ಎವರೆಸ್ಟ್‌ನಲ್ಲಿ ಹಿಮಪಾತ: 1,000 ಚಾರಣಿಗರು ಸಂಕಷ್ಟದಲ್ಲಿ, ರಕ್ಷಣಾ ಕಾರ್ಯಾಚರಣೆ ಚುರುಕು
ಅಕ್ಟೋಬರ್ 3ರ ಶುಕ್ರವಾರ ಸಂಜೆಯಿಂದ ಆರಂಭವಾದ ಹಿಮಪಾತವು, 4,900 ಮೀಟರ್ ಎತ್ತರದಲ್ಲಿರುವ ಪೂರ್ವ ಇಳಿಜಾರಿನ ಶಿಬಿರಗಳಿಗೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳಿಸಿದೆ.
ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್‌ನ ಟಿಬೆಟ್ ಭಾಗದಲ್ಲಿ ಸಂಭವಿಸಿದ ಅನಿರೀಕ್ಷಿತ ಹಾಗೂ ಭಾರೀ ಹಿಮಪಾತದಿಂದಾಗಿ, ಸುಮಾರು 1,000 ಚಾರಣಿಗರು ಪರ್ವತ ಶ್ರೇಣಿಯ ಶಿಬಿರಗಳಲ್ಲಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯು ಯುದ್ಧೋಪಾದಿಯಲ್ಲಿ ಸಾಗಿದ್ದು, ಇದುವರೆಗೂ 350ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ಅಕ್ಟೋಬರ್ 3ರ ಶುಕ್ರವಾರ ಸಂಜೆಯಿಂದ ಆರಂಭವಾದ ಹಿಮಪಾತವು, 4,900 ಮೀಟರ್ ಎತ್ತರದಲ್ಲಿರುವ ಪೂರ್ವ ಇಳಿಜಾರಿನ ಶಿಬಿರಗಳಿಗೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳಿಸಿದೆ. ಹಿಮವನ್ನು ತೆರವುಗೊಳಿಸಲು ನೂರಾರು ಸ್ಥಳೀಯ ಗ್ರಾಮಸ್ಥರು ಮತ್ತು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ.
ರಕ್ಷಿಸಲ್ಪಟ್ಟ ಚಾರಣಿಗರೊಬ್ಬರು ಮಾತನಾಡಿ, "ಬೆಟ್ಟಗಳಲ್ಲಿ ಅತಿಯಾದ ಚಳಿ ಮತ್ತು ತೇವಾಂಶವಿದ್ದು, ದೇಹದ ಉಷ್ಣತೆ ಅಪಾಯಕಾರಿ ಮಟ್ಟಕ್ಕೆ ಕುಸಿಯುವ ಹೈಪೋಥರ್ಮಿಯಾ (Hypothermia) ಸ್ಥಿತಿಯ ಭೀತಿ ಎದುರಾಗಿತ್ತು. ಅಕ್ಟೋಬರ್‌ನಲ್ಲಿ ಇಂತಹ ಕೆಟ್ಟ ಹವಾಮಾನವನ್ನು ನಾನೆಂದೂ ನೋಡಿಲ್ಲ," ಎಂದು ತಮ್ಮ ಆತಂಕವನ್ನು ಹಂಚಿಕೊಂಡಿದ್ದಾರೆ. ಸಾಮಾನ್ಯವಾಗಿ, ಅಕ್ಟೋಬರ್ ತಿಂಗಳು ಚಾರಣಕ್ಕೆ ಅತ್ಯುತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ. ಈ ವರ್ಷ ಚೀನಾದಲ್ಲಿ ರಾಷ್ಟ್ರೀಯ ದಿನದ ರಜೆ ಇದ್ದುದರಿಂದ ಚಾರಣಿಗರ ಸಂಖ್ಯೆಯೂ ಹೆಚ್ಚಾಗಿತ್ತು. ಸಿಲುಕಿದವರಲ್ಲಿ ಸ್ಥಳೀಯ ಗೈಡ್‌ಗಳು ಮತ್ತು ಸಹಾಯಕ ಸಿಬ್ಬಂದಿ ಇದ್ದಾರೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
'ಮ್ಯಾಟ್ಮೊ' ಚಂಡಮಾರುತದ ಅಬ್ಬರ
ಇದೇ ವೇಳೆ, ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಕರಾವಳಿಗೆ 'ಮ್ಯಾಟ್ಮೊ' ಚಂಡಮಾರುತವು ಅಪ್ಪಳಿಸಿದೆ. ಗಂಟೆಗೆ 151 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 3.47 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.