಲ್ಲಿಸಿ, ಅದನ್ನು ಜಾರಿಗೊಳಿಸಲು ಶಿಫಾರಸು ಮಾಡಬೇಕು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ್ ಕೌತಾಳ್, 'ಆಯೋಗವು ಮಧ್ಯಂತರ ವರದಿ ಸಲ್ಲಿಸಿದರೆ, ವಿವಿಧ ಹುದ್ದೆಗಳ ನೇಮಕಾತಿ ಹಾಗೂ ಬಜೆಟ್‌ನಲ್ಲಿ ಅನುದಾನ ಹಂಚಿಕೆಗೆ ಅನುಕೂಲ ಆಗುತ್ತದೆ. ಪರಿಶಿಷ್ಟ ಜಾತಿಗಳ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಒಳ ಮೀಸಲಾತಿ ವರ್ಗೀಕರಣ ಮಾಡಬೇಕು' ಎಂದು ಅವರು ತಿಳಿಸಿದ್ದಾರೆ. 

'ಕಡಿಮೆ ಹುದ್ದೆಗಳ ನೇಮಕಾತಿ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯ ಯಾವ ಗುಂಪಿಗೆ ಮೊದಲ ಆದ್ಯತೆ ಸಿಗಬೇಕು ಎಂಬ ಶ್ರೇಣೀಕರಣ ನಿಗದಿಪಡಿಸಬೇಕು. ಬಡ್ತಿ ಮೀಸಲಾತಿ, ಗುತ್ತಿಗೆ ನೌಕರರ ನೇಮಕಾತಿ ಸಂದರ್ಭದಲ್ಲೂ ಒಳ ಮೀಸಲಾತಿ ಪರಿಗಣಿಸಬೇಕು. ಮತಕ್ಷೇತ್ರಗಳ ಮೀಸಲಾತಿಯಲ್ಲೂ ಒಳ ಮೀಸಲಾತಿ ಕಡ್ಡಾಯಗೊಳಿಸಬೇಕು. ಒಳ ಮೀಸಲಾತಿ ಜಾರಿಯಲ್ಲಿ ಕುಂದುಕೊರತೆಗಳು ಹಾಗೂ ಪ್ರಗತಿಯ ಮೇಲ್ವಿಚಾರಣೆಗೆ ರಾಜ್ಯ ಪರಿಶಿಷ್ಟ ಜಾತಿಗಳ ಆಯೋಗದಡಿ ಸ್ವತಂತ್ರ ಸಮಿತಿ ರಚಿಸಬೇಕು' ಎಂದು ಒತ್ತಾಯಿಸಿದರು.

ಇಂದಿರಾ ಸಹಾನಿ ಪ್ರಕರಣದ ತೀರ್ಪಿನನ್ವಯ ಮೀಸಲಾತಿಗೆ ವಿಧಿಸಿರುವ ಶೇ.50ರಷ್ಟು ಮೀಸಲಾತಿ ಮಿತಿಯನ್ನು ರದ್ದುಪಡಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಉದ್ಯೋಗಾಕಾಂಕ್ಷಿಗಳಿಗೆ ಸಮಸ್ಯೆಯಾಗದಂತೆ ನಿಗದಿತ ಗಡುವಿನೊಳಗೆ ಆಯೋಗವು ವರದಿ ನೀಡಬೇಕು. ಸಾಮಾಜಿಕ ನ್ಯಾಯವನ್ನು ಒಳಮೀಸಲಾತಿಯಲ್ಲಿಯೂ ಎತ್ತಿಹಿಡಿಯಬೇಕು ಎಂದು ಸಮಿತಿಯ ವಿನಯ್ ಶ್ರೀನಿವಾಸ್ ಒತ್ತಾಯಿಸಿದರು.

Tags:    

Similar News