ನಾಯಿ ಕಚ್ಚಿದ ಬಾಲಕಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗ ಎರಗಿದ ಪೊಲೀಸರು; ಬಾಲಕಿ ದುರ್ಮರಣ

ಮೃತ ಬಾಲಕಿಗೆ ನಾಯಿ ಕಚ್ಚಿದ್ದರಿಂದ, ದೊಡ್ಡಪ್ಪ ಅಶೋಕ್ ಮತ್ತು ತಾಯಿ ವಾಣಿ ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬೈಕ್​ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪೊಲೀಸರು ಅಮಾನವೀಯವಾಗಿ ವರ್ತಿಸಿದ್ದರು.;

Update: 2025-05-26 11:26 GMT

ಮಂಡ್ಯ ಜಿಲ್ಲೆಯ ಸ್ವರ್ಣಸಂದ್ರದಲ್ಲಿ ಟ್ರಾಫಿಕ್ ಪೊಲೀಸರ ಬೇಜವಾಬ್ದಾರಿ ನಡವಳಿಕೆಯಿಂದಾಗಿ ಮೂರುವರೆ ವರ್ಷದ ಬಾಲಕಿಯೊಬ್ಬಳು ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಮೃತ ಬಾಲಕಿಯನ್ನು ಮದ್ದೂರು ತಾಲೂಕಿನ ಗೊರವನಹಳ್ಳಿಯ ವಾಣಿ ಮತ್ತು ಅಶೋಕ್ ದಂಪತಿಯ ಪುತ್ರಿಯಾದ ಹೃತೀಕ್ಷಾ ಎಂದು ಗುರುತಿಸಲಾಗಿದೆ. ಈ ಘಟನೆಯಿಂದ ಉದ್ರಿಕ್ತರಾದ ಸಾರ್ವಜನಿಕರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದು, ಪೊಲೀಸರ ಅಮಾನತು ಹಾಗೂ 25 ಲಕ್ಷ ರೂಪಾಯಿ ಪರಿಹಾರಕ್ಕೆ ಆಗ್ರಹಿಸಿದ್ದಾರೆ.

ಮೃತ ಬಾಲಕಿಗೆ ನಾಯಿ ಕಚ್ಚಿದ್ದರಿಂದ, ದೊಡ್ಡಪ್ಪ ಅಶೋಕ್ ಮತ್ತು ತಾಯಿ ವಾಣಿ  ಬೈಕ್​ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅವರಿಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಹೆದ್ದಾರಿಯ ಸ್ವರ್ಣಸಂದ್ರದ ನಂದಾ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ತಪಾಸಣೆಗಾಗಿ ಬೈಕ್​ ಅಡ್ಡಗಟ್ಟಿದ್ದಾರೆ. ಈ ವೇಳೆ, ಆತುರದಲ್ಲಿ ತೆರಳುತ್ತಿದ್ದ ಅಶೋಕ್‌ ಅವರ ನಿಯಂತ್ರಣ ಕಳೆದುಕೊಂಡಿದ್ದು, ಬೈಕ್​ ನೆಲಕ್ಕೆ ಬಿದ್ದಿದೆ. ಅಶೋಕ್ ಅವರು ಒಂದು ಕಡೆ ಬಿದ್ದರೆ ವಾಣಿ ಮತ್ತು ಬಾಲಕಿ ಹೃತೀಕ್ಷಾ ರಸ್ತೆಯ ಪಕ್ಕಕ್ಕೆ ಬಿದ್ದಿದ್ದಾರೆ. ಈ ವೇಳೆ ಪಕ್ಕದಲ್ಲಿ ಹೋಗುತ್ತಿದ್ದ ಕ್ಯಾಂಟರ್ ಒಂದು ಬಾಲಕಿಯ ತಲೆ ಮೇಲೆ ಹತ್ತಿದ್ದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಗಾಯಗೊಂಡ ಹೃತೀಕ್ಷಾ ತಾಯಿಯ ಮಡಿಲಲ್ಲೇ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾಳೆ. ಮಗುವನ್ನು ಕಳೆದುಕೊಂಡ ವಾಣಿ ಮತ್ತು ಅಶೋಕ್ ರಸ್ತೆಯಲ್ಲಿಯೇ ಕುಸಿದು ಕುಳಿತು ಗೋಳಾಡಿದ್ದಾರೆ.

ಸಾರ್ವಜನಿಕರ ಪ್ರತಿಭಟನೆ

ಈ ಘಟನೆಯಿಂದ ಕುಪಿತರಾದ ಸ್ಥಳೀಯರು ಮತ್ತು ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಸೇರಿದಂತೆ ಹಲವರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸ್ಥಳೀಯರು ಪೊಲೀಸರ ಈ ನಡವಳಿಕೆಯನ್ನು 'ಅಮಾನವೀಯ' ಎಂದು ಖಂಡಿಸಿದ್ದಾರೆ. ಮಂಡ್ಯ ಶಾಸಕ ಮತ್ತು ಕಾಂಗ್ರೆಸ್ ನಾಯಕ ರವಿ ಗಣಿಗ ಈ ಘಟನೆಯನ್ನು ತೀವ್ರವಾಗಿ ಖಂಡಿಸಿ, ಟ್ರಾಫಿಕ್ ಪೊಲೀಸರ ಅಮಾನತಿಗೆ ಸೂಚನೆ ನೀಡಿದ್ದಾರೆ.

ಪೊಲೀಸರ ಅಮಾನತು 

ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮಲ್ಲಿಕಾರ್ಜುನ ಬಾಲದಂಡಿ ಪ್ರತಿಕ್ರಿಯಿಸಿದ್ದು, ಘಟನೆಯ ಕುರಿತು ವರದಿ ಪಡೆದ ಬಳಿಕ ಸ್ಥಳದಲ್ಲಿದ್ದ ಎಲ್ಲ ಮೂವರು ಸಹಾಯಕ ಸಬ್-ಇನ್ಸ್‌ಪೆಕ್ಟರ್‌ಗಳನ್ನು ಅಮಾನತು ಮಾಡಲು ಆದೇಶಿಸಿರುವುದಾಗಿ ತಿಳಿಸಿದ್ದಾರೆ.

25 ಲಕ್ಷ ರೂ.ಪರಿಹಾರಕ್ಕೆ ಆಗ್ರಹ

ಘಟನೆ ಬಗ್ಗೆ ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ಪೊಲೀಸರ ನಿರ್ಲಕ್ಷ್ಯದಿಂದ ಮಗುವಿನ ಸಾವಾಗಿದೆ. ಪೊಲೀಸ್ ಇಲಾಖೆಯಲ್ಲಿ ಶಿಸ್ತು ಇಲ್ಲದೇ ಇರುವುದು ಇದಕ್ಕೆ ನೇರ ಕಾರಣ. ಏಕಾಏಕಿ ಹೋಗಿ ರಸ್ತೆಯಲ್ಲಿ ಅಡ್ಡ ಹಾಕುವ ಕೆಲಸ ಮಾಡುತ್ತಾರೆ. ಪೊಲೀಸ್ ಕೈ ತಗುಲಿ ಕೆಳಗೆ ಬಿದ್ದು ಮಗು ಮೃತಪಟ್ಟಿದೆ ಎಂಬ ಮಾಹಿತಿ ನನಗೆ ಬಂದಿದೆ. ಪೊಲೀಸರಿಂದಲೇ ಆ ಮಗು ಮೃತಪಟ್ಟಿದೆ. ಹೀಗಾಗಿ ರಾಜ್ಯ ಸರ್ಕಾರ ಮಗುವಿನ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

Tags:    

Similar News