ಕಾಂಗ್ರೆಸ್‌ ಆಶ್ವಾಸನೆ| 134 ಭರವಸೆಗಳಲ್ಲಿ ಈಡೇರಿದ್ದು 9 ಭರವಸೆಯಷ್ಟೇ! ಸಿವಿಕ್‌ ಸೊಸೈಟಿ ವರದಿ ಬಹಿರಂಗ

ಕಾಂಗ್ರೆಸ್ ತಾನು ನೀಡಿದ್ದ ಭರವಸೆಗಳ ಪೈಕಿ 50 ಅನ್ನು ಕಾರ್ಯರೂಪಕ್ಕೆ ತರಲು ಕ್ರಮ ತೆಗೆದುಕೊಂಡಿದೆ. ಆದರೆ 73 ಭರವಸೆಗಳ ಸಂಬಂಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

Update: 2025-11-01 15:32 GMT

ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಕಾಂಗ್ರೆಸ್‌ ನಾಯಕರು.

Click the Play button to listen to article

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನೂತನ ಯೋಜನೆಗಳು, ನೇಮಕಗಳು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು 134 ಭರವಸೆಗಳನ್ನು ನೀಡಿತ್ತು. ಆದರೆ ಅಧಿಕಾರಕ್ಕೆ ಬಂದು 2.5 ವರ್ಷವಾದರೂ ಕೇವಲ ಒಂಬತ್ತು ಭರವಸೆಗಳನ್ನು ಮಾತ್ರ ಈಡೇರಿಸಿದೆ ಎಂದು ಸಿವಿಕ್‌ ಸಂಘಟನೆ ವರದಿ ನೀಡಿದೆ.

ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್‌ ಸರ್ಕಾರ ನೀಡಿದ್ದ ಎಷ್ಟು ಭರವಸೆಗಳನ್ನು ಈಡೇರಿಸಿದೆ ಎಂಬುದರ ಕುರಿತು, ನಿವೃತ್ತ ಐಎಎಸ್ ಅಧಿಕಾರಿ ಮತ್ತು ಸಿವಿಕ್ ಸಂಘಟನೆಯ ಟ್ರಸ್ಟಿ ಟಿ.ಆ‌ರ್.ರಘುನಂದನ್ ವರದಿ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ತಾನು ನೀಡಿದ್ದ ಭರವಸೆಗಳ ಪೈಕಿ 50 ಅನ್ನು ಕಾರ್ಯರೂಪಕ್ಕೆ ತರಲು ಕ್ರಮ ತೆಗೆದುಕೊಂಡಿದೆ. ಆದರೆ 73 ಭರವಸೆಗಳ ಸಂಬಂಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇನ್ನು 2 ಭರವಸೆಗಳನ್ನು ತಾನೇ ಹಾಕಿಕೊಂಡಿದ್ದ ಕಾಲಮಿತಿಯಲ್ಲಿ ಈಡೇರಿಸಲು ವಿಫಲವಾಗಿದೆ ಎಂದು ಉಲ್ಲೇಖಿಸಿದೆ.

ಈಡೇರಿದ ಭರವಸೆಗಳಾವುವು ?

ಸರ್ಕಾರವು ಈಡೇರಿಸಿರುವ ಒಂಬತ್ತು ಭರವಸೆಗಳ ಪೈಕಿ ಐದು ಗ್ಯಾರಂಟಿ ಯೋಜನೆಗಳೇ ಇವೆ. ಜತೆಗೆ ಶಾಲಾ ಪಠ್ಯಕ್ರಮ ಬದಲಾವಣೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ, ಮೆಟ್ರೊ ಮತ್ತು ಬಸ್ ನಿಲ್ದಾಣಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ ಹಾಗೂ ಆಟೊ-ಟ್ಯಾಕ್ಸಿ ಚಾಲಕರ ಕಲ್ಯಾಣ ಮಂಡಳಿ ಸ್ಥಾಪನೆ ಭರವಸೆಗಳನ್ನು ಮಾತ್ರ ಈಡೇರಿಸಿದೆ.

ವಿಫಲವಾದ ಪ್ರಮುಖ ಭರವಸೆಗಳು

ʼಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ಬೆಂಗಳೂರು ಮೆಟ್ರೊವಿನ 2, 2ಎ, 2ಬಿ ಹಂತಗಳನ್ನು ಪೂರ್ಣಗೊಳಿಸುತ್ತೇವೆ' ಎಂದು ಕಾಂಗ್ರೆಸ್ ಹೇಳಿತ್ತು. ತಾನೇ ಹಾಕಿಕೊಂಡಿದ್ದ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ. ಸರ್ಕಾರಿ ಶಾಲೆಗಳಲ್ಲಿ 62,000 ಶಿಕ್ಷಕರ ಮತ್ತು ಇತರ ಸಿಬ್ಬಂದಿ ಹುದ್ದೆ ಖಾಲಿ ಇವೆ. ಅವುಗಳಿಗೆ ನೇಮಕಾತಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ.

ಅನ್ನಭಾಗ್ಯದಿಂದ ಶೇ.80 ಜನರಿಗೆ ಪೌಷ್ಟಿಕಾಂಶಯುಕ್ತ ಆಹಾರ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿಧಾನಸಭೆ ಅಧಿವೇಶನದಲ್ಲಿ ಆರ್‌ಎಸ್‌ಎಸ್ ಪ್ರಾರ್ಥನೆ ಹಾಡಿದ್ದರಿಂದ ಕಾಂಗ್ರೆಸ್‌ನ ಜಾತ್ಯತೀತ ನಿಲುವಿಗೆ ಧಕ್ಕೆಯಾಯಿತು. ಕಾವೇರಿ ಆರತಿಯು ಗಂಗಾ ಆರತಿಯ ಅನುಕರಣೆಯಾಗಿದ್ದು, ಇದೊಂದು ಅನಗತ್ಯ ಕಾರ್ಯಕ್ರಮ. ಅನ್ನಭಾಗ್ಯ ಯೋಜನೆಯಿಂದ ಶೇ.80ರಷ್ಟು ಜನರು ಮೊದಲಿಗಿಂತಲೂ ಹೆಚ್ಚು ಪೌಷ್ಟಿಕಾಂಶಯುಕ್ತ ಮತ್ತು ಹೆಚ್ಚಿನ ಕ್ಯಾಲೊರಿಯ ಆಹಾರ ಸೇವಿಸುತ್ತಿದ್ದಾರೆ. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸಿವೆ. ಆದರೂ ರಾಜ್ಯದ ಆರ್ಥಿಕ ಸ್ಥಿತಿ ಬಿಗಡಾಯಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮತದಾನದ ಹಕ್ಕು ಕಸಿದ ಸರ್ಕಾರ

ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸದೇ ಇರುವ ಮೂಲಕ ರಾಜ್ಯ ಸರ್ಕಾರವು ಜನರ ಮತದಾನದ ಹಕ್ಕನ್ನು ಕಸಿದುಕೊಂಡಿದೆ. ಜನಪ್ರತಿನಿಧಿಗಳು ಇಲ್ಲದೆಯೇ ಸ್ಥಳೀಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಒಳ ಮೀಸಲಾತಿ ಜಾರಿ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರಸ್ತಾವನೆ ಓದಿಸುವ ಕಾರ್ಯಕ್ರಮ ಶ್ಲಾಘನೀಯ. ಕಟ್ಟಡ ನಿರ್ಮಾಣ ಕಾರ್ಮಿಕರ ಸಬಲೀಕರಣಕ್ಕಾಗಿ ಉತ್ತಮ ಯೋಜನೆಗಳನ್ನು ರೂಪಿಸಲಾಗಿದೆ. ಆದರೆ ಅನರ್ಹರು ತಾವು ಕಟ್ಟಡ ಕಾರ್ಮಿಕರೆಂದು ನೋಂದಣಿ ಮಾಡಿಸಿಕೊಂಡು ಯೋಜನೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಮೂಲಸೌಕರ್ಯ ನಿರ್ವಹಣೆಯಲ್ಲಿ ವಿಫಲ

ಶರಾವತಿ ಪಂಪ್ಸ್ ಸ್ಟೋರೇಜ್, ಕಾಳಿ ರೈಲು ಮಾರ್ಗ, ಶೆಟ್ಟಿಹಳ್ಳಿ ಅಭಯಾರಣ್ಯ ಡಿನೋಟಿಫಿಕೇಷನ್, ಅವೈಜ್ಞಾನಿಕವಾಗಿ ಸೋಲಾ‌ರ್ ಪಾರ್ಕ್‌ಗಳ ಸ್ಥಾಪನೆಯಿಂದ ಪರಿಸರಕ್ಕೆ ಹಾನಿಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಿನ್ನಡೆ. ಧರ್ಮಸ್ಥಳದ ಅಸಹಜ ಸಾವು ಪ್ರಕರಣಗಳ ತನಿಖೆ ನಿರ್ವಹಣೆಯಲ್ಲಿ ವಿಳಂಬ. ಮಹಿಳಾ ಆಯೋಗವು ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕು. ನಗರಾಭಿವೃದ್ಧಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಬೆಂಗಳೂರಿಗೆ ಹೊರೆಯಾಗುವ ಮತ್ತು ಜನರಿಗೆ ಉಪಯೋಗವಿಲ್ಲದ ಯೋಜನೆಗಳಿಗೆ ಸರ್ಕಾರ ಒಲವು ಹೊಂದಿದ್ದು, ಮೂಲಸೌಕರ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.

Tags:    

Similar News