High speed Rail | ಅಧಿಕ ವೇಗದ ರೈಲು ನಿರ್ಮಾಣದ ಗುತ್ತಿಗೆ ಪಡೆದ ಬಿಇಎಂಎಲ್
ಎಂಟು ಬೋಗಿಗಳನ್ನು ಹೊಂದಿರುವ ಈ ರೈಲು ಪ್ರತಿ ಗಂಟೆಗೆ ಗರಿಷ್ಠ 249 ಕಿ.ಮೀ.ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಮುಂಬೈ ಹಾಗೂ ಅಹಮದಾಬಾದ್ ನಡುವೆ ನಿರ್ಮಾಣ ಹಂತದಲ್ಲಿರುವ ರೈಲ್ವೆ ಕಾರಿಡಾರ್‌ನಲ್ಲಿ 2027 ರಿಂದ ಬಳಕೆಯಾಗಲಿದೆ ಎಂದು ಬಿಇಎಂಎಲ್ ಪ್ರಕಟಣೆಯಲ್ಲಿ ತಿಳಿಸಿದೆ.;
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯಡಿ ಬಿಇಎಂಎಲ್ ಸಂಸ್ಥೆ ಅಧಿಕ ವೇಗದ ಎರಡು ರೈಲುಗಳನ್ನು ಅಭಿವೃದ್ಧಿಪಡಿಸಲು ಐಸಿಎಫ್ (ಇಂಟಿಗ್ರಲ್ ಕೋಟ್ ಫ್ಯಾಕ್ಟರಿ) ವತಿಯಿಂದ 866.87 ಕೋಟಿ ರೂ. ಮೊತ್ತದ ಗುತ್ತಿಗೆ ಪಡೆದಿದೆ.
ತಲಾ ಎಂಟು ಬೋಗಿಗಳನ್ನು ಹೊಂದಿರುವ ಈ ರೈಲು ಪ್ರತಿ ಗಂಟೆಗೆ ಗರಿಷ್ಠ 249 ಕಿ.ಮೀ.ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಮುಂಬೈ ಹಾಗೂ ಅಹಮದಾಬಾದ್ ನಡುವೆ ನಿರ್ಮಾಣ ಹಂತದಲ್ಲಿರುವ ರೈಲ್ವೆ ಕಾರಿಡಾರ್‌ನಲ್ಲಿ 2027 ರಿಂದ ಬಳಕೆಯಾಗಲಿದೆ ಎಂದು ಬಿಇಎಂಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿ ರೈಲಿನ ಬೆಲೆ 27.86 ಕೋಟಿ ಇರಲಿದೆ. ಆದರೆ, ರೈಲಿನ ವಿನ್ಯಾಸ, ಅಭಿವೃದ್ಧಿ ಸೇರಿದಂತೆ ವಿವಿಧ ಹಂತಗಳಲ್ಲಿ 866.87 ಕೋಟಿ ರೂ. ವೆಚ್ಚವಾಗಲಿದೆ. ಅಧಿಕ ವೇಗದ ರೈಲು ನಿರ್ಮಾಣದ ಬಳಿಕ ಇಲ್ಲಿನ ಅನುಭವಗಳನ್ನು ಭಾರತದ ಭವಿಷ್ಯದ ಬುಲೆಟ್ ರೈಲು ಅಭಿವೃದ್ಧಿ ಯೋಜನೆಗೆ ಬಳಸಲಾಗುವುದು ಎಂದು ತಿಳಿಸಿದೆ.
ಬಿಇಎಂಎಲ್ ಈಗಾಗಲೇ ರಕ್ಷಣಾ ಇಲಾಖೆ, ಏರೋಸ್ಪೇಸ್, ಗಣಿ ಮತ್ತು ನಿರ್ಮಾಣ ವಲಯದ ಯಂತ್ರಗಳು, ರೈಲು ಹಾಗೂ ಮೆಟ್ರೋ ರೈಲು ಬೋಗಿಗಳ ನಿರ್ಮಾಣದ ಮೂಲಕ ಗುಣಮಟ್ಟ ಹಾಗೂ ವಿಶಿಷ್ಟತೆಗೆ ಹೆಸರು ಪಡೆದಿದೆ. ಈಗ ಅಧಿಕ ವೇಗದ ರೈಲು ಅಭಿವೃದ್ಧಿಪಡಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಲಿದೆ. ಗಂಟೆಗೆ 249 ಕಿ.ಮೀ ವೇಗದಲ್ಲಿ ಸಾಗುವ ಸಾಮರ್ಥ್ಯದ ಸ್ವದೇಶಿ ನಿರ್ಮಿತ ಮೊದಲ ರೈಲು ಇದಾಗಲಿದೆ. ಈ ರೈಲನ್ನು ಬೆಂಗಳೂರಿನ ರೈಲು ಕೋಚ್ ಸಂಕೀರ್ಣದಲ್ಲಿ ಅಭಿವೃದ್ಧಿಪಡಿಸಲಾಗುವುದು. 2026 ಅಂತ್ಯದೊಳಗೆ ರೈಲು ಹಸ್ತಾಂತರಿಸುವ ಗುರಿ ಹೊಂದಿದೆ ಎಂದು ಬಿಇಎಂಎಲ್ ಹೇಳಿದೆ.
ರೈಲಿನ ವಿಶೇಷತೆ ಏನು?
ಅಧಿಕ ವೇಗದ ರೈಲು ಸಂಪೂರ್ಣ ಹವಾ ನಿಯಂತ್ರಿತ ಕೋಚ್ಗಳನ್ನು ಹೊಂದಿರಲಿದೆ. ಚೇರ್ ಕಾರುಗಳನ್ನು ಅಳವಡಿಸುವ ಮೂಲಕ ಪ್ರಯಾಣಿಕರಿಗೆ ಹೊಸ ಪ್ರಯಾಣದ ಅನುಭೂತಿ ನೀಡುವ ಉದ್ದೇಶವಿದೆ. ಸೀಟುಗಳು ಹಿಂದಕ್ಕೆ ಬಾಗುವ ಹಾಗೂ ತಿರುಗುವ ವ್ಯವಸ್ಥೆ ಹೊಂದಿರಲಿವೆ. ಅಂಗವಿಕಲರಿಗೆ ವಿಶೇಷ ಆಸನ ವ್ಯವಸ್ಥೆ ಹಾಗೂ ಮನರಂಜನೆಗಾಗಿ ಇನ್ಫೊಟೈನ್ ಮೆಂಟ್ ವ್ಯವಸ್ಥೆ ಸಹ ಕಲ್ಪಿಸುವ ಉದ್ದೇಶವಿದೆ ಎಂದು ವಿವರಿಸಿದೆ.