ವಿದ್ಯಾರ್ಥಿನಿಗೆ ಬ್ಲೇಡ್‌ನಿಂದ ಇರಿದ ಸಹಪಾಠಿ; ಪುತ್ತೂರಿನಲ್ಲಿ ಪರಿಸ್ಥಿತಿ ಉದ್ವಿಗ್ನ

Update: 2024-08-20 10:55 GMT

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯೊಬ್ಬ ಭಿನ್ನ ಧರ್ಮದ ವಿದ್ಯಾರ್ಥಿನಿಗೆ ಬ್ಲೇಡ್ ನಿಂದ ಗೀರಿದ ಘಟನೆ ಮಂಗಳವಾರ ನಡೆದಿದೆ. ಘಟನೆ ಬಳಿಕ ಪುತ್ತೂರಿನಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚುವರಿ ಪೊಲೀಸ್‌ ಪಡೆಗಳು ಸ್ಥಳಕ್ಕೆ ಆಗಮಿಸಿವೆ.

ವಿದ್ಯಾರ್ಥಿನಿಗೆ ಕೈಗೆ ಗೀರಿದ ಗಾಯವಾಗಿದೆ. ವಿದ್ಯಾರ್ಥಿನಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿನಿ ಕ್ಷೇಮವಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ನಡೆದ ಘಟನೆಯೇನು?

ಬೋಳುವಾರಿನಿಂದ ಬಂದ ವಿದ್ಯಾರ್ಥಿನಿ ಪುತ್ತೂರಿನ ಪುಸ್ತಕದ ಅಂಗಡಿಗೆ ಹೋಗಿ ವಾಪಸಾಗುತ್ತಿದ್ದಳು. ಆ ವೇಳೆ ಆರೋಪಿ ವಿದ್ಯಾರ್ಥಿ ತನ್ನ ಗೆಳೆಯರೊಂದಿಗೆ ವಿದ್ಯಾರ್ಥಿನಿಯನ್ನು ಹಿಂಬಾಲಿಸಿದ. ಆ ವಿದ್ಯಾರ್ಥಿನಿ ನನ್ನನ್ನೇಕೆ ಹಿಂಬಾಲಿಸುತ್ತಿದ್ದೀರಿ ಎಂದು ಕೇಳಿದಾಗ ಉಳಿದ ವಿದ್ಯಾರ್ಥಿಗಳು ಓಡಿ ಹೋದರು. ಆ ಸಂದರ್ಭದಲ್ಲಿ ಆತ ಇನ್ನೊಬ್ಬಳು ವಿದ್ಯಾರ್ಥಿನಿ ಆಕೆಯ ಗೆಳತಿಯಲ್ಲವೇ ಎಂದು ಕೇಳಿದ. ಹೌದೆಂದು ಆಕೆ ಒಪ್ಪಿಕೊಂಡಾಗ ಆತ, "ನಾನು ಅವಳನ್ನು ಪ್ರೀತಿಸುವುದಿಲ್ಲ, ನಿನ್ನನ್ನು ಪ್ರೀತಿಸುತ್ತೇನೆ," ಎಂದ. ಆಗ ಈ ವಿದ್ಯಾರ್ಥಿನಿ ಅವನನ್ನು ತೀವ್ರ ತರಾಟೆಗೆ ತೆಗೆದುಕೊಂಡಳು ಎನ್ನಲಾಗಿದೆ.

ಆ ಸಂದರ್ಭದಲ್ಲಿ ಆರೋಪಿ ವಿದ್ಯಾರ್ಥಿ ಹರಿತವಾದ ವಸ್ತುವಿನಿಂದ ಕೈಗೆ ಗೀರಿ ಓಡಿ ಹೋದ ಎಂದು ವಿದ್ಯಾರ್ಥಿನಿ ಘಟನೆಯನ್ನು ವಿವರಿಸಿದ್ದಾಳೆ. ಗೀರಿದ ವಸ್ತು ಬ್ಲೇಡ್‌ ಇರಬಹುದು ಎಂದು ವಿದ್ಯಾರ್ಥಿನಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.

 ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,  ಯುವತಿ ದಾಖಲಾದ ಆಸ್ಪತ್ರೆಯ ಮುಂಭಾಗದಲ್ಲಿ ಒಂದು ಸಮುದಾಯದ ಜನ ಜಮಾಯಿಸಿದ್ದು, ಪೊಲೀಸರು ಅವರನ್ನು ಚದುರಿಸಿದ್ದಾರೆ.

ವಿದ್ಯಾರ್ಥಿನಿಗೆ ಇರಿತ ಉಂಟಾಗಿದೆ. ಆದರೆ ಆಕೆಯ ಕೈಗೆ ಗಾಜು ತಾಗಿ ಗಾಯವಾಗಿದೆ ಎಂದು ಹೇಳುವಂತೆ ಕಾಲೇಜು ಉಪನ್ಯಾಸಕಿ ಒತ್ತಡ ಹೇರಿದ್ದಾರೆ ಎಂದು ಸ್ಥಳೀಯ ಮುಖಂಡ ಇಬ್ರಾಹಿಂ ಆರೋಪಿಸಿದ್ದಾರೆ. ಕಾಲೇಜಿನ ಶಿಕ್ಷಕರು ಮತ್ತು ಪ್ರಾಂಶುಪಾಲರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಅವರು ಪೊಲೀಸರುನ್ನು ಒತ್ತಾಯಿಸಿದ್ದಾರೆ.

 

ಕಡಬದಲ್ಲಿ ಆಸಿಡ್‌ ದಾಳಿ ಪ್ರಕರಣ

ಇದೇ ವರ್ಷ ಮಾರ್ಚ್‌ ೪ರಂದು ಪುತ್ತೂರಿಗೆ ಸಮೀಪವಿರುವ ಕಡಬದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಕೇರಳದ ಎಂಬಿಎ ವಿದ್ಯಾರ್ಥಿ ಅಬಿನ್‌ ಎಂಬಾತ ಆಸಿಡ್‌ ಎರಚಿದ್ದ. ಈ ಘಟನೆಯಲ್ಲಿ ವಿದ್ಯಾರ್ಥಿನಿ ಮತ್ತು ಆಕೆಯ ಮೂವರು ಸಹಪಾಠಿಗಳಿಗೂ ಗಾಯವಾಗಿತ್ತು. ಆರೋಪಿಯನ್ನು ಅಂದೇ ಪೊಲೀಸರು ಬಂಧಿಸಿದ್ದರು. ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರು.

ದೇರಳಕಟ್ಟೆಯಲ್ಲಿ ಕತ್ತು ಕೊಯ್ದ ಘಟನೆ

೨೦೧೯ರಲ್ಲಿ ಮಂಗಳೂರಿನ ದೇರಳಕಟ್ಟೆಯಲ್ಲಿಯೂ ಇಂಥದ್ದೇ ಘಟನೆ ನಡೆದಿತ್ತು. ಡ್ಯಾನ್ಸ್‌ ಮಾಸ್ಟರ್‌ ಸುಶಾಂತ್‌ ಎಂಬಾತ ಇಲ್ಲಿಗೆ ಸಮೀಪ ಬಗಂಬಿಲದ ನಿವಾಸಿಯಾದ ವಿದ್ಯಾರ್ಥಿನಿಯ ಕತ್ತಿಗೆ ಚೂರಿಯಿಂದ ಇರಿದು ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಹೆಚ್ಚುತ್ತಿರುವ ಇಂಥ ಪ್ರಕರಣಗಳು ವಿದ್ಯಾರ್ಥಿನಿಯರಲ್ಲಿ ಆತಂಕ ಮೂಡಿಸಿವೆ.

Tags:    

Similar News