EPF: ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ: ಇಪಿಎಫ್ ಬಡ್ಡಿದರ 8.25%ಕ್ಕೆ ಸ್ಥಿರ
EPF: ಫೆಬ್ರವರಿ 28ರಂದು ನಡೆದ ಇಪಿಎಫ್‌ಒನ ಕೇಂದ್ರೀಯ ಟ್ರಸ್ಟಿಗಳ 237ನೇ ಸಭೆಯಲ್ಲಿ, 2024-25ನೇ ಹಣಕಾಸು ವರ್ಷಕ್ಕೆ ಭವಿಷ್ಯ ನಿಧಿಯ ಬಡ್ಡಿದರವನ್ನು 8.25% ಎಂದು ಉಳಿಸಿಕೊಳ್ಳಲು ನಿರ್ಧರಿಸಲಾಗಿತ್ತು.;
ಕೇಂದ್ರ ಸರ್ಕಾರವು 2024-25ನೇ ಹಣಕಾಸು ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿ (EPF) ಮೇಲಿನ ಬಡ್ಡಿ ದರವನ್ನು 8.25% ನಿಗದಿ ಮಾಡಿ ಅಂಗೀಕರಿಸಿದೆ. ಈ ನಿರ್ಧಾರದಿಂದಾಗಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ 7 ಕೋಟಿಗೂ ಹೆಚ್ಚು ಚಂದಾದಾರರ ಖಾತೆಗಳಿಗೆ ವಾರ್ಷಿಕ ಬಡ್ಡಿಯನ್ನು ಶೀಘ್ರ ಜಮಾ ಆಗಲಿದೆ.
ಫೆಬ್ರವರಿ 28ರಂದು ನಡೆದ ಇಪಿಎಫ್‌ಒನ ಕೇಂದ್ರೀಯ ಟ್ರಸ್ಟಿಗಳ 237ನೇ ಸಭೆಯಲ್ಲಿ, 2024-25ನೇ ಹಣಕಾಸು ವರ್ಷಕ್ಕೆ ಭವಿಷ್ಯ ನಿಧಿಯ ಬಡ್ಡಿದರವನ್ನು 8.25% ಎಂದು ಉಳಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಇದು 2023-24ರ ಹಣಕಾಸು ವರ್ಷದಲ್ಲಿ ನೀಡಲಾದ ಬಡ್ಡಿದರಕ್ಕೆ ಸಮನಾಗಿದೆ. ಈ ದರವನ್ನು ಕೇಂದ್ರ ಹಣಕಾಸು ಸಚಿವಾಲಯದ ಒಪ್ಪಿಗೆಗಾಗಿ ಕಳುಹಿಸಲಾಗಿತ್ತು. ಇದೀಗ ಹಣಕಾಸು ಸಚಿವಾಲಯದಿಂದ ಅನುಮೋದನೆ ದೊರೆತಿದ್ದು, ಕಾರ್ಮಿಕ ಸಚಿವಾಲಯವು ಗುರುವಾರ (ಮೇ 22, 2025) ಈ ಬಗ್ಗೆ ಇಪಿಎಫ್‌ಒಗೆ ಸೂಚನೆ ರವಾನಿಸಿದೆ.
ಕೋಟ್ಯಂತರ ಖಾತೆದಾರರಿಗೆ ಅನುಕೂಲ
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಖಾತೆದಾರರಿಗೆ ಸ್ಥಿರ ಮತ್ತು ಆಕರ್ಷಕ ಆದಾಯ ಒದಗಿಸುವ ಗುರಿಯೊಂದಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈಗ ಈ ಬಡ್ಡಿದರ ಅಧಿಕೃತವಾಗಿ ಅಂಗೀಕೃತವಾಗಿರುವುದರಿಂದ 7 ಕೋಟಿಗೂ ಹೆಚ್ಚಿನ ಇಪಿಎಫ್‌ಒ ಗ್ರಾಹಕರ ಖಾತೆಗಳಿಗೆ 2024-25ನೇ ವರ್ಷದ ಬಡ್ಡಿ ಮೊತ್ತವು ಶೀಘ್ರದಲ್ಲೇ ಜಮಾ ಆಗಲಿದೆ.
ಇಪಿಎಫ್ ಬಡ್ಡಿದರ ಈ ರೀತಿ ಇತ್ತು.
2023-24: ಇಪಿಎಫ್‌ಒ ಫೆಬ್ರವರಿ 2024ರಲ್ಲಿ ಬಡ್ಡಿದರವನ್ನು 8.25%ಕ್ಕೆ ಏರಿಕೆ ಮಾಡಿತ್ತು.
2022-23: 8.15% ಬಡ್ಡಿದರ.
2021-22: ಇಪಿಎಫ್‌ಒ ಮಾರ್ಚ್ 2022ರಲ್ಲಿ ಬಡ್ಡಿದರವನ್ನು ಕಳೆದ ನಾಲ್ಕು ದಶಕಗಳಲ್ಲೇ ಕನಿಷ್ಠವಾದ 8.1%ಗೆ ಇಳಿಸಿತ್ತು.
2020-21: 8.1% ಬಡ್ಡಿದರವು 1977-78ರ 8%ನ ನಂತರದ ಕನಿಷ್ಠ ದರವಾಗಿತ್ತು.
ಇತರೆ ಫಿಕ್ಸೆಡ್ ಡೆಪಾಸಿಟ್ಗಳಿಗೆ ಹೋಲಿಕೆ ಮಾಡಿದರೆ ಇಪಿಎಫ್ ತುಲನಾತ್ಮಕವಾಗಿ ಹೆಚ್ಚಿನ ಮತ್ತು ಸ್ಥಿರವಾದ ಆದಾಯ ನೀಡುತ್ತದೆ. ಇದು ನಿವೃತ್ತಿ ನಂತರದ ಉಳಿತಾಯಕ್ಕೆ ಸ್ಥಿರವಾದ ಬೆಳವಣಿಗೆ ಖಚಿತಪಡಿಸುತ್ತದೆ, ಇದು ಕಾರ್ಮಿಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.