Cauvery Water | ಏಕಾಏಕಿ ತೆರೆದ ಕೆಆರ್​ಎಸ್​ ಡ್ಯಾಂ ಗೇಟ್​: ಸಾವಿರಾರು ಕ್ಯೂಸೆಕ್​ ಕಾವೇರಿ ನೀರು ಪೋಲು

ಸೋಮವಾರ ರಾತ್ರಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಗೇಟ್ ಮುಚ್ಚಿದರೂ, ಹೆಚ್ಚಿನ ಪ್ರಮಾಣದ ನೀರು ಹರಿದು ಹೋಗುತ್ತಿರುವುದರಿಂದ ಗೇಟ್‌ ಮುಚ್ಚಲು ಸಿಬ್ಬಂದಿ ಹರಸಾಹಸಪಟ್ಟರು.;

Update: 2025-03-25 11:16 GMT

ಕೆಆರ್‌ಎಸ್‌ಎಸ್‌ ಡ್ಯಾಮ್‌ 

ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ(KRS) ಜಲಾಶಯದ 80 ಗೇಟ್ ಭಾನುವಾರ ರಾತ್ರಿ ಏಕಾಏಕಿ‌ ತೆರೆದಿದ್ದು, ಸೋಮವಾರ (ಮಾ.24) ರಾತ್ರಿ ವರೆಗೆ ಗೇಟ್ ತೆರದೇ ಇತ್ತು. ಹಾಗಾಗಿ ಸುಮಾರು 24 ಗಂಟೆಯಲ್ಲಿ 2000 ಕ್ಯೂಸೆಕ್ ನೀರು ಕಾವೇರಿ ನದಿಗೆ ಹರಿದು ಹೋಗಿದೆ.

ಸೋಮವಾರ ರಾತ್ರಿ ಕಾವೇರಿ ನೀರಾವರಿ ನಿಗಮದ ಸಿಬ್ಬಂದಿ ಗೇಟ್ ಮುಚ್ಚಿದರೂ, ಹೆಚ್ಚಿನ ಪ್ರಮಾಣದ ನೀರು ಹರಿದು ಹೋಗುತ್ತಿರುವುದರಿಂದ ಗೇಟ್‌ ಮುಚ್ಚಲು ಅಧಿಕಾರಿಗಳು ಹರಸಾಹಸ ಪಟ್ಟರು. 

ಗೇಟ್ ತೆರೆಯಲು ಕಾರಣವೇನು?

ಡ್ಯಾಂನ ಗೇಟ್ ಏಕಾಏಕಿಯಾಗಿ ತೆರೆಯುವುದು ಅಪರೂಪ. ಆದರೆ ಇಲ್ಲಿ ಕೆಆರ್​ಎಸ್​ ಡ್ಯಾಂನ ಗೇಟ್​ ಏಕಾಏಕಿ ತೆರೆದಿದ್ದು, ಅನುಮಾನವನ್ನು ಹುಟ್ಟು ಹಾಕಿದೆ. ಎರಡು ಕಾರಣಗಳಿಂದ ಡ್ಯಾಂ ಗೇಟ್​ ತೆರೆದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಡ್ಯಾಂನ ಗೇಟ್​ನ ಮೋಟಾರ್​ ರಿವರ್ಸ್​ ಆಗಿದ್ದರಿಂದ ಗೇಟ್​ ತೆರೆದಿರಬಹುದು, ಅಥವಾ ನಮ್ಮದೇ ಸಿಬ್ಬಂದಿ ಗೇಟ್​ ತೆರೆದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ, ಗೇಟ್​ ಯಾವ ಕಾರಣಕ್ಕೆ ತೆರೆದಿದೆ ಎಂಬುವುದು ತನಿಖೆ ಬಳಿಕವಷ್ಟೇ ತಿಳಿಯಲಿದೆ.

ತನಿಖೆಗೆ ಸಾಕ್ಷ್ಯಾಧಾರಗಳ ಕೊರತೆ

ಗೇಟ್ ತೆರೆಯುವ ವಿಚಾರ ತಿಳಿದ ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಆದರೆ, ಈ ಘಟನೆಯ ತನಿಖೆಗೆ ಪೂರಕ ಸಾಕ್ಷ್ಯಾಧಾರಗಳು ಕೊರತೆಯಾಗಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಡ್ಯಾಂ ಸುತ್ತಮುತ್ತ CCTV ಕ್ಯಾಮೆರಾಗಳಿಲ್ಲದ್ದರಿಂದ ಘಟನೆಯ ದೃಶ್ಯಾವಳಿ ಲಭ್ಯವಿಲ್ಲ. ಪರಿಣಾಮವಾಗಿ ತನಿಖೆ ನಿಧಾನಗತಿಯಲ್ಲಿದೆ. 

ಈ ಹಿಂದೆ ಕಳೆದ ಮುಂಗಾರು ಅವಧಿಯಲ್ಲಿ ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ತುಂಡಾಗಿ ಕೊಚ್ಚಿಕೊಂಡು ಹೋಗಿದ್ದ ಘಟನೆ ನಡೆದಿತ್ತು. ಆಗ ಸಾವಿರಾರು ಕ್ಯೂಸೆಕ್ ನೀರು ನದಿ ಪಾಲಾಗಿತ್ತು. ಗೇಟ್​ ತುಂಡಾಗುತ್ತಿದ್ದಂತೆ ಕಾರ್ಯಪ್ರವೃತ್ತವಾಗಿದ್ದ ಸರ್ಕಾರ ಮತ್ತು ಡ್ಯಾಂ ನಿರ್ವಹಣಾ ಅಧಿಕಾರಿಗಳು ಒಂದು ವಾರದಲ್ಲಿ ಹೊಸ ಸ್ಟಾಫ್​ ಗೇಟ್​ ಅಳವಡಿಸಿದ್ದರು. 

ಸಾರ್ವಜನಿಕರ ಆಕ್ರೋಶ

ರಾಜ್ಯದ ಪ್ರಮುಖ ಜಲಾಶಯಗಳಲ್ಲೇ ಕಳೆದ ಆರು ತಿಂಗಳಲ್ಲೇ ಗೇಟ್‌ ಸಮಸ್ಯೆಯಾಗಿರುವ ಎರಡು ಘಟನೆಗಳು ನಡೆದಿವೆ. ಆ ಹಿನ್ನೆಲೆಯಲ್ಲಿ ಜಲಾಶಯಗಳ ನಿರ್ವಹಣೆಯ ಕುರಿತು ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ತಕ್ಷಣವೇ ರಾಜ್ಯದ ಪ್ರಮುಖ ಜಲಾಶಯಗಳ ತಪಾಸಣೆ ನಡೆಸಬೇಕು ಮತ್ತು ಸುರಕ್ಷತಾ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಡ್ಯಾಂ ಸುತ್ತಮುತ್ತ ಕ್ಯಾಮೆರಾ ವ್ಯವಸ್ಥೆಯನ್ನು ಅಳವಡಿಸಬೇಕು ಹಾಗೂ ಡ್ಯಾಂನ ಎಲ್ಲಾ ಗೇಟ್‌ಗಳ ನಿಯಮಿತ ತಪಾಸಣೆ ಮತ್ತು ನಿರ್ವಹಣೆ ಕಡ್ಡಾಯಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. 

Tags:    

Similar News