ಧರ್ಮಸ್ಥಳ ಪ್ರಕರಣ: ಎಸ್‌ಐಟಿ ಕಚೇರಿಗೆ ಉದಯ್ ಜೈನ್ ಹಾಜರು, ತನಿಖೆ ಚುರುಕು

ಮಂಗಳವಾರ ಎಸ್‌ಐಟಿ ಅಧಿಕಾರಿಯೊಬ್ಬರು ದೂರವಾಣಿ ಕರೆ ಮಾಡಿ, ಬುಧವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು ಎಂದು ಉದಯ್​ ಜೈನ್ ಹೇಳಿದ್ದಾರೆ;

Update: 2025-09-03 07:03 GMT
Click the Play button to listen to article

ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ಈ ಹಿಂದೆ ಹಲವು ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಮೃತದೇಹಗಳನ್ನು ಹೂಳಲಾಗಿದೆ ಎಂಬ ಆರೋಪದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಇದೀಗ ತನಿಖೆಯನ್ನು ಚುರುಕುಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಧರ್ಮಸ್ಥಳದ ಉದಯ್ ಜೈನ್ ಅವರು ಬುಧವಾರ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ವಿಚಾರಣೆಗೆ ಹಾಜರಾದರು.

ಎಸ್‌ಐಟಿ ಕಚೇರಿಯಿಂದ ಹೊರಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉದಯ್ ಜೈನ್, "ಮಂಗಳವಾರ ಎಸ್‌ಐಟಿ ಅಧಿಕಾರಿಯೊಬ್ಬರು ದೂರವಾಣಿ ಕರೆ ಮಾಡಿ, ಬುಧವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಅದರಂತೆ ನಾನು ಬಂದಿದ್ದೇನೆ," ಎಂದು ತಿಳಿಸಿದರು.

"ಹಿಂದೆ ಸೌಜನ್ಯ ಕೊಲೆ ಪ್ರಕರಣದಲ್ಲಿ ನನ್ನ ಹೆಸರು, ಮಲ್ಲಿಕ್ ಜೈನ್ ಮತ್ತು ಧೀರಜ್ ಕೆಲ್ಲ ಅವರ ಹೆಸರುಗಳನ್ನು ಅನಾವಶ್ಯಕವಾಗಿ ತಳುಕು ಹಾಕಲಾಗಿತ್ತು. ಆ ಪ್ರಕರಣದ ಎಫ್‌ಐಆರ್‌ನಲ್ಲಿ ನಮ್ಮ ಹೆಸರು ಇರಲಿಲ್ಲ, ಆದರೂ ನಮ್ಮನ್ನು ಆರೋಪಿಗಳನ್ನಾಗಿಸುವ ಷಡ್ಯಂತ್ರ ನಡೆದಿತ್ತು. ಆಗ ಸಿಬಿಐ ಮತ್ತು ಸಿಐಡಿ ಅಧಿಕಾರಿಗಳು ನಮ್ಮನ್ನು ಸಂಪೂರ್ಣವಾಗಿ ವಿಚಾರಣೆ ನಡೆಸಿ, ಮಂಪರು ಪರೀಕ್ಷೆಯನ್ನೂ ಮಾಡಿದ್ದರು. ಆ ಪ್ರಕರಣದಲ್ಲಿ ನಮ್ಮ ಪಾತ್ರ ಇಲ್ಲವೆಂದು ಈಗಾಗಲೇ ಸಾಬೀತಾಗಿದೆ," ಎಂದು ಅವರು ಸ್ಪಷ್ಟಪಡಿಸಿದರು.

"ಈಗ ಎಸ್‌ಐಟಿಯವರು ಯಾವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆದಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ನನ್ನಂತೆ, ಮಲ್ಲಿಕ್ ಜೈನ್ ಮತ್ತು ಧೀರಜ್ ಕೆಲ್ಲ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ ಎಂದು ಧೀರಜ್ ನನಗೆ ತಿಳಿಸಿದ್ದಾರೆ. ಅಧಿಕಾರಿಗಳು ಕರೆದಾಗ ನಾವು ಬರಲೇಬೇಕಾಗುತ್ತದೆ," ಎಂದು ಉದಯ್ ಜೈನ್ ಹೇಳಿದರು. 

Tags:    

Similar News